Advertisement

“ಅಪರೇಶನ್‌ ದೋಸ್ತ್’ಟರ್ಕಿಗೆ 6ನೇ ವಿಮಾನ: ಸಾವಿನ ಸಂಖ್ಯೆ 22,000ಕ್ಕೆ ಏರಿಕೆ

12:43 AM Feb 11, 2023 | Team Udayavani |

ಅಂಕರ: ಭೂಕಂಪ ಪೀಡಿತ ಟರ್ಕಿ ಮತ್ತು ಸಿರಿಯಾಗೆ ಸಹಾಯಹಸ್ತ ಚಾಚಲು “ಅಪರೇಷನ್‌ ದೋಸ್ತ್’ ಹೆಸರಿನಲ್ಲಿ ಭಾರತ ಆರಂಭಿಸಿರುವ ನೆರವಿನ ಆರನೇ ವಿಮಾನ ಟರ್ಕಿಗೆ ಶುಕ್ರವಾರ ಬಂದು ತಲುಪಿತು.

Advertisement

ವಿಮಾನದಲ್ಲಿ ಆಹಾರ ಸಾಮಗ್ರಿಗಳು, ರಕ್ಷಣಾ ಸಿಬ್ಬಂದಿ, ಸ್ನಿಫ‌ರ್‌ ಡಾಗ್‌ ಸ್ಕ್ವಾಡ್‌ಗಳು, ಔಷಧ ಮತ್ತು ವೈದ್ಯಕೀಯ ಉಪಕರಣಗಳು ಹಾಗೂ ಇತರ ಪರಿಹಾರ ಸಾಮಗ್ರಿಗಳು ಇದ್ದವು.

ಇದೇ ವೇಳೆ ಸಿರಿಯಾಗೆ ಭಾರತ ತುರ್ತು ವೈದ್ಯಕೀಯ ಔಷಧಗಳು, ಪೋರ್ಟಬಲ್‌ ಇಸಿಜಿ ಮೆಷಿನ್‌ಗಳು, ರೋಗಿಗಳ ಮಾನಿಟರ್‌ಗಳು ಸೇರಿದಂತೆ ಇತರೆ ವೈದ್ಯಕೀಯ ಉಪಕರಣಗಳು ಹಾಗೂ ಇತರೆ ವೈದ್ಯಕೀಯ ಸಾಮಾಗ್ರಿಗಳನ್ನು ಒದಗಿಸಿದೆ.

ಇನ್ನೊಂದೆಡೆ, ಭಾರತೀಯ ಸೇನೆ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್‌ಡಿಆರ್‌ಎಫ್)ಯ ತಂಡಗಳು ಟರ್ಕಿಯಲ್ಲಿ ರಕ್ಷಣಾ ಕಾರ್ಯಗಳನ್ನು ಮುಂದುವರಿಸಿವೆ. ಹಟೇಯಲ್ಲಿ ಭಾರತೀಯ ಸೇನೆಯ ವೈದ್ಯರ ತಂಡ ತಾತ್ಕಾಲಿಕ ವೈದ್ಯಕೀಯ ಸೇವಾ ಕೇಂದ್ರ ಸ್ಥಾಪಿಸಿ, ಗಾಯಾಳುಗಳಿಗೆ ಚಿಕಿತ್ಸೆ ನೀಡುತ್ತಿವೆ. ಅಲ್ಲದೇ ನೂರ್ಡಗಿ ಮತ್ತು ಅಂತಕ್ಯ ನಗರದಲ್ಲಿ ಎನ್‌ಡಿಆರ್‌ಎಫ್ ಸಿಬ್ಬಂದಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಗುರುವಾರ ಗಾಜಿಯಾಂಟೆಪ್‌ ನಗರದಲ್ಲಿ ಎನ್‌ಡಿಆರ್‌ಎಫ್ ಸಿಬ್ಬಂದಿ ಆರು ವರ್ಷದ ಬಾಲಕಿಯನ್ನು ರಕ್ಷಿಸಿದ್ದಾರೆ.

