Advertisement

ಕಲ್ಪತರು ನಾಡಲ್ಲಿ ಕೈ-ತೆನೆಯದ್ದೇ ಆರ್ಭಟ: ತುಮಕೂರು 11 ಕ್ಷೇತ್ರಗಳು

12:24 AM Feb 09, 2023 | Team Udayavani |

ರಾಜ್ಯದಲ್ಲಿಯೇ 2ನೇ ಅತೀ ದೊಡ್ಡ ಜಿಲ್ಲೆಯಾಗಿರುವ ಕಲ್ಪತರು ನಾಡು ತುಮಕೂರು ಜಿಲ್ಲೆ ಒಂದು ಕಾಲದಲ್ಲಿ ಕಾಂಗ್ರೆಸ್‌ ಭದ್ರಕೋಟೆಯಾಗಿತ್ತು. 1952ರಿಂದ 1983ರ ವರೆಗೆ ಕಾಂಗ್ರೆಸ್‌ ಪಾರಮ್ಯ ಸಾಧಿಸಿತ್ತು. ಅನಂತರ ಹಂತ ಹಂತವಾಗಿ ಜನತಾ ಪರಿವಾರ, ಜೆಡಿಎಸ್‌ ತನ್ನ ಪ್ರಾಬಲ್ಯ ಸಾಧಿಸಿತು. 1983ರಲ್ಲಿ ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ಬಿಜೆಪಿ ಚಿಕ್ಕನಾಯಕನಹಳ್ಳಿಯಿಂದ ಖಾತೆ ತೆರೆದಿತ್ತು. ಪ್ರಬಲವಾಗಿದ್ದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಭದ್ರಕೋಟೆಯನ್ನು ಛಿದ್ರಮಾಡಲು ಬಿಜೆಪಿ ಕಾರ್ಯತಂತ್ರ ನಡೆಸುತ್ತಿದ್ದು, 11 ವಿಧಾನ ಸಭಾ ಕ್ಷೇತ್ರಗಳ ಪೈಕಿ ಪ್ರಸ್ತುತ ಬಿಜೆಪಿ-5, ಕಾಂಗ್ರೆಸ್‌-3, ಜೆಡಿಎಸ್‌-3 ಶಾಸಕರಿದ್ದಾರೆ.

Advertisement

ತುಮಕೂರು: ದೇಶಾದ್ಯಂತ ಹೆಸರಾಗಿರುವ ನಡೆದಾಡುವ ದೇವರು ಸಿದ್ಧಗಂಗಾ ಮಠದ ಶ್ರೀ ಡಾ| ಶಿವಕುಮಾರ ಸ್ವಾಮೀಜಿಯವರ ಗದ್ದುಗೆ, ಯಡಿ ಯೂರು ಸಿದ್ಧಲಿಂಗೇಶ್ವರ ದೇವಾಲಯ ಕೈಗಾರಿಕ ಕ್ಷೇತ್ರ ಪ್ರದೇಶ, ಎಚ್‌.ಎ.ಎಲ್‌ ಹೆಲಿಕಾಪ್ಟರ್‌ ಘಟಕ, ಪಾವಗಡದ ಸೋಲಾರ್‌ ಪಾರ್ಕ್‌ ಸಹಿತ ಧಾರ್ಮಿಕ, ಶೈಕ್ಷಣಿಕ, ಕೈಗಾರಿಕೆಯಲ್ಲಿ ಹೆಸರು ಪಡೆದಿರುವ ಕಲ್ಪತರು ನಾಡಿನಲ್ಲಿ 2023ರ ಚುನಾವಣೆ ಈಗಿನಿಂದಲೇ ರಂಗೇರಲು ಆರಂಭವಾಗಿದೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪ್ರಾಬಲ್ಯವಿರುವ ಹಳೇ ಮೈಸೂರು ಭಾಗದಲ್ಲಿ ಕಮಲ ಅರಳಿಸಲು ಯತ್ನಿಸುತ್ತಿರುವ ಬಿಜೆಪಿ ಕಲ್ಪತರು ನಾಡಿನ 11 ಕ್ಷೇತ್ರಗಳಲ್ಲಿ ಹೆಚ್ಚು ಸ್ಥಾನ ಗೆಲ್ಲಬೇಕು ಎಂದು ಕಾರ್ಯತಂತ್ರ ಆರಂಭಿಸಿದೆ.

