ಆಳಂದ: ಹೋಬಳಿ ಕೇಂದ್ರ ಖಜೂರಿ ಗ್ರಾಮದಲ್ಲಿ ತೊಗರಿ ಖರೀದಿ ಕೇಂದ್ರ ಪ್ರಾರಂಭ ಸೇರಿದಂತೆ ಇನ್ನಿತರ ಬೇಡಿಕೆ ಈಡೇರಿಕೆಗಾಗಿ ನಮ್ಮ ಕರುನಾಡು ರಕ್ಷಣಾ ವೇದಿಯ ಕಾರ್ಯಕರ್ತರು ಉಮರಗಾ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಕಳೆದ ಸಾಲಿನಲ್ಲಿ ಬರ ಎದುರಾಗಿದ್ದರೂ ಬೆಳೆ ಪರಿಹಾರ ಬಂದಿಲ್ಲ.
ತಕ್ಷಣವೇ ಸರ್ಕಾರ ಬೆಳೆ ವಿಮೆ, ಬೆಳೆ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ವೇದಿಕೆ ಜಿಲ್ಲಾಧ್ಯಕ್ಷ ಗಂಗಾಧರ ಕುಂಬಾರ ಒತ್ತಾಯಿಸಿದರು. ಗ್ರಾಮದಲ್ಲಿ ತೊಗರಿ ಖರೀದಿ ಕೇಂದ್ರ ಪ್ರಾಂಭಿಸದಿರುವುದರಿಂದ ರೈತರು ಮಧ್ಯವರ್ತಿಗಳಿಗೆ ಮಾರಾಟ ಮಾಡಿ ಕೈ ಸುಟ್ಟುಕೊಳ್ಳುವಂತಾಗಿದೆ.
ಖಜೂರಿಯಲ್ಲಿ ಕೂಡಲೇ ತೊಗರಿ ಖರೀದಿ ಪ್ರಾರಂಭಿಸಿ ರೈತರಿಗೆ ಅನುಕೂಲ ಒದಗಿಸಬೇಕು. ಅನಿಲ ಸಂಪರ್ಕ ಪಡೆಯದಿರುವ ಫಲಾನುಭವಿಗಳಿಗೆ ಸೀಮೆ ಎಣ್ಣೆ ಕಡಿತಗೊಳಿಸಲಾಗಿದೆ. ಅವರಿಗೂ ವಿತರಣೆ ಕಾರ್ಯ ಪ್ರಾರಂಭಗೊಳಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಗೆ ಬೆಂಬಲಿಸಿದ ಜಯ ಕರ್ನಾಟಕ ಸಂಘಟನೆ ತಾಲೂಕು ಅಧ್ಯಕ್ಷ ಬಸವರಾಜ ಎಸ್. ಕೊರಳ್ಳಿ ಮಾತನಾಡಿ, ಬೆಳೆ ಪರಿಹಾರ ನೀಡಲು ವಿಳಂಬ ನೀತಿ ಅನುಸರಿಸುವುದು ಸರಿಯಲ್ಲ. ಕೂಡಲೇ ತೊಗರಿಗೆ ಬೆಂಬಲ ಬೆಲೆ ನೀಡಿ ಖಜೂರಿ ವಲಯ ಸೇರಿ ಪ್ರತಿ ಹೋಬಳಿಯಲ್ಲಿ ಸಮಾರೋಪಾದಿಯಲ್ಲಿ ಖರೀದಿ ಪ್ರಕ್ರಿಯೆ ನಡೆಸಲು ಜಿಲ್ಲಾಡಳಿತ ಮಧ್ಯಸ್ಥಿಕೆ ವಹಿಸಬೇಕು.
ಇಲ್ಲವಾದಲ್ಲಿ ಹೋರಾಟ ಚುರುಕುಗೊಳಿಸಲಾಗುವುದು ಎಂದು ಎಚ್ಚರಿಸಿದರು. ನಮ್ಮ ಕರುನಾಡು ತಾಲೂಕು ಅಧ್ಯಕ್ಷ ಗುರು ಬಂಗರಗಿ, ಗಜಾನಂದಸಾಲೇಗಾಂವ, ವಲಯ ಅಧ್ಯಕ್ಷ ಕುಮಾರ ಬಂಡೆ, ಶ್ರೀಶೈಲ ಭೀಮಪೂರೆ, ಶ್ರೀನಿವಾಸ ಪಾತ್ರೆ, ಶರಣ ಕೋಟೆ, ವಿಜಯಕುಮಾರ ಪೂಜಾರಿ, ಶಿವುಕುಮಾರ ಹಳ್ಳೆ ಪಾಲ್ಗೊಂಡಿದ್ದರು. ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ ಬಸವರಾಜ ಎಂ. ಬೆಣ್ಣೆಶಿರೂರ ಖಜೂರಿಯಲ್ಲಿ ಜ. 27ಕ್ಕೆ ತೊಗರಿ ಖರೀದಿ ಕೇಂದ್ರ ಪ್ರಾರಂಭಿಸಲಾಗುವುದು.
ಇನ್ನುಳಿದ ಬೇಡಿಕೆಗಳ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು. ಹೆದ್ದಾರಿ ತಡೆಯಿಂದಾಗಿ ಕರ್ನಾಟಕ ಮತ್ತು ಮಹಾರಾಷ್ಟ್ರ ಸೇರಿದಂತೆ ಒಳ ಮತ್ತು ಹೊರಭಾಗದಲ್ಲಿ ಸಂಚರಿಸಬೇಕಾಗಿದ್ದ ಎಲ್ಲ ವಾಹನಗಳ ಸಂಚಾರಕ್ಕೆ ಪರದಾಡಿದವು. ಬಂದೋಬಸ್ತ್ ಒದಗಿಸಿದ್ದ ಪಿಎಸ್‌ಐ ಉದ್ದಂಡಪ್ಪ ಮತ್ತು ಸಿಬ್ಬಂದಿಗಳು ಸುಗಮ ಸಂಚಾರಕ್ಕೆ ಅನುಕೂಲ ಒದಗಿಸಿದರು.