Advertisement
ಪೂರ್ಣಪ್ರಜ್ಞಾ ವಿದ್ಯಾಪೀಠ ದಲ್ಲಿ ಸೋಮವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿ, ಗುರುಗಳು ಹರಿಪಾದ ಸೇರಿ ದಿನಗಳು ಕಳೆದಿದೆ. ಗುರು ಗಳ ಮೇಲಿನ ಗೌರವದಿಂದ ಸರ್ಕಾರ, ಅಧಿಕಾರಿಗಳು, ನಾಡಿನ ಸಮಸ್ತ ಜನತೆ ಪಾರ್ಥಿವ ಶರೀರಕ್ಕೆ ಸಂಸ್ಕಾರ ಅರ್ಪಿಸಿದ್ದಾರೆ. ಮುಂದಿನ 12 ದಿನಗಳ ಕಾಲ ಭಜನೆ, ಪಾರಾಯಣ, ವಿದ್ವಾಂಸರ ಗೋಷ್ಠಿ ನಿರಂತರವಾಗಿ ನಡೆಯಲಿದೆ ಎಂದು ಮಾಹಿತಿ ನೀಡಿದರು.
Related Articles
Advertisement
ದೇವರ ಅನುಗ್ರಹವಿತ್ತು: ಶ್ರೀಗಳು ತಮ್ಮ ದೇಹತ್ಯಾಗ ಮಾಡುವ ಕೆಲವೇ ದಿನಗಳ ಮೊದಲು ತಿರುಪತಿಗೆ ಹೋಗಿ ದೇವರ ದರ್ಶನ ಪಡೆದಿದ್ದರು. ನಂತರ ಬೆಂಗಳೂರಿನ ಪೂರ್ಣಪ್ರಜ್ಞಾ ವಿದ್ಯಾಪೀಠಕ್ಕೆ ಭೇಟಿ, ಇಲ್ಲಿಂದ ತಮ್ಮ ಹುಟ್ಟೂರಾದ ರಾಮಕುಂಜಾಗೆ ಭೇಟಿ ನೀಡಿದ್ದಾರೆ. ಆಚಾರ್ಯರ ಅವತಾರವಾದ ಉಡುಪಿಯ ಪಾಜಕಕ್ಕೆ ಭೇಟಿ ನೀಡಿ, ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದ್ದರು. ನಂತರ ತಾವು ಆರಾಧಿಸಿಕೊಂಡು ಬಂದ ಉಡುಪಿ ಶ್ರೀಕೃಷ್ಣನನ್ನು ದರ್ಶನ ಮಾಡಿದ ಬಳಿಕ ಅಸ್ವಸ್ಥರಾಗಿದ್ದಾರೆ. ಹೀಗಾಗಿ ಶ್ರೀಗಳ ಮೇಲೆ ಸಂಪೂರ್ಣವಾಗಿ ದೇವರ ಅನುಗ್ರಹ ಇತ್ತು ಎಂದು ಸ್ಮರಿಸಿದರು.
ರಥಬೀದಿ, ಪೇಜಾವರ ಮಠದಲ್ಲಿ ನೀರವ ಮೌನಉಡುಪಿ: ಪಾಮರರಿಂದ ಹಿಡಿದು ಪಂಡಿತರವರೆಗೆ, ಸಾಮಾನ್ಯರಿಂದ ಹಿಡಿದು ಪ್ರಧಾನಿಯವರೆಗೆ ಸಂಪರ್ಕ ಹೊಂದಿದ್ದರೂ ಪೇಜಾವರ ಮಠದ ಒಂದು ಸಣ್ಣ ಕೋಣೆಯಲ್ಲಿ ಸಾಮಾನ್ಯ ಮಂಚದ ಮೇಲೆ ಮಲಗುತ್ತಿದ್ದ ಪೇಜಾವರ ಶ್ರೀಗಳು ಭಾನುವಾರ ಹರಿಪಾದ ಸೇರಿದ ಪರಿಣಾಮ ಸೋಮವಾರ ಮಠದೊಳಗೂ ಹೊರಗೂ ದಿವ್ಯಮೌನ ಆವರಿಸಿತ್ತು. ಸ್ವಾಮೀಜಿಯವರು ಮಠದಲ್ಲಿದ್ದರೆ ಅಥವಾ ಮಠಕ್ಕೆ ಬರುತ್ತಾರೆಂದು ಗೊತ್ತಾಗುತ್ತಿದ್ದರೆ ಗಿಜಿಗುಡುತ್ತಿದ್ದ ಜನಸಂದಣಿ ಸೋಮವಾರವಿರಲಿಲ್ಲ. ಉಡುಪಿಯಲ್ಲಿದ್ದಾಗ ಮಠದ ಗರ್ಭಗುಡಿ ಎದುರು ಅವರು ಜಪ, ಪಾರಾಯಣ ಮಾಡುತ್ತಿದ್ದ ಸ್ಥಳ ಅವರಿಲ್ಲದ ಶೂನ್ಯಭಾವ ಹೊಂದಿತ್ತು. ಸ್ವಾಮಿಗಳಿದ್ದಾರೆಂದರೆ ಅವರ ಸುತ್ತಮುತ್ತ ಓಡಾಡುತ್ತಿದ್ದ ವಿದ್ಯಾರ್ಥಿಗಳೊಬ್ಬರೂ ಇಲ್ಲದ ನೀರವ ವಾತಾವರಣವಿತ್ತು. ಸಮಾಜದ ಸಹಕಾರ ಬೇಕು: ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥರು ಮಾತನಾಡಿ, ಶ್ರೀಗಳ ಆದರ್ಶಗಳನ್ನು ಪರಿಪಾಲಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಲಿದ್ದೇವೆ. ಸಾಹಿತ್ಯ, ಶಿಕ್ಷಣ, ಆರೋಗ್ಯ, ದಾನ-ಧರ್ಮಗಳು, ಪ್ರಕೃತಿ ವಿಕೋಪ ಸಂದರ್ಭದಲ್ಲಿ ಸಮಾಜದ ಜತೆಗೆ ಗುರುಗಳು ನೇರವಾಗಿ ಸಹಾಯಕ್ಕೆ ಧುಮುಕುತ್ತಿದ್ದರು. ಶ್ರೀಗಳ ಮಾರ್ಗದರ್ಶನದಂತೆ ನಾವೂ ಮುಂದುವರಿಸುತ್ತೇವೆ. ನಮ್ಮೆಲ್ಲ ಪ್ರಯತ್ನಗಳು ಸಾಂಗವಾಗಿ ಕೈಗೂಡಬೇಕಾದರೆ ಸಮಾಜದ ಸಹಕಾರ ಬೇಕು ಎಂದು ಕೋರಿದರು. ಶಿಲೆಯಲ್ಲಿ ವೃಂದಾವನ: ಶ್ರೀಗಳ ಇಚ್ಛೆಯಂತೆ ಪೂರ್ಣಪ್ರಜ್ಞಾ ವಿದ್ಯಾಪೀಠದ ಆವರಣದಲ್ಲಿ ವೃಂದಾವನ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ನೆಲ ಸಮತಟ್ಟಾದ ನಂತರ, ಶಾಸ್ತ್ರೀಯ ಪರಿಕಲ್ಪನೆಯಲ್ಲಿ ಶಿಲಾಮಯವಾದ ಕೂರ್ಮಾಸನದಿಂದ ಆರಂಭವಾಗಿ ಐದು ಸ್ತರಗಳನ್ನು ಹೊಂದಿರುವ ಭವ್ಯವಾದ ವೃಂದಾವನ ನಿರ್ಮಿಸುವ ಯೋಜನೆಯಿದೆ. ಸಾರ್ವಜನಿಕರು ಭೇಟಿ ನೀಡಿದ ವೇಳೆ ದೀಪ ಬೆಳಗಲು ಅನುಕೂಲವಾಗುವಂತೆ ವೃಂದಾವನ ನಿರ್ಮಾಣವಾಗಲಿದೆ. ಶ್ರೀಗಳ ವ್ಯಕ್ತಿತ್ವಕ್ಕೆ ಅನುಗುಣವಾಗಿ ಭವ್ಯ ಹಾಗೂ ಆಕರ್ಷಕ ವೃಂದಾವನವನ್ನು ಮಠದ ವತಿಯಿಂದಲೇ ಅಭಿವೃದ್ಧಿ ಮಾಡಲಾಗುತ್ತದೆ. ಇದಕ್ಕಾಗಿ ಸರ್ಕಾರ ಮತ್ತು ಸಾರ್ವಜನಿಕರ ಸಹಾಯವನ್ನು ನಾವಾಗಿ ಕೇಳುವುದಿಲ್ಲ. ಸ್ವಪ್ರೇರಣೆಯಿಂದ ಸಹಾಯ ನೀಡಿದರೆ ಉಪಯೋಗಿಸಿಕೊಳ್ಳಲಿದ್ದೇವೆ ಎಂದು ವಿದ್ಯಾಪೀಠದ ವಿದ್ವಾಂಸರಾದ ಹರಿದಾಸ ಭಟ್ ಮಾಹಿತಿ ನೀಡಿದರು.