ತುಮಕೂರು ಜಿಲ್ಲೆಯ ರಾಜಕೀಯ ಕ್ಷೇತ್ರದಲ್ಲಿ ಅನೇಕರು ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈ ಜಿಲ್ಲೆಯ ತುಮಕೂರು ವಿಧಾನಸಭಾ ಕ್ಷೇತ್ರದಿಂದ 1962ರಲ್ಲಿ ಭಾಗೀರಥಮ್ಮ ಶಾಸಕರಾಗಿದ್ದರು. ಇವರಿಗೆ ಜಿಲ್ಲೆಯ ಏಕೈಕ ಮಹಿಳಾ ಶಾಸಕಿ ಎನ್ನುವ ಹೆಗ್ಗಳಿಕೆ ಇದೆ. ಅನಂತರ ಅನೇಕ ರಾಜಕಾರಣಿಗಳು ತಮ್ಮ ಛಾಪು ಮೂಡಿಸಿದವರು ವೈ.ಕೆ.ರಾಮಯ್ಯ, ಲಕ್ಷಿನರಸಿಂಗಯ್ಯ, ಬಿ.ಸತ್ಯನಾರಾಯಣ್‌, ಟಿ.ಎಂ. ಮಂಜುನಾಥ್‌, ಎನ್‌.ಬಸವಯ್ಯ, ಸಿ.ಚನ್ನಿಗಪ್ಪ, ಟಿ.ಬಿ.ಜಯಚಂದ್ರ, ಸೊಗಡು ಎಸ್‌.ಶಿವಣ್ಣ ಪ್ರಮುಖರು.

ತುಮಕೂರು ಜಿಲ್ಲೆಯವರೇ ಆದ ಡಾ| ಜಿ. ಪರಮೇಶ್ವರ್‌ ಎರಡು ಬಾರಿ ಕೆಪಿಸಿಸಿ ಅಧ್ಯಕ್ಷರಾಗಿ, ಉಪ ಮುಖ್ಯಮಂತ್ರಿಯಾಗಿ, ಗೃಹ ಸಚಿವರಾಗಿ, ಶಿಕ್ಷಣ ಸಚಿ ವರಾಗಿ ಕೆಲಸ ಮಾಡಿದ್ದಾರೆ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಅಭ್ಯರ್ಥಿ ಸ್ಥಾನದಲ್ಲಿ ನಿಲ್ಲು ವವರೂ ಆದ ಜಿ.ಎಸ್‌.ಪರಮೇಶ್ವರ್‌, ಕಾಂಗ್ರೆಸ್‌ ಪಕ್ಷದ ಹೈಕಮಾಂಡ್‌ನ‌ಲ್ಲಿ ಉತ್ತಮ ಸಂಬಂಧ ಹೊಂದಿದವರಾಗಿದ್ದಾರೆ. ತುಮಕೂರು ಜಿಲ್ಲೆಯಲ್ಲಿ 2008ರಲ್ಲಿ ಕ್ಷೇತ್ರ ಪುನರ್‌ ವಿಂಗಡಣೆಯಾದ ಮೇಲೆ 13 ಕ್ಷೇತ್ರಗಳು 11 ಕ್ಷೇತ್ರಗಳಾದವು. ಬೆಳ್ಳಾವಿ, ಕಳ್ಳಂಬೆಳ್ಳ, ಹುಲಿಯೂರು ಕ್ಷೇತ್ರಗಳು ಮರೆ ಯಾಗಿ ತಾಲೂಕುವಾರು ಕ್ಷೇತ್ರಗಳಾಗಿದ್ದು ತುಮಕೂರು ಗ್ರಾಮಾಂತರ ಕ್ಷೇತ್ರ ನಿರ್ಮಾಣವಾಗಿತ್ತು. ಕೊರಟಗೆರೆ ಮತ್ತು ಪಾವಗಡ ಮೀಸಲು ಕ್ಷೇತ್ರಗಳಾದವು.

