ಬೆಂಗಳೂರು: ಪತಿಯೊಬ್ಬ ತನ್ನ ಸ್ನೇಹಿತನ ಜತೆ ಸೇರಿ ಪತ್ನಿಯನ್ನು ಕೊಂದು, ಪೆಟ್ರೋಲ್ ಸುರಿದು ಸುಟ್ಟು ಹಾಕಿದ ಪ್ರಕರಣ ಭೇದಿಸಿರುವ ಕೆಂಗೇರಿ ಪೊಲೀಸರು ಪತಿ ಸೇರಿ ಇಬ್ಬರನ್ನು ಬಂಧಿಸಿದ್ದಾರೆ.
ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನ ಮೊಹಮ್ಮದ್ ಮಂಜೂರ್ ಅಹ್ಮದ್ ಹಣಗಿ (29) ಮತ್ತು ದೊಡ್ಡಬಳ್ಳಾಪುರ ತಾಲೂಕಿನ ಪ್ರಜ್ವಲ್ (21) ಬಂಧಿತರು.
ಮೊಹಮ್ಮದ್ ಮಂಜೂರ್ ತನ್ನ ಪತ್ನಿ ನಗೀನಾ(29) ಪುರುಷನ ಜತೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಭಾವಿಸಿ ಸ್ನೇಹಿತನ ಜತೆ ಸೇರಿ ಹತ್ಯೆ ಮಾಡಿದ್ದನು. ಮೃತ ನಗೀನಾಗೆ ಈಗಾಗಲೇ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಆದರೂ 6 ವರ್ಷಗಳ ಹಿಂದೆ ಮೊಹಮ್ಮದ್ ಮಂಜೂರ್‌ನನ್ನು 2ನೇ ಮದುವೆಯಾಗಿದ್ದು, ಕೆಂಗೇರಿ ಉಪನಗರದ ಸನ್‌ಸಿಟಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಮೊಹಮ್ಮದ್ ಮಂಜೂರು ಜೆಸಿಬಿ ಚಾಲಕನಾಗಿದ್ದಾನೆ.
ಕರೆಸಿಕೊಂಡು ಕೊಲೆ: ಜು. 2ರಂದು ರಾತ್ರಿ ವಿಶ್ವೇಶ್ವರಯ್ಯ ಲೇಔಟ್‌ನ ಧನನಾಯಕನಹಳ್ಳಿಗೆ ಬಂದ ಮೊಹಮ್ಮದ್ ಪತ್ನಿಗೆ ಕರೆ ಮಾಡಿ, ಸ್ಥಳಕ್ಕೆ ಕರೆಸಿಕೊಂಡಿದ್ದಾನೆ. ಬಳಿಕ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕುತ್ತು ಹಿಸುಕಿದರೆ, ಪ್ರಜ್ವಲ್ ಕಾಲು ಹಿಡಿದುಕೊಂಡು ಕೊಲೆಗೆ ಸಹಕಾರ ನೀಡಿದ್ದಾನೆ. ಆಕೆ ಮೃತಪಟ್ಟ ಬಳಿಕ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂದಿದ್ದಾರೆ.
ಮರು ದಿನ ದಾರಿಹೋಕರು ಸುಟ್ಟುಕರಕಲಾಗಿದ್ದ ದೇಹವನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಧಾವಿಸಿದ ಪೊಲೀಸರಿಗೆ ಗುರುತು ಪತ್ತೆ ಹಚ್ಚಲಾಗದಷ್ಟು ದೇಹ ಸುಟ್ಟು ಹೋಗಿದ್ದರಿಂದ ಪ್ರಕರಣ ಭೇದಿಸುವುದು ಸವಾಲಾಗಿತ್ತು.
ಪೊಲೀಸ್ ವಿಶೇಷ ತಂಡಗಳು ಮೃತ ಮಹಿಳೆಯ ವಿಳಾಸವನ್ನು ಪತ್ತೆ ಮಾಡಿ ಆಕೆಯ ತಂದೆ-ತಾಯಿಯಿಂದ ಖಚಿತ ಪಡಿಸಿಕೊಂಡು ತನಿಖೆ ನಡೆಸಿ ವಿಜಯಪುರ ಜಿಲ್ಲೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.