Advertisement
ಪ್ರಕೃತಿಯಲ್ಲಿ ಎಲ್ಲವೂ ಹಠಾತ್ ಆಗಿ ಬದಲಾಗುವುದಿಲ್ಲ. ಪ್ರತಿಯೊಂದು ಋತುಗಳು ಶುರುವಾಗುವ ಮುನ್ನ ಬದಲಾವಣೆಗಳಿಗೆ ತಯಾರಿ ತುಂಬ ಚೆನ್ನಾಗಿಯೇ ಆಗಿರುತ್ತದೆ. ಅದೇ ರೀತಿ ನಮ್ಮಲ್ಲಿ ಬದಲಾವಣೆಗಳು ತಂದುಕೊಳ್ಳಬೇಕಾದರೆ ಸಂಪೂರ್ಣ ತಯಾರಿ ಮಾಡಿಕೊಳ್ಳಬೇಕಾಗುತ್ತದೆ. ಪ್ರತಿಯೊಂದು ವಿಷಯಗಳಲ್ಲಿ ಕಾಲಕ್ರಮೇಣ ಬದಲಾವಣೆಗಳಿಗೆ ಹೊಂದಿಕೊಳ್ಳಬೇಕು. ಒಂದೇ ಬಾರಿ ಕೆಲವೊಂದು ಬದಲಾವಣೆಗಳು ಕೈಲಿ ಸಾಧ್ಯವಾಗದೆ ಹೋದರು ಒಂದು ಪುಟ್ಟ ಹೆಜ್ಜೆ ಮುಂದೆ ಇಟ್ಟರೆ ಸಾಕು ಆತ್ಮವಿಶ್ವಾಸ ಇಮ್ಮಡಿಯಾಗುತ್ತದೆ.
Related Articles
Advertisement
ಯುರೋಪಿನಲ್ಲಿ ನಿಮಗೆ ಬದಲಾಗುವ ಋತುಗಳು, ಪ್ರಕೃತಿಯಲ್ಲಿ ಆಗುವ ಬದಲಾವಣೆಗಳು ಎದ್ದು ಕಾಣುತ್ತವೆ. ಪ್ರತೀ ಬಾರಿ ಪ್ರಕೃತಿಯಲ್ಲಾಗುವ ಬದಲಾವಣೆಗಳನ್ನು ಗಮನಿಸಿದಾಗೆಲ್ಲ ನಮ್ಮ ಬದುಕಿನಲ್ಲಿ ಹಾಗಾದರೆ ಈ ರೀತಿಯ ಪೂರ್ವ ನಿಯೋಜಿತ ಬದಲಾವಣೆಗಳೇ ಆಗುತ್ತಿಲ್ಲವೇ?, ಆ ಬದಲಾವಣೆಗೆ ಮನಸ್ಸು ಮಾಡುತ್ತಿಲ್ಲವೇ ಅಥವಾ ಆ ಬದಲಾವಣೆಗಳ ಆವಶ್ಯಕತೆ ನಮಗಿಲ್ಲ ಎಂಬ ಅಹಂಭಾವವೇ? ಎಂಬ ಪ್ರಶ್ನೆಗಳು ಹುಟ್ಟಿಕೊಂಡಿದ್ದಂತೂ ನಿಜ. ಕ್ಯಾಲೆಂಡರ್‌ನ ಮೊದಲ ದಿನ ನಾವು ಮಾಡಿದ ಸಂಕಲ್ಪಗಳಾಗಲೇ ಮರೆತು ಹೋಗಿ ಮತ್ತದೇ ಹಳೆ ಧಾವಂತದ ಬದುಕಿಗೆ ಮುಖಮಾಡಿ ಓಡಲು ಶುರು ಮಾಡಿಯಾಗಿದೆ. ಕಾರ್ಯರೂಪಕ್ಕೆ ತರಬೇಕೆಂದುಕೊಂಡಿದ್ದ ಪೂರ್ವ ನಿಯೋಜಿತ ಯೋಜನೆಗಳಲ್ಲ ಜಾರಿಯಾಗದೇ, ಆಗಾಗ ನಿಂತು ಹೋಗುವ ರೆಕಾರ್ಡ್‌ರ್ ಅನ್ನು ಬಡಿದು ಸರಿ ಮಾಡಿಕೊಂಡು ಅದೇ ರಾಗ ಅದೇ ಹಾಡು ಎಂಬಂತ ಏರುಪೇರಿಲ್ಲದ ಜೀವನದಲ್ಲಿ ಮುಳುಗಿಹೋಗಿದ್ದೇವೆ. ಬದಲಾವಣೆಗಳು ಎಲ್ಲಿ ಸಮಸ್ಯೆಗಳನ್ನೂ ತಂದೊಡ್ಡುವುದೋ ಎಂಬ ಭಯಕ್ಕೆ ಯಾವುದೇ ಹೊಸ ಕಾರ್ಯಗಳಿಗೆ ಕೈ ಹಾಕದೆ, ಇದ್ದದ್ದು ಇದ್ದ ಹಾಗೆ ಇದ್ದರೇ ಸಾಕು ಎಂಬ ಅಲ್ಪ ತೃಪ್ತಿಗೆ ಸಮಾಧಾನ ಮಾಡಿಕೊಂಡುಬಿಟ್ಟಿದ್ದೇವೆ.