ತುಮಕೂರು ನಗರ
ಶೈಕ್ಷಣಿಕ ಹಾಗೂ ಧಾರ್ಮಿಕ ನಗರವೆಂದು ಹೆಸರಾಗಿರುವ ತುಮಕೂರು ವಿಧಾನಸಭಾ ಕ್ಷೇತ್ರದಲ್ಲಿ 1952ರಲ್ಲಿ ಕಾಂಗ್ರೆಸ್‌ನ ಎಂ.ವಿ.ರಾಮರಾವ್‌, 1957ರಲ್ಲಿ ಜಿ.ಎನ್‌.ಪುಟ್ಟಣ್ಣ, 1962ರಲ್ಲಿ ಜೆ.ಸಿ.ಭಾಗೀರಥಮ್ಮ ಕಾಂಗ್ರೆಸ್‌ ಶಾಸಕರಾಗಿದ್ದರು. 1983ರಿಂದ ಜೆಎಸ್‌ಪಿಯಿಂದ ಲಕ್ಷಿ¾à ನರಸಿಂಹಯ್ಯ ಎರಡು ಬಾರಿ ಗೆಲುವು ಸಾಧಿಸಿದ್ದರು. ಅನಂತರ 1989ರಲ್ಲಿ ಕಾಂಗ್ರೆಸ್‌ನಿಂದ ಎಸ್‌.ಶ‌ಫಿ ಅಹಮದ್‌ ಆಯ್ಕೆಯಾಗಿದ್ದರು. 1994ರಿಂದ ನಿರಂತರವಾಗಿ ಬಿಜೆಪಿಯಿಂದ ಮಾಜಿ ಸಚಿವ ಸೊಗಡು ಎಸ್‌. ಶಿವಣ್ಣ ನಾಲ್ಕು ಬಾರಿ ಗೆಲುವು ಸಾಧಿಸಿ ಬಿಜೆಪಿಯ ಭದ್ರಕೋಟೆ ಮಾಡಿದ್ದರು. 2013ರ ಚುನಾವಣೆಯಲ್ಲಿ ಕೆಜೆಪಿಯಿಂದ ಜಿ.ಬಿ. ಜ್ಯೋತಿ ಗಣೇಶ್‌ ಸ್ಪರ್ಧಿಸಿದ ಪರಿಣಾಮ ವೀರಶೈವ ಮತಗಳು ವಿಭಜನೆಗೊಂಡು ಶಿವಣ್ಣ ಮತ್ತು ಜಿ.ಬಿ.ಜ್ಯೋತಿಗಣೇಶ್‌ ಇಬ್ಬರು ಸೋಲು ಕಂಡರು. ಕಾಂಗ್ರೆಸ್‌ನ ಡಾ| ಎಸ್‌. ರಫೀಕ್‌ ಅಹಮದ್‌ ಗೆಲುವು ಸಾಧಿಸಿದರು. 2018ರ ಚುನಾವಣೆಯಲ್ಲಿ ಜಿ.ಬಿ ಜ್ಯೋತಿಗಣೇಶ್‌ ಗೆಲ್ಲುವ ಮೂಲಕ ಮತ್ತೆ ಬಿಜೆಪಿ ಭದ್ರಕೋಟೆ ಮಾಡಿಕೊಂಡಿದೆ.

Advertisement

ತುಮಕೂರು ಗ್ರಾಮಾಂತರ
ನಡೆದಾಡುವ ದೇವರಿರುವ ಶ್ರೀ ಕ್ಷೇತ್ರ ಸಿದ್ದಗಂಗೆ, ಗೂಳೂರು ಗಣೇಶ ಮತ್ತು ಕೈದಾಳ ಕ್ಷೇತ್ರಗಳಿರುವ ತುಮಕೂರು ಗ್ರಾಮಾಂತರ ಕ್ಷೇತ್ರ ಪುನರ್‌ವಿಂಗಡಣೆಯ ಅನಂತರ ನಡೆದ 2 ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಬಿ. ಸುರೇಶ್‌ ಗೌಡ ಗೆಲುವು ಸಾಧಿ ಸಿಕೊಂಡು ಬಂದಿದ್ದರು. ಕ್ಷೇತ್ರ ಪುನರ್‌ವಿಂಗಡಣೆಗೂ ಮೊದಲು ಬೆಳ್ಳಾವಿ ಕ್ಷೇತ್ರ ಇತ್ತು. ಈ ಕ್ಷೇತ್ರದಿಂದ 1978ರಲ್ಲಿ ಜಿಎನ್‌ಪಿಯಿಂದ ಜಿ.ಎಸ್‌.ಶಿವನಂಜಪ್ಪ, 1983ರಲ್ಲಿ ಕಾಂಗ್ರೆಸ್‌ನಿಂದ ಟಿ.ಎಚ್‌.ಹನುಮಂತರಾಯ, 1985ರಲ್ಲಿ ಜೆಎನ್‌ಪಿಯಿಂದ ಸಿ.ಎನ್‌.ಭಾಸ್ಕರಪ್ಪ, 1989ರಿಂದ 1999ರ ವರೆಗೆ ಕಾಂಗ್ರೆಸ್‌ನ ಆರ್‌.ನಾರಾಯಣ್‌ ಶಾಸಕರಾಗಿದ್ದರು. 2004ರಲ್ಲಿ ಜೆಡಿಎಸ್‌ನಿಂದ ಕೆ.ಎನ್‌.ರಾಜಣ್ಣ ಜೆಡಿಎಸ್‌ನಿಂದ ಶಾಸಕರಾದರು. ಕ್ಷೇತ್ರ ಪುನರ್‌ವಿಂಗಡಣೆಯ ಅನಂತರ ತುಮಕೂರು ಗ್ರಾಮಾಂತರ ಕ್ಷೇತ್ರದಿಂದ ಎರಡು ಬಾರಿ ಬಿಜೆಪಿಯ ಬಿ.ಸುರೇಶ್‌ ಗೌಡ ಶಾಸಕರಾದರು. 2018ರಲ್ಲಿ ಡಿ.ಸಿ.ಗೌರಿಶಂಕರ್‌ ಜೆಡಿಎಸ್‌ನಿಂದ ಗೆಲುವು ಸಾಧಿಸಿ ಶಾಸಕರಾಗಿದ್ದಾರೆ.

