Advertisement
“ಕಂಟೋನ್ಮೆಂಟ್ ಮೂಲಕ ಹಾದುಹೋಗುವುದಾದರೆ, 30 ಮೀಟರ್ ಆಳದಲ್ಲಿ ಸುರಂಗ ಕೊರೆಯಬೇಕಾಗುತ್ತದೆ. ನಕ್ಷೆ ಬದಲಾವಣೆಗೆ ಇದು ಪ್ರಮುಖ ಕಾರಣ’ ಎಂದು ಬಿಎಂಆರ್‌ಸಿ ಈಚೆಗೆ ಸಮರ್ಥನೆ ನೀಡಿತ್ತು. ಬೆನ್ನಲ್ಲೇ ಅಂತಹದ್ದೊಂದು ನಿಯಮವಿದ್ದರೆ ಬಹಿರಂಗಪಡಿಸಬೇಕು ಎಂದು ಸಂಸದರು ಸೇರಿದಂತೆ ಜನಪ್ರತಿನಿಧಿಗಳು ಮತ್ತು ಕಂಟೋನ್ಮೆಂಟ್ ನಿಲ್ದಾಣ ಸ್ಥಳಾಂತರ ವಿರೋಧಿ ಹೋರಾಟಗಾರರು ಆಗ್ರಹಿಸಿದ್ದರು. ರೈಲ್ವೆ ಇಲಾಖೆ ಅಧಿಕಾರಿಗಳು ಕೂಡ ಇಂತಹದ್ದೊಂದು ನಿಯಮ ಇಲ್ಲ ಎಂದು ಸ್ಪಷ್ಟನೆ ನೀಡಿದ್ದರು.
Related Articles
Advertisement
ಮೆಟ್ರೋ ಎತ್ತರಿಸಿದ ಮಾರ್ಗಕ್ಕೆ 35 ವರ್ಷಗಳ ಒಪ್ಪಂದದಲ್ಲಿ ವಾರ್ಷಿಕ ಸಾವಿರ ರೂ. ರೈಲ್ವೆ ಇಲಾಖೆಗೆ ಪಾವತಿಸಬೇಕು. ನಂತರದಲ್ಲಿ ಈ ಒಪ್ಪಂದವನ್ನು 35 ವರ್ಷ ವಿಸ್ತರಿಸಲು ಅವಕಾಶ ಇರುತ್ತದೆ. ಅದೇ ರೀತಿ, ಸುರಂಗ ಮಾರ್ಗಕ್ಕೆ ಪ್ರತಿ ವರ್ಷ 50 ಸಾವಿರ ರೂ. (ಒಂದರಿಂದ ಹಳಿ ಕ್ರಾಸ್ ಆಗಲು) ಹಾಗೂ ಎರಡಕ್ಕಿಂತ ಹೆಚ್ಚು ಹಳಿಗಳನ್ನು ಕ್ರಾಸ್ ಮಾಡಿದರೆ 1 ಲಕ್ಷ ರೂ. ಪಾವತಿಸಬೇಕು. ಹೀಗೆ ಹಾದುಹೋಗುವ ಮೆಟ್ರೋ ಸುರಂಗ ಮಾರ್ಗವು 100 ಮೀಟರ್‌ಗಿಂತ ಹೆಚ್ಚಿದ್ದರೆ, ಈ ಮೊತ್ತ ಹೆಚ್ಚಲಿದೆ.
2,500 ಮೀ. ಭೂಮಿಗೆ ಬೇಡಿಕೆ: ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿ)ವು ಕಂಟೋನ್ಮೆಂಟ್ ಮೆಟ್ರೋ ನಿಲ್ದಾಣ ನಿರ್ಮಾಣಕ್ಕಾಗಿ ತಾತ್ಕಾಲಿಕವಾಗಿ 16 ಸಾವಿರ ಮೀಟರ್ ಭೂಮಿ ಹಾಗೂ 2,500 ಮೀಟರ್ ಶಾಶ್ವತ ಭೂಮಿಗಾಗಿ ಮನವಿ ಮಾಡಿದೆ.
