ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಶಶಿಕುಮಾರ್ ಎಂಬುವರಿಗೆ ಸೇರಿದ ಪುರಾತನ ಮನೆಯ ಮಧ್ಯಭಾಗದ ನೆಲ ಕುಸಿದು ಸುರಂಗ ಮಾರ್ಗ ಪತ್ತೆಯಾಗಿತ್ತು. ಘಟನೆಯಿಂದ ಭಯಗೊಂಡ ಶಶಿಕುಮಾರ್ ಕುಟುಂಬ ಮನೆ ಖಾಲಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಮಂಗಳವಾರ ಪುರಾತತ್ವ ಇಲಾಖೆ ಹಾಗೂ ಪುರಸಭೆ ಅಧಿಕಾರಿಗಳ ತಂಡ ಭೇಟಿ ನೀಡಿ ಸುರಂಗ ಪತ್ತೆಯಾದ ಜಾಗವನ್ನು ಪರಿಶೀಲಿಸಿದ್ದಾರೆ.
Advertisement
ಬಳಿಕ ಮಾತನಾಡಿದ ಪುರಾತತ್ವ ಇಲಾಖೆ ಸಹಾಯಕ ಅಧೀಕ್ಷಕ ಶ್ರೀಗುರುಬಾಗಿ, ಇದು ಮೇಲ್ನೋಟಕ್ಕೆ ಸುರಂಗದಂತೆ ಕಾಣುತ್ತಿದ್ದು, 8 ಅಡಿ ಆಳ, 12 ಅಡಿ ಉದ್ದ ಸದ್ಯಕ್ಕೆ ಕಂಡು ಬರುತ್ತಿದೆ. ಸುರಂಗ ಮಾರ್ಗ ನಿರ್ಮಾಣಕ್ಕೆ ಇಟ್ಟಿಗೆ ಹಾಗೂ ಚುರುಕಿ ಗಾರೆ ಬಳಸಲಾಗಿದ್ದು, ಮೂರು ಮಂದಿ ಒಟ್ಟಿಗೆ ತೆರಳುವ ವಿಸ್ತೀರ್ಣ ಹೊಂದಿದೆ. ಹೆಚ್ಚಿನ ಪರಿಶೀಲನೆ ಸಂಬಂಧ ಮೇಲಧಿಕಾರಿಗಳಿಗೆ ವಿಷಯ ತಿಳಿಸಲಾಗಿದ್ದು, ಬುಧವಾರ ಭೇಟಿ ನೀಡುವ ಸಾಧ್ಯತೆಯಿದೆ. ಅವರ ಪರಿಶೀಲನೆ ನಂತರ ಅವಕಾಶಗಳಿದ್ದಲ್ಲಿ ಸಂತ್ರಸ್ತನಿಗೆ ನಿರಾಪೇಕ್ಷಣಾ ಪತ್ರ ನೀಡಲಾಗುವುದು ಎಂದರು. ಸುರಂಗ ಮಾರ್ಗದ ಸಂಬಂಧ ಇತಿಹಾಸಕಾರ ಪ್ರೊ.ಕರೀಂಮುದ್ದೀನ್ ಅವರೊಂದಿಗೆ ಚರ್ಚಿಸಲಾಗಿದೆ. ಅವರು ಪಟ್ಟಣದಲ್ಲಿ ಇನ್ನೂ 3-4 ಸುರಂಗಗಳಿರುವ ಮಾಹಿತಿ ನೀಡಿದ್ದು, ತನಿಖೆ ನಡೆಸಲಾಗುವುದು, ಅಲ್ಲದೆ ಪ್ರಸ್ತುತ ಪತ್ತೆಯಾಗಿರುವ ಸುರಂಗ ಮುಂದುವರಿಯುವ ಸಾಧ್ಯತೆಯಿದ್ದು, ಇನ್ನೂ ಮೂರ್‍ನಾಲ್ಕು ಮನೆಗಳ ಕೆಳಗೆ ಹಾದು ಹೋಗಿರಬಹುದೆಂದು ಸಂಶಯ ವ್ಯಕ್ತಪಡಿಸಿದ್ದಾರೆ.