ಚಿಕ್ಕನಾಯಕನಹಳ್ಳಿ
ಒಮ್ಮೆ ಗೆದ್ದರೆ ಮತ್ತೆ ಗೆಲ್ಲುವುದಿಲ್ಲ ಎನ್ನುವ ಕ್ಷೇತ್ರ ಇದಾಗಿತ್ತು. ಆದರೆ ಕ್ಷೇತ್ರ ಪುನರ್‌ ವಿಂಗಡಣೆಯ ಅನಂತರ ಹುಳಿಯಾರು, ಬುಕ್ಕಾಪಟ್ಟಣ ಹೋಬಳಿಗಳು ಸೇರಿದ ಮೇಲೆ ನಡೆದ 2008 ಮತ್ತು 2013ರ 2ನೇ ಚುನಾವಣೆಯಲ್ಲೂ ಜೆಡಿಎಸ್‌ ಶಾಸಕ ಸಿ.ಬಿ. ಸುರೇಶ್‌ ಬಾಬು ಗೆಲುವು ಸಾಧಿಸಿದ್ದರು. 2018ರ ಚುನಾವಣೆಯಲ್ಲಿ ಬಿಜೆಪಿಯ ಜೆ.ಸಿ.ಮಾಧುಸ್ವಾಮಿ ಗೆಲುವು ಸಾಧಿಸಿದರು. 1952ರಲ್ಲಿ ಕಾಂಗ್ರೆಸ್‌ನಿಂದ ಸಿ.ಎಚ್‌.ಲಿಂಗದೇವರು, 1957ರಲ್ಲಿ ಪಿಎಸ್‌ಪಿಯಿಂದ ಸಿ.ಪಿ. ರಾಜಯ್ಯ ಶೆಟ್ಟಿ ಗೆಲುವು ಸಾಧಿಸಿದರು. 1972 ಮತ್ತು 1978ರಲ್ಲಿ ಎನ್‌.ಬಸವಯ್ಯ ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿದ್ದರು. ಒಂದು ಕಾಲದಲ್ಲಿ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಈ ಕ್ಷೇತ್ರದಲ್ಲಿ 1983ರಲ್ಲಿ ರಾಜ್ಯವೇ ಗಮನ ಸೆಳೆಯುವಂತೆ ಬಿಜೆಪಿ ಅಭ್ಯರ್ಥಿಯಾಗಿದ್ದ ಎಸ್‌.ಜಿ. ರಾಮಲಿಂಗಯ್ಯ ಗೆಲವು ಸಾಧಿಸಿದ್ದರು. ಅನಂತರ ಸಂಯುಕ್ತ ಜನತಾದಳ, ಜೆಡಿಎಸ್‌ ಹೆಚ್ಚು ಅಧಿಕಾರ ಹಿಡಿದಿವೆ. 1994ರಲ್ಲಿ ಬಂಗಾರಪ್ಪ ಅವರ ಕೆಸಿಪಿಯಿಂದಎನ್‌. ಬಸವಯ್ಯ ಗೆಲುವು ಸಾಧಿಸಿದ್ದರು.