ಕೆಲಸದಲ್ಲಿ ಬಡ್ತಿಗಾಗಿಯೋ, ಕೆಲಸದ ಸ್ವರೂಪವನ್ನು ಬದಲಾಯಿಸಿಕೊಳ್ಳಬೇಕೆಂಬ ಯೋಜನೆಗಳಿದ್ದರೂ ಯಾವುದೋ ಹಿಂಜರಿಕೆಯಿಂದ ಕಾರ್ಯರೂಪಕ್ಕೆ ತರುವಲ್ಲಿ ತಡ ಮಾಡಿಕೊಳ್ಳುತ್ತಾ, ಬದುಕಿನಲ್ಲಿ ಬದಲಾವಣೆ ಬೇಕಿದ್ದರೂ ಸಹ ಆ ಯೋಜನೆಗಳನ್ನು ಮುಂದೆ ಹಾಕುತ್ತಲೇ ಹೋಗುತ್ತೇವೆ. ಬದಲಾವಣೆ ಅನ್ನುವುದು ಕೇವಲ ಕೆಲಸಕ್ಕೆ ಸಂಬಂಧಪಟ್ಟ ವಿಷಯವಲ್ಲ.
ಮಾನಸಿಕವಾಗಿಯೂ, ದೈಹಿಕವಾಗಿಯೂ ನಮ್ಮಲ್ಲಿ ಬದಲಾವಣೆಗಳು ಬರಬೇಕು. ಚಿಂತನೆಗಳು, ಆಲೋಚನೆಗಳು, ಬದುಕುವ ಕ್ರಮಗಳು, ಜೀವನ ಶೈಲಿ, ಆರ್ಥಿಕತೆ ಹೀಗೆ ಪ್ರತಿಯೊಂದು ವಿಷಯಗಳಲ್ಲಿ ಕಾಲಕ್ರಮೇಣ ಬದಲಾವಣೆಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಲೇಬೇಕು. ಬದುಕು ಸ್ವಾರಸ್ಯಕರವಾಗಿ ಇರಬೇಕೆಂದರೆ ಹಿಂಜರಿಕೆ ಬಿಟ್ಟು ಬದಲಾವಣೆಗಳಿಗೆ ಮುಖ ಮಾಡದಿದ್ದರೆ ಬದುಕು ನೀರಸವೆನಿಸಿ, ಬದುಕಿನಲ್ಲಿ ನಿರಾಸಕ್ತಿಗೆ ಕಾರಣವಾಗುತ್ತದೆ. ಕಪ್ಪೆ ಚಿಪ್ಪಿನೊಳಗೆ ಹುದುಗಿಕೊಂಡ ಹುಳದಂತೆ ಆಗಿಬಿಡುತ್ತದೆ ಜೀವನ. ಒಂದೇ ಬಾರಿ ಕೆಲವೊಂದು ಬದಲಾವಣೆಗಳು ಕೈಲಿ ಸಾಧ್ಯವಾಗದೆ ಹೋದರು ಒಂದು ಪುಟ್ಟ ಹೆಜ್ಜೆ ಮುಂದೆ ಇಟ್ಟರೆ ಸಾಕು ಆತ್ಮವಿಶ್ವಾಸ ಇಮ್ಮಡಿಯಾಗುತ್ತದೆ. ನಮ್ಮ ಸುತ್ತ ನಾವೇ ಕಟ್ಟಿಕೊಂಡ ಕೋಟೆಯಿಂದ ಹೊರಬರಬೇಕು ಎಂಬ ಆಲೋಚನೆಯಾದರು ಮೂಡುತ್ತದೆ.
