ಕೊಪ್ಪಳ: ತುಂಗಭದ್ರಾ ಜಲಾಶಯದ 19ನೇ ಕ್ರೆಸ್ಟ್‌ಗೇಟ್ ಮುರಿದ ಸ್ಥಳದಲ್ಲಿ ಹೊಸ ಗೇಟ್ ಅಳವಡಿಕೆ ಸವಾಲಿಗೆ ಸಿದ್ಧವಾಗಿರುವ ತಜ್ಞರು, ಹರಿದು ಹೋಗುತ್ತಿರುವ ನೀರನ್ನು ತಡೆಯಲು ತಾತ್ಕಾಲಿಕವಾಗಿ ಗೇಟ್ ಅಳವಡಿಸಲು ಬುಧವಾರ ಕಾರ್ಯಾರಂಭ ಮಾಡಲಿದ್ದಾರೆ.
ಅಣೆಕಟ್ಟು ತಜ್ಞರು 3 ದಿನಗಳಿಂದ ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ. ಗೇಟ್ ಮುರಿದು ಬಿದ್ದ ಮಾರನೇ ದಿನವೇ ನಾರಾಯಣ ಎಂಜಿನಿಯರಿಂಗ್ ವರ್ಕ್ಸ್ ಹಾಗೂ ಹಿಂದೂಸ್ಥಾನ್ ಎಂಜಿನಿಯರಿಂಗ್ ವರ್ಕ್ಸ್ಗೆ ಹೊಸ ತಾತ್ಕಾಲಿಕ ಗೇಟ್ ನಿರ್ಮಿಸುವ ಹೊಣೆ ನೀಡಲಾಗಿತ್ತು. ಒಟ್ಟು 64 ಅಡಿ ಅಗಲ, 4 ಅಡಿ ಎತ್ತರದ 5 ಐದು ಗೇಟ್‌ಗಳನ್ನು ಸಿದ್ಧಪಡಿಸುವ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಬುಧವಾರ ಜಲಾಶಯದ ಪ್ರದೇಶಕ್ಕೆ ತರಲು ಸಿದ್ಧತೆ ನಡೆಸಲಾಗಿದೆ.
ಜಲಾಶಯದ ಭದ್ರತೆ ದೃಷ್ಟಿಯಿಂದ ಎರಡು ಬೃಹತ್ ಕ್ರೇನ್‌ಗಳನ್ನು ಎಡ ಹಾಗೂ ಬಲ ಬದಿಯಿಂದ 19ನೇ ಕ್ರೆಸ್ಟ್‌ಗೇಟ್‌ನತ್ತ ತರಲಾಗುತ್ತದೆ. ಮುರಿದ ಗೇಟ್ ಸ್ಥಳದ ನದಿಯ ಒಳಭಾಗದಲ್ಲಿ ಕಂಬದ ಮಾದರಿಯ ಎರಡು ಬೃಹತ್ ಕಬ್ಬಿಣದ ಕಂಬಗಳನ್ನು ಎರಡು ಬದಿಯಲ್ಲಿ ನಿಲ್ಲಿಸಲಾಗುತ್ತದೆ. ಬಳಿಕ ತಲಾ 10 ಟನ್ ಸಾಮರ್ಥ್ಯದ ಗೇಟ್‌ಗಳನ್ನು ಆ ಕಂಬಗಳಿಗೆ ಅನುಗುಣವಾಗಿ ನೀರಿಗೆ ಇಳಿಸುವ ಪ್ರಕ್ರಿಯೆ ಆರಂಭಿಸಲಾಗುತ್ತದೆ. ಅದಕ್ಕೂ ಮುನ್ನ ಅಣೆಕಟ್ಟಿನ ಒಳ ಭಾಗದಲ್ಲಿ ಗೇಟ್ ಇಳಿಸುವ ಮೊದಲು ಒಟ್ಟು ನೀರು ಸಂಗ್ರಹದ ಸ್ಥಿತಿ, ನೀರಿನ ಒತ್ತಡ, ಆ ಒತ್ತಡದ ಸಾಮರ್ಥ್ಯಕ್ಕೆ ಅನುಸಾರ ಗೇಟ್ ಭದ್ರವಾಗಿ ಇಳಿಯುತ್ತದೆಯೇ ಎಂಬ ಲೆಕ್ಕಾಚಾರ ಸ್ಥಳದಲ್ಲೇ ಹಾಕಲಾಗುತ್ತದೆ.