1ನೇ ಹಂತದಲ್ಲಿ ಅನ್ವಯಿಸಲಿಲ್ಲ: ಮೆಜೆಸ್ಟಿಕ್‌ನಲ್ಲಿ ನಗರ ರೈಲು ನಿಲ್ದಾಣದಲ್ಲೇ ಮೆಟ್ರೋ ಸುರಂಗ ಹಾದುಹೋಗಿದೆ. ಅಲ್ಲಿ ಕೇವಲ 8-10 ಮೀಟರ್ ಆಳದಲ್ಲಿ ಮೆಟ್ರೋ ಸುರಂಗ ಮಾರ್ಗ ನಿರ್ಮಿಸಲಾಗಿದೆ. ಹಾಗಿದ್ದರೆ, ಈ ಮಾರ್ಗಸೂಚಿ ಅಲ್ಲಿ ಅನ್ವಯಿಸಲಿಲ್ಲವೇ? ಬಿಎಂಆರ್‌ಸಿ ಮೂಲಗಳ ಪ್ರಕಾರ ಮೆಜೆಸ್ಟಿಕ್‌ನಲ್ಲಿ ಇದು ಅನ್ವಯಿಸಲಿಲ್ಲ.
ಯಾಕೆಂದರೆ, ರೈಲ್ವೆ ಜಾಗದಲ್ಲಿ ಮೆಟ್ರೋ ಮಾರ್ಗಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿ 2009ರಲ್ಲಿ ಮಾರ್ಗಸೂಚಿ ಹೊರಡಿಸಲಾಗಿದೆ. ಆದರೆ, 2006-07ರಲ್ಲೇ “ನಮ್ಮ ಮೆಟ್ರೋ’ ಮೊದಲ ಹಂತಕ್ಕೆ ಅನುಮೋದನೆ ದೊರಕಿತ್ತು. ಅಂದರೆ ಮಾರ್ಗಸೂಚಿಗೂ ಮೊದಲೇ ಅನುಮೋದನೆ ಪಡೆಯಲಾಗಿತ್ತು. ಹಾಗಾಗಿ, ಅನಿವಾರ್ಯವಾಗಿ ರೈಲ್ವೆ ಇಲಾಖೆಯು ಅವಕಾಶ ಮಾಡಿಕೊಡಬೇಕಾಯಿತು ಎಂದು ಬಿಎಂಆರ್‌ಸಿ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದರು.
ಹಿಂದೇಟಿಗೆ ಕಹಿ ಅನುಭವಗಳೂ ಕಾರಣ?: ಕಂಟೋನ್ಮೆಂಟ್ ಬಳಿ ಮೆಟ್ರೋ ನಿಲ್ದಾಣ ನಿರ್ಮಾಣಕ್ಕೆ ಬಿಎಂಆರ್‌ಸಿ ಹಿಂದೇಟು ಹಾಕಲು “ನಮ್ಮ ಮೆಟ್ರೋ’ ಮೊದಲ ಹಂತದಲ್ಲಾದ ಕಹಿ ಅನುಭವಗಳು ಕೂಡ ಕಾರಣ ಎಂದು ಹೇಳಲಾಗಿದೆ. ಸಿಟಿ ರೈಲು ನಿಲ್ದಾಣದಡಿ ಸುರಂಗ ನಿರ್ಮಾಣಕ್ಕೆ ಅಗತ್ಯ ಭೂಮಿಗೆ ನೈರುತ್ಯ ರೈಲ್ವೆಯಿಂದ ಮಂಜೂರಾತಿ ಪಡೆಯಲು ಸುಮಾರು ಮೂರು ವರ್ಷ ಹಿಡಿಯಿತು. ಅಲ್ಲಿ ಅರ್ಧ ಖಾಸಗಿ ಹಾಗೂ ಇನ್ನರ್ಧ ರೈಲ್ವೆ ಭೂಮಿಯಾಗಿತ್ತು. ಆದಾಗ್ಯೂ ಅಷ್ಟು ಸಮಯ ಬೇಕಾಯಿತು. ಇನ್ನು ಕಂಟೋನ್ಮೆಂಟ್‌ನಲ್ಲಿ ಸಂಪೂರ್ಣ ಭೂಮಿ ರೈಲ್ವೆ ಇಲಾಖೆಗೇ ಬರುತ್ತದೆ.
