ಮೊಳಕಾಲ್ಮೂರು: ಭೀಕರ ಬರಕ್ಕೆ ತುತ್ತಾಗುತ್ತಿರುವ ಮೊಳಕಾಲ್ಮೂರು ಕ್ಷೇತ್ರದ ಜನತೆಗೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆ ಮಾಡುವ ತುಂಗಾ ಹಿನ್ನೀರು ಯೋಜನೆಯನ್ನು ಕೂಡಲೇ ಅನುಷ್ಠಾನಗೊಳಿಸಬೇಕು. ಇಲ್ಲದಿದ್ದರೆ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಅನಿವಾರ್ಯ ಎಂದು ಶಾಸಕ ಬಿ. ಶ್ರೀರಾಮುಲು ಎಚ್ಚರಿಸಿದರು.
ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಜಿಲ್ಲಾಡಳಿತ ಹಾಗೂ ಪಟ್ಟಣ ಪಂಚಾಯತ್ ವತಿಯಿಂದ ನಗರೋತ್ಥಾನ ಯೋಜನೆಯಡಿ ವಿವಿಧ ಯೋಜನೆಗಳ ಕಾಮಗಾರಿಗಳಿಗೆ ಭೂಮಿಪೂಜೆ ಹಾಗೂ ಪರಿಶಿಷ್ಟ ಜಾತಿ ಮತ್ತು ವರ್ಗಗಳ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನದ ಚೆಕ್ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ಭಾಗದ ಜನತೆಗೆ ಕುಡಿಯುವ ನೀರು ನೀಡುವುದು ಬಹು ದೊಡ್ಡ ಸವಾಲಾಗಿದೆ. ಇಲ್ಲಿ ಯಾವುದೇ ಜಲಮೂಲವಿಲ್ಲದ ಕಾರಣ
ನೀರಿನ ಸಮಸ್ಯೆ ಉದ್ಭವಿಸಿದೆ. ಚುನಾವಣಾ ಪೂರ್ವದಲ್ಲಿ ತುಂಗಾ ಹಿನ್ನೀರು ಯೋಜನೆಯನ್ನು ಜಾರಿಗೊಳಿಸುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಈಗಿನ ಸಮ್ಮಿಶ್ರ ಸರ್ಕಾರ ಈ ಯೋಜನೆ ಬಗ್ಗೆ ಅಷ್ಟೊಂದು ಆಸಕ್ತಿ ವಹಿಸುತ್ತಿಲ್ಲ. ಆದ್ದರಿಂದ ಹಠ ಹಿಡಿದು ಯೋಜನೆಯನ್ನು ಜಾರಿಗೊಳಿಸುವ ಉದ್ದೇಶ ಹೊಂದಿದ್ದೇನೆ ಎಂದರು.
ಕ್ಷೇತ್ರದ ಜನರಿಗೆ ಸಮರ್ಪಕವಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಸಲುವಾಗಿ ವೈಯಕ್ತಿಕ ವೆಚ್ಚದಲ್ಲಿ ಕೊಳವೆಬಾವಿಗಳನ್ನು ಕೊರೆಸಲಾಗುತ್ತಿದೆ. ಆದರೆ ಅಂತರ್ಜಲ ಕಡಿಮೆಯಾಗಿರುವುದರಿಂದ ನೀರು ಲಭ್ಯವಾಗುತ್ತಿಲ್ಲ. ಹಾಗಾಗಿ ಯೋಜನೆ ಜಾರಿ ಸಂಬಂಧ ಸಚಿವ ಕೃಷ್ಣ ಬೈರೇಗೌಡ ಹಾಗೂ ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಅವರೊಂದಿಗೆ ಚರ್ಚಿಸಿದ್ದು, ಅತೀ ಶೀಘ್ರದಲ್ಲಿ ತುಂಗಾ ಹಿನ್ನೀರು ಯೋಜನೆ ಜಾರಿಗೊಳಿಸುವಂತೆ ಒತ್ತಾಯಿಸಲಾಗಿದೆ. ಸರ್ಕಾರ ಈ ಯೋಜನೆ ಜಾರಿಗೆ ವಿಳಂಬ ಮಾಡಿದಲ್ಲಿ ಕ್ಷೇತ್ರದ ಜನರೊಂದಿಗೆ ಸೇರಿಕೊಂಡು ಉಗ್ರ ಹೋರಾಟ ಮಾಡುವುದಾಗಿ ಗುಡುಗಿದರು.
