ಒಂದು ಅಪರಾಧ ನಡೆದರೆ, ಆ ಘಟನೆಗೆ ಸಂಬಂಧಪಟ್ಟ ವ್ಯಕ್ತಿಗಳಲ್ಲಿ ಪ್ರತಿಯೊಬ್ಬರದ್ದು ಒಂದೊಂದು ದೃಷ್ಟಿಕೋನವಿರುತ್ತದೆ. ಸತ್ಯ -ಸುಳ್ಳಿನ ನಡುವೆ ಇರುವ ವ್ಯತ್ಯಾಸ ಕೇವಲ ಒಂದು ಸಣ್ಣ ಎಳೆಯಷ್ಟೆ. ಕಣ್ಣೆದುರಿಗೆ ಇರುವುದು ಎಲ್ಲವೂ ಸತ್ಯವಲ್ಲ, ಹಾಗೇ ಕಾಣದೇ ಇರುವ ನಿಗೂಢತೆ ಸುಳ್ಳಲ್ಲ. ಈ ಕಳ್ಳ ಪೊಲೀಸ್ ಆಟದಲ್ಲಿ ನಿಜವಾದ ಅಪರಾಧಿ ಯಾರು? ಇಂತಹ ಒಂದು ಹುಡುಕಾಟದ ಕಥೆಯನ್ನು ಈ ವಾರ ತೆರೆಕಂಡ “ಟ್ವೆಂಟಿ ಒನ್ ಅವರ್’ ಚಿತ್ರ ಹೇಳ ಹೊರಟಿದೆ.
“ಟ್ವೆಂಟಿ ಒನ್ ಅವರ್’ ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ. ಚಿತ್ರದಲ್ಲಿ ಕೇರಳ ಮೂಲದ ಹುಡುಗಿಯೊಬ್ಬಳು ಬೆಂಗಳೂರಿನಲ್ಲಿ ಕಾಣೆಯಾಗಿರುತ್ತಾಳೆ. ಆ ಕಾಣೆಯಾದ ಹುಡುಗಿಯನ್ನು ಸುರಕ್ಷಿತವಾಗಿ ಕರೆತರುವ ಜವಾಬ್ದಾರಿ ಅಂಡರ್ ಕವರ್ ಆಫೀಸರ್ ಶ್ರೀಕಾಂತ್ ರದ್ದು. ಆ ಮಲೆಯಾಳಿ ಹುಡುಗಿ ಹೇಗೆ ಕಾಣೆಯಾದಳು, ಎಲ್ಲಿದ್ದಾಳೆ, ಆಕೆ ಮತ್ತೆ ವಾಪಾಸ್ ಆಗುತ್ತಾಳಾ? ಅನ್ನೋದೆ “ಟ್ವೆಂಟಿ ಒನ್ ಅವರ್’ನ ಕಥೆ. ಈ ಪ್ರಶ್ನೆಗೆ ಉತ್ತರ ಸಿಗಬೇಕೆಂದರೆ ಸಿನಿಮಾ ನೋಡಲೇಬೇಕು.
ಈ ನಾಪತ್ತೆ ಪ್ರಕರಣ ಬೇಧಿಸುವ ಹಾದಿಯಲ್ಲಿ ಬರುವ ಸಾಕಷ್ಟು ಟ್ವಿಸ್ಟ್ ಆ್ಯಂಡ್ ಟರ್ನ್ಗಳು ಚಿತ್ರವನ್ನು ಇನ್ನಷ್ಟು ಕುತೂಹಲಕಾರಿಯನ್ನಾಗಿಸಿದೆ. ಕೇವಲ ಇಪ್ಪತ್ತೂಂದು ಗಂಟೆಗಳಲ್ಲಿ ನಡೆಯುವ ಘಟನೆ ಮೇಲೆ ಇಡೀ ಚಿತ್ರ ನಿಂತಿದೆ. ಚಿತ್ರದ ಮೊದಲಾರ್ಧ ಪಾತ್ರ ಪರಿಚಯ, ಹಿನ್ನೆಲೆ ಘಟನೆಗಳಿಂದಲೇ ಸಾಗುತ್ತದೆ. ಒಬ್ಬೊಬ್ಬರ ದೃಷ್ಟಿಕೋನದಿಂದ ಕಾಣುವ ಚಿತ್ರದ ಕಥೆಯ ನಿಜವಾದ ಅಂಶ ಹಾಗೂ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಎರಡನೇ ಭಾಗದಲ್ಲಿ ದೊರೆಯುತ್ತದೆ. ಚಿತ್ರದಲ್ಲಿನ ಡೈಲಾಗ್ ಗಳು ಡಾಲಿ ಅಭಿಮಾನಿಗಳಿಗೆ ಕಿಕ್ಕೇರಿಸುವಂತಿದೆ.
ಇದನ್ನೂ ಓದಿ:‘ಸಕುಟುಂಬ ಸಮೇತ’ ನೋಡುವ ಸಿನಿಮಾ!
ನಿರ್ದೇಶಕ ಜೈ ಶಂಕರ್ ಒಂದು ಸಸ್ಪೆನ್ಸ್ ಥ್ರಿಲ್ಲರ್ ಕಥೆಯನ್ನು ಪ್ರೇಕ್ಷಕರಿಗೆ ಉಣಬಡಿಸುವ ಪ್ರಯತ್ನದಲ್ಲಿ ತಕ್ಕಮಟ್ಟಿಗೆ ಯಶಸ್ವಿಯಾಗಿದ್ದಾರೆ. ಚಿತ್ರದಲ್ಲಿನ ಖಡಕ್ ತನಿಖಾಧಿಕಾರಿ ಪಾತ್ರದಲ್ಲಿ ಧನಂಜಯ್ ಕಾಣಿಸಿಕೊಂಡಿದ್ದು, ಮಾಸ್-ಕ್ಲಾಸ್ ಡೈಲಾಗ್ ಹಾಗೂ ತಮ್ಮ ವಿಭಿನ್ನ ಮ್ಯಾನರಿಸಂನಿಂದಲೇ ಮಿಂಚಿದ್ದಾರೆ. ಇನ್ನು ಉಳಿದಂತೆ ಸುದೇವ್ ನಾಯರ್, ರಾಹುಲ್ ಮಾಧವ್, ಪೂರ್ಣಚಂದ್ರ, ಅಪೂರ್ವ, ದಿನೇಶ್ ಬಾಬು ಪಾತ್ರಗಳು ಚಿತ್ರದ ಸಸ್ಪೆನ್ಸ್ ಆಯಾಮಕ್ಕೆ ಪೂರಕವಾಗಿದ್ದು, ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.
ವಾಣಿ ಭಟ್ಟ