ಇಸ್ತಾಂಬುಲ್: ಭೀಕರ ಭೂಕಂಪಕ್ಕೆ ನಲುಗಿರುವ ಟರ್ಕಿ ಹಾಗೂ ಸಿರಿಯಾದಲ್ಲಿ 24 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ ಏರುತ್ತಲೇ ಇದೆ. ಅವಶೇಷದಡಿಯಲ್ಲಿ ಸಿಲುಕಿರುವ ಜನರನ್ನು ರಕ್ಷಿಸುವ, ಶವಗಳನ್ನು ಹೊರ ತೆಗೆಯುವ ಕಾರ್ಯಗಳು ನಡೆಯುತ್ತಿದೆ.
ಅದ್ನಾನ್ ಮುಹಮ್ಮತ್ ಕೊರ್ಕುಟ್ ಎಂಬ 17 ವರ್ಷದ ಯುವಕನೊಬ್ಬ 94 ಗಂಟೆಗಳ ಕಾಲ ಅಂದರೆ 4 ದಿನಗಳ ಕಾಲ ಅವಶೇಷದಡಿಯಲ್ಲಿ ಸಿಲುಕಿಗೊಂಡು ಕೊನೆಗೂ ಬದುಕಿ ಬಂದ ಘಟನೆ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಟರ್ಕಿ,ಸಿರಿಯಾದಂತೆ ಭಾರತದ ಈ ಪ್ರದೇಶಗಳಲ್ಲಿ ಭೀಕರ ಭೂಕಂಪ ಸಂಭವಿಸಬಹುದು: ಹಿರಿಯ ವಿಜ್ಞಾನಿ
ಅದ್ನಾನ್ ಮುಹಮ್ಮತ್ ಗಾಜಿಯಾಂಟೆಪ್‌ನಲ್ಲಿನ ತನ್ನ ಕುಟುಂಬದವರ ಮನೆಯಲ್ಲಿ ಮಲಗಿದ್ದರು. ಈ ವೇಳೆ ಭೂಕಂಪ ಉಂಟಾಗಿ ನಿದ್ದೆಯಲ್ಲೇ ಕತ್ತಲ ಕೂಪದಂತಿರುವ ಅವಶೇಷದಡಿಯಲ್ಲಿ ಸಿಲುಕಿದ್ದಾರೆ. ಹಸಿವು, ನೋವಿನಲ್ಲಿ ಒದ್ದಾಟ ನಡೆಸಿ ಬಾಯಾರಿಕೆಯಾದಾಗ ಬದುಕಿ ಉಳಿಯಲು ಅದ್ನಾನ್ ತನ್ನ ಮೂತ್ರವನ್ನೇ ಕುಡಿದರು.
94 ಗಂಟೆಗಳ ಬಳಿಕ ಅದ್ನಾನ್ ನನ್ನು ರಕ್ಷಣೆ ಮಾಡಲಾಗಿದೆ. ಅವಶೇಷದಡಿಯಿಂದ ಹೊರ ತೆಗೆದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ನಾನು ಅವಶೇಷದಡಿ ಸಿಲುಕಿದ್ದಾಗ ಹೊರಗಿರುವವರ ಧ್ವನಿ ನನಗೆ ಕೇಳುತ್ತಿತ್ತು. ಆದರೆ ನನ್ನ ಧ್ವನಿ ಅವರಿಗೆ ಕೇಳುತ್ತಿಲ್ಲ ಅಂದುಕೊಂಡಿದ್ದೆ ಎಂದು ಅದ್ನಾನ್ ಹೇಳುತ್ತಾರೆ.