ದಾವಣಗೆರೆ: ತುಮಕೂರು ಜಿಲ್ಲೆಯ ಗುಬ್ಬಿ ಒಳಗೊಂಡಂತೆ ರಾಜ್ಯದೆಲ್ಲೆಡೆ ದಲಿತರ ಮೇಲೆ ನಿರಂತರವಾಗಿ ನಡೆಯುತ್ತಿರುವ ಹಲ್ಲೆ ಖಂಡಿಸಿ ಫೆ.16 ರಂದು ತುಮಕೂರು ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಜಿಲ್ಲಾ ಸಮಿತಿ ಗೌರವ ಅಧ್ಯಕ್ಷ ಅನೀಸ್ ಪಾಷಾ ತಿಳಿಸಿದ್ದಾರೆ.
ಮಂಗಳವಾರ ಪ್ರವಾಸಿ ಮಂದಿರದಲ್ಲಿ ನಡೆದ ತುಮಕೂರು ಚಲೋ ಕಾರ್ಯಕ್ರಮ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಎಲ್ಲಾ ದಲಿತ ದಮನಿತರು, ಅಲ್ಪಸಂಖ್ಯಾತರು ಒಗ್ಗಟ್ಟಾಗಿ ಸಮಾಜದ ಬದಲಾವಣೆಗೆ ತುಮಕೂರು ಚಲೋ ಮಾನವತ ಸಮಾವೇಶ ಕೈಗೊಂಡಿದ್ದಾರೆ. ಸಮಾವೇಶದ ಹಿನ್ನೆಲೆಯಲ್ಲಿ ಫೆ. 15 ರ ಬುಧವಾರ ಬೆಳಗ್ಗೆ 11ಕ್ಕೆ ದಾವಣಗೆರೆಯ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.
ಕಳೆದ ಜ. 17ರಂದು ತುಮಕೂರು ಜಿಲ್ಲೆಯ ಗುಬ್ಬಿ, ಸಕಲೇಶಪುರದ ಹೊಸಕೋಟೆ, ಉಡುಪಿಯಲ್ಲಿ ನಡೆದಂತಹ ಪ್ರಕರಣಗಳು ಬೆಳಕಿಗೆ ಬಾರದಂತೆ ತಳಮಟ್ಟದಲ್ಲಿಯೇ ಮುಚ್ಚಿಹಾಕುವ ಹುನ್ನಾರ ಕೂಡ ನಡೆಯುತ್ತಿದೆ. ಸಂವಿಧಾನ ಜಾರಿಗೆ ಬಂದು 6 ದಶಕಗಳೇ ಕಳೆದಿವೆ. ಆದರೆ, ಸಂವಿಧಾನ ನೀಡಿದ ಎಲ್ಲಾ ರಕ್ಷಣೆಗಳನ್ನು ಲೆಕ್ಕಕ್ಕಿಲ್ಲದಂತೆ ಮಾಡಲಾಗುತ್ತಿದೆ.
ಶತಮಾನಗಳಿಂದ ಜಾರಿಯಲ್ಲಿರುವ ಜಾತೀಯತೆ ಎಂಬುದು ಇನ್ನೂ ಜನರ ಮನಸ್ಸನ್ನು ಆಳುತ್ತಿರುವುದೇ ಇದಕ್ಕೆಲ್ಲ ಕಾರಣವಾಗಿದೆ ಎಂದರು. ದಲಿತರು, ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ನಿರಂತರ ದಾಳಿಯ ಬಗ್ಗೆ ಯಾವುದೇ ಜನಪ್ರತಿನಿಧಿಧಿಗಳು ಚಕಾರವೆತ್ತದೆ ಜಾತಿವಾದಿಗಳಿಗೆ ಬೆಂಬಲ ನೀಡುತ್ತಿದ್ದಾರೇಯೇ ವಿನಃ ಸಮಾಜದಲ್ಲಿ ಶಾಂತಿ ಮತ್ತು ನೆಮ್ಮದಿಯ ವಾತಾವರಣ ನಿರ್ಮಾಣ ಮಾಡುವಲ್ಲಿ ವಿಫಲರಾಗಿದ್ದಾರೆ.
ರಾಜಕಾರಣಿಗಳು ಹಾಗೂ ಜಾತಿವಾದಿಗಳಿಗೆ ಎಚ್ಚರಿಕೆ ಗಂಟೆಯಾಗಿ ತುಮಕೂರಿನಲ್ಲಿ ಮಾನವತ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ದಲಿತ ಸಂಘರ್ಷ ಸಮಿತಿಯ ಹೆಗ್ಗೆರೆ ರಂಗಪ್ಪ, ಕರ್ನಾಟಕ ಜನಶಕ್ತಿಯ ಎಸ್.ಕೆ. ಒಡೆಯರ್, ಸತೀಶ್ ಅರವಿಂದ್, ಮಾನವ ಬಂಧುತ್ವ ವೇದಿಕೆಯ ರಾಘು ದೊಡ್ಡಮನಿ, ಭಾರತೀಯ ಜನಕಲಾ ಸಮಿತಿಯ ಐರಣಿ ಚಂದ್ರು, ಬೀಡಿ ಕಾರ್ಮಿಕ ಸಂಘಟನೆಯ ಜಬೀನಾಖಾನಂ, ಉಚ್ಚಂಗಿ ಪ್ರಸಾದ್, ಟಿಪ್ಪುಸುಲ್ತಾನ್ ಟ್ರಸ್ಟ್‌ನ ಆದಿಲ್‌ಖಾನ್ ಇತರರು ಇದ್ದರು.