ಬೆಂಗಳೂರು : ಗ್ಯಾರಂಟಿ ವಿಚಾರದಲ್ಲಿ ರಾಜ್ಯದ ಕಾಂಗ್ರೆಸ್ ಸರಕಾರ ಮತ್ತು ಬಿಜೆಪಿ ನಡುವೆ ಆರೋಪ ಪ್ರತ್ಯಾರೋಪಗಳು ತೀವ್ರವಾಗಿದ್ದು , ಟ್ವೀಟ್ ಸಮರ ಮುಂದುವರಿದಿದೆ.
”ಕರ್ನಾಟಕಕ್ಕೆ ಬರ ಪರಿಹಾರದಲ್ಲೂ ಮೋದಿ ಮೋಸ, ನೆರೆ ಪರಿಹಾರದಲ್ಲೂ ಮೋದಿ ಮೋಸ, GST ಹಂಚಿಕೆಯಲ್ಲೂ ಮೋದಿ ಮೋಸ,ಆಕ್ಸಿಜನ್ ಹಂಚಿಕೆಯಲ್ಲೂ ಮೋದಿ ಮೋಸ, ಯೋಜನೆಗಳ ಅನುದಾನದಲ್ಲೂ ಮೋದಿ ಮೋಸ, ಈಗ ಅಕ್ಕಿ ಕೊಡುವುದರಲ್ಲೂ ಮೋದಿ ಮೋಸ. ಕನ್ನಡಿಗರು ಈಗಾಗಲೇ ಮೊಸಗಾರ ಬಿಜೆಪಿಗೆ ಪಾಠ ಕಲಿಸಿಯಾಗಿದೆ, ಮುಂದೆ ಲೋಕಸಭೆಯ ಚುನಾವಣೆಯಲ್ಲಿ ಇವೆಲ್ಲವಕ್ಕೂ ಉತ್ತರಿಸಲಿದ್ದಾರೆ.” ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ತಿರುಗೇಟು ನೀಡಿರುವ ಬಿಜೆಪಿ, ”ಚುನಾವಣೆಯಲ್ಲಿ ಮತಗಳಿಕೆಗಾಗಿ ಬೋಗಸ್ ಗ್ಯಾರಂಟಿಗಳನ್ನು ಘೋಷಿಸಿದ್ದ ಕಾಂಗ್ರೆಸ್, ಈಗ ನೂರೆಂಟು ಷರತ್ತುಗಳೊಂದಿಗೆ ಹೊರಬಂದು, ಅನುಷ್ಠಾನಕ್ಕೆ ಹೆಣಗಾಡುತ್ತಿದೆ. ಇದೀಗ ತಪ್ಪಿಸಿಕೊಳ್ಳಲು ಜನರ ಕಣ್ಣಿಗೆ ಮಣ್ಣೆರಚುತ್ತಿರುವ ಎಟಿಎಂ ಸರಕಾರದ ರಾಜಕೀಯದಾಟಕ್ಕೆ ಬಲಿಯಾಗಿ ನರಳುತ್ತಿರುವುದು ಮಾತ್ರ ಕರ್ನಾಟಕದ ಜನತೆ” ಎಂದು ಟ್ವೀಟ್ ಮಾಡಿದೆ.
”ಎಟಿಎಂ ಸರಕಾರದಲ್ಲಿ ಸರ್ಕಾರಿ ಹುದ್ದೆಗಳು ಮಾರಾಟಕ್ಕಿವೆ.ಅಬಕಾರಿ ಇಲಾಖೆಯ ಹುದ್ದೆಗಳನ್ನು 1.5 ಕೋಟಿಯಿಂದ 2.5 ಕೋಟಿಗೆ ಸೇಲ್‌ಗೆ ಇಡಲಾಗಿದೆ.ಬಿಬಿಎಂಪಿ, ಬಿಡಿಎ ಅಧಿಕಾರಿಗಳ ಜತೆ ಕಲೆಕ್ಷನ್ ಏಜೆಂಟ್ ಸುರ್ಜೇವಾಲಾ ಮಾಡಿದ ಗೌಪ್ಯ ಸಭೆ ಬಯಲಾಯ್ತು. ಬಹಿರಂಗವಾಗದ ಅಬಕಾರಿ ಸೇರಿ ಹಲವು ಇಲಾಖೆಗಳ ಜತೆ ನಡೆದ ಗೌಪ್ಯ ಸಭೆಯ ಪರಿಣಾಮ, ಇದೀಗ 85% ಕಮಿಷನ್ ಪಡೆಯಲಾಗುತ್ತಿದೆಯಂತೆ.ಮಿಸ್ಟರ್
ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರೇ, ಹೈಕಮಾಂಡ್‌ಗೆ ಸಲ್ಲಿಸಬೇಕಾದ ಕಪ್ಪ ಕಾಣಿಕೆಯ ಟಾರ್ಗೆಟ್ ರೀಚ್ ಮಾಡಲು ಇನ್ನೆಷ್ಟು ಬಾಕಿಯಿದೆ?”ಎಂದು ಸರಣಿ ಟ್ವೀಟ್ ಮಾಡಿದೆ.
”ಮುಖ್ಯಮಂತ್ರಿಗಳ ಕಚೇರಿಯ ಅಧಿಕೃತ ಖಾತೆಗಳನ್ನು ಸಿದ್ದರಾಮಯ್ಯನವರು ರಾಜಕೀಯ ದುರುದ್ದೇಶದ ಹೇಳಿಕೆಗಳನ್ನು ಬಿತ್ತರಿಸಲು ಬಳಸಿಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿಗಳ ಕಚೇರಿ ಮತ್ತು ಸವಲತ್ತುಗಳು ಆಡಳಿತ ನೀಡುವುದಕ್ಕೇ ಹೊರತು ರಾಜಕೀಯ ದ್ವೇಷ ಸಾಧನೆಗಲ್ಲ. ಕರ್ನಾಟಕ ಮುಖ್ಯಮಂತ್ರಿ ಕಾಂಗ್ರೆಸ್ ಪಕ್ಷದ ಅಧಿಕೃತ ಖಾತೆಯಲ್ಲ ಎಂಬುದು ತಿಳಿದಿರಲಿ” ಎಂದು ಬಿಜೆಪಿ ಟ್ವೀಟ್ ಮೂಲಕ ಆಕ್ರೋಶ ಹೊರ ಹಾಕಿದೆ.
”ಸರಕಾರಿ ಅಧಿಕಾರಿಗಳನ್ನೂ ತಮ್ಮ ರಾಜಕೀಯ ದುರುದ್ದೇಶಗಳನ್ನು ಈಡೇರಿಸಲು ಬಳಸಿಕೊಳ್ಳುತ್ತಿದ್ದೀರಿ. ಅವರನ್ನು ಕಾಂಗ್ರೆಸ್ ನ ಆಳುಗಳಂತೆ ದುರುಪಯೋಗ ಮಾಡುತ್ತಿರುವಿರಿ. ಹೈ ಕಮಾಂಡಿನ ಏಜೆಂಟರಿಂದ ಅವರಿಗೆ ನೇರ ಆದೇಶ ಕೊಡಿಸುವ ಮಟ್ಟಕ್ಕೆ ಘನ ಸರ್ಕಾರವನ್ನು ತಂದು ನಿಲ್ಲಿಸಿರುವುದು ರಾಜ್ಯದ ಪಾಲಿನ ದುರಂತ” ಎಂದು ಇನ್ನೊಂದು ಟ್ವೀಟ್ ಮಾಡಿದೆ.