Advertisement

Tumkur: ನರೇಗಾ ಪ್ರಗತಿ ಇಮ್ಮಡಿಯಾಗುವಂತೆ ಶ್ರಮಿಸಬೇಕು: ಪ್ರಭು ಜಿ

04:25 PM May 14, 2024 | Team Udayavani |

ತುಮಕೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಡಿ ಬರುವ ಪ್ರತಿಯೊಂದು ಯೋಜನೆಗಳಲ್ಲಿ ಪ್ರಗತಿ ಸಾಧಿಸಬೇಕು. ಗ್ರಾಮೀಣ ಜನರಿಗೆ ಹೆಚ್ಚು ಅನುಕೂಲವಾಗುತ್ತಿರುವ ನರೇಗಾ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವುದರ ಮೂಲಕ ಕಳೆದ ವರ್ಷಕ್ಕಿಂತ ಜಿಲ್ಲೆಯಲ್ಲಿ ಹೆಚ್ಚಿನ ಸಾಧನೆ ಮಾಡಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಭು ಜಿ ಹೇಳಿದರು.

Advertisement

ಜಿಲ್ಲಾ ಮಟ್ಟದ, ತಾಲ್ಲೂಕು ಮಟ್ಟದ, ಗ್ರಾಮ ಪಂಚಾಯತಿ ಮಟ್ಟದ ಅಧಿಕಾರಿಗಳ ಮಾರ್ಗಸೂಚಿ ಸಭೆಯಲ್ಲಿ ಮಾತನಾಡಿದ ಪ್ರಭು ಜಿ, ಈಗಾಗಲೇ ನರೇಗಾ ಯೋಜನೆಯಡಿ 70000 ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ. ಹಾಗೂ 461 ಕೋಟಿಯಷ್ಟು ಅನುದಾನದ ಕಾಮಗಾರಿಗಳನ್ನು ಜಿಲ್ಲೆಯಲ್ಲಿ ಅನುಷ್ಠಾನ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದರು.

ಅಧ್ಯಕ್ಷರು, ಉಪಾಧ್ಯಕ್ಷರು, ಪಿಡಿಒಗಳಿಗೆ ತರಬೇತಿ: ಜೂನ್ 2ನೇ ವಾರದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ನರೇಗಾ ಯೋಜನೆ ಸೇರಿದಂತೆ RDPR ಇಲಾಖೆಯಡಿ ಬರುವ ಯೋಜನೆಗಳ ಸಮಗ್ರ ಹಾಗೂ ಪರಿಣಾಮಕಾರಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಒಂದು ದಿನದ ವಿಷಯಾಧಾರಿತ ತರಬೇತಿಯನ್ನು ನೀಡಲಾಗುತ್ತದೆ ಎಂದರು.

ಜಿಪಿ ಮಿಷನ್ 500 ಮುಂದುವರಿಕೆ: ಕಳೆದ ವರ್ಷದಲ್ಲಿ ಜಿಲ್ಲೆಯು ಮಾನವ ದಿನಗಳ ಸೃಜನೆಯಲ್ಲಿ ರಾಜ್ಯದಲ್ಲಿ ಪ್ರಥಮ ಸ್ಥಾನ ಗಳಿಸಿತ್ತು. ಇದರ ಸಾಧನೆಗೆ ಕಾರಣವಾಗಿದ್ದೇ ಗ್ರಾಮ ಪಂಚಾಯತಿ ಮಿಷನ್ 500. ರೈತರಿಗೆ ಅನುಕೂಲವಾಗುವ ಕಾಮಗಾರಿಗಳನ್ನು ಅನುಷ್ಠಾನ ಮಾಡುವ ಮೂಲಕ ಗ್ರಾಮೀಣರಿಗೆ ಹೆಚ್ಚು ಉದ್ಯೋಗ ನೀಡುವ ನಿಟ್ಟಿನಲ್ಲಿ ಈ ಅಭಿಯಾನ ಪ್ರಾರಂಭವಾಗಿದೆ. ಆದ್ದರಿಂದ ಈ ವರ್ಷವೂ ಪ್ರತಿ ಗ್ರಾಮ ಪಂಚಾಯತಿಗಳಲ್ಲಿ 500 ವೈಯಕ್ತಿಕ ಕಾಮಗಾರಿಗಳನ್ನು ಮಾಡುವ ಗುರಿಯನ್ನು ನಿಗದಿ ಮಾಡಲಾಗಿದೆ.

