ಸಾಗರ: ತಾಲೂಕಿನ ತುಮರಿ ಗ್ರಾಮ ಪಂಚಾಯ್ತಿಗೆ ಖಾಯಂ ಪಿಡಿಓ ನೇಮಕ ಮಾಡದ ಕ್ರಮವನ್ನು ಗ್ರಾಮ ಪಂಚಾಯ್ತಿ ಅಧ್ಯಕ್ಷರು ಮತ್ತು ಸದಸ್ಯರು ಖಂಡಿಸಿದ್ದಾರೆ. ಬುಧವಾರ ಈ ಸಂಬಂಧ ಸಭೆ ನಡೆಸಿದ ಪಂಚಾಯ್ತಿ ಸದಸ್ಯರು ಮುಂದಿನ ಒಂದು ವಾರದೊಳಗೆ ಖಾಯಂ ಪಿಡಿಓ ನೇಮಕ ಮಾಡದೆ ಹೋದಲ್ಲಿ ಸಾಗರದ ತಾಲೂಕು ಪಂಚಾಯ್ತಿ ಕಚೇರಿ ಎದುರು ಪ್ರತಿಭಟನೆ ಮಾಡುವ ಎಚ್ಚರಿಕೆಯನ್ನು ನೀಡಿದ್ದಾರೆ.
ಇದೀಗ ಎಲ್ಲ ಆಡಳಿತಕ್ಕೂ ಬಯೋಮೆಟ್ರಿಕ್ ಕಡ್ಡಾಯವಾಗಿರುವುದರಿಂದ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಸಹಿ ಮಾಡದೆ ಯಾವುದೇ ಕೆಲಸವಾಗುವುದಿಲ್ಲ. ಉದ್ಯೋಗ ಖಾತ್ರಿ ಸೇರಿದಂತೆ ಯಾವುದೇ ಬಿಲ್‌ಗಳು ಮಂಜೂರು ಆಗುತ್ತಿಲ್ಲ. ದೃಢೀಕರಣ, ನಿರಾಪೇಕ್ಷಣಾ ಪತ್ರ, ಮಳೆಹಾನಿ ಹೀಗೆ ಯಾವುದೇ ಕೆಲಸ ಆಗುತ್ತಿಲ್ಲ. ಪಂಚಾಯ್ತಿ ಅಭಿವೃದ್ಧಿ ನೇಮಕ ಮಾಡಲು ಗ್ರಾಮಪಂಚಾಯ್ತಿಯಿಂದ ಸಾಕಷ್ಟು ಬಾರಿ ಮನವಿ ಸಲ್ಲಿಸಲಾಗಿದೆ. ಆದರೆ ತಾಲೂಕು ಪಂಚಾಯ್ತಿ ಆಡಳಿತಾಧಿಕಾರಿಗಳಾಗಲಿ, ಕಾರ್ಯನಿರ್ವಾಹಣಾಧಿಕಾರಿಗಳಾಗಲಿ ಇದರ ಬಗ್ಗೆ ಗಮನ ಹರಿಸಿಲ್ಲ. ಪರಿಸ್ಥಿತಿ ಹೀಗೆ ಮುಂದುವರೆದರೆ ಪಂಚಾಯ್ತಿಗೆ ಬೀಗ ಜಡಿದು ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಪಂಚಾಯ್ತಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯ್ತಿ ಸದಸ್ಯ ಶ್ರೀಧರ ಚುಟ್ಟಿಕೆರೆ ಮಾತನಾಡಿ, ತುಮರಿ ಗ್ರಾಮ ಪಂಚಾಯ್ತಿಯಲ್ಲಿ ಕಳೆದ ೨೫ ದಿನಗಳಿಂದ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಇಲ್ಲ. ಪಿಡಿಓ ಇಲ್ಲದೆ ಇರುವುದರಿಂದ ಪಂಚಾಯ್ತಿಯಲ್ಲಿ ಸಾರ್ವಜನಿಕರ ಯಾವುದೇ ಕೆಲಸ ನಡೆಯುತ್ತಿಲ್ಲ. ಈಗಾಗಲೇ ಪಿಡಿಓ ಇಲ್ಲದೆ ಇರುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾಗ್ಯೂ ಅವರು ಸ್ಪಂದಿಸುತ್ತಿಲ್ಲ. ಪಂಚಾಯ್ತಿ ಒತ್ತಡಕ್ಕೆ ಮಣಿದು ತಾತ್ಕಾಲಿಕವಾಗಿ ಪಿಡಿಓ ನೇಮಕ ಮಾಡುತ್ತಿದ್ದಾರೆ. ಆದರೆ ಅವರು ಒಂದೆರಡು ದಿನ ಬಂದು ಹೋಗುವುದರಿಂದ ಕೆಲಸ ಆಗುತ್ತಿಲ್ಲ. ಇದೇ ರೀತಿ ಮುಂದುವರೆದರೆ ೧೧ ಸದಸ್ಯರು ತಾಲೂಕು ಪಂಚಾಯ್ತಿ ಎದುರು ಧರಣಿ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಇನ್ನೋರ್ವ ಸದಸ್ಯ ಕೆ.ಆರ್.ಶ್ರೀಧರ ಮೂರ್ತಿ ಮಾತನಾಡಿ, ಪಂಚಾಯ್ತಿ ವ್ಯಾಪ್ತಿಯಲ್ಲಿ ಮಳೆ ಹಿನ್ನೆಲೆಯಲ್ಲಿ ಸಾಕಷ್ಟು ಅನಾಹುತವಾಗಿದೆ. ತೋಟದ ಮೇಲೆ ಧರೆ ಕುಸಿದಿದೆ. ಮನೆ ಕುಸಿದಿದೆ. ಕೊಳೆರೋಗ ಬಂದಿದೆ. ಇದನ್ನು ಪಟ್ಟಿ ಮಾಡಲು ಸಹ ಪಿಡಿಓ ಇಲ್ಲ. ಜನಸಾಮಾನ್ಯರು ಪಿಡಿಓ ಇಲ್ಲದೆ ಇರುವುದರಿಂದ ಪಂಚಾಯ್ತಿಗೆ ಬಂದು ವಾಪಾಸ್ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಅಧಿಕಾರಿಗಳು ಪಂಚಾಯ್ತಿ ಸದಸ್ಯರ ಮಾತಿಗೆ ಬೆಲೆ ಕೊಡುತ್ತಿಲ್ಲ. ಖಾಯಂ ಪಿಡಿಓ ನೇಮಕ ಮಾಡುವ ಜೊತೆಗೆ ಅವರು ಇಲ್ಲಿಯೆ ವಾಸ್ತವ್ಯ ಇರುವಂತೆ ನೋಡಿಕೊಳ್ಳಬೇಕು. ತಕ್ಷಣ ಪಿಡಿಓ ನೇಮಕ ಮಾಡದೆ ಹೋದಲ್ಲಿ ಗ್ರಾಮಸ್ಥರ ಜೊತೆ ಸೇರಿ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಶ್ರೀದೇವಿ ರಾಮಚಂದ್ರ, ಜಿ.ಪಿ.ಶ್ರೀನಿವಾಸ್, ನಾಗರಾಜ್ ಮುತ್ತತ್ತಿ ಇನ್ನಿತರರು ಹಾಜರಿದ್ದರು.