Advertisement
ಟರ್ಕಿಯ ಪ್ರಧಾನ ನಗರ ಅಂಕಾರ ಸೇರಿದಂತೆ ಹಲವೆಡೆ ಇನ್ನೂ ರಕ್ಷಣೆ ಮತ್ತು ಪರಿಹಾರ ಕಾರ್ಯ ಚುರುಕುಗೊಂಡಿಲ್ಲ. ಹಲವೆಡೆ ಜನರು ಇನ್ನೂ ಕೂಡ ಕುಸಿದ ಬಿದ್ದ ಕಟ್ಟಡಗಳ ಅವಶೇಷಗಳ ಎಡೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಅವರಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಹಲವರನ್ನು ಜೀವಂತವಾಗಿ ಪಾರು ಮಾಡಲಾಗಿದೆ. ಇದರ ನಡುವೆಯೇ, ಟರ್ಕಿಯ ಸರ್ಕಾರ ಭೂಕಂಪದಿಂದ ನೊಂದವರಿಗೆ ಸೂಕ್ತ ನೆರವು ನೀಡುತ್ತಿಲ್ಲ ಎಂದು ಸ್ಥಳೀಯರು ಆರೋಪ ಮಾಡಲು ಆರಂಭಿಸಿದ್ದಾರೆ.
Related Articles
Advertisement
ಟರ್ಕಿಯ ಎಲ್ಬಿಸ್ತಾನ್ ಎಂಬ ನಗರದಲ್ಲಿ ಸಂತ್ರಸ್ತರೇ ಕುಸಿದು ಬಿಟ್ಟ ಕಟ್ಟಡಗಳನ್ನು ಕೆಡವಿ ಹಾಕಿದ್ದಾರೆ. ಜತೆಗೆ ಮಾನವ ಸರಪಣಿ ರಚಿಸಿ ಅವಶೇಷಗಳನ್ನು ತೆರವುಗೊಳಿ, ಅಸುನೀಗಿದವರ ಶವಗಳನ್ನು ಹೊರ ತೆಗೆಯುತ್ತಿದ್ದಾರೆ. ಅಂತಾಕ್ಯ ಎಂಬಲ್ಲಿ ಸೋನರ್ ಗುನೆರ್ ಎಂಬ ವ್ಯಕ್ತಿ ಮತ್ತು ಆತನ ಪುತ್ರಿಯನ್ನು ಅವಶೇಷಗಳ ಎಡೆಯಿಂದ ರಕ್ಷಿಸುವಲ್ಲಿ ಸ್ಥಳೀಯರು ಯಶಸ್ಸು ಕಂಡಿದ್ದಾರೆ. ಬೆಳಕು ಕಾಣುತ್ತವೇ ಸಂತಸದಿಂದ ಉದ್ಗರಿಸಿದ ಆತ “ನಿಮಗೆಲ್ಲರಿಗೂ ಧನ್ಯವಾದಗಳು. ನಿಮ್ಮ ಸಹಾಯಕ್ಕೆ ನಾನು ಋಣಿ’ ಎಂದು ಕ್ಷೀಣ ಸ್ವರದಲ್ಲಿ ಹೇಳಿದ್ದಾನೆ.
ಅಧ್ಯಕ್ಷ ಎರ್ಡೋಗನ್‌ಗೆ ಸವಾಲು:
ಭೂಕಂಪಕ್ಕೆ ತುತ್ತಾಗಿರುವ ಟರ್ಕಿಯಲ್ಲಿ ಮೇನಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ರಕ್ಷಣೆ ಮತ್ತು ಪರಿಹಾರ ಕೆಲಸ ವಿಳಂಬವಾಗುತ್ತಿರುವುದು ಅವರಿಗೆ ಸವಾಲಿನ ಪರಿಸ್ಥಿತಿ ತಂದೊಡ್ಡಲಿದೆ. ಜತೆಗೆ ಅವರ ಸರ್ಕಾರ ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸಿಲ್ಲ ಎಂದೂ ಆರೋಪಗಳು ಇವೆ. ಆದರೆ, ಹಾನಿಗೆ ಈಡಾದ ಸ್ಥಳಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆ ವಿಳಂಬವಾಗುತ್ತಿದೆ ಎಂಬ ಆರೋಪವನ್ನು ತಿರಸ್ಕರಿಸಿದ್ದಾರೆ.
