ಕಾರವಾರ: ರಾಜ್ಯದ ಕರಾವಳಿಯಲ್ಲಿ ರಾಷ್ಟ್ರೀಯ ಹೆದ್ದಾರಿ- 66 ಚತುಷ್ಪಥ ಕಾಮಗಾರಿ ಭಾಗವಾಗಿ ಕಾರವಾರ ನಗರ ಪ್ರವೇಶ ಭಾಗದಲ್ಲಿ ನಿರ್ಮಾಣವಾಗುತ್ತಿರುವ ಎರಡು ಸುರಂಗ ಮಾರ್ಗಗಳ ಪೈಕಿ ಒಂದು ಸುರಂಗ ಮಾರ್ಗ ಕೊರೆಯುವ ಕಾಮಗಾರಿ ಭಾನುವಾರ ಪೂರ್ಣಗೊಂಡಿದೆ.
ಕಳೆದ ತಿಂಗಳು ಕಾರವಾರದ ಅಲಿಗದ್ದಾದಿಂದ ಲಂಡನ್ ಬ್ರಿಡ್ಜ್ತನಕ ಸಾಗಿರುವ 370 ಮೀ. ಉದ್ದದ ಸುರಂಗ ಮಾರ್ಗವು ಕೇವಲ 34 ಮೀ. ಮಾತ್ರ ಕೊರೆಯುವುದು ಬಾಕಿ ಉಳಿದಿತ್ತು. ಭಾನುವಾರ ಇದು ಪೂರ್ಣಗೊಂಡಿದೆ. ಜೆಸಿಬಿಗಳಿಂದ ಇನ್ನಷ್ಟು ಅಗಲಗೊಳಿಸಲಾಗುತ್ತಿದೆ. ಸುರಂಗದೊಳಗೆ ವಿದ್ಯುತ್ ದೀಪ ಅಳವಡಿಸಿ ಕಾಮಗಾರಿ ನಡೆಯುತ್ತಿದ್ದು, ನೆಲ ಸಮತಟ್ಟು ಮಾಡಲಾಗುತ್ತಿದೆ. ಇನ್ನು ಸುರಂಗಕ್ಕೆ ಸುರಕ್ಷತೆ ದೃಷ್ಟಿಯಿಂದ ಉಕ್ಕಿನ ರಾಡ್‌ಗಳ ಕಮಾನಿನ ಪರದೆ ಅಳವಡಿಸಬೇಕಾಗಿದೆ. ಬಳಿಕ ಇಲ್ಲಿ ಅಳವಡಿಸಲಾಗುವ ಉಕ್ಕಿನ ರಾಡ್ ಗಳ ಕಮಾನಿಗೆ ಕಾಂಕ್ರಿಟೀಕರಣ ಮಾಡಲಾಗುತ್ತದೆ. ಮೇ ಅಂತ್ಯಕ್ಕೆ ಈ ಕಾಮಗಾರಿ ಮುಗಿಯಲಿದೆ ಎಂದು ಐಡಿಯಲ್ ಬಿಲ್ಡರ್ ಕಂಪನಿ ಎಂಜಿನಿಯರ್ ಹೇಳಿದರು.
ತೆರೆದ ಭಾಗದ 120 ಮೀ. ಉದ್ದ: ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ವ್ಯಾಪ್ತಿಯಲ್ಲಿ ಸುಮಾರು 750 ಮೀ. ಉದ್ದದ ಸುರಂಗಮಾರ್ಗ ಕಾರವಾರದಲ್ಲಿ ಮಾತ್ರ ನಿರ್ಮಾಣಗೊಳ್ಳುತ್ತಿದ್ದು, ಕಳೆದೆರಡು ವರ್ಷಗಳಿಂದ ಕಾಮಗಾರಿ ಸತತವಾಗಿ ನಡೆಯುತ್ತಿದೆ. ಬಿಣಗಾದಿಂದ ಲಂಡನ್ ಬ್ರಿಡ್ಜ್ ತನಕ ದ್ವಿ ಪಥದಲ್ಲಿ ಸಾಗುವ ಈ ಸುರಂಗ ಮಾರ್ಗದ ನಡುವೆ ಅಲಿಗದ್ದಾದಲ್ಲಿ 120 ಮೀ. ಅಂತರದ ತೆರೆದ ಭಾಗ ಬರುತ್ತದೆ. ಇಲ್ಲಿ ಕೊರೆಯಲಾಗುತ್ತಿರುವ ಇನ್ನೊಂದು ಸುರಂಗ ಮಾರ್ಗ ಪೂರ್ಣಗೊಳ್ಳಲು ಇನ್ನು 20 ಮೀ. ಬಾಕಿ ಇದೆ. ಇವೆರಡೂ ಪ್ರಮುಖವಾಗಿದ್ದು, ಇದರ ಮೇಲ್ಭಾಗದಲ್ಲಿ ಜಿಲ್ಲಾಧಿಕಾರಿ ವಸತಿ ಗೃಹ, ನ್ಯಾಯಾಧೀಶರ ವಸತಿಗೃಹ, ಪ್ರವಾಸಿ ಮಂದಿರ ಸೇರಿದಂತೆ ಕೆಲ ಕಟ್ಟಡಗಳಿವೆ. ಅಲ್ಲದೇ ಇಲ್ಲಿ ಸುರಂಗ ಮಾರ್ಗ ಲಂಡನ್ ಬ್ರಿಜ್ ಬಳಿ ರಾಷ್ಟ್ರೀಯ ಹೆದ್ದಾರಿಗೆ ಜೋಡಣೆ ಮಾಡುವುದರಿಂದ ಬಿಣಗಾದಿಂದ ನೇರವಾಗಿ ಕಾರವಾರಕ್ಕೆ ಬರಬಹುದು.
