ನವದೆಹಲಿ: ದೇಶದಲ್ಲಿ ಇದೇ ಮೊದಲ ಬಾರಿಗೆ ಅರಾವಳಿ ಶ್ರೇಣಿಯಲ್ಲಿ ಡಬಲ್ ಡೆಕ್ಕರ್ ರೈಲುಗಳ ಸಂಚಾರಕ್ಕಾಗಿ ಅವಳಿ ಸುರಂಗಗಳು ನಿರ್ಮಾಣವಾಗಲಿವೆ. ಅರವಾಳಿ ಪರ್ವತ ಪ್ರದೇಶದಲ್ಲಿ 4.7 ಕಿ.ಮೀ. ಉದ್ದದ ಅವಳಿ ಸುರಂಗಗಳನ್ನು ನಿರ್ಮಾಣ ಮಾಡಿ, ಡಬಲ್ ಡೆಕ್ಕರ್ ಸರಕು ಮತ್ತು ಪ್ರಯಾಣಿಕ ರೈಲುಗಳ ಸಂಚಾರಕ್ಕೆ ಅನುವು ಮಾಡಿಕೊಡಲು ಹರ್ಯಾಣ ರೈಲು ಮೂಲಸೌಕರ್ಯ ಅಭಿವೃದ್ಧಿ ನಿಗಮ(ಎಚ್‌ಆರ್‌ಐಡಿಸಿ) ಚಿಂತನೆ ನಡೆಸಿದೆ.
ದೇಶದಲ್ಲೇ ಪ್ರಥಮ
ಇದು ಡಬಲ್ ಡೆಕ್ಕರ್ ರೈಲುಗಳಿಗಾಗಿ ನಿರ್ಮಾಣಗೊಳ್ಳಲಿರುವ ದೇಶದ ಮೊದಲ ರೈಲ್ವೆ ಸುರಂಗವಾಗಿದೆ. ಪಾಲ್ವಾಲ್ ಮತ್ತು ಸೋನಿಪತ್ ಅನ್ನು ಸಂಪರ್ಕಿಸುವ ಹರ್ಯಾಣ ಆರ್ಬಿಟಲ್ ರೈಲ್ ಕಾರಿಡಾರ್(ಎಚ್‌ಒಆರ್‌ಸಿ)ನೊಂದಿಗೆ ಈ ಸುರಂಗಗಳು ಸಂಪರ್ಕ ಹೊಂದಲಿವೆ. 3.5 ಕಿ.ಮೀ ಉದ್ದ ಮತ್ತು 25 ಮೀಟರ್ ಎತ್ತರದ ಸೇತುವೆ ರಸ್ತೆ ಮೂಲಕ ಈ ಸುರಂಗವು ಸೋಹ್ನಾ ಮತ್ತು ನೂಹ್ ಅನ್ನು ಸಂಪರ್ಕಿಸಲಿದೆ.
ಅನುಕೂಲವೇನು?
– ಸೋಹ್ನಾ ಎನ್ನುವುದು ಟ್ರಾನ್ಸ್‌ಪೋರ್ಟ್ ಚಟುವಟಿಕೆಗಳ ಪ್ರಮುಖ ಕೇಂದ್ರವಾಗಿದೆ. ಮನೇಸರ್, ಸೋಹ್ನಾ , ಖಾರ್ಖೋಡಾ ಸೇರಿದಂತೆ ದಕ್ಷಿಣ ಹರ್ಯಾಣದ ಕೈಗಾರಿಕಾ ಕೇಂದ್ರಗಳಿಗೆ ಈ ರೈಲು ಕಾರಿಡಾರ್‌ನಿಂದ ಅನುಕೂಲವಾಗಲಿದೆ. ಸೋನಿಪತ್‌ನಲ್ಲಿ ಮಾರುತಿ ಕಂಪನಿ ತನ್ನ ಹೊಸ ಉತ್ಪಾದನಾ ಸ್ಥಾವರ ನಿರ್ಮಿಸುತ್ತಿರುವ ಕಾರಣ, ಈ ಪ್ರದೇಶವು ಆಟೋಮೊಬೈಲ್ ಹಬ್ ಆಗಿಯೂ ಪರಿವರ್ತನೆಗೊಳ್ಳಲಿದೆ. ಹೀಗಾಗಿ, ರೈಲ್ವೆ ಕಾರಿಡಾರ್ ಹಾಗೂ ಸುರಂಗಗಳು ಇಲ್ಲಿನ ವಾಣಿಜ್ಯ ಚಟುವಟಿಕೆಗಳಿಗೆ ಮತ್ತಷ್ಟು ವೇಗ ನೀಡಲಿವೆ.
………………
ಯೋಜನೆಯ ಒಟ್ಟು ವೆಚ್ಚ– 5.6 ಕೋಟಿ ರೂ.
ಸುರಂಗ 1ರ ಉದ್ದ – 4.7 ಕಿ.ಮೀ.
ಸೇತುವೆ ರಸ್ತೆ – 3.5 ಕಿ.ಮೀ.
ಸುರಂಗ 2ರ ಉದ್ದ – 4.7 ಕಿ.ಮೀ.
ಕಾಮಗಾರಿ ಪೂರ್ಣ ಯಾವಾಗ?– 2026
ರೈಲ್ವೆ ಕಾರಿಡಾರ್‌ನಲ್ಲಿ ಸಂಚರಿಸುವ ಪ್ರಯಾಣಿಕ ರೈಲುಗಳ ಗರಿಷ್ಠ ವೇಗ – ಗಂಟೆಗೆ 160 ಕಿ.ಮೀ.
ರೈಲ್ವೆ ಕಾರಿಡಾರ್‌ನಲ್ಲಿ ಸಂಚರಿಸುವ ಸರಕು ಸಾಗಣೆ ರೈಲುಗಳ ಗರಿಷ್ಠ ವೇಗ – ಗಂಟೆಗೆ 100 ಕಿ.ಮೀ.