Advertisement

ಕೃಷಿ ಆತ್ಮನಿರ್ಭರ್‌ನಡಿ ಅರಿಶಿನ ಬೆಳೆ ಪ್ರೋತ್ಸಾಹಿಸಿ 

06:30 PM Feb 26, 2021 | Team Udayavani |

ಚಾಮರಾಜನಗರ: ವಾಣಿಜ್ಯ ಬೆಳೆಯೆಂದು ಗುರುತಿಸಲ್ಪಟ್ಟಿರುವ ಅರಿಶಿನ ಬೆಳೆ ಈಗ ರೈತರ ಪಾಲಿಗೆ  ಕಣ್ಣೀರಿನ ಬೆಳೆಯಾಗಿದೆ. ಕೃಷಿ ಆತ್ಮನಿರ್ಭರ್‌ ಯೋಜನೆಯ ಜಿಲ್ಲೆಗೊಂದು ಬೆಳೆಯಲ್ಲಿ ಚಾಮರಾಜನಗರದಿಂದ ಅರಿಶಿನವನ್ನು ಗುರುತಿಸಲಾಗಿದ್ದು, ಇದರಿಂದಲಾದರೂ ಅರಿಶಿನ ಬೆಳೆಗಾರರ ಸಂಕಷ್ಟಗಳನ್ನು ಪರಿಹರಿಸಬೇಕು ಎಂದು ಎಪಿಎಂಸಿ ಮಾಜಿ ಅಧ್ಯಕ್ಷ, ಕೃಷಿಕ ಬಿ.ಕೆ. ರವಿಕುಮಾರ್‌ ಒತ್ತಾಯಿಸಿದರು.

Advertisement

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದು ಆಹಾರ ಮತ್ತು ಔಷಧಿ ಕ್ಷೇತ್ರದಲ್ಲಿ ಅರಿಶಿನ ಮಹತ್ವದ ಸ್ಥಾನ ಪಡೆದಿದೆ. ಆದರೆ ಇದನ್ನು ಬೆಳೆಯುವ ಬೆಳೆಗಾರರ ಸ್ಥಿತಿ ಶೋಚನೀಯವಾಗಿದೆ ಎಂದರು.

2ನೇ ಸ್ಥಾನ: ದಕ್ಷಿಣ ಭಾರತದಲ್ಲಿ ತಮಿಳುನಾಡು ಹೆಚ್ಚು ಅರಿಶಿನ ಬೆಳೆದರೆ, ಕರ್ನಾಟಕ 2ನೇ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ ಹೆಚ್ಚು ಅರಿಶಿನ ಬೆಳೆಯಲಾಗುತ್ತಿದೆ. ಜಿಲ್ಲೆಯ 9,500 ಹೆಕ್ಟೇರ್‌ ಪ್ರದೇಶದಲ್ಲಿ ಅರಿಶಿನ ಬೆಳೆಯಲಾಗುತ್ತಿದೆ. ಚಾ.ನಗರ ತಾಲೂಕೊಂದರಲ್ಲೇ 2,700 ಹೆಕ್ಟೇರ್‌ನಲ್ಲಿ ಅರಿಶಿನ ಬೆಳೆಯಲಾಗುತ್ತಿದೆ. ಆದರೆ ಬೆಳೆ ಬೆಳೆಯಲು ತಗುಲುವ ವೆಚ್ಚ, ಮಾರುಕಟ್ಟೆ ಸಮಸ್ಯೆ, ಸೂಕ್ತ ಬೆಲೆ ದೊರಕದ ಕಾರಣ ಕಣ್ಣೀರಿನ ಬೆಳೆಯಾಗಿದೆ ಎಂದು ವಿಷಾದಿಸಿದರು.

