ತುಮಕೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿರುದ್ಧ ಅಸಮಾಧಾನದ ಹೊಗೆ ದಿನೇದಿನೆ ತೀವ್ರಗೊಳ್ಳುತ್ತಿದ್ದು ಪಕ್ಷದ ಪದಾಧಿಕಾರಿಗಳ ನೇಮಕ ವಿಚಾರದಲ್ಲಿ ಮುನಿಸಿಕೊಂಡಿರುವ ಮಾಜಿ ಸಚಿವ ಸೊಗಡು ಶಿವಣ್ಣ ನೇತೃತ್ವದಲ್ಲಿ ಬಿಜೆಪಿಯ ಲಿಂಗಾಯತ ಸಮುದಾಯದ ಎರಡನೇ ಹಂತದ ಅತೃಪ್ತ ನಾಯಕರ ಸಭೆ ನಡೆಸಿ ಮತ್ತೆ ಹೈಕಮಾಂಡ್‌ಗೆ ದೂರು ನೀಡಲು ತೀರ್ಮಾನಿಸಿದ್ದಾರೆ.
ನಗರದ ಸಮೀಪದ ಊರುಕೆರೆಯ ಸೊಗಡು ಶಿವಣ್ಣನವರ ರತ್ನ ಮಹಲ್‌ನಲ್ಲಿ ಶುಕ್ರವಾರ ಬಿಜೆಪಿಯ ಲಿಂಗಾಯತ ಸಮುದಾಯದ ಎರಡನೇ ಹಂತದ ನಾಯಕರ ಸಭೆ ನಡೆಸಿದರು.
ಬಿಜೆಪಿ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಿರುವ ಬಗ್ಗೆ ಅದರಲ್ಲೂ ವೀರಶೈವ ಸಮುದಾಯದ ಎರಡನೇ ಹಂತದ ನಾಯಕರನ್ನು ಯಡಿಯೂರಪ್ಪ ಕಡೆಗಣಿಸಿದ್ದಾರೆಂದು ಸಭೆಯಲ್ಲಿ ಮುಖಂಡರು ಬಹಿರಂಗಪಡಿಸಿದರೆಂದು ತಿಳಿದು ಬಂದಿದೆ.ಪಕ್ಷದಲ್ಲಿ ಉಂಟಾಗಿರುವ ಗೊಂದಲವನ್ನು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಬಗೆ ಹರಿಸುವಂತೆ ಸೂಚಿಸಿದ್ದಾರೆ. ಆದರೆ ರಾಜಾÂಧ್ಯಕ್ಷರು ಯಾವುದೇ ಗಮನ ಹರಿಸಿಲ್ಲ. ಈ ಬಗ್ಗೆ ಮತ್ತೆ ಹೈಕಮಾಂಡ್‌ಗೆ ದೂರು ನೀಡಲು ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ತಿಳಿದು ಬಂದಿದೆ.
ಮಾಜಿ ಸಚಿವ ರವೀಂದ್ರನಾಥ್, ಡಾ. ಶಿವಯೋಗಿ ಸ್ವಾಮಿ, ವಿಧಾನ ಪರಿಷತ್ ಮಾಜಿ ಸದಸ್ಯ ಸೋಮಣ್ಣ ಬೇವಿನಮರದ, ಮುಖಂಡರಾದ ಎಂ.ಬಿ ನಂದೀಶ್ ಸೇರಿ ಬೆಂಗಳೂರು, ದಾವಣಗೆರೆ, ಚಿತ್ರದುರ್ಗ, ಮೈಸೂರು, ಚಾಮರಾಜನಗರ, ಹಾವೇರಿ ಸೇರಿ 12 ಜಿಲ್ಲೆಯ ಮುಖಂಡರು ಭಾಗವಹಿಸಿದ್ದರು.
ಮೂಲ ಬಿಜೆಪಿ ಕಾರ್ಯಕರ್ತರಿಗೆ ಅನ್ಯಾಯ
ತುಮಕೂರು: ಬಿಜೆಪಿ ಮೂಲ ಕಾರ್ಯಕರ್ತರಿಗೆ ರಾಜಾÂಧ್ಯಕ್ಷರಾದ ಬಿ. ಎಸ್. ಯಡಿಯೂರಪ್ಪ ಅವರಿಂದ ಅನ್ಯಾಯವಾಗಿದೆ ಎಂದು ಮಾಜಿ ಸಚಿವ ಸೊಗಡು ಎಸ್. ಶಿವಣ್ಣ ತಿಳಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಮ್ಮ ನಾಯಕ ಯಡಿಯೂರಪ್ಪ ಪಕ್ಷಕ್ಕಾಗಿ ದುಡಿದವರಿಗೆ ಸೂಕ್ತ ಸ್ಥಾನ-ಮಾನ ನೀಡಿಲ್ಲ. ಇದರಿಂದ ಬಿಜೆಪಿಯ ಮೂಲ ಕಾರ್ಯಕರ್ತರಿಗೆ ಅನ್ಯಾಯವಾಗಿದೆ ಎಂದು ಹೇಳಿದರು. ಹೈಕಮಾಂಡ್ ಸಲಹೆಯಂತೆ ಕೆಲವು ಜಿಲ್ಲಾಧ್ಯಕ್ಷರ ಬದಲಾವಣೆ ಮಾಡಬೇಕಾಗಿತ್ತು. ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ಒತ್ತಾಯ ಮಾಡಲಾಯಿತು ಎಂದರು. ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿದ್ದರೆ ಮತ್ತೆ ಪಕ್ಷದ ವರಿಷ್ಠರನ್ನು ಭೇಟಿ ಮಾಡುತ್ತೇವೆಂದು ಎಚ್ಚರಿಕೆ ನೀಡಿದರು. ಕೆ.ಎಸ್. ಈಶ್ವರಪ್ಪ ಮತ್ತು ಹಲವಾರು ಮುಖಂಡರು ನಮ್ಮ ಜತೆ ಇದ್ದಾರೆ ಎಂದು ಹೇಳಿದರು.