ಚಂಡೀಗಢ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜತೆ ಯಾವುದೇ ಮೈತ್ರಿ ಇಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಘೋಷಿಸಿದ ಬೆನ್ನಲ್ಲೇ ಪಂಜಾಬ್ ಸಿಎಂ ಭಗವಂತ್ ಮಾನ್ ಕೂಡ ಪಂಜಾಬ್ ನಲ್ಲಿ ಎಎಪಿ ಕೂಡ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಶಾಕ್ ನೀಡಿದ್ದಾರೆ.
INDIA bloc ಈಗಾಗಲೇ ಬಲಕಳೆದುಕೊಂಡಿರುವ ಸ್ಪಷ್ಟ ಸಾಕ್ಷಿ ಎಂಬಂತೆ ಚಂಡೀಗಢದಲ್ಲಿ, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ರಾಜ್ಯದಲ್ಲಿ ಕಾಂಗ್ರೆಸ್‌ನೊಂದಿಗೆ ತಮ್ಮ ಪಕ್ಷವು ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಪಂಜಾಬ್ ನ ಎಲ್ಲಾ 13 ಸ್ಥಾನಗಳನ್ನು ಗೆಲ್ಲುತ್ತದೆಪಂಜಾಬ್ ದೇಶದಲ್ಲಿ ಹೀರೋ ಆಗಲಿದೆ ಎಂದು ಪುನರುಚ್ಚರಿಸಿದ್ದಾರೆ.
ದೆಹಲಿ, ಪಂಜಾಬ್, ಹರಿಯಾಣ, ಗೋವಾ ಮತ್ತು ಗುಜರಾತ್‌ನಲ್ಲಿ ಕಾಂಗ್ರೆಸ್ ನೊಂದಿಗೆ ಸೀಟು ಹಂಚಿಕೆಯ ಮಾತುಕತೆಗಳ ಮಧ್ಯೆಯೇ ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷದ ನಿಲುವನ್ನು ಮಾನ್ ಪುನರುಚ್ಚರಿಸಿದ್ದಾರೆ.
2019 ರ ಲೋಕಸಭೆ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ 22 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಕಾಂಗ್ರೆಸ್ ಎರಡು ಸ್ಥಾನಗಳನ್ನು ಮಾತ್ರ ಗೆದ್ದುಕೊಂಡರೆ ಬಿಜೆಪಿ 18 ಸ್ಥಾನಗಳನ್ನು ಗಳಿಸಿತ್ತು.
2019 ರ ಲೋಕಸಭೆ ಚುನಾವಣೆಯಲ್ಲಿ ಪಂಜಾಬ್ ನಲ್ಲಿ ಕಾಂಗ್ರೆಸ್ ಎಂಟು ಸ್ಥಾನಗಳನ್ನು, ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಮತ್ತು ಅದರ ಹಿಂದಿನ ಮಿತ್ರ ಪಕ್ಷವಾಗಿದ್ದ ಬಿಜೆಪಿ ತಲಾ ಎರಡು ಮತ್ತು ಎಎಪಿ ಒಂದು ಸ್ಥಾನಗಳನ್ನು ಗೆದ್ದಿತ್ತು.