ಅಂತಕ್ಯ: ಟರ್ಕಿಯಲ್ಲಿ ಸೋಮವಾರ ತಡರಾತ್ರಿ ಮತ್ತೂಮ್ಮೆ ಭೂಕಂಪ ಸಂಭವಿಸಿದ್ದು, ಘಟನೆಯಲ್ಲಿ ಕನಿಷ್ಠ ಎಂಟು ಮಂದಿ ಅಸುನೀಗಿದ್ದಾರೆ. 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ 18 ಮಂದಿಯ ಸ್ಥಿತಿ ಚಿಂತಜನಕವಾಗಿದೆ.
ಟರ್ಕಿ ಮತ್ತು ಸಿರಿಯಾ ಗಡಿಯ ಹಟೇ ಪ್ರಾಂತ್ಯದ ನಗರದಲ್ಲಿ ಭೂಕಂಪದ ಕೇಂದ್ರ ಸ್ಥಾನವಿದೆ. ರಿಕ್ಟರ್ ಮಾಪಕದಲ್ಲಿ 6.4 ತೀವ್ರತೆ ದಾಖಲಾಗಿದೆ. ಸಿರಿಯಾದ ಹಮಾ ಪ್ರಾಂತ್ಯದಲ್ಲಿ ಭೂಕಂಪದ ವೇಳೆ ಆತಂಕದಿಂದಲೇ ಮಹಿಳೆ ಮತ್ತು ಬಾಲಕಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನೊಂದೆಡೆ, ಜೋರ್ಡನ್, ಸಿಪ್ರಸ್, ಇಸ್ರೇಲ್, ಲೆಬನಾನ್ ಮತ್ತು ಈಜಿಪ್ಟ್ ನಲ್ಲಿ ಭೂಕಂಪದ ಅನುಭವವಾಗಿದೆ.
ಫೆ.6ರಂದು ಟರ್ಕಿ ಮತ್ತು ಸಿರಿಯಾದಲ್ಲಿ ರಿಕ್ಟರ್ ಮಾಪಕದಲ್ಲಿ 7.8 ತೀವ್ರತೆಯಲ್ಲಿ ಸಂಭವಿಸಿದ್ದ ಭೂಕಂಪದಲ್ಲಿ 45,000ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಸಾವಿರಾರು ಮಂದಿ ಗಾಯಗೊಂಡಿದ್ದರು. ಅನೇಕ ಕಟ್ಟಡಗಳು, ಮನೆಗಳಿಗೆ ಹಾನಿಯಾಗಿತ್ತು. ರಕ್ಷಣಾ ಕಾರ್ಯಾಚರಣೆ ನಡೆದು, ಸಾವಿರಾರು ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.