ಸಿರಿಯಾಕ್ಕೆ ಪ್ರವೇಶ:
ಆತಂಕರಿಕ ಸಂಘರ್ಷದಿಂದ ಜರ್ಝರಿತವಾಗಿರುವ ಸಿರಿಯಾದಲ್ಲಿ ಪರಿಹಾರ ಕಾರ್ಯ ನಿಧಾನಗತಿಯಲ್ಲೇ ಇದೆ. ಆ ದೇಶದ ವಾಯವ್ಯ ಭಾಗದ ಮೂಲಕ ಅಂತಾರಾಷ್ಟ್ರೀಯ ತಂಡಗಳು ಗುರುವಾರ ಪ್ರವೇಶ ಪಡೆದಿವೆ. ಆರು ಟ್ರಕ್‌ಗಳ ಮೂಲಕ ಪರಿಹಾರ ವಸ್ತುಗಳು ಸಿರಿಯಾ ತಲುಪಿವೆ. ಬಂಡುಕೋರರ ನಿಯಂತ್ರಣದಲ್ಲಿ ಇರುವ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ತಂಡಗಳಿಗೆ ಪ್ರವೇಶಾವಕಾಶ ಮಾಡದೇ ಇದ್ದರೆ, ಸಾವಿನ ಸಂಖ್ಯೆ ಹೆಚ್ಚಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದ ಬಳಿಕ ಅಂತಾರಾಷ್ಟ್ರೀಯ ತಂಡಗಳಿಗೆ ಪ್ರವೇಶಾವಕಾಶ ಕಲ್ಪಿಸಲಾಗಿದೆ.
ಇಂಡೋನೇಷ್ಯಾದಲ್ಲಿ ಭೂಕಂಪ:
ಟರ್ಕಿ ಮತ್ತು ಸಿರಿಯಾದಲ್ಲಿ ಭೂಕಂಪದ ನೋವು ಹಸಿರಾಗಿ ಇರುವಂತೆಯೇ ಇಂಡೋನೇಷ್ಯಾದಲ್ಲಿ ಲಘು ಭೂಕಂಪ ಸಂಭವಿಸಿದೆ. ಅಮೆರಿಕ ಸರ್ಕಾರ ನೀಡಿದ ಮಾಹಿತಿ ಪ್ರಕಾರ ರಿಕ್ಟರ್ ಮಾಪಕದಲ್ಲಿ ಅದರ ಪ್ರಮಾಣ 5.1 ಎಂದು ದಾಖಲಾಗಿದೆ. ಇಂಡೋನೇಷ್ಯಾದ ಪಪುವಾ ನ್ಯೂಜಿನಿಯಾದಲ್ಲಿ ಕಂಪನದ ಪ್ರಭಾವದಿಂದಾಗಿ ಸಮುದ್ರದಲ್ಲಿ ಇದ್ದ ತೇಲುವ ರೆಸ್ಟಾರೆಂಟ್ ಬಿದ್ದ ಕಾರಣ ನಾಲ್ವರು ಅಸುನೀಗಿದ್ದಾರೆ ಎಂದು ಸರ್ಕಾರ ಪ್ರಕಟಿಸಿದೆ. ಜನವರಿಂದ ಈಚೆಗೆ ಪಪುವಾದಲ್ಲಿ ಪದೇ ಪದೆ ಅಲ್ಪ ಪ್ರಮಾಣದ ಕಂಪನಗಳು ಆಗಾಗ ಉಂಟಾಗುತ್ತಿವೆ.