ಮಾರುಕಟ್ಟೆ ವ್ಯವಸ್ಥೆ: 1 ಎಕರೆ ಪ್ರದೇಶದಲ್ಲಿ ಅರಿಶಿನ ಬೆಳೆಯಲು 90 ಸಾವಿರ ರೂ.ಗಳಿಂದ 1 ಲಕ್ಷ ರೂ. ಖರ್ಚು ಬೀಳುತ್ತದೆ. ಒಂದೆಕೆರೆ ಪ್ರದೇಶದಲ್ಲಿ 20 ರಿಂದ 30 ಕ್ವಿಂಟಲ್‌ ಅರಿಶಿನ ಬೆಳೆಯಬಹುದು. ಈಗ ಉತ್ತಮ ಗುಣಮಟ್ಟದ ಅರಿಶಿನಕ್ಕೆ ಕ್ವಿಂಟಲ್‌ಗೆ 6 ಸಾವಿರ ರೂ. ಇದೆ. 30 ಕ್ವಿಂಟಲ್‌ಗೆ 1.80 ಲಕ್ಷ ದೊರಕುವುದು ಸಹ ದುಸ್ತರವಾಗಿದೆ. ಬೆಳೆದ ಅರಿಶಿನಕ್ಕೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದೇ ನಷ್ಟ ಅನುಭವಿಸುವಂತಹ ಸ್ಥಿತಿಗೆ ತಲುಪಿದ್ದಾರೆ. ಬಿತ್ತನೆ ಅರಿಶಿನ, ಕೂಲಿ, ರಾಸಾಯನಿಕ ಗೊಬ್ಬರ, ಸಂಸ್ಕರಣೆ ಎಲ್ಲವೂ ದುಬಾರಿಯಾಗಿದೆ. ಆದ್ದರಿಂದ ಕೇಂದ್ರ ಸರ್ಕಾರದ ಆತ್ಮನಿರ್ಭರ್‌ ಯೋಜನೆಯಲ್ಲಿ ಈ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಈಗ ಅತ್ಮನಿರ್ಭರ್‌ ಮೂಲಕ, ಅರಿಶಿನ ಬೆಳೆಗಾರರಿಗೆ ಕಾರ್ಯಾಗಾರ ನಡೆಸಲಾಗುತ್ತಿದೆ. ಈ ಕಾರ್ಯಾಗಾರದಲ್ಲಿ ಬೆಳೆಯುವ ವಿಧಾನ, ಬೆಳೆಯ ರಕ್ಷಣೆ ಇತ್ಯಾದಿ ತಿಳಿಸಿಕೊಡುತ್ತಾರೆ. ಬೆಳೆಗಾರರಿಗೆ ಇದೆಲ್ಲ ತಿಳಿದಿದೆ. ಅದನ್ನೇ ಮತ್ತೆ ಹೇಳುವುದರಿಂದ ರೈತರಿಗೆ ಪ್ರಯೋಜನವಿಲ್ಲ. ಅದರ ಬದಲು ರೈತ ಉತ್ಪಾದಕ ಸಂಸ್ಥೆಗಳ ಮೂಲಕ ಅರಿಶಿನ ಬೆಳೆಗಾರರ ಸಮಸ್ಯೆಗಳನ್ನು ಪರಿಹರಿಸಲು, ರೈತ ಉತ್ಪಾದಕ ಸಂಸ್ಥೆಗಳನ್ನು ಹೆಚ್ಚು ಮಾಡಬೇಕು. ಇದರಲ್ಲಿ ಅರಿಶಿನ ಬೆಳೆಗಾರರನ್ನೂ ಒಳಗೊಳ್ಳಬೇಕು.

Advertisement

ಸಹಕಾರ ಸಂಘಗಳ ಮೂಲಕ ಅರಿಶಿನ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ನೆರವು ನೀಡಬೇಕು.  ಅರಿಶಿನ ಬೆಳೆಗಾರರ ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿ ಸಮಿತಿಗಳನ್ನು ರಚಿಸಬೇಕು. ಈ ಎಲ್ಲ ಕ್ರಮಗಳನ್ನು ಕೈಗೊಂಡರೆ ಅರಿಶಿನ ಬೆಳೆಗಾರರ ಸಮಸ್ಯೆಗಳು ಕಡಿಮೆಯಾಗುತ್ತವೆ. ಹಾಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕ್ರಮಕೈಗೊಂಡು ಅರಿಶಿನ ಬೆಳೆಗಾರರನ್ನು ರಕ್ಷಿಸಬೇಕು ಎಂದು ರವಿಕುಮಾರ್‌ ಒತ್ತಾಯಿಸಿದರು.

ಜಿಲ್ಲಾ ಪಂಚಾಯ್ತಿ. ಸದಸ್ಯ ರಮೇಶ್‌, ಸೌಹಾರ್ದ ಆಸಕ್ತ ರೈತ ಉತ್ಪಾದನಾ ಕಂಪನಿಯ ಅಧ್ಯಕ್ಷ ಎಚ್‌.ಎನ್‌. ಉಮೇಶ್‌, ಎಪಿಎಂಸಿ ಮಾಜಿ ಉಪಾಧ್ಯಕ್ಷರಾದ ಪುರುಷೋತ್ತಮ್‌, ನಂಜುಂಡಸ್ವಾಮಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next