Advertisement

ಹನ್ನೆರಡು ಕಿ.ಮೀ. ಪಾದಯಾತ್ರೆ; 3 ತಾಸು ನಿದ್ದೆ !

07:05 AM Oct 06, 2017 | Team Udayavani |

ಮಂಗಳೂರು: ಕೇರಳದ ಕಣ್ಣೂರಿನಲ್ಲಿ ಜನರಕ್ಷಾ ಯಾತ್ರೆಯಲ್ಲಿ ಸತತ 12 ಕಿ.ಮೀ. ದೂರ ಪಾದಯಾತ್ರೆ ಮಾಡಿದ್ದರೂ ದಣಿದಿರಲಿಲ್ಲ. ಮಧ್ಯರಾತ್ರಿ ಒಂದು ಗಂಟೆ ವರೆಗೂ ಸರಣಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರೂ ಉತ್ಸಾಹ ಕುಗ್ಗಿರಲಿಲ್ಲ. ಎಲ್ಲವೂ ಮುಗಿದು ಮಲಗುವುದಕ್ಕೆ ಸಿಕ್ಕಿದ್ದು ಕೇವಲ ಮೂರು ತಾಸು. ಮತ್ತೆ ಮುಂಜಾವ 4 ಗಂಟೆಗೆ ಎದ್ದು ಉತ್ತರ ಪ್ರದೇಶದತ್ತ ವಿಮಾನವೇರಿ ಹೋದರು !

Advertisement

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಬುಧವಾರದ ದಿನಚರಿ ಇದು. ಕಣ್ಣೂರಿನ ಯಾತ್ರೆಯಲ್ಲಿ ಪಾಲ್ಗೊಂಡು ರಾತ್ರಿ ಮಂಗಳೂರಿಗೆ ಆಗಮಿಸಿ ಕದ್ರಿಯ ಯೋಗೇಶ್ವರ (ಜೋಗಿ) ಮಠದಲ್ಲಿ ಸಾಮಾನ್ಯ ಯೋಗಿಯಂತೆ ಅಲ್ಪ ನಿದ್ದೆ ಮಾಡಿದ ಅವರು ಮುಖ್ಯಮಂತ್ರಿಯಂಥ ಉನ್ನತ ಸ್ಥಾನದಲ್ಲಿದ್ದರೂ ತಾನೋರ್ವ ನಿಜವಾದ ಯೋಗಿ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಬುಧವಾರ ಕೇರಳದ ಕಣ್ಣೂರಿನಲ್ಲಿ ಬಿಜೆಪಿಯ ಜನರಕ್ಷಾ ಯಾತ್ರೆಯಲ್ಲಿ ಭಾಗವಹಿಸಿ ಬಿಸಿಲು ಲೆಕ್ಕಿಸಿದೆ ಕಾರ್ಯ ಕರ್ತರ ಜತೆ 12 ಕಿ.ಮೀ. ಪಾದ ಯಾತ್ರೆ ನಡೆಸಿದ್ದರು. ರಾತ್ರಿ 8ಕ್ಕೆ ಅಲ್ಲಿಂದ ಹೊರಟು ಸುಮಾರು 300 ಕಿ.ಮೀ. ಪ್ರಯಾಣ ಬೆಳೆಸಿ ಮಂಗಳೂರಿಗೆ ರಾತ್ರಿ ಸುಮಾರು 11 ಗಂಟೆಗೆ ಮಠಕ್ಕೆ ತಲುಪಿದ್ದರು. ಅಲ್ಲಿ ಪ್ರಧಾನ ದೇವರು ಕಾಲಭೈರವನಿಗೆ ಪೂಜೆ ಸಲ್ಲಿಸಿ, ಮಠದ ರಾಜಾ ನಿರ್ಮಲನಾಥ ಮಹಾರಾಜ್‌ ಅವರನ್ನು ಭೇಟಿ ಮಾಡಿ ಬಳಿಕ ಸಾರ್ವಜನಿಕ ಕಾರ್ಯಕ್ರಮದಲ್ಲಿಯೂ ಭಾಗವಹಿಸಿ ಭಕ್ತರು-ಹಿತೈಷಿಗಳನ್ನು ಉದ್ದೇಶಿಸಿ ಮಾತನಾಡಿದ್ದರು. ಆದರೂ ಯೋಗಿ ಮುಖದಲ್ಲಿ ಆಯಾಸದ ಛಾಯೆ ಇರಲಿಲ್ಲ. ತಡರಾತ್ರಿಯಾಗಿದ್ದರೂ ಭಾಷಣ ದುದ್ದಕ್ಕೂ ಬಹಳ ಉತ್ಸಾಹದಿಂದಲೇ ಮಾತನಾಡಿದ್ದರು. 

