ವಾಡಿ: ನಾಲವಾರ ವ್ಯಾಪ್ತಿಯ ತುನ್ನೂರು ಮತ್ತು ಜೇವರ್ಗಿ ತಾಲೂಕಿನ ಹೊನ್ನಾಳ ಗ್ರಾಮಗಳ ಮಧ್ಯದ ಭೀಮಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸಲು ಸರಕಾರದಿಂದ 50 ಕೋಟಿ ರೂ. ಮಂಜೂರಾಗಿದ್ದು, ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ (ಕೆಆರ್ ಡಿಸಿಎಲ್) ಅಧಿಕಾರಿಗಳು ಗುರುವಾರ ಸ್ಥಳ ಪರಿಶೀಲನೆ ನಡೆಸಿದರು.
ಕಳೆದ ಹತ್ತಾರು ವರ್ಷಗಳಿಂದಕಗ್ಗಂಟಾಗಿ ಉಳಿದಿದ್ದ ಉಭಯ ಗ್ರಾಮಸ್ಥರ ಸೇತುವೆ ನಿರ್ಮಾಣದ ಬೇಡಿಕೆ ಕೊನೆಗೂ ಈಡೇರಿದಂತಾಗಿದೆ. ಕ್ಷೇತ್ರದ ಶಾಸಕ-ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ ಅವರ ಶಿಪಾರಸಿನ ಮೇರೆಗೆ 50 ಕೋಟಿ ರೂ.ಬಿಡುಗಡೆಯಾಗುವ ಮೂಲಕ ಎರಡೂ ತಾಲೂಕಿನ ಜನರ ಸಾರಿಗೆ ಸಂಪರ್ಕಸರಳಗೊಳ್ಳುವ ದಿನಗಳು ಸಮೀಪಿಸಿದ್ದು, ಜನರಲ್ಲಿ ಹರ್ಷ ಮೂಡಿಸಿದೆ.
ಹೊನ್ನಾಳ ಗ್ರಾಮದ ಮಾರ್ಗವಾಗಿ ಜೇವರ್ಗಿ ತಾಲೂಕಿಗೆ ಅತಿ ಹೆಚ್ಚು ಸಂಖ್ಯೆಯ ಜನರು ಪ್ರಯಾಣ ಬೆಳಸುತ್ತಾರೆ. ಇಲ್ಲಿ ಸೇತುವೆ ಸೌಲಭ್ಯ ಅತ್ಯಗತ್ಯವಾಗಿತ್ತು. ದೀರ್ಘ ಕಾಲದ ನಂತರವಾದರೂ ಸೇತುವೆ ನಿರ್ಮಾಣ ಕಾರ್ಯಕ್ಕೆ ಹಸಿರು ನಿಶಾನೆ ದೊರೆತಿದೆ ಎಂದು ಅಧಿಧಿಕಾರಿಗಳ ತಂಡದಲ್ಲಿದ್ದ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವೀರಣ್ಣಗೌಡ ಪರಸರೆಡ್ಡಿ ಪ್ರತಿಕ್ರಿಯಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಸಾವಿರ ಕೋಟಿ ರೂ. ಮೊತ್ತದಲ್ಲಿ ರಾಜ್ಯದ ಪ್ರಮುಖ ರಸ್ತೆಗಳನ್ನು ಜೋಡಿಸಲು ಸೇತುವೆ ನಿರ್ಮಾಣ ಯೋಜನೆ ಪ್ರಕಟಿಸಿದ್ದರು. ಅದರಂತೆ ರಾಜ್ಯದಲ್ಲಿ ಒಟ್ಟು 195 ಸೇತುವೆಗಳು ಮಂಜೂರಾಗಿವೆ.ಇದರಲ್ಲಿ ತುನ್ನೂರ-ಹೊನ್ನಾಳ ಸೇತುವೆ ನಿರ್ಮಾಣವೂ ಸೇರಿದ್ದು, ಕಾಮಗಾರಿಗೆ ಆದೇಶಿಸಿದ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲಿಸಲಾಗುತ್ತಿದೆ.
ನದಿಯಲ್ಲಿ 7ಕಿ.ಮೀ. ವಿಸ್ತೀರ್ಣದಷ್ಟು ಹಿನ್ನೀರಿನ ಹರಿವಿದೆ. 500 ಮೀ. ಉದ್ದ, 100 ಮೀ. ಅಗಲದ ಸೇತುವೆ ನಿರ್ಮಾಣವಾಗಲಿದೆ. ಇದರಿಂದ ಜೇವರ್ಗಿ ತಾಲೂಕಿನ ಬಿರಾಳ, ಆಂದೋಲಾ, ಗಂವಾರ, ನರಿಬೋಳ ಹಾಗೂ ಚಿತ್ತಾಪುರ ತಾಲೂಕಿನ ಅನೇಕ ಗ್ರಾಮಗಳ ಜನತೆಗೆ ಅನುಕೂಲವಾಗಲಿದೆ.
ಎಂಟು ತಿಂಗಳ ನಂತರ ಕಾಮಗಾರಿಗೆ ಚಾಲನೆ ದೊರೆಯಲಿದೆ ಎಂದು ಕೆಆರ್ ಡಿಸಿಎಲ್ ಕಾರ್ಯ ನಿರ್ವಾಹಕ ಅಭಿಯಂತರ ಶಮಶೋದ್ಧೀನ್ ಮಾಧ್ಯಮಗಳಿಗೆ ಮಾಹಿತಿ ನೀಡಿದರು. ಕೆಆರ್‌ಡಿಸಿಎಲ್ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಗಿರೀಶ ಕುಮಾರ, ಕಡಬೂರ ಗ್ರಾಪಂ ಸದಸ್ಯ ಶಿವುಗೌಡ ತುನ್ನೂರ, ಸಿದ್ದಣ್ಣ ಮದ್ರಕಿ, ಬಸವರಾಜ ಕುಂಬಾರ, ಮರಲಿಂಗ ತುನ್ನೂರ ಹಾಗೂ ಗ್ರಾಮಸ್ಥರು ಇದ್ದರು.