Advertisement

ತಂಗಿಯ ಒಂದು ಪ್ರಶ್ನೆಯಿಂದ ಕೃಷಿ ಮಹತ್ವ ಅರಿತು ಮನೆಯಂಗಳದಲ್ಲೇ ಭತ್ತ ಬೆಳೆದ ಅವಳಿ ಸಹೋದರರು

01:50 PM Sep 26, 2020 | keerthan |

ಸವಣೂರು: ಭತ್ತವನ್ನೇ ಬೆಳೆದು ಕೃಷಿ ಮಾಡುತ್ತಿದ್ದ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇಂದು ಹೆಚ್ಚಿನ ಕಡೆಗಳಲ್ಲಿ ಭತ್ತದ ಗದ್ದೆಗಳೇ ಮರೆಯಾಗುತ್ತಿದೆ. ಭತ್ತದ ಗದ್ದೆಗಳ ಜಾಗಗಳು ಇಂದು ವಾಣಿಜ್ಯ ಬೆಳೆಗಳ ತೋಟಗಳಾಗಿ ಪರಿವರ್ತಿತಗೊಂಡಿದೆ. ಇದರಿಂದಾಗಿ ಜಿಲ್ಲೆಯ ಹೊಸ ತಲೆಮಾರಿಗೆ ಭತ್ತದ ಕೃಷಿಯ ಬಗ್ಗೆ ಅರಿವೇ ಇಲ್ಲದ ಸ್ಥಿತಿ ನಿರ್ಮಾಣಗೊಂಡಿದೆ. ಇಂಥಹುದೇ ಒಂದು ರೀತಿಯ ಪ್ರಶ್ನೆಯನ್ನು ಇಲ್ಲಿನ ಅವಳಿ ಸಹೋದರರಾದ ಭುವನ್ ಮತ್ತು ಭವನ್ ಎದುರು ಪುಟ್ಟ ಸಹೋದರಿಯೂ ಮಾಡಿದ್ದಳು.

Advertisement

ತಿನ್ನುವ ಅಕ್ಕಿ ಎಲ್ಲಿ ಸಿಗುತ್ತೆ, ಹೇಗೆ ಸಿಗುತ್ತೆ ಎನ್ನುವ ಪ್ರಶ್ನೆಗೆ ತಂಗಿಯ ಪ್ರಶ್ನೆ ವಿದ್ಯಾರ್ಥಿಗಳಾಗಿರುವ ಭವನ್ ಹಾಗೂ ಭುವನ್ ಗೆ ಭತ್ತದ ಕೃಷಿಯ ಮಹತ್ವವನ್ನು ತಿಳಿಸಿತ್ತು. ಈ ಕಾರಣಕ್ಕಾಗಿ ಮನೆಯ ಅಂಗಳದಲ್ಲೇ ಭತ್ತವನ್ನು ಬಿತ್ತಿ ಭತ್ತದ ಕೃಷಿಗೆ ಮುಂದಾದ ಈ ವಿದ್ಯಾರ್ಥಿಗಳು ಭತ್ತದ ಕೃಷಿಯನ್ನು ಮಹತ್ವವನ್ನು ತಿಳಿಸಲು ಮುಂದಾಗಿದ್ದಾರೆ.

ಇದು ನಡೆದಿರುವುದು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸವಣೂರು ಸಮೀಪದ ಬೆಳಂದೂರು ಗ್ರಾಮದ ಅಮೈ ಎಂಬಲ್ಲಿ. ಇಲ್ಲಿನ ಭುವನ್ ಮತ್ತು ಭವನ್ ಎನ್ನುವ ಅವಳಿ ಸಹೋದರರು ಮನೆಯಂಗಳದಲ್ಲೇ ಭತ್ತ ಬೆಳೆದು ಮಾದರಿಯಾಗಿದ್ದಾರೆ.

ಇದನ್ನೂ ಓದಿ: ಹಿರಿಯಡ್ಕದಲ್ಲಿ ಕಿಶನ್‌ ಹೆಗ್ಡೆ ಕೊಲೆ ಪ್ರಕರಣ: ರೌಡಿಶೀಟರ್‌ ಕೋಡಿಕೆರೆ ಮನೋಜ್‌ ತಂಡದ ಕೃತ್ಯ

ಬೆಳಂದೂರು ಗ್ರಾ.ಪಂ.ಮಾಜಿ ಅಧ್ಯಕ್ಷೆ ,ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕಿ ನಿರ್ಮಲಾ ಹಾಗೂ  ಕೇಶವ ಗೌಡ ದಂಪತಿಗಳ ಮಕ್ಕಳಾಗಿರುವ ಈ ಸಹೋದರರ ಈ ಸಾಧನೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