ಅಯ ಎಂದು ನಾಮಕರಣ:
ಸಿರಿಯಾದಲ್ಲಿ ಭೂಕಂಪದ ಅವಶೇಷಗಳಡಿ ಮಂಗಳವಾರ ಮಗುವಿಗೆ ಜನ್ಮನೀಡಿ ತಾಯಿ ಮೃತಪಟ್ಟಿದ್ದರು. ಅನಾಥ ಮಗುವಿಗೆ “ಅಯಾ’ ಎಂದು ನಾಮಕರಣ ಮಾಡಲಾಗಿದೆ. ಅಯ ಎಂದರೆ ಅರೆಬಿಕ್‌ನಲ್ಲಿ “ದೇವರ ಒಂದು ಸಂಕೇತ’. ಮಗುವಿನ ಪೋಷಕರು, ಸಹೋದರ, ಸಹೋದರಿಯರು ಸೇರಿದಂತೆ ಕುಟುಂಬದ ಹಲವರು ಘಟನೆಯಲ್ಲಿ ಮೃತಪಟ್ಟಿದ್ದರು.

Advertisement

ಸಾವಿನ ಸಂಖ್ಯೆ 22,000ಕ್ಕೆ ಏರಿಕೆ
ಟರ್ಕಿ ಮತ್ತು ಸಿರಿಯಾದಲ್ಲಿ ಶತಮಾನ ಕಂಡರಿಯದ ಭೂಕಂಪದಲ್ಲಿ ಸಾವಿಗೀಡಾದವರ ಸಂಖ್ಯೆ 22,000 ದಾಟಿದೆ. ಅಲ್ಲದೇ ಅವಶೇಷಗಳಡಿ ಸಿಲುಕಿ ಸಾವಿರಾರು ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಆಡಳಿತ ಶುಕ್ರವಾರ ತಿಳಿಸಿದೆ. 77 ಸಾವಿರಕ್ಕಿಂತಲೂ ಅಧಿಕ ಮಂದಿ ಟರ್ಕಿಯಲ್ಲಿ ಗಾಯಗೊಂಡಿದ್ದಾರೆ.

ಟರ್ಕಿ ಮತ್ತು ಸಿರಿಯಾದಲ್ಲಿ ಸೋಮವಾರ ರಿಕ್ಟರ್‌ ಮಾಪನದಲ್ಲಿ 7.8 ತೀವ್ರತೆಯಲ್ಲಿ ಸಂಭವಿಸಿದ ಭೂಕಂಪ ಅಲ್ಲಿನ ಹಲವು ನಗರಗಳನ್ನು ನಡುಗಿಸಿದೆ. ಭೂಕಂಪ ಪೀಡಿತ ಪ್ರದೇಶಗಳು ಸ್ಮಶಾನವಾಗಿವೆ. ಸಂತ್ರಸ್ತರ ಆಕ್ರಂದನ ಮುಗಿಲು ಮುಟ್ಟಿದೆ. ವಿಶ್ವಸಂಸ್ಥೆ, ಭಾರತ ಸೇರಿದಂತೆ ಹಲವು ದೇಶಗಳು ನೆರವಿನ ಹಸ್ತ ಚಾಚಿವೆ. ಆಹಾರ ಸಾಮಾಗ್ರಿಗಳು, ಟೆಂಟ್‌ಗಳು, ಬ್ಲಾಂಕೆಟ್‌, ಮ್ಯಾಟ್ರೆಸ್‌ ಸೇರಿದಂತೆ ವಿಶ್ವಸಂಸ್ಥೆ ಕಳುಹಿಸಿರುವ ತುರ್ತು ನೆರವು ಶುಕ್ರವಾರ ಸಿರಿಯಾ ತಲುಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

“ಅಪರೇಷನ್‌ ದೋಸ್ತ್’ ಭಾಗವಾಗಿ ನಮ್ಮ ತಂಡಗಳು ಹಗಲು-ರಾತ್ರಿ ಟರ್ಕಿಯ ಜನರ ರಕ್ಷಣೆಗಾಗಿ ಕಾರ್ಯ ನಿರ್ವಹಿಸುತ್ತಿವೆ. ಇಂತಹ ಕಷ್ಟದ ಪರಿಸ್ಥಿತಿಯ ಟರ್ಕಿ ಜನರ ನೆರವಿಗಾಗಿ ಭಾರತ ದೃಢವಾಗಿ ನಿಲ್ಲಲಿದೆ.
– ನರೇಂದ್ರ ಮೋದಿ, ಪ್ರಧಾನಿ

Advertisement

Udayavani is now on Telegram. Click here to join our channel and stay updated with the latest news.

Next