ಬಳ್ಳಾರಿ : ಜಿಲ್ಲೆಯ ಜೀವನಾಡಿ ತುಂಗಭದ್ರಾ ಜಲಾಶಯದಲ್ಲಿ ಒಳ ಹರಿವಿನ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದ್ದು, ಜಲಾಶಯ ಭರ್ತಿಗೆ ಕ್ಷಣಗಣನೇ ಆರಂಭವಾಗಿದೆ.
ಜಲಾಶಯದ ಒಳ ಹರಿವು ೧ ಲಕ್ಷ ೨೦ ಸಾವಿರ ಕ್ಯುಸೆಕ್ ದಾಟಿದ್ದು, ಡ್ಯಾಂನಿಂದ ನದಿಗೆ ಹೆಚ್ಚುವರಿ ನೀರು ಹರಿಬಿಡುವ ಹಿನ್ನೆಲೆಯಲ್ಲಿ ನದಿಪಾತ್ರದ ಜನ-ಜಾನುವಾರುಗಳು ಸುರಕ್ಷಿತ ಸ್ಥಳಕ್ಕೆ ತೆರಳಬೇಕು ಎಂದು ತುಂಗಭದ್ರಾ ಮಂಡಳಿ ಸೂಚಿಸಿದೆ.
ಜಲಾಶಯದಲ್ಲಿ ೭೫ ಟಿಎಂಸಿ ನೀರು ಸಂಗ್ರಹವಾಗಿದೆ. ಜು.೨೫ಕ್ಕೆ ಒಳ ಹರಿವು ೧ ಲಕ್ಷದ ೫೦ ಸಾವಿರ ಕ್ಯುಸೆಕ್ ದಾಟುವ ಸಾಧ್ಯತೆ ಇದೆ. ಜಲಾಶಯದ ಒಟ್ಟು ಸಂಗ್ರಹ ಸಾಮರ್ಥ್ಯ ೧೦೦.೮೫೫ ಟಿಎಂಸಿ ಇದೆ. ಒಮ್ಮಲ್ಲೇ ಭಾರಿ ಪ್ರಮಾಣದಲ್ಲಿ ನೀರು ಡ್ಯಾಂಗೆ ಹರಿದು ಬರುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಜು.೨೫ರಂದು ನದಿಗೆ ನೀರು ಹರಿಸುವ ಸಾಧ್ಯತೆ ಇದೆ. ಹೀಗಾಗಿ ನದಿಪಾತ್ರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳಬೇಕೆಂದು ಮಂಡಳಿ ಅಧಿಕಾರಿಗಳು ಸಂಬಂಧಿಸಿದ ಜಿಲ್ಲಾಡಳಿತಗಳಿಗೆ ಸಂದೇಶ ರವಾನಿಸಿದ್ದಾರೆ.
ಜಲಾಶಯ ಭರ್ತಿಯಾಗಲು ಇನ್ನು ೮ ಅಡಿ ಮಾತ್ರ ಬಾಕಿ ಇದೆ. ಸದ್ಯ ಜಲಾಶಯಕ್ಕೆ ೧,೨೦,೪೧೧ ಕ್ಯುಸೆಕ್ ನೀರು ಹರಿದು ಬರುತ್ತಿದೆ. ಸೆಂಟ್ರಲ್ ವಾಟರ್ ಕಮಿಷನ್ ಹವಾಮಾನದ ಬಗ್ಗೆ ತಿಳಿಸಿದ್ದು, ಶಿವಮೊಗ್ಗದಿಂದ ನದಿಗೆ ೨,೧೧,೮೯೦ ಕ್ಯುಸೆಕ್ ನೀರು ನದಿಯಲ್ಲಿ ಹರಿಯುವ ಸಾಧ್ಯತೆ ಇದೆ ಎಂದೂ ಅಂದಾಜಿಸಲಾಗಿದೆ. ಆದರೆ, ತುಂಗಭದ್ರಾ ಜಲಾಶಯಕ್ಕೆ ೧ಲಕ್ಷ ೫೦ ಸಾವಿರದಿಂದ ೧ಲಕ್ಷ ೬೦ ಸಾವಿರ ಕ್ಯುಸೆಕ್‌ನಷ್ಟು ನೀರು ಹರಿದುಬರಬಹುದು ಎಂದು ಸ್ಥಳೀಯ ಅಧಿಕಾರಿಗಳು ಅಂದಾಜಿಸಿದ್ದಾರೆ.
ತುಂಗಭದ್ರಾ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುವ ಹಿನ್ನೆಲೆಯಲ್ಲಿ ಜು.೨೫ರಂದು ಯಾವುದೇ ಸಂದರ್ಭದಲ್ಲಿ ನದಿಗೆ ನೀರು ಹರಿಸುವ ಸಾಧ್ಯತೆ ಇರುತ್ತದೆ. ಹಾಗಾಗಿ ನದಿ ಪಾತ್ರದ ಜನರು ಮುನ್ನೆಚ್ಚರಿಕೆಯ ಸಲುವಾಗಿ ಸುರಕ್ಷಿತ ಸ್ಥಳಕ್ಕೆ ತೆರಳಬೇಕು ಎಂದು ಮಂಡಳಿ ತಿಳಿಸಿದೆ.
ತುಂಗಭದ್ರಾ ಜಲಾಶಯದ ರಾಜ್ಯದ ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳಿಗೆ ನೀರು ಒದಗಿಸುತ್ತದೆ. ಇನ್ನೂ ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳು ಕೂಡ ನೀರು ಪಡೆಯುತ್ತವೆ. ಈಗ ಒಳ ಹರಿವು ಹೆಚ್ಚಳ ಹಿನ್ನೆಲೆಯಲ್ಲಿ ಜಲಾಶಯದ ಗೇಟ್‌ಗಳನ್ನು ತೆರೆದು ನದಿಗೆ ನೀರು ಹರಿಸುವ ಸಾಧ್ಯತೆ ಇದೆ.