ಅಂಕಾರಾ: ಕಲ್ಲಿದ್ದಲು ಗಣಿಯಲ್ಲಿ ಸ್ಫೋಟವೊಂದು ಸಂಭವಿಸಿ 14 ಜನರು ಸಾವನ್ನಪ್ಪಿ, ಕನಿಷ್ಠ 28 ಜನರು ಗಾಯಗೊಂಡ ಘಟನೆ ಉತ್ತರ ಟರ್ಕಿಯಲ್ಲಿ ನಡೆದಿದೆ. ಘಟನೆಯಲ್ಲಿ ಸುಮಾರು 50 ಜನರು ನಾಪತ್ತೆಯಾಗಿದ್ದಾರೆ ಎಂದು ಆಂತರಿಕ ಸಚಿವ ಸುಲೇಮಾನ್ ಸೊಯ್ಲು ಹೇಳಿದ್ದಾರೆ.
ಕಪ್ಪು ಸಮುದ್ರದ ಕರಾವಳಿ ಪ್ರಾಂತ್ಯದ ಬಾರ್ಟಿನ್ ನಲ್ಲಿರುವ ಅಮಸ್ರಾ ಪಟ್ಟಣದಲ್ಲಿರುವ ಸರ್ಕಾರಿ ಸ್ವಾಮ್ಯದ ಟಿಟಿಕೆ ಅಮಸ್ರಾ ಮ್ಯೂಸ್ಸೆಸ್ ಮುದುರ್ಲುಗು ಗಣಿಯಲ್ಲಿ ಶುಕ್ರವಾರ ಸ್ಫೋಟ ಸಂಭವಿಸಿದೆ. ಕಲ್ಲಿದ್ದಲು ಗಣಿಗಳಲ್ಲಿ ಕಂಡುಬರುವ ದಹನಕಾರಿ ಅನಿಲಗಳ ಫೈರ್‌ಡ್ಯಾಂಪ್ ನಿಂದ ಸ್ಫೋಟ ಸಂಭವಿಸಿರಬಹುದು ಎಂದು ಇಂಧನ ಸಚಿವ ಫಾತಿಹ್ ಡೊನ್ಮೆಜ್ ಹೇಳಿದ್ದಾರೆ.
ಸ್ಫೋಟದ ಸಮಯದಲ್ಲಿ ಗಣಿಯೊಳಗೆ 110 ಜನರಿದ್ದರು. ಸ್ಫೋಟದ ನಂತರ ಹೆಚ್ಚಿನ ಕಾರ್ಮಿಕರು ಗಣಿಯಿಂದ ಹೊರ ಬಂದಿದ್ದಾರೆ. ಆದರೆ 49 ಜನರು ಹೆಚ್ಚಿನ ಅಪಾಯದ ಪ್ರದೇಶದಲ್ಲಿ ಸಿಕ್ಕಿಬಿದ್ದಿದ್ದಾರೆ ಎಂದು ಸಚಿವರು ಹೇಳಿದರು.
ಇದನ್ನೂ ಓದಿ:ಬಳ್ಳಾರಿ ನಗರ ಪ್ರವೇಶಿಸಿದ ಭಾರತ್ ಜೋಡೊ ಯಾತ್ರೆ : ಮಲ್ಲಿಕಾರ್ಜುನ ಖರ್ಗೆ, ಮುನಿಯಪ್ಪ ಸಾಥ್
ನೆರೆಯ ಪ್ರದೇಶಗಳಿಂದ ಸೇರಿದಂತೆ ಹಲವಾರು ರಕ್ಷಣಾ ತಂಡಗಳನ್ನು ಈ ಪ್ರದೇಶಕ್ಕೆ ರವಾನಿಸಲಾಗಿದೆ ಎಂದು ಟರ್ಕಿಯ ವಿಪತ್ತು ನಿರ್ವಹಣಾ ಸಂಸ್ಥೆ ಎಎಫ್ ಎಡಿ ತಿಳಿಸಿದೆ. ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಅವರು ಆಗ್ನೇಯ ಟರ್ಕಿಯ ಯೋಜಿತ ಭೇಟಿಯನ್ನು ರದ್ದುಗೊಳಿಸಿದ್ದು, ಅವರು ಅಮಸ್ರಾಗೆ ಪ್ರಯಾಣಿಸುತ್ತಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.