ನೆಹರೂನಗರ: ಪ್ರತಿನಿತ್ಯ 8,000 ವಿದ್ಯಾರ್ಥಿಗಳು ಬಸ್ ಇಳಿದು ನೆಹರೂ ನಗರದಿಂದ ವಿವೇಕಾನಂದ ಕ್ಯಾಂಪಸ್‌ಗೆ ಹೆಜ್ಜೆ ಹಾಕುವ ರಸ್ತೆಯಲ್ಲಿರುವ ರೈಲ್ವೇ ಮೇಲ್ಸೇತುವೆ ಅಗಲ ಕಿರಿದಾಗಿರುವುದರಿಂದ ಉಂಟಾಗಿರುವ ಸಮಸ್ಯೆಗಳಿಂದ ಬೇಸೆತ್ತಿರುವ ವಿದ್ಯಾರ್ಥಿಗಳು ಅಭಿವೃದ್ಧಿಗಾಗಿ ಟ್ವಿಟ್ಟರ್ ಅಭಿಯಾನ ನಡೆಸಲು ಮುಂದಾಗಿದ್ದಾರೆ.
ನೆಹರೂನಗರದಿಂದ ವಿವೇಕಾನಂದ ಕ್ಯಾಂಪಸ್‌ಗೆ ಬರುವ ಈ ರಸ್ತೆ ಕೇವಲ ವಿದ್ಯಾಸಂಸ್ಥೆಗಷ್ಟೇ ಸೀಮಿತವಾಗದೆ ನೆಹರೂನಗರದಿಂದ ಬನ್ನೂರು, ಪಡ್ಡಾಯೂರು, ಪಡೀಲು ಮುಂತಾದ ಕಡೆಗಳನ್ನು ಸಂಪರ್ಕಿಸುವ ಸಾರ್ವಜನಿಕ ರಸ್ತೆ. ಮಂಗಳೂರು ಭಾಗದಿಂದ ಉಪ್ಪಿನಂಗಡಿಗೆ ಹೋಗುವವರೂ ಇದೇ ರಸ್ತೆಯನ್ನು ಬಳಸುತ್ತಾರೆ. ವಿದ್ಯಾರ್ಥಿಗಳು, ವಿದ್ಯಾಸಂಸ್ಥೆಯ ಉದ್ಯೋಗಿಗಳು, ಮಾತ್ರವಲ್ಲದೆ ಸಾರ್ವಜನಿಕರ ಅಸಂಖ್ಯ ವಾಹನಗಳೂ ಸಂಚರಿಸುತ್ತಲೇ ಇರುತ್ತವೆ. ರಸ್ತೆಯಲ್ಲಿನ ರೈಲ್ವೇ ಮೇಲ್ಸೇತುವೆಯ ಅಗಲ ಮಾತ್ರ ಕೇವಲ 12 ಅಡಿ. ಸುಮಾರು 70 ಅಡಿ ಉದ್ದದ ಈ ಮೇಲ್ಸೇತುವೆಯ ಅಗಲ ರಸ್ತೆಯ ಅರ್ಧಕ್ಕಿಂತಲೂ ಕಡಿಮೆಯಿದೆ.
ಮೇಲ್ಸೇತುವೆ ಕಿರಿದಾಗಿರುವುದರಿಂದ ಅನೇಕ ಸಂದರ್ಭಗಳಲ್ಲಿ ರಸ್ತೆ ಬ್ಲಾಕ್ ಆಗುತ್ತದೆ. ಮಳೆಗಾಲದಲ್ಲಂತೂ ಮಳೆ ನೀರು ತುಂಬಿ ಮೇಲ್ಸೇತುವೆಯ ರಸ್ತೆಯೇ ಮುಚ್ಚಿರುತ್ತದೆ. ಈ ಹಿನ್ನೆಲೆಯಲ್ಲಿ ಮೇಲ್ಸೇತುವೆಯನ್ನು ಅಗಲಗೊಳಿಸುವಂತೆ ಸಾಕಷ್ಟು ಬಾರಿ ರೈಲ್ವೇ ಇಲಾಖೆಗೆ ಮನವಿ ಸಲ್ಲಿಸಿದ್ದರೂ ಪರಿಣಾಮವಾಗಿಲ್ಲ.
ಕೇಂದ್ರ ಸರಕಾರ ಹಾಗೂ ರೈಲ್ವೇ ಇಲಾಖೆಯ ಗಮನ ಸೆಳೆಯುವ ದೃಷ್ಟಿಯಿಂದ ಅಖಿಲ ಭಾರತ ವಿದ್ಯಾರ್ಥಿ ಪರಿಷತ್, ವಿವೇಕಾನಂದ ಕಾಲೇಜಿನ ವಿದ್ಯಾರ್ಥಿ ಸಂಘ ಹಾಗೂ ಸ್ನಾತಕೋತ್ತರ ಕೇಂದ್ರದ ವಿದ್ಯಾರ್ಥಿಗಳು, ವಿವೇಕಾನಂದ ಪ.ಪೂ. ಕಾಲೇಜು, ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು, ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜು, ವಿವೇಕಾನಂದ ಎಂ.ಬಿ.ಎ ಕಾಲೇಜುಗಳ ವಿದ್ಯಾರ್ಥಿ ಸಂಘ ಹಾಗೂ ಎಬಿವಿಪಿ ಘಟಕಗಳು ಹಾಗೂ ನಾಗರಿಕರ ವತಿಯಿಂದ ಅ. 28ರಂದು ಟ್ವಿಟ್ಟರ್ ಅಭಿಯಾನ ಆಯೋಜಿಸಲಾಗಿದೆ.
ಪ್ರತಿಯೊಬ್ಬರೂ #RailBridgeWideBridge ಹ್ಯಾಷ್ ಟ್ಯಾಗ್‌ಲೈನ್‌ನೊಂದಿಗೆ ತಮ್ಮ ಅಭಿಪ್ರಾಯ ಸೇರಿಸಿ @RailMinIndia, @PiyushGoyaloffc, @Central_Railway, @
narendramodi, @PMOindia, @DVSBJP, @nalinkateel ವಿಳಾಸಕ್ಕೆ
ಕಳುಹಿಸಿಕೊಡಲಿದ್ದಾರೆ.
ಭಾಗವಹಿಸುವವರು ಮೊದಲು ಟ್ವಿಟರ್ ಖಾತೆ ತೆರೆಯಬೇಕು. ಅನಂತರ ಟ್ವಿಟರ್‌ನಲ್ಲಿ ಸೇತುವೆಯ ವಿಸ್ತರಣೆ ಕುರಿತು ಸಂಕ್ಷಿಪ್ತವಾಗಿ ಅಭಿಪ್ರಾಯವನ್ನು ಬರೆದು ವಿಳಾಸಗಳಿಗೆ ಟ್ಯಾಗ್ ಮಾಡಬಹುದು ಎಂದು ವಿದ್ಯಾರ್ಥಿ ಸಂಘದ ಅಧ್ಯಕ್ಷ ಲಿಖಿತ್ ಹುದೇರಿ, ಎಬಿವಿಪಿ ಅಧ್ಯಕ್ಷ ರಕ್ಷಿತ್ ಕೆದಿಲಾಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.