ಬಿಎಂಆರ್‌ಸಿ ಹಿಂದೇಟು ಹಾಕಲು ಇದು ಕೂಡ ಒಂದು ಕಾರಣ ಎಂದು ತಿಳಿದುಬಂದಿದೆ. ಅಷ್ಟಕ್ಕೂ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದ ಎದುರಿಗಿರುವುದು ಹಾರ್ಡ್‌ರಾಕ್ (ಗಟ್ಟಿಕಲ್ಲಿನಿಂದ ಕೂಡಿದ್ದು). ಟಿಬಿಎಂ ಕೆಟ್ಟುನಿಂತರೆ, ವಸತಿ ಪ್ರದೇಶವಾಗಿರುವುದರಿಂದ ಹೊರತೆಗೆಯುವುದು ಕಷ್ಟವಾಗಬಹುದು. ಬಂಬೂ ಬಜಾರ್ ಬಳಿಯ ಮೈದಾನದಲ್ಲೂ ಹೆಚ್ಚು-ಕಡಿಮೆ ಇದೇ ಪ್ರಕಾರದ ಮಣ್ಣು ಇದೆ. ಆದರೆ, ಸುರಂಗ ಮಾರ್ಗದ ಉದ್ದ ಕಡಿಮೆ ಆಗುತ್ತದೆ ಎಂದು ಹೆಸರು ಹೇಳಲಿಚ್ಛಿಸದ ಬಿಎಂಆರ್‌ಸಿ ಎಂಜಿನಿಯರೊಬ್ಬರು ವಾದ ಮುಂದಿಡುತ್ತಾರೆ.
ಮೆಟ್ರೋ ಡಿಪಿಆರ್‌ಗೆ ಆರ್‌ಟಿಐ ವಿನಾಯ್ತಿ: ಬೆಂಗಳೂರು: “ನಮ್ಮ ಮೆಟ್ರೋ’ ಎರಡನೇ ಹಂತದ “ಸಮಗ್ರ ಯೋಜನಾ ವರದಿ’ (ಡಿಪಿಆರ್)ಗೆ ಮಾಹಿತಿ ಹಕ್ಕು ಕಾಯ್ದೆಯಿಂದ ವಿನಾಯ್ತಿ ಇದ್ದು, ಬಹಿರಂಗಪಡಿಸಲು ಬರುವುದಿಲ್ಲ ಎಂದು ಬಿಎಂಆರ್‌ಸಿ ಸ್ಪಷ್ಟಪಡಿಸಿದೆ. ಪ್ರಜಾ ರಾಗ್ ಸಂಸ್ಥೆಯ ಸಂಜೀವ ದ್ಯಾಮಣ್ಣವರ, ಮಾಹಿತಿ ಹಕ್ಕು ಅಧಿನಿಯಮದಡಿ ಮೆಟ್ರೋ ಎರಡನೇ ಹಂತದ ಡಿಪಿಆರ್ ಪ್ರತಿ ನೀಡುವಂತೆ ಬಿಎಂಆರ್‌ಸಿಗೆ ಕೇಳಿದ್ದರು.