Advertisement

ಅಂಗಳವನ್ನು ಮಣ್ಣು ಹಾಕಿ ಹದ ಮಾಡಿ, ಮಣ್ಣು ಸವೆದು ಹೋಗದಂತೆ ಸುತ್ತ ಕಟ್ಟೆ ಕಟ್ಟಿ ನೀರಿನ ಒರತೆಯಿರುವಂತೆ ನೋಡಿಕೊಂಡಿದ್ದಾರೆ. ಭತ್ತದ ಗಿಡಗಳ ಮಧ್ಯೆ ಹುಲ್ಲು ಬೆಳೆಯದಿರಲಿ ಎನ್ನುವ ಕಾರಣಕ್ಕೆ ತೆಂಗಿನ ಸೋಗೆ ಹಾಗೂ ಅಡಿಕೆ ಸಿಪ್ಪೆಗಳನ್ನು ಹರಡಿದ್ದು, ಇದೀಗ ಉತ್ತಮ ಫಸಲು ಬೆಳೆದು ನಿಂತಿದೆ. ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ತೃತೀಯ ವರ್ಷದ ಬಿಎಸ್ಸಿ ವಿದ್ಯಾಭ್ಯಾಸವನ್ನು ಮಾಡಿಕೊಂಡಿರುವ ಈ ಅವಳಿ ಸಹೋದರರು ಕೋವಿಡ್-19 ಕಾರಣದಿಂದ ಮನೆಯಲ್ಲೇ ಉಳಿದುಕೊಂಡಿದ್ದರು. ಇದೇ ಸಮಯವನ್ನು ಸದುಪಯೋಗಪಡಿಸಿಕೊಂಡ ಈ ವಿಧ್ಯಾರ್ಥಿಗಳು ಮನೆಯ ಮುಂದಿನ ಅಂಗಳದಲ್ಲಿ ಭತ್ತ ಬೆಳೆಯುವ ಯೋಜನೆಯನ್ನು ಹಾಕಿ ಇದೀಗ ಅದರಲ್ಲಿ ಸಫಲನೆಯನ್ನೂ ಪಡೆದುಕೊಂಡಿದ್ದಾರೆ.

ಈಗಾಗಲೇ ಕೊಯಿಲಿಗೆ ಸಿದ್ಧಗೊಂಡಿದ್ದು, ಮನೆಯ ಖರ್ಚು ಹಾಗೂ ಧಾರ್ಮಿಕ ವಿಧಿ ವಿಧಾನಗಳಿಗೆ ಬೇಕಾದ ಭತ್ತದ ಕೃಷಿಯನ್ನು ಮಾಡಿದ್ದಾರೆ. ಕಳೆದ ಮೂರು ವರ್ಷದ ಹಿಂದೆ ಅಂಗಳದಲ್ಲೇ ಭತ್ತ ಬೆಳೆಯುವುದನ್ನು ಆರಂಭಿಸಿದ್ದ ಈ ವಿದ್ಯಾರ್ಥಿಗಳು ಈ ಬಾರಿ ಕೊನೆಯ ಪರೀಕ್ಷೆಯನ್ನು ಎದುರಿಸುತ್ತಿರುವ ಕಾರಣಕ್ಕಾಗಿ ಕೊಂಚ ಕಡಿಮೆ ಸ್ಥಳದಲ್ಲಿ ಭತ್ತದ ನಾಟಿ ಮಾಡಿದ್ದಾರೆ.

ಒಂದೆಡೆ ಕರಾವಳಿಯಲ್ಲಿ ಭತ್ತದ ಕೃಷಿಯಲ್ಲಿ ತೊಡಗಿಕೊಳ್ಳುವವರ ಸಂಖ್ಯೆ ಕಡಿಮೆಯಾಗುತ್ತಿದ್ದು, ಭತ್ತದ ಕೃಷಿಯ ಬಗ್ಗೆ ಅನಿವಾರ್ಯತೆಯನ್ನು ತೋರಿಸುವ ಪ್ರಯತ್ನವನ್ನೂ ಈ ವಿದ್ಯಾರ್ಥಿಗಳು ಮಾಡಿದ್ದಾರೆ. ಭತ್ತದ ಕೃಷಿಗೆ ಬೇಕಾದ ಎಲ್ಲಾ ಸಿದ್ಧತೆಗಳನ್ನೂ ಈ ಇಬ್ಬರೇ ಮಾಡಿಕೊಂಡಿದ್ದು, ಮನೆ ಮಂದಿಯೂ ಇವರಿಗೆ ಬೇಕಾದ ಸಹಕಾರಗಳನ್ನು ನೀಡಿದ್ದಾರೆ. ದೊಡ್ಡ ದೊಡ್ಡ ಗದ್ದೆಗಳಿದ್ದರೆ ಮಾತ್ರ ಭತ್ತದ ಕೃಷಿಗೆ ಅನುಕೂಲ ಎನ್ನುವ ಮಾತನ್ನೂ ಈ ಯುವ ಕೃಷಿಕರು ಸುಳ್ಳಾಗಿಸಿದ್ದಾರೆ.

ಅಲ್ಲದೆ ಸಿಮೆಂಟ್‌ನಿಂದ ಚಟ್ಟಿ ನಿರ್ಮಿಸಿ ಹೂವಿನ ಗಿಡ ಬೆಳೆದಿದ್ದಾರೆ.ಅಲ್ಲದೆ ಆಡು ಸಾಕಾಣಿಕೆಯಲ್ಲೂ ಇವರು ಸಾಧಿಸಿದ್ದಾರೆ. ಎರಡು ಆಡಿನ‌ ಮೂಲಕ ಸಾಕಾಣಿಕೆಗೆ ತೊಡಗಿದ ಈ ಸಹೋದರರು ಅದರಲ್ಲೂ ಯಶಸ್ವಿಯಾಗಿದ್ದಾರೆ.ಇದೀಗ ಸುಮಾರು 15 ಆಡುಗಳನ್ನು ಸಾಕುತ್ತಿದ್ದಾರೆ‌.

 

ಪ್ರವೀಣ್ ಚೆನ್ನಾವರ

Advertisement

Udayavani is now on Telegram. Click here to join our channel and stay updated with the latest news.

Next