ಪಟ್ಟಣ ಪಂಚಾಯತ್ ಅಧ್ಯಕ್ಷ ಜಿ. ಪ್ರಕಾಶ್ ಮಾತನಾಡಿ, ಮೊಳಕಾಲ್ಮೂರು ಪಟ್ಟಣ ರಾಜ್ಯದಲ್ಲಿಯೇ ಅತ್ಯಂತ ಹಿಂದುಳಿದ ಪ್ರದೇಶಗಳಲ್ಲಿ ಒಂದು. ಭೌಗೋಳಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿಯಲು ಶಾಶ್ವತ ನೀರಾವರಿ ಮೂಲ ಇಲ್ಲದಿರುವುದೇ ಕಾರಣ. ಕೂಡ್ಲಿಗಿ ಕ್ಷೇತ್ರದ ಶಾಸಕ ಎನ್. ವೈ. ಗೋಪಾಲಕೃಷ್ಣ ಅವರು ರಂಗಯ್ಯನದುರ್ಗ ಜಲಾಶಯದಿಂದ ಪಟ್ಟಣಕ್ಕೆ ಕುಡಿಯುವ ನೀರಿನ ಯೋಜನೆ ಜಾರಿಗೆ ತಂದಿದ್ದರು. ಅದೇ
ಮಾದರಿಯಲ್ಲಿ ಶಾಸಕ ಬಿ. ಶ್ರೀರಾಮುಲು 95 ಲಕ್ಷ ರೂ. ವೆಚ್ಚದಲ್ಲಿ ಜಲೋತ್ಕರ್ಷ ಯೋಜನೆಯಡಿ ಕೊಳವೆಬಾವಿ ಕೊರೆಸುತ್ತಿದ್ದಾರೆ. ಆದರೆ ಅಂತರ್ಜಲ ಮಟ್ಟ ಕಡಿಮೆಯಾಗಿರುವುದರಿಂದ ನೀರು ಸಿಗುತ್ತಿಲ್ಲ. ಪಟ್ಟಣ ವ್ಯಾಪ್ತಿಯ ಕೋತಲಗೊಂದಿಕೆರೆಯಲ್ಲಿ ಹಾಕಿರುವ ಕೊಳವೆಬಾವಿಯಿಂದ ಪಟ್ಟಣದ ಜನತೆಗೆ ನೀರು ಪೂರೈಕೆ
ಮಾಡುವಂತೆ ಶಾಸಕರು ಸೂಚಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಜಿಪಂ ಮಾಜಿ ಸದಸ್ಯ ಎಚ್.ಟಿ. ನಾಗಿರೆಡ್ಡಿ, ತಾಪಂ ಸದಸ್ಯರಾದ ಟಿ. ರೇವಣ್ಣ, ನರೇಂದ್ರಬಾಬು, ತಾಪಂ ಕಾರ್ಯನಿರ್ವಣಾಧಿಕಾರಿ ಸಿ.ಎನ್. ಚಂದ್ರಶೇಖರಯ್ಯ, ಪಪಂ ಮುಖ್ಯಾಧಿಕಾರಿ ಎಸ್. ರುಕ್ಮಿಣಿ, ಬಿಜೆಪಿ ಕಾರ್ಯದರ್ಶಿ ಶ್ರೀರಾಮ ರೆಡ್ಡಿ, ನಗರಾಧ್ಯಕ್ಷ ಶಾಂತಾರಾಂ ಬಸಾಪತಿ, ಮಹಿಳಾ ಘಟಕದ ಜಿಲ್ಲಾ ಉಪಾಧ್ಯಕ್ಷೆ ಈರಮ್ಮ, ಮಂಡಲಾಧ್ಯಕ್ಷೆ ಶ್ರೀದೇವಿ, ಮುಖಂಡರಾದ ಕೆ. ಬಸಣ್ಣ, ಬಿ. ವಿಜಯ್, ಟಿ.ಟಿ. ರವಿಕುಮಾರ್, ವಿನಯ್ ಮೊದಲಾದವರು ಭಾಗವಹಿಸಿದ್ದರು.
ನನ್ನನ್ನು ಶಾಸಕನಾಗಿ ಆಯ್ಕೆ ಮಾಡಿದ ಯಾರೊಬ್ಬರೂ ಎದೆಗುಂದಬಾರದು. ತುಂಗಾ ಹಿನ್ನೀರು ಯೋಜನೆಯನ್ನು ಜಾರಿಗೆ ತರುವುದು ನನ್ನ ಕರ್ತವ್ಯ. ಹಾಗಾಗಿ ಆ ನಿಟ್ಟಿನಲ್ಲಿ ಕಾರ್ಯೋನ್ಮುಖನಾಗಿದ್ದೇನೆ.
ಬಿ. ಶ್ರೀರಾಮುಲು, ಶಾಸಕರು.