ಸದ್ಯ ಮುರಿದ ಗೇಟ್ ಮೂಲಕ 35 ಸಾವಿರ ಕ್ಯುಸೆಕ್ ನೀರು ಹರಿದು ನದಿ ಸೇರುತ್ತಿದ್ದು, ಆ ನೀರಿನ ಸಾಮರ್ಥ್ಯ ತಡೆಯುವಂತೆ ಗೇಟ್‌ಗಳ ಇಳಿಸುವ ಪ್ರಕ್ರಿಯೆ ಆರಂಭಿಸಲಾಗುತ್ತದೆ. ಮೊದಲು ಒಂದು ಗೇಟ್ ನೀರಿನಲ್ಲಿ ಕೆಳಗಿಳಿಸಿ ಪರಿಸ್ಥಿತಿ ಅವಲೋಕಿಸಲಾಗುತ್ತದೆ. ಮೊದಲ ಗೇಟ್ ಯಶಸ್ವಿಯಾಗಿರುವುದು ಖಚಿತ ಆದ ಬಳಿಕ 2ನೇ ಗೇಟ್ ಇಳಿಸಲಾಗುತ್ತದೆ. ಅದೇ ರೀತಿ 5 ಗೇಟ್‌ಗಳನ್ನು ಇಳಿಸಲಾಗುತ್ತದೆ. ಇದೊಂದು ಸವಾಲಿನ ಕೆಲಸ ಎಂದು ತಜ್ಞರು ತಿಳಿಸಿದ್ದಾರೆ.
ಗೇಟ್ ಇಳಿಕೆ ವೇಳೆ ಅಣೆಕಟ್ಟಿನಲ್ಲಿ ನಿಶಬ್ದ!
ಕಾರ್ಯಾಚರಣೆ ವೇಳೆ ತಜ್ಞರ ತಂಡ ಹೊರತುಪಡಿಸಿ ಯಾರಿಗೂ ಪ್ರವೇಶ ನೀಡದಂತೆ ಅಣೆಕಟ್ಟು ತಜ್ಞ ಕನ್ನಯ್ಯ ನಾಯ್ಡು ಅವರು ಸಚಿವ ಶಿವರಾಜ ತಂಗಡಗಿ ಹಾಗೂ ತುಂಗಭದ್ರಾ ಬೋರ್ಡ್‌ಗೆ ಸೂಚನೆ ನೀಡಿದ್ದಾರೆ. ಅಣೆಕಟ್ಟು ಪ್ರದೇಶದಲ್ಲಿ ಆ ದಿನ ಎಲ್ಲವೂ ನಿಶಬ್ದವಾಗಿರುತ್ತದೆ. ಇದೊಂದು ತಾತ್ಕಾಲಿಕ ಯೋಜನೆ. ಬೇಸಗೆಯಲ್ಲಿ ಅಣೆಕಟ್ಟಿನ ನೀರು ಖಾಲಿಯಾದ ಬಳಿಕ ಅಥವಾ ಕ್ರೆಸ್ಟ್‌ಗೇಟ್‌ಗಿಂತ ಅಣೆಕಟ್ಟಿನ ನೀರಿನ ಮಟ್ಟ ಕೆಳಗಿಳಿದ ವೇಳೆ ಮತ್ತೆ ಮೊದಲಿದ್ದ ಮಾದರಿಯ ಗೇಟ್ ನಿರ್ಮಾಣ ಮಾಡಬೇಕಿದೆ.