Advertisement

“ಮಂಗಳೂರು ನಗರಕ್ಕೆ ನೀರಿನ ಸಮಸ್ಯೆಯಾಗದು’

05:04 AM Jan 10, 2019 | |

ಮಂಗಳೂರು: ತುಂಬೆಯ ಕಿಂಡಿ ಅಣೆಕಟ್ಟಿನಲ್ಲಿ ಪ್ರಸ್ತುತ 6 ಮೀ. ಎತ್ತರಕ್ಕೆ ಹಾಗೂ ಎಎಂಆರ್‌ ಡ್ಯಾಮ್‌ನಲ್ಲಿ 14.25 ದಶಲಕ್ಷ ಕ್ಯೂಬಿಕ್‌ ಮೀ. ನೀರು ಸಂಗ್ರಹವಿದ್ದು, ಮುಂದಿನ 150 ದಿನಗಳ ವರೆಗೆ ಉಪಯೋಗಿಸಬಹುದಾಗಿದೆ. ಹೀಗಾಗಿ ಈ ಬಾರಿ ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆಯಿಲ್ಲ ಎಂದು ಮೇಯರ್‌ ಭಾಸ್ಕರ್‌ ಕೆ. ಹೇಳಿದ್ದಾರೆ. ತುಂಬೆಯ ಕಿಂಡಿ ಅಣೆಕಟ್ಟಿನ ಬಳಿ ಜನಪ್ರತಿನಿಧಿಗಳು, ಅಧಿಕಾರಿಗಳ ಜತೆ ಬುಧವಾರ ಗಂಗಾ ಪೂಜೆ ನೆರವೇರಿಸಿ ಹಾಗೂ ನೇತ್ರಾವತಿ ನದಿಗೆ ಬಾಗಿನ ಅರ್ಪಿಸಿ ಅವರು ಮಾತನಾಡಿದರು.

Advertisement

ತುಂಬೆಯಲ್ಲಿ 50 ದಿನಗಳಿಗೆ (6 ಮೀ.) ಹಾಗೂ ಎಎಂಆರ್‌ ಡ್ಯಾಮ್‌ನಲ್ಲಿ 100 ದಿನಗಳ ಪೂರೈಕೆಗೆ (14.25 ಎಂಸಿಎಂ) ನೀರು ಸಂಗ್ರಹಗೊಂಡಿದೆ. ಎಎಂಆರ್‌ ಅಣೆಕಟ್ಟಿನಲ್ಲಿ ಗರಿಷ್ಠ ಪ್ರಮಾಣದಲ್ಲಿ ಸಂಗ್ರಹಣೆ ಮಾಡಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಪ್ರಸ್ತುತ ನೇತ್ರಾವತಿ ನದಿಯಲ್ಲಿ ಸುಮಾರು 20 ಕ್ಯೂಮೆಕ್‌ (1 ಕ್ಯೂಮೆಕ್‌=1 ಸೆಕೆಂಡ್‌ಗೆ 1 ಕ್ಯೂಬಿಕ್‌ ಮೀ. ಹರಿವು) ನಷ್ಟು ನೀರಿನ ಒಳಹರಿವು ಇದ್ದು, ಬೇಸಗೆಯಲ್ಲಿ ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ಬರುವುದಿಲ್ಲ. ಸಾರ್ವ ಜನಿಕರು ನೀರು ಪೋಲು ಮಾಡದೆ ಮಿತವಾಗಿ ಬಳಸಬೇಕು ಎಂದು ಅವರು ಹೇಳಿದರು.

ಮಾಜಿ ಸಚಿವ ಬಿ. ರಮಾನಾಥ ರೈ ಮಾತನಾಡಿ, ಪ್ರಸ್ತುತ ಅಣೆಕಟ್ಟಿನಲ್ಲಿ ಒಳಹರಿವು ಹೆಚ್ಚಾಗಿದೆ. ಇನ್ನೂ ಒಂದು ಮೀ.ನಷ್ಟು ನೀರು ಸಂಗ್ರಹಿಸುವ ಅವಕಾಶವೂ ಇದೆ. ಈ ಬಾರಿ ಕಳ್ಳಿಗೆ ಗ್ರಾಮಕ್ಕೂ ನೀರು ಒದಗಿಸುವ ವ್ಯವಸ್ಥೆ ಮಾಡಲಾಗಿದೆ ಎಂದರು. ವಿಧಾನ ಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ ಮಾತನಾಡಿ, ಉಪ್ಪು ನೀರು ಶುದ್ಧೀಕರಣ ಘಟಕ ಆರಂಭಿಸುವ ಬದಲಾಗಿ ತುಂಬೆ ಅಣೆಕಟ್ಟಿನಲ್ಲಿ ಮೂಲ ಸೌಲಭ್ಯ ಹೆಚ್ಚಿಸಿ ಇಲ್ಲಿಯೇ ಹೆಚ್ಚಿನ ನೀರು ಸಂಗ್ರಹಿಸುವ ವ್ಯವಸ್ಥೆ ಮಾಡಬಹುದು ಎಂದರು. ಮುಖ್ಯ ಸಚೇತಕ ಶಶಿಧರ ಹೆಗ್ಡೆ,ವಿಪಕ್ಷ ನಾಯಕ ಪ್ರೇಮಾನಂದ ಶೆಟ್ಟಿ, ಆಯುಕ್ತ ಮೊಹಮ್ಮದ್‌ ನಝೀರ್‌, ಸ್ಥಾಯೀ ಸಮಿತಿ ಅಧ್ಯಕ್ಷರಾದ ನವೀನ್‌ ಡಿ’ಸೋಜಾ, ಪ್ರವೀಣ್‌ಚಂದ್ರ ಆಳ್ವ, ಪ್ರಕಾಶ್‌ಚಂದ್ರ ಶೆಟ್ಟಿ, ಲತಾ ಸಾಲ್ಯಾನ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next