ಬಿಣಗಾ ಬಳಿಯಿಂದ ಆರಂಭಗೊಂಡ ಸುರಂಗ ಪೂರ್ಣಗೊಂಡಿದ್ದು, ಇದರ ಒಳ ಭಾಗದ ರಸ್ತೆ ಮತ್ತು ಗೋಡೆಗಳಿಗೆ ಕಾಂಕ್ರಿಟೀಕರಣ ಕಾರ್ಯ ಪ್ರಗತಿಯಲ್ಲಿದೆ. ಬಹುತೇಕ ಭಾಗ ಬಂಡೆಗಲ್ಲುಗಳ ಮೂಲಕ ಹಾದುಹೋಗುತ್ತದೆ.
ಸುರಕ್ಷಿತ ಕ್ರಮಕ್ಕೆ ಒತ್ತಾಯ: ಸುರಂಗ ಹೊರ ಬೀಳುವ ಲಂಡನ್ ಬ್ರಿಡ್ಜ್ ಬಳಿ ಬಂಡೆಗಲ್ಲುಗಳನ್ನು ರಾಶಿ ಹಾಕಲಾಗಿದ್ದು, ಲಂಡನ್ ಬ್ರಿಜ್ ತಿರುವಿನಲ್ಲಿ ಅಪಘಾತಗಳು ಉಂಟಾಗುವುದು ಹೆಚ್ಚು. ಪ್ರತಿದಿನ ವಾಹನ ದಟ್ಟಣೆ ಇರುವುದರಿಂದ, ಸ್ವಲ್ಪ ನಿರ್ಲಕ್ಷ ತೋರಿದರೂ ವಾಹನಗಳು ಪರಸ್ಪರ ಡಿಕ್ಕಿ ಆಗುವ ಸಾಧ್ಯತೆ ಹೆಚ್ಚು. ಜತೆಗೆ ಇಲ್ಲಿ ಕಾಮಗಾರಿ ನಡೆಯುವಾಗ ಸಂಚಾರ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಸುಗಮ ಸಂಚಾರಕ್ಕಾಗಿ ಐಆರ್‌ಬಿ ಕಂಪನಿ ಸೂಕ್ತ ಸುರಕ್ಷಿತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರಾದ ಗಜಾನನ ಹರಿಕಂತ್ರ ಒತ್ತಾಯಿಸಿದ್ದಾರೆ.
ಲಂಡನ್ ಬ್ರಿಡ್ಜ್ ಬಳಿ ಕೊನೆಗೊಳ್ಳುವ ಜೋಡಿ ಸುರಂಗ ಮಾರ್ಗಗಳಲ್ಲಿ ಎಡಬದಿ ಸುರಂಗ ಕೊರೆಯುವ ಕಾರ್ಯ ಪೂರ್ಣಗೊಂಡಿದೆ. ಒಳಗಡೆಯ ಕಾಂಕ್ರೀಟಿಕರಣ ಕಾರ್ಯ ಮುಂದುವರೆದಿದೆ.
ಸಂದೀಪ್ ಭಿಕಾಜಿ, ಜೆಸಿಬಿ ನಿರ್ವಾಹಕ
ಈಗ ಉಳಿದಿರುವ ಇನ್ನೊಂದು ಭಾಗದ 20 ಮೀ. ಉದ್ದ ಕೊರೆಯುವ ಕಾರ್ಯ ಪ್ರಗತಿಯಲ್ಲಿದೆ. ಇನ್ನೊಂದು ಹತ್ತು-ಹದಿನೈದು ದಿನಗಳ ನಂತರ ಸುರಂಗ ಕೊರೆಯುವ ಮುಗಿಯಬಹುದು.
ಸುರಂಗ ಕೊರೆಯುವ ಕಾರ್ಮಿಕರು