ಗುಬ್ಬಿ
ಈ ವಿಧಾನಸಭಾ ಕ್ಷೇತ್ರದಲ್ಲಿ ಮೊದಲಿನಿಂದಲೂ ಕಾಂಗ್ರೆಸ್‌ ಪ್ರಾಬಲ್ಯ ಸಾಧಿ ಸಿ ಕೊಂಡು ಬರು ತ್ತಿ ದೆ. 1952ರಿಂದ 1989ರ ವರೆಗೆ ಎರಡು  ಬಾರಿ ಬಿಟ್ಟು ಉಳಿದಂತೆ ಕಾಂಗ್ರೆಸ್‌ ಗೆದ್ದುಕೊಂಡು ಬಂದಿದೆ. 1962 ವಿ.ಎಂ ದೇವ್‌ ಸ್ವತಂತ್ರ ಅಭ್ಯರ್ಥಿಯಾಗಿ, 1983ರಲ್ಲಿ ಎಸ್‌. ರೇವಣ್ಣ ಜನತಾ ಪಕ್ಷದಿಂದ ಗೆಲುವು ಸಾಧಿಸಿದ್ದಾರೆ. 1994ರಲ್ಲಿ ಸ್ವತಂತ್ರ ಅಭ್ಯರ್ಥಿ ಜಿ.ಎಸ್‌. ಶಿವನಂಜಪ್ಪ, 1999ರಲ್ಲಿ ಜೆಡಿಎಸ್‌ನಿಂದ ಎನ್‌. ವೀರಣ್ಣ ಗೌಡ, 2004ರಲ್ಲಿ ಎಸ್‌.ಆರ್‌. ಶ್ರೀನಿವಾಸ್‌ ಸ್ವತಂತ್ರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿ ಅನಂತರ ಜೆಡಿಎಸ್‌ ಸೇರಿ ನಿರಂತರ ನಾಲ್ಕು ಬಾರಿ ಗೆಲುವು ಸಾಧಿಸಿದ್ದು ಈಗ ಜೆಡಿಎಸ್‌ ತೊರೆದಿದ್ದಾರೆ.

ತಿಪಟೂರು
ಕಲ್ಪತರು ನಾಡು ಎಂದೇ ಹೆಸರಾಗಿರುವ ತಿಪಟೂರು ಕೊಬ್ಬರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆದಿದೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ ನಿರಂತರ ಗೆಲುವು ಸಾಧಿಸಿದ್ದರೂ ಆಗಿಂದಾಗ್ಗೆ ಇಲ್ಲಿ ಪಕ್ಷಗಳನ್ನು ಮತದಾರ ಬದಲಿಸಿದ್ದಾನೆ. 1952ರಲ್ಲಿ ಕಾಂಗ್ರೆಸ್‌ನ ಟಿ.ಎಚ್‌.ತಿಮ್ಮೇಗೌಡ ಶಾಸಕರಾಗಿದ್ದರು. ಅನಂತರದ ದಿನಗಳಲ್ಲಿ ಎನ್‌ಸಿಪಿ ಮತ್ತು ಕಾಂಗ್ರೆಸ್‌ ಗೆಲುವು ಸಾಧಿಸಿವೆ. ಕಾಂಗ್ರೆಸ್‌ನಿಂದ ಟಿ.ಎಂ ಮಂಜುನಾಥ್‌ ಹೆಚ್ಚು ಗೆಲುವು ಸಾಧಿಸಿದ್ದಾರೆ. ಈ ಕ್ಷೇತ್ರದಿಂದ 1994ರಲ್ಲಿ ಬಿ.ನಂಜಾಮರಿ ಬಿಜೆಪಿಯಿಂದ ಗೆಲುವು ಸಾಧಿಸಿದ್ದರು. ಅನಂತರ 2004ರಲ್ಲಿ ಜೆಡಿಎಸ್‌ನಿಂದ ಗೆಲುವು ಸಾಧಿಸಿದ್ದರು. 2008ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯ ಬಿ.ಸಿ. ನಾಗೇಶ್‌ ಗೆಲುವು ಸಾಧಿಸಿದರು. ಮತ್ತೆ 2013ರಲ್ಲಿ ಕಾಂಗ್ರೆಸ್‌ನ ಕೆ. ಷಡಕ್ಷರಿ ಗೆಲುವು ಸಾಧಿಸಿದರು. 2018ರಲ್ಲಿ ಮತ್ತೆ ಬಿಜೆಪಿಯ ಬಿ.ಸಿ ನಾಗೇಶ್‌ ಆಯ್ಕೆಯಾದರು.