ದಾಲ್‌-ರೋಟಿ ಆಹಾರ
ಕಾರ್ಯಕ್ರಮ ಮುಗಿದ ಬಳಿಕ ಅವರು ಪೂರ್ವ ನಿಗದಿಪಡಿಸಿದ ಕಾರ್ಯಸೂಚಿಯಂತೆ “ಉದಯ ವಾಣಿ’ಗೆ ವಿಶೇಷ ಸಂದರ್ಶನ ನೀಡಿದರು. ಅದಾಗಲೇ ಮಧ್ಯರಾತ್ರಿ 12 ಗಂಟೆ ಯಾಗಿತ್ತು. ಬಳಿಕ ಸ್ನಾನ ಮುಗಿಸಿ ಭೋಜನ ಸ್ವೀಕರಿಸಿದರು. ರಾತ್ರಿ ಸರಳ ವಾದ ಭೋಜನವಾಗಿ ರೋಟಿ ಜತೆಗೆ ಬೆಳ್ತಿಗೆ ಅನ್ನ, ದಾಲ್‌ ಹಾಗೂ ಬಟಾಟೆ, ಬಟಾಣಿ, ಗೋಬಿ, ಸಿಮ್ಲಾ ಮೆಣಸು ಹಾಕಿ ತಯಾರಿಸಿದ ಪಲ್ಯವನ್ನು ತಿಂದರು. ಅಲ್ಲದೆ ಒಂದು ತುಂಡು ಹಲ್ವ ಹಾಗೂ ಹಾಲಿನಿಂದ ಸಿದ್ಧಪಡಿಸಿದ ಸ್ವಲ್ಪ ಖೀರು ಕೂಡ ಸೇವಿಸಿದರು. ಭೋಜನದ ಅನಂತರ 15 ನಿಮಿಷ ಮಠದ ಸ್ವಾಮೀಜಿಗಳ ಜತೆ ಚರ್ಚೆ ನಡೆಸಿ ಮಧ್ಯರಾತ್ರಿ ಸುಮಾರು ಒಂದು ಗಂಟೆಗೆ ನಿದ್ದೆ ಮಾಡಿದರು. 

ಯೋಗಿ ಆದಿತ್ಯನಾಥ ಅವರಿಗೆ ಗರಿಷ್ಠ ಭದ್ರತೆ ಇರುವ ಹಿನ್ನೆಲೆಯಲ್ಲಿ ಅವರಿಗೆ ನೀಡುವ ಆಹಾರದ ಮೇಲೂ ಪೊಲೀಸರು ತೀವ್ರ ನಿಗಾ ಇರಿಸಿದ್ದರು. ಮಠದ ಸಿಬಂದಿಗಳೇ ಆಹಾರ ಸಿದ್ಧಪಡಿಸಿದ್ದರೂ ಯೋಗಿ ಆದಿತ್ಯನಾಥ್‌ ಅವರಿಗೆ ನೀಡುವ ಮೊದಲು ಆಹಾರವನ್ನು ಪೊಲೀಸರು ಪರೀಕ್ಷಿಸಿದ್ದರು. ನಸುಕಿನಲ್ಲಿ ಅವರಿಗೆ ಉಪಾಹಾರವಾಗಿ ಪರೋಟ ನೀಡಲಾಗಿತ್ತು. 

Advertisement

ಗದ್ದಿಯಲ್ಲಿ  ಮಲಗಿದ ಸಿಎಂ
ನಾಥ ಪಂಥದ ಸ್ವಾಮಿಗಳು ಮಂಚದ ರೀತಿ ಯಲ್ಲೇ ಇರುವ ಗದ್ದಿಯಲ್ಲಿ ನಿದ್ರಿಸುತ್ತಾರೆ. ಯೋಗಿ ಅದಿತ್ಯನಾಥ ಅವರು ಗೋರಖ್‌ಪುರದ ಗೋರಕ್ಷಾ ಮಠದ ಪೀಠಾಧೀಶರು. ಅವರು ಮುಖ್ಯಮಂತ್ರಿ ಯಾಗಿದ್ದರೂ ಈ ಸಂಪ್ರದಾಯವನ್ನು ಮುರಿಯಲಿಲ್ಲ. ಮಠದ ಅವರಣದಲ್ಲಿರುವ ಸಭಾಭವನದ ಮೇಲಂತಸ್ತಿನಲ್ಲಿರುವ ಕೊಠಡಿಯಲ್ಲಿ ಹಾಕಿದ್ದ ಗದ್ದಿಯಲ್ಲಿ ನಿದ್ದೆ ಮಾಡಿದರು.

ಮೂರು ತಾಸು ನಿದ್ದೆ
ಯೋಗಿ ಆದಿತ್ಯನಾಥ ಅವರು ನಿದ್ದೆ ಮಾಡಲು ಹೋಗುವಾಗ ಸುಮಾರು 1 ಗಂಟೆಯಾಗಿತ್ತು. ಅವರು ನಿದ್ದೆ ಮಾಡಿದ್ದು ಕೇವಲ ಮೂರು ತಾಸು ಮಾತ್ರ. ನಸುಕಿನಲ್ಲಿ ಸುಮಾರು 4 ಗಂಟೆಯ ವೇಳೆಗೆ ಎದ್ದು ನಿತ್ಯಕರ್ಮಗಳನ್ನು ಪೂರೈಸಿ 5.30ರ ವೇಳೆಗೆ ಉಪಾಹಾರ ಸೇವಿಸಿದರು. 6 ಗಂಟೆಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ವಿಮಾನ ಮೂಲಕ ಲಕ್ನೋದತ್ತ ಪ್ರಯಾಣ ಬೆಳೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next