ವಾಷಿಂಗ್ಟನ್: ಅಮೆರಿಕದಲ್ಲಿ ವಲಸಿಗರ ನಿರ್ಬಂಧದ ಬಿಸಿ ಭಾರತೀಯರಿಗೂ ತಟ್ಟುವ ಎಲ್ಲ ಅಪಾಯಗಳಿವೆ. ಭಾರತ ಸೇರಿದಂತೆ ಯಾವುದೇ ದೇಶದಿಂದ ಯಾರೇ ಅಮೆರಿಕಕ್ಕೆ ಹೋಗುವುದಾದರೂ ಅವರ ಫೇಸ್‌ಬುಕ್, ಗೂಗಲ್, ಇನ್‌ಸ್ಟಗ್ರಾಮ್, ಯೂಟ್ಯೂಬ್ ಖಾತೆಯ ಮಾಹಿತಿ, ವಾಟ್ಸಾéಪ್ ಸಂದೇಶದ ವಿವರಗಳು, ಮೊಬೈಲ್‌ನಲ್ಲಿರುವ ಸಂಪರ್ಕ ಸಂಖ್ಯೆಗಳನ್ನೂ ಅಮೆರಿಕ ಸರ್ಕಾರದ ಮುಂದಿಡಬೇಕಾಗುತ್ತದೆ.
ಭಾರತ ಸೇರಿದಂತೆ ಎಲ್ಲ ವಿದೇಶಿಗರಿಗೂ ಈ ಹೊಸ ಕಾನೂನು ಅನ್ವಯಿಸಲಿದೆ. ಈಗಾಗಲೇ ಡಿಸೆಂಬರ್‌ನಲ್ಲಿ ಅಮೆರಿಕಕ್ಕೆ ತೆರಳಿರುವ ಮಂದಿಗೆ ತಮ್ಮ ಸಾಮಾಜಿಕ ಜಾಲತಾಣ ಖಾತೆ ವಿವರ ಹಾಗೂ ಮೊಬೈಲ್ ಸಂಪರ್ಕದ ಮಾಹಿತಿಗಳನ್ನು ಕೇಳಲು ಟ್ರಂಪ್ ಸರ್ಕಾರ ಮುಂದಾಗಿದೆ.
ವಲಸೆ ನಿಷೇಧಕ್ಕೆ ತೇಪೆ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶಿಸಿರುವ ವಲಸೆ ನೀತಿ ವಿಶ್ವದಾದ್ಯಂತ ಕೆಂಗಣ್ಣಿಗೆ ಗುರಿಯಾದ ಹಿನ್ನೆಲೆಯಲ್ಲಿ, ರಿಪಬ್ಲಿಕನ್ ಸರ್ಕಾರ ಇದಕ್ಕೆ ತೇಪೆ ಹಚ್ಚಲು ಯತ್ನಿಸುತ್ತಿದೆ. “ಇದು ಮುಸ್ಲಿಮರ ಮೇಲಿನ ನಿಷೇಧವಲ್ಲ’ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
“ಸ್ಪಷ್ಟವಾಗಿ ಹೇಳುತ್ತೇನೆ, ಮುಸ್ಲಿಮರ ಮೇಲಿನ ನಿಷೇಧ ಇದಲ್ಲ. ನನ್ನ ನೀತಿಯನ್ನು ಮಾಧ್ಯಮಗಳು ತಪ್ಪಾಗಿ ಅರ್ಥೈಸುತ್ತಿವೆ. ಒಂದು ಧರ್ಮದ ಮೇಲಿನ ವಿರೋಧವೂ ಇದಲ್ಲ. ಇದು ಕೇವಲ ಅಮೆರಿಕವನ್ನು ಉಳಿಸಲು ಜಾರಿಗೆ ತಂದಿರುವ ಉಗ್ರವಾದದ ನಿಷೇಧ’ ಎಂದು ಸಮರ್ಥಿಸಿಕೊಂಡಿದ್ದಾರೆ.