ಪಾವಗಡ
ಮೀಸಲು ಕ್ಷೇತ್ರ ವಾಗಿರುವ ಪಾವಗಡ ಕಾಂಗ್ರೆಸ್‌ನ ಭದ್ರ ಕೋಟೆ. 1952ರಲ್ಲಿ ಸಿ.ಟಿ.ಹನುಮಂತರಾಯರಿಂದ ಹಿಡಿದು ಈಗಿನ ವೆಂಕಟರಮಣಪ್ಪರವರ ವರೆಗೆ 10 ಬಾರಿ ಕಾಂಗ್ರೆಸ್‌ ಈ ಕ್ಷೇತ್ರದಲ್ಲಿ ವಿಜಯ ಪತಾಕೆ ಹಾರಿಸಿದರೆ ಜೆಡಿಎಸ್‌ ನಾಲ್ಕು ಬಾರಿ, ಒಂದು ಬಾರಿ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಗೆಲುವು ಸಾಧಿಸಿದ್ದುದು ವಿಶೇಷ. ನಕ್ಸಲ್‌ ಪೀಡಿತ ಪ್ರದೇಶವೆಂದೇ ಹೆಸರು ಪಡೆದಿದೆ. ಜತೆಗೆ ಬರಗಾಲ, ಫ್ಲೋರೈಡ್‌ಯುಕ್ತ ನೀರನ್ನು ಉಪಯೋಗಿಸಿ ಈ ಭಾಗದ ಜನರು ಸಂಕಷ್ಟ ಅನುಭವಿಸಿದ್ದಾರೆ. ಉದ್ಯೋಗವಿಲ್ಲದೆ ಯುವಕರು ನಗರ ಪ್ರದೇಶಗಳತ್ತ ವಲಸೆ ಹೋಗುತ್ತಿರುವುದು ಸಾಮಾನ್ಯ. ಯಾವುದೇ ಜಲಾಶಯವಿಲ್ಲದೆ ಇರುವ ಈ ಕ್ಷೇತ್ರದಲ್ಲಿ ಕುಡಿಯುವ ನೀರಿನ ತಾತ್ವಾರ ನಿರಂತರ.

ಶಿರಾ
1952ರಲ್ಲಿ ಶಿರಾ ಕ್ಷೇತ್ರದಿಂದ ಬಿ.ಎನ್‌ ರಾಮೇಗೌಡ ಸ್ವತಂತ್ರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದರು. ಅನಂತರ ಕಾಂಗ್ರೆಸ್‌ ಭದ್ರಕೋಟೆಯಾಯಿತು. 8 ಬಾರಿ ಕಾಂಗ್ರೆಸ್‌, ಎರಡು ಬಾರಿ ಸ್ವತಂತ್ರ ಅಭ್ಯರ್ಥಿ, 1994ರಿಂದ ಮೂರು ಬಾರಿ ಜೆಡಿಎಸ್‌ನ ಬಿ.ಸತ್ಯನಾರಾಯಣ್‌ ಗೆಲುವು ಸಾಧಿಸಿದ್ದರು. ಕಳ್ಳಂಬೆಳ್ಳ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿಕೊಂಡು ಬಂದಿದ್ದ ಕಾಂಗ್ರೆಸ್‌ನ ಹಿರಿಯ ಮುಖಂಡ ಟಿ.ಬಿ.ಜಯಚಂದ್ರ ಕ್ಷೇತ್ರ ಪುನರ್‌ ವಿಂಗಡಣೆಯಾದ ಮೇಲೆ ಶಿರಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿಕೊಂಡು ಬಂದರು. 2018ರ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಗೆಲುವು ಸಾಧಿಸಿದ್ದ ಬಿ. ಸತ್ಯನಾರಾಯಣ್‌ ಅಕಾಲಿಕ ಮರಣ ಹಿನ್ನಲೆಯಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯ ಸಿ.ಎಂ.ರಾಜೇಶ್‌ ಗೌಡ ಗೆಲುವು ಸಾಧಿಸಿ ಬಿಜೆಪಿಯ ಖಾತೆ ತೆರೆದಿದ್ದಾರೆ.

ಕೊರಟಗೆರೆ
ಕಾಂಗ್ರೆಸ್‌ನ ಭದ್ರಕೋಟೆಯಾಗಿರುವ ಇಲ್ಲಿ 7 ಬಾರಿ ಕಾಂಗ್ರೆಸ್‌ ಪಕ್ಷ ಗೆಲುವು ಸಾಧಿಸಿದೆ. 1952ರಲ್ಲಿ ಆರ್‌.ಚನ್ನಿ ಗರಾಯಪ್ಪ ಎರಡು ಬಾರಿ 1983ರಿಂದ ಎರಡು ಬಾರಿ ಸಿ.ವೀರಣ್ಣ, 1994ರಿಂದ 2004ರ ವರೆಗೆ ಸಿ.ಚನ್ನಿಗಪ್ಪ ಜೆಡಿಎಸ್‌ನಿಂದ ಮೂರು ಬಾರಿ ಗೆಲುವು ಸಾಧಿಸಿ ಸಚಿವರೂ ಆಗಿದ್ದರು. ಕ್ಷೇತ್ರ ಪನರ್‌ ವಿಂಗಡಣೆಯಾದ ಮೇಲೆ ಡಾ| ಜಿ.ಪರಮೇಶ್ವರ್‌ ಗೆಲುವು ಸಾಧಿ ಸಿದರು. ರಾಜ್ಯದ ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಕ್ಷೇತ್ರದಲ್ಲಿ ಬಿಂಬಿತವಾಗಿದ್ದ 2013ರ ಚುನಾವಣೆಯಲ್ಲಿ ಡಾ| ಜಿ.ಪರಮೇಶ್ವರ್‌ ಸೋಲು ಕಂಡರು. ಮತ್ತೆ 2018ರಲ್ಲಿ ಡಾ| ಜಿ.ಪರಮೇಶ್ವರ್‌ ಗೆಲುವು ಸಾಧಿಸಿದರು. ಈ ಕ್ಷೇತ್ರದಲ್ಲಿ ಬಿಜೆಪಿ ತನ್ನ ಪ್ರಾಬಲ್ಯ ಸಾಧಿಸಲು ಒತ್ತು ನೀಡುತ್ತಿದೆ.