ಹಸಿರು ಗ್ರಾಮ: ಈಗಾಲೇ ಜಿಲ್ಲೆಯಲ್ಲಿ ಮಳೆ ಪ್ರಾರಂಭವಾಗಿದೆ. ಆದ್ದರಿಂದ ಗಿಡ ನೆಡಲು ಪ್ರಸ್ತುತ ಸೂಕ್ತವಾದ ವಾತಾವರಣ ನಿರ್ಮಾಣವಾಗಿದೆ. ಪ್ರತೀ ಗ್ರಾಮ ಪಂಚಾಯತಿ ಹಂತದಲ್ಲಿ 1000 ಗಿಡಗಳನ್ನು ನೆಡುವುದರ ಮೂಲಕ ಹಸಿರೀಕರಣಕ್ಕೆ ಹೆಚ್ಚು ಆದ್ಯತೆ ನೀಡಿ ಪರಸರ ಸಂರಕ್ಷಣೆ ಮಾಡಬೇಕೆಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತಿಳಿದ್ದಾರೆ. ವಿಶೇಷವೆಂದರೆ ಇದೇ ಜೂನ್ 5ರಂದು ವಿಶ್ವ ಪರಿಸರ ದಿನದ ಅಂಗವಾಗಿ ಸುಮಾರ 5 ಲಕ್ಷ ಸಸಿಗಳನ್ನು ನೆಡಲು ಯೋಜನೆಯನ್ನು ರೂಪಿಸಲಾಗಿದೆ. ಹಾಗೂ ಹಸಿರು ಗ್ರಾಮ ಯೋಜನೆಗೆ ಶ್ರಮಿಸಿ ಸಾಧನೆ ಮಾಡುವ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಗೌರವ ಸಲ್ಲಿಸುವುದಾಗಿ ಸಿಇಒ ತಿಳಿಸಿದ್ದಾರೆ.

Advertisement

ನಾಗರಿಕರೊಂದಿಗೆ ಪಿಡಿಒಗಳು ಸಾಮರಸ್ಯ ಸಭೆ: ಗ್ರಾಮ ಪಂಚಾಯತಿ ಮಟ್ಟದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಜನರೊಂದಿಗೆ ಸಾಮರಸ್ಯ ಸಭೆಯನ್ನು ಹಮ್ಮಿಕೊಳ್ಳಬೇಕು. ಈ ಮೂಲಕ ಜನರು ತಮ್ಮ ಅಹವಾಲುಗಳನ್ನು ಹಾಗೂ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ವೇದಿಕೆಯನ್ನು ಸೃಷ್ಟಿ ಮಾಡಬೇಕು ಎಂದರು.

ಶಾಲೆ ಮತ್ತು ಚರಂಡಿಗಳಿಗೆ ಹೆಚ್ಚಿನ ಆದ್ಯತೆ: ಈಗಾಗಲೇ ಜಿಲ್ಲೆಯಲ್ಲಿ 1000 ಶಾಲಾಭಿವೃದ್ದಿ ಕಾಮಗಾರಿಗಳು ಪ್ರಾರಂಭವಾಗಿದ್ದು, ಈ ವರ್ಷ ಪೂರ್ಣಗೊಳಿಸಿ ಶೈಕ್ಷಣಿಕ ಪ್ರಗತಿಗೆ ಶ್ರಮಿಸಬೇಕು. ಹಾಗೂ ಸ್ವಚ್ಛತೆ ಅಂಗವಾಗಿ 3 ಲಕ್ಷ ಮೀಟರ್ ಚರಂಡಿ ಕಾಮಗಾರಿಗೆ ಈಗಾಗಲೇ ಅನುಮೋದನೆ ನೀಡಿದ್ದು, ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ಸಿದ್ದತೆ ನಡೆಸಲಾಗಿದೆ.

ಒಟ್ಟಾರೆಯಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಡಿ ಬರುವ ಎಲ್ಲಾ ಇಲಾಖೆಗಳ ಅಧಿಕಾರಿಗಳು ಪ್ರಾಮಾಣಿಕತೆಯಿಂದ ಶ್ರಮಿಸಿ ಜಿಲ್ಲೆಯ ಗ್ರಾಮೀಣ ಜನರಿಗೆ ಅನುಕೂಲವಾಗುವಂತೆ ಮಾಡುವುದರ ಮೂಲಕ ತುಮಕೂರನ್ನು ಮಾದರಿ ಜಿಲ್ಲೆ ಮಾಡಬೇಕು ಎಂದು ಮುಖ್ಯ ಕಾರ್ಯನಿರ್ವಾಹ ಅಧಿಕಾರಿ ಪ್ರಭು ಜಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next