ಇರಾನ್, ಇರಾಕ್, ಸಿರಿಯಾ, ಲಿಬಿಯಾ, ಸುಡಾನ್, ಯೆಮನ್ ಮತ್ತು ಸೊಮಾಲಿಯಾ ದೇಶಗಳ ವಲಸಿಗರನ್ನು ಅಮೆರಿಕ ನಿಷೇಧಿಸಿತ್ತು. ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದಿಗ್ಗಜರು ಸೇರಿದಂತೆ ವಿಶ್ವದ ಗಣ್ಯಾತಿಗಣ್ಯರು ಈ ವಲಸೆ ವಿರೋಧಿ ನೀತಿಯನ್ನು ಖಂಡಿಸಿದ್ದರು. ನಿಷೇಧ ಹೊರಡಿಸಿ ಮೂರನೇ ದಿನ ಎಚ್ಚೆತ್ತುಕೊಂಡಿರುವ ಟ್ರಂಪ್, “ಸಿರಿಯಾದ ಈಗಿನ ಪರಿಸ್ಥಿತಿ ಎಷ್ಟು ಕೆಟ್ಟದಾಗಿದೆ ಎನ್ನುವುದು ಗೊತ್ತು. ದೇಶದಿಂದ ಹೊರಗೆ ಹೋಗುತ್ತಿರುವ ಸಿರಿಯಾ ಮಂದಿ ಮೇಲೆ ನನಗೂ ಅನುಕಂಪವಿದೆ. ಆದರೆ, ಅಮೆರಿಕ ರಕ್ಷಣೆಗಾಗಿ ಈ ಕ್ರಮ ಕೈಗೊಳ್ಳಲೇಬೇಕಿದೆ’ ಎಂದು ಹೇಳಿದ್ದಾರೆ.
ಫ್ರಾನ್ಸ್, ಜರ್ಮನಿ ವಿರೋಧ: ಫ್ರಾನ್ಸ್ ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡ್, “ಟ್ರಂಪ್ ಘೋಷಿಸಿರುವ ಈ ಖಾಸಗಿ ಹಿತಾಸಕ್ತಿಯ ನಿರ್ಧಾರದಿಂದ ನಮ್ಮಂಥ ರಾಷ್ಟ್ರಗಳು ಪರಿಣಾಮ ಎದುರಿಸಲಿವೆ. ಸಿರಿಯಾದಲ್ಲಿ ಯುದ್ಧವಾದಾಗ ನಿಜಕ್ಕೂ ವಲಸಿಗರ ಸಮಸ್ಯೆ ಅನುಭವಿಸಿದ್ದು ಫ್ರಾನ್ಸ್ ಮತ್ತು ಜರ್ಮನಿ. ಆದರೆ, ನಾವ್ಯಾರೂ ಅವರನ್ನು ವಿರೋಧಿಸಲು ಹೋಗಲಿಲ್ಲ’ ಎಂದಿದ್ದಾರೆ. ಜರ್ಮನಿ ಚಾನ್ಸೆಲರ್ ಏಂಜೆಲಾ ಮಾರ್ಕೆಲ್, “ಜನರನ್ನು ಧರ್ಮದ ಆಧಾರದಲ್ಲಿ ನಿರ್ಬಂಧಿಸುವುದು ತಪ್ಪು’ ಎಂದು ಟ್ರಂಪ್‌ಗೆ ಕಿವಿಮಾತು ಹೇಳಿದ್ದಾರೆ.
ಅಮೆರಿಕಾದ್ಯಂತ ಪ್ರತಿಭಟನೆ: ವಲಸೆ ನೀತಿಯನ್ನು ಖಂಡಿಸಿ, ವೈಟ್‌ಹೌಸ್ ಮುಂದೆ, ಅಮೆರಿಕ ಏರ್‌ಪೋರ್ಟ್‌ಗಳಲ್ಲಿ ಸಾವಿರಾರು ವಲಸಿಗರು ಪ್ರತಿಭಟನೆ ನಡೆಸುತ್ತಿದ್ದಾರೆ. “ನಾವೆಲ್ಲ ಒಗ್ಗಟ್ಟಿದ್ದೇವೆ. ಜನರನ್ನು ಒಡೆಯಲು ಸಾಧ್ಯವಿಲ್ಲ’ ಎಂಬ ಫಲಕಗಳನ್ನು ಹಿಡಿದಿದ್ದರು. ಇವರನ್ನು ಬೆಂಬಲಿಸಿದ ಕೆಲವು ಸಂಘಟನೆಗಳು, “ಹೆದರಬೇಡಿ, ಎಲ್ಲ ನಿರಾಶ್ರಿತರು ಅಮೆರಿಕಕ್ಕೆ ಬನ್ನಿ’ ಎಂದು ಆಗ್ರಹಿಸುತ್ತಿದ್ದರು. ದಲ್ಲಾಸ್ ವಿಮಾನ ನಿಲ್ದಾಣದಲ್ಲಿ ಪ್ರತಿಭಟನೆಗೆ ಮುಂದಾಗ 50 ಮಂದಿಯನ್ನು ಬಂಧಿಸಲಾಗಿದೆ.