ಕುಣಿಗಲ್‌
ಕುಣಿಗಲ್‌ ಕ್ಷೇತ್ರದಿಂದ 1952ರಲ್ಲಿ ಟಿ.ಎನ್‌.ಮೂಡಲಗಿರಿಗೌಡ ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿದ್ದರು. 1998ರ ವರೆಗೆ ನಿರಂತರ ಕಾಂಗ್ರೆಸ್‌ ಗೆಲುವು ಸಾಧಿಸಿದೆ. 1983ರಿಂದ ಜನತಾ ಪಕ್ಷಕ್ಕೆ ಒಲವು ತೋರಿತು. ನೀರಾವರಿ ಹೋರಾಟಗಾರ ವೈ.ಕೆ. ರಾಮಯ್ಯ ನಿರಂತರ ಗೆಲುವು ಸಾಧಿಸಿದರು. ಈ ಕ್ಷೇತ್ರದಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಹೆಚ್ಚು ಗೆಲವು ಸಾಧಿಸಿವೆ. ವೈ.ಕೆ. ರಾಮಯ್ಯ ಜನತಾ ಪಕ್ಷದಿಂದ ಹೆಚ್ಚು ಗುರುತಿಸಿಕೊಂಡಿದ್ದರು. ಅನಂತರ ಜೆಡಿಎಸ್‌ನ ಡಿ. ನಾಗರಾಜಯ್ಯ ಶಾಸಕರಾಗಿದ್ದಾರೆ. ಬಿಜೆಪಿಯ ಡಿ.ಕೃಷ್ಣಕುಮಾರ್‌ ಮತ್ತು ಡಿ.ನಾಗರಾಜಯ್ಯ ನವರ ಸಹೋದರ ಕಲಹದಲ್ಲಿ ಕಾಂಗ್ರೆಸ್‌ನ ಬಿ.ವಿ ರಾಮಸ್ವಾಮಿಗೌಡ ಶಾಸಕರಾದರು. ಈಗ ಕಾಂಗ್ರೆಸ್‌ನ ಡಾ| ಎಚ್‌.ಡಿ.ರಂಗನಾಥ್‌ ಶಾಸಕರಾಗಿದ್ದಾರೆ. ಸಹೋದರರ ರಾಜಕೀಯ ಕಲಹದಲ್ಲಿ ಮೂರನೆಯವರಿಗೆ ಹೆಚ್ಚು ಲಾಭ ಆಗುತ್ತಿದೆ.

ತುರುವೇಕೆರೆ
ರಾಜಕೀಯವಾಗಿ ಪ್ರಬಲವಾಗಿರುವ ತುರುವೇಕೆರೆ ವಿಧಾನಸಭಾ ಕ್ಷೇತ್ರವೂ ಒಂದು ಕಾಲದಲ್ಲಿ ಕಾಂಗ್ರೆಸ್‌ ಭದ್ರಕೋಟೆ. 1952ರಲ್ಲಿ ಪಿಎಸ್‌ಪಿಯಿಂದ ಬಿ.ಹುಚ್ಚೇಗೌಡ ಶಾಸಕರಾಗಿದ್ದರು. 1957ರಲ್ಲಿ ಕಾಂಗ್ರೆಸ್‌ನ ಟಿ.ಸುಬ್ರಹ್ಮಣ್ಯಂ ಶಾಸಕರಾದರು. ಅನಂತರ 1985ರವರೆಗೆ ಕಾಂಗ್ರೆಸ್‌ ಶಾಸಕರಾಗಿದ್ದರು. ಬಳಿಕ ಈ ಜನತಾ ಪಕ್ಷ ಮತ್ತು ಜೆಡಿಎಸ್‌ನ ತೆಕ್ಕೆಗೆ ಬಂದಿತ್ತು. 1999ರಲ್ಲಿ ಬಿಜೆಪಿಯಿಂದ ಎಂ.ಡಿ. ಲಕ್ಷಿ¾à ನಾರಾಯಣ್‌ ಗೆಲುವು ಸಾಧಿಸಿದ್ದರು. ಬಳಿಕ ಈ ಕ್ಷೇತ್ರ ಜೆಡಿಎಸ್‌ನ ಭದ್ರ ಕೋಟೆಯಾಗಿತು. 2008ರಲ್ಲಿ ನಟ ಜಗ್ಗೇಶ್‌ ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿ ಆಪರೇಶನ್‌ ಕಮಲದ ಮೂಲಕ ಬಿಜೆಪಿ ಸೇರಿದರು. ಅನಂತರ ನಡೆದ ಉಪಚುನಾವಣೆಯಲ್ಲಿ ಜೆಡಿಎಸ್‌ನ ಎಂ.ಟಿ. ಕೃಷ್ಣಪ್ಪ ಶಾಸಕರಾದರು. ಅಲ್ಲಿಂದ ಇಲ್ಲಿಯವರೆಗೆ ನಿರಂತರವಾಗಿ ಎಂ.ಟಿ. ಕೃಷ್ಣಪ್ಪ ಶಾಸಕರಾದರು. 2018ರಲ್ಲಿ ನಡೆದ ಚುನಾವಣೆಯಲ್ಲಿ ಮತ್ತೆ ಕಮಲ ಅರಳಿ ಮಸಾಲೆ ಜಯರಾಮ್‌ ಈಗ ಶಾಸಕರಾಗಿದ್ದಾರೆ.