ಅಪರೂಪಕ್ಕೆ ನೀವು ಪ್ರತಿನಿತ್ಯ ಧರಿಸುವ ವಸ್ತ್ರಗಳ ಬದಲು ಬೇರೆ ರೀತಿಯ ವಸ್ತ್ರಗಳನ್ನು ನೀವು ಧರಿಸಿ ಕಚೇರಿಗೆ ಹೋದರೆ ಅಂದು ಪ್ರತಿಯೊಬ್ಬರೂ ಅದನ್ನು ಗುರುತಿಸುವುದನ್ನು ನೀವು ಗಮನಿಸಿರಬಹುದು. ನಿಮ್ಮಲ್ಲಾದ ಆ ಒಂದು ಚಿಕ್ಕ ಬದಲಾವಣೆ ನಿಮ್ಮ ಗುರುತನ್ನು ಬದಲಾಯಿಸಿಬಿಡುತ್ತದೆ ಅಲ್ಲವೇ. ಹಾಗೆಯೇ ನಿಮ್ಮ ಮಾತಿನ ಶೈಲಿ, ಸೇವಿಸುವ ಆಹಾರ ಪದ್ಧತಿ, ಕೆಲಸ ಮಾಡುವ ಶೈಲಿ, ಬಿಡುವಿನ ವೇಳೆಯಲ್ಲಿ ಹೊಸ ಹವ್ಯಾಸಗಳನ್ನು ಅಳವಡಿಸಿಕೊಳ್ಳುವುದು, ಹೀಗೆ ಸಣ್ಣ-ಪುಟ್ಟ ಬದಲಾವಣೆಗಳು ತಂದುಕೊಂಡರೆ ನಿಮ್ಮ ಬದುಕು ಕೂಡ ಪ್ರಕೃತಿಯ ಋತುಗಳಂತೆ ಸುಂದರವಾಗಿರುತ್ತದೆ ಅಲ್ಲವೇ.
ನೀವು ಪ್ರಕೃತಿಯನ್ನು ಗಮನಿಸಿ ನೋಡಿದರೆ ಎಲ್ಲ ಋತುಗಳು ಹಠಾತ್ ಆಗಿ ಬದಲಾಗುವುದಿಲ್ಲ. ಪ್ರತಿಯೊಂದು ಋತುಗಳು ಶುರುವಾಗುವ ಮುನ್ನಬದಲಾವಣೆಗಳಿಗೆ ತಯಾರಿ ತುಂಬ ಚೆನ್ನಾಗಿಯೇ ಆಗಿರುತ್ತದೆ. ಅದೇ ರೀತಿ ನಮ್ಮಲ್ಲಿ ಬದಲಾವಣೆಗಳು ತಂದುಕೊಳ್ಳಬೇಕಾದರೆ ಸಂಪೂರ್ಣ ತಯಾರಿ ನಾವು ಕೂಡ ಮಾಡಿಕೊಳ್ಳಬೇಕಾಗುತ್ತದೆ. ಒಂದು ಸಣ್ಣ ಬದಲಾವಣೆಯಿಂದ ಬದುಕಿನಲ್ಲಿ ಅನುಕೂಲವಾಗುತ್ತದೆ ಎಂದು ಅನಿಸಿದರೆ ಹಿಂಜರಿಕೆ ಬಿಟ್ಟು ಮುನ್ನುಗ್ಗಬೇಕು ಅಷ್ಟೇ. ನಮ್ಮ ಬದುಕು ನಮ್ಮದೇ ಆಗಿರುವುದರಿಂದ ಪ್ರಕೃತಿಯು ಹೇಗೆ ಸಮಾಜದ ಬಗ್ಗೆ ಆಲೋಚಿಸುವುದಿಲ್ಲವೋ ಹಾಗೆ ನಮ್ಮ ಪಾಡಿಗೆ ನಮ್ಮಲ್ಲಿ ಬದಲಾವಣೆ ತಂದುಕೊಳ್ಳಬೇಕು. ಪ್ರಕೃತಿ ಹೇಳಿ ಕೊಡುವ ಈ ಬದಲಾವಣೆಯ ಪಾಠ ಕೇಳಿಸಿಕೊಳ್ಳುವ ವ್ಯವಧಾನ ನಮ್ಮಲ್ಲಿದ್ದರೆ ನಮ್ಮ ಬದುಕಿನ ಋತುಗಳು ಸಹ ಬದಲಾಗಬಹುದೇನೋ ಅಲ್ಲವೇ.