ಇದಕ್ಕೆ ಲಿಖೀತವಾಗಿ ಉತ್ತರಿಸಿರುವ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿ), ಮಾಹಿತಿ ಹಕ್ಕು ಅಧಿನಿಯಮ-2005ರ ಕಲಂ 8 (1) (ಡಿ) ಪ್ರಕಾರ ಮೆಟ್ರೋ ಸಮಗ್ರ ಯೋಜನಾ ವರದಿ ಬಹಿರಂಗಪಡಿಸಲು ನಿರ್ಬಂಧ ಇದೆ ಎಂದು ಹೇಳಿದೆ. ತಾವು ಕೇಳಿದ ಮಾಹಿತಿಯನ್ನು ದೆಹಲಿ ಮೆಟ್ರೋ ರೈಲು ನಿಗಮ (ಡಿಎಂಆರ್‌ಸಿ)ಕ್ಕೆ ಕಳುಹಿಸಲಾಯಿತು. ಆದರೆ, ಡಿಎಂಆರ್‌ಸಿಯು “ಡಿಪಿಆರ್ ಒಂದು ಬೌದ್ಧಿಕ ಸಂಪತ್ತು.
ಅದಕ್ಕೆ ಮಾಹಿತಿ ಹಕ್ಕು ಅಧಿನಿಯಮದಿಂದ ವಿನಾಯ್ತಿ ಇದೆ’ ಎಂದು ತಿಳಿಸಿದೆ. ಹಾಗಾಗಿ, ಸದರಿ ನಿಯಮದಡಿ ಮಾಹಿತಿ ನೀಡಲು ಆಸ್ಪದವಿಲ್ಲ ಎಂದು ಬಿಎಂಆರ್‌ಸಿ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ. ಅಷ್ಟೇ ಅಲ್ಲ, ಮಾಹಿತಿ ಹಕ್ಕು ಅಧಿನಿಯಮ ಕಲಂ 8, 9, 11ರಡಿ ಡಿಎಂಆರ್‌ಸಿಗೆ ಸಂಬಂಧಿಸಿದ ಸುಮಾರು 72 ವಿಷಯಗಳನು ಬಹಿರಂಗಪಡಿಸಲು ನಿರ್ಬಂಧವಿದ್ದು, ಅದರಲ್ಲಿ ಡಿಪಿರ್ ಕೂಡ ಒಂದಾಗಿದೆ. ಈ ಕುರಿತ ಪಟ್ಟಿಯನ್ನೂ ಬಿಎಂಆರ್‌ಸಿ ಲಗತ್ತಿಸಿದೆ.
ರೈಲು ಹಳಿಗಳ ಅಡಿಯಿಂದ ಹಾದುಹೋಗುವ ಮೆಟ್ರೋ ಸುರಂಗ ಮಾರ್ಗಕ್ಕೆ ರೈಲ್ವೆ ಮಂಡಳಿಯಿಂದ ಅನುಮತಿ ಪಡೆದು ನಿರ್ಮಿಸಲು ಅವಕಾಶ ಇದೆ. ಮೊದಲ ಹಂತದಲ್ಲಿ ಸಿಟಿ ರೈಲು ನಿಲ್ದಾಣದ ಬಳಿ 8 ಮೀ. ಆಳದಲ್ಲೇ ಮೆಟ್ರೋ ಮಾರ್ಗ ನಿರ್ಮಿಸಲಾಗಿದೆ. ಆದರೆ, ಈಗ 30 ಮೀ. ಆಳದಲ್ಲೇ ಹೋಗಬೇಕು ಎಂದು ಮಾರ್ಗಸೂಚಿ ಹೊರಡಿಸಿರುವ ಬಗ್ಗೆ ಮಾಹಿತಿ ಇಲ್ಲ. ಈ ಕುರಿತು ಪರಿಶೀಲಿಸಿ, ಪ್ರತಿಕ್ರಿಯಿಸುತ್ತೇನೆ.-ಇ.ವಿಜಯಾ, ಉಪ ಪ್ರಧಾನ ವ್ಯವಸ್ಥಾಪಕಿ, ನೈರುತ್ಯ ರೈಲ್ವೆ. * ವಿಜಯಕುಮಾರ್ ಚಂದರಗಿ