ಮಧುಗಿರಿ
ಏಕಶಿಲಾ ಬೆಟ್ಟದ ಮೂಲಕ ಪ್ರಸಿದ್ಧಿ ಪಡೆದಿರುವ ಮಧುಗಿರಿ ವಿಧಾನಸಭಾ ಕ್ಷೇತ್ರ ರಾಜಕೀಯವಾಗಿ ತನ್ನದೇ ಆದ ಛಾಪು ಮೂಡಿಸಿಕೊಂಡು ರಾಜ್ಯಮಟ್ಟದಲ್ಲಿ ಸುದ್ದಿಯಾಗಿದೆ. 1952ರಲ್ಲಿ ಈ ಕ್ಷೇತ್ರದಿಂದ ಆರ್‌.ಚನ್ನಿಗರಾಯಪ್ಪ ಗೆಲುವು ಸಾಧಿಸಿದ್ದರು. ಮೀಸಲು ಕ್ಷೇತ್ರವಾಗಿದ್ದ ಹಿನ್ನೆಲೆ 1998ರಲ್ಲಿ ಗಂಗಹನುಮಯ್ಯ, ಅನಂತರ ಈ ಕ್ಷೇತ್ರದಿಂದ 1998ರಿಂದ ಡಾ| ಜಿ. ಪರಮೇಶ್ವರ್‌ ಮೂರು ಬಾರಿ ಗೆಲುವು ಸಾಧಿಸಿ ಸಚಿವರಾಗಿ ರಾಜ್ಯದ ಗಮನ ಸೆಳೆದಿದ್ದರು. 2008ರಲ್ಲಿ ಸಾಮಾನ್ಯ ಕ್ಷೇತ್ರವಾದ ಮೇಲೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಸಚಿವ ಸಿ. ಚನ್ನಿಗಪ್ಪ ಪುತ್ರ ಡಿ.ಸಿ. ಗೌರಿಶಂಕರ್‌ ಈ ಕ್ಷೇತ್ರದಿಂದ ಗೆಲುವು ಸಾಧಿಸಿ ಅನಂತರ ಆಪರೇಶನ್‌ ಕಮಲದ ಮೂಲಕ ಬಿಜೆಪಿಗೆ ಹಾರಿದ ಪರಿಣಾಮ ಉಪಚುನಾವಣೆ ನಡೆದು ಈ ಕ್ಷೇತ್ರದಿಂದ ದೇವೇಗೌಡರ ಕುಟುಂಬದ ಅನಿತಾ ಕುಮಾರಸ್ವಾಮಿ ಶಾಸಕಿಯಾಗಿ ರಾಜ್ಯದ ಗಮನ ಸೆಳೆದರು. 2013ರ ಚುನಾವಣೆಯಲ್ಲಿ ರಾಜ್ಯ ಅಪೆಕ್ಸ್‌ ಬ್ಯಾಕ್‌ ಮತ್ತು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಕೆ.ಎನ್‌. ರಾಜಣ್ಣ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದರು. 2018ರ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ವೀರಭದ್ರಯ್ಯ ಗೆಲುವು ಸಾಧಿಸಿದ್ದರು.

-ಚಿ.ನಿ. ಪುರುಷೋತ್ತಮ್‌

Advertisement

Udayavani is now on Telegram. Click here to join our channel and stay updated with the latest news.

Next