Advertisement

ನೆಲಗಡಲೆ ಇಳುವರಿ ಇಳಿಮುಖ: ಯಾಂತ್ರಿಕ ಶಕ್ತಿಗೆ ಮೊರೆಹೋದ ಗ್ರಾಮೀಣ ರೈತರು

03:16 PM Apr 01, 2024 | Team Udayavani |

ತೆಕ್ಕಟ್ಟೆ: ತೆಕ್ಕಟ್ಟೆ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಕರಾವಳಿ ರೈತರು ನೂರಾರು ಎಕರೆ ಕೃಷಿಭೂಮಿಯಲ್ಲಿ ನೆಲಗಡಲೆ ಬೀಜ ಬಿತ್ತನೆ ಮಾಡಿದ್ದು, ಅಕಾಲಿಕ ಮಳೆಯ ಪರಿಣಾಮ ಅಂತರದಲ್ಲಿ ನೆಲಗಡಲೆ ಗಿಡಗಳು ಬೆಳೆದು ನಿಂತಿದ್ದು, ಕಳೆದ ಬಾರಿಗಿಂತ ಈ ಬಾರಿ ಇಳುವರಿ ಇಳಿಮುಖವಾಗಿ ರೈತರ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯದಂತಾಗಿದೆ.

Advertisement

ಈಗಾಗಲೇ ಕರಾವಳಿ ತೀರದ ಕೃಷಿ ಭೂಮಿಗಳಲ್ಲಿ ಬೆಳೆದುನಿಂತ ನೆಲಗಡಲೆ ಗಿಡಗಳನ್ನು ಗದ್ದೆಯಿಂದ ಕಿತ್ತು ಬಿಸಿಲಿನಲ್ಲಿ
ಒಣಗಿಸಲಾಗಿದೆ. ಕೃಷಿ ಕೂಲಿಕಾರ್ಮಿಕರ ಸಮಸ್ಯೆಯಿಂದಾಗಿ ನೆಲಗಡಲೆ ಗಿಡದಿಂದ ಕಾಳುಗಳನ್ನು ಬೇರ್ಪಡಿಸುವ ನಿಟ್ಟಿನಿಂದ
ಯಾಂತ್ರಿಕ ಶಕ್ತಿಗೆ ಮೊರೆಹೋಗಬೇಕಾದ ಅನಿವಾರ್ಯ ಪರಿಸ್ಥಿತಿ ಇಲ್ಲಿನ ಗ್ರಾಮೀಣ ರೈತರದ್ದಾಗಿದೆ.

ಹಸಿ ನೆಲಗಡಲೆಗೆ ಹೆಚ್ಚಿದ ಬೇಡಿಕೆ ಈಗಾಗಲೇ ಮಾರುಕಟ್ಟೆಯಲ್ಲಿ ಹಸಿ ನೆಲಗಡಲೆಗಳಿಗೆ ಭಾರೀ ಬೇಡಿಕೆ ಗಳಿದ್ದು, ಬಡವರ ಬಾದಾಮಿ ಎಂದೇ ಕರೆಯಲ್ಪಡುವ ಇದಕ್ಕ ಎಷ್ಟೇ ದರಗಳಿದ್ದರೂ ಕೂಡ ಗ್ರಾಹಕರು ಖರೀದಿಗೆ ಮುಂದಾಗುತ್ತಿದ್ದಾರೆ.

ಸೂಕ್ತ ಪರಿಹಾರ ನೀಡಿ
ಈ ಬಾರಿ ಸುಮಾರು 4.5 ಎಕ್ರೆಯಲ್ಲಿ ನೆಲಗಡಲೆ ಬೀಜವನ್ನು ನೇಗಿಲು ಬಳಸಿ ಬಿತ್ತನೆ ಮಾಡಲಾಗಿದೆ. ಆದರೆ ಬಿತ್ತನೆ ಮಾಡಿ 14 ದಿನದಲ್ಲೇ ಸುರಿದ ಅಕಾಲಿಕಮಳೆಯಿಂದಾಗಿ ಈ ಬಾರಿ ನಿರೀಕ್ಷೆಯಷ್ಟು ಇಳುವರಿ ಆಗಿಲ್ಲ. ಈಗಲೇ ನೆಲಗಡಲೆಯನ್ನು ಮಾರುಕಟ್ಟೆಗೆ ನೀಡಿದರೆ ಶ್ರಮಕ್ಕೆ ತಕ್ಕ ಬೆಲೆ ಸಿಗುವುದಿಲ್ಲ. ಆದ್ದರಿಂದ ಸರಿಯಾಗಿ ಒಣಗಿಸಿ ಶೇಖರಿಸಿಡಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ. ಕೃಷಿ ಇಲಾಖೆಯ ಮೇಲೆ ನಂಬಿಕೆ ಇರಿಸಿ ನೆಲಗಡಲೆ ಬೀಜಗಳನ್ನು ತಂದಿದ್ದರೂ ಇಂತಹ ಸಮಸ್ಯೆ ಕಾಣಿಸಿಕೊಂಡಿದೆ. ಈ ಕುರಿತು ಸಂಬಂಧಪಟ್ಟ ಇಲಾಖೆಯವರು ಸೂಕ್ತ ಪರಿಹಾರ ನೀಡಬೇಕು.
*ಶೇಖರ್‌ ಕಾಂಚನ್‌ ಕೊಮೆ, ಹಿರಿಯ ಸಾವಯವ ಕೃಷಿಕರು

ಪ್ರತೀ ಗಂಟೆಗೆ 1,500 ರೂ. ಬಾಡಿಗೆ
ನೆಲಗಡಲೆ ಗಿಡದಿಂದ ಕಾಳು ಬೇರ್ಪಡಿಸುವ ಈ ಯಂತ್ರವು ಪ್ರತೀ ಗಂಟೆಗೆ ಸುಮಾರು 40 ಕೆ.ಜಿ. ತೂಕದಂತೆ ಸುಮಾರು 13 ಚೀಲಗಳ ನೆಲಗಡಲೆಯನ್ನು ಬೇರ್ಪಡಿಸುವ ಸಾಮರ್ಥ್ಯ ಹೊಂದಿದೆ. ನೆಲಗಡಲೆ ಗಿಡಗಳು ಸಂಪೂರ್ಣ ಒಣಗಿದಷ್ಟು ಕಸ ಕಡ್ಡಿಗಳು ಬೇರ್ಪಟ್ಟು ಉತ್ತಮ ಗುಣಮಟ್ಟದ ನೆಲಗಡಲೆ ಕಾಳು ದೊರೆಯುವುದು. ಆದರೆ ಯಂತ್ರದಿಂದ ಬಾಡಿಗೆ ಪ್ರತೀ ಗಂಟೆಗೆ 1,500 ರೂ. ದರ ನಿಗದಿಪಡಿಸಲಾಗಿದೆ.
*ಚಂದ್ರಪ್ಪ ಹಾವೇರಿ, ಯಂತ್ರಗಳ ಮಾಲಕರು

Advertisement

*ಟಿ. ಲೋಕೇಶ್‌ ಆಚಾರ್ಯ ತೆಕ್ಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next