Advertisement

ತುಳುನಾಡಿಗೊಂದು ಮ್ಯೂಸಿಯಂ; ತುಳುವರಿಗಾಗಿ ಸಾಹಿತ್ಯ ಸಮ್ಮೇಳನ

07:50 AM Aug 09, 2017 | Harsha Rao |

ನಿಕಟಪೂರ್ವ ಅಧ್ಯಕ್ಷರಾಗಿದ್ದ ಜಾನಕಿ ಬ್ರಹ್ಮಾವರ ಅವರ ಅಧಿಕಾರಾವಧಿ ಪೂರ್ಣಗೊಂಡು, ಕಳೆದ ಐದು ತಿಂಗಳಿನಿಂದ ಖಾಲಿಯಿದ್ದ ಕರ್ನಾಟಕ ತುಳು ಅಕಾಡೆಮಿಗೆ ಈಗ ಹೊಸ ಅಧ್ಯಕ್ಷರನ್ನಾಗಿ ಅಂಬಡೆಬೈಲು ಚಂದ್ರಶೇಖರ ಭಂಡಾರಿ (ಎ.ಸಿ. ಭಂಡಾರಿ) ಅವರನ್ನು ನೇಮಕಗೊಳಿಸಿ ರಾಜ್ಯ ಸರಕಾರ ಸೋಮವಾರವಷ್ಟೇ ಆದೇಶ ಹೊರಡಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಮೂಲದವರಾದ 74 ವರ್ಷದ ಎ.ಸಿ. ಭಂಡಾರಿ ಸಾಂಸ್ಕೃತಿಕ ಹಾಗೂ ಸಾಹಿತ್ಯ ಸಂಘಟಕ. ಜಿಲ್ಲೆಯಲ್ಲಿ 70ರ ದಶಕದಲ್ಲೇ ತುಳುಕೂಟ ಎಂಬ ಸಂಘಟನೆಯನ್ನು ಹುಟ್ಟುಹಾಕಿ, ತುಳು ಭಾಷೆ ಹಾಗೂ ತುಳುನಾಡಿನ ಕಲೆ, ಸಂಸ್ಕೃತಿ ಪರವಾಗಿ ಧ್ವನಿಯೆತ್ತುತ್ತ ಬಂದವರು. ಅದರಲ್ಲಿಯೂ ತುಳು ಭಾಷೆ-ಸಾಹಿತ್ಯದ ಬಗ್ಗೆ ಅಪಾರ ಕಾಳಜಿ ಹಾಗೂ ತುಡಿತ ಹೊಂದಿರುವ ಅರ್ಹ ವ್ಯಕ್ತಿಯೊಬ್ಬರು ಇದೀಗ ತುಳು ಅಕಾಡೆಮಿಗೆ ಅಧ್ಯಕ್ಷರಾಗಿರುವುದು ತುಳು ಭಾಷಾಭಿಮಾನಿಗಳಿಗೆ ಖುಷಿತಂದಿದೆ. ಹೀಗಿರುವಾಗ, ತುಳು ಭಾಷೆಗೆ ಅಧಿಕೃತ ಮಾನ್ಯತೆ ಲಭಿಸುವುದು ಸೇರಿದಂತೆ ತುಳು ಭಾಷಿಕರ ಬೇಡಿಕೆಗಳ ವಿಚಾರವಾಗಿ ಜನರು ಕೂಡ ಬಹಳಷ್ಟು ನಿರೀಕ್ಷೆ ಹೊಂದಿದ್ದಾರೆ. ಈ ಎಲ್ಲ ಅಂಶಗಳನ್ನು ಮುಂದಿಟ್ಟುಕೊಂಡು ನೂತನ ಅಧ್ಯಕ್ಷ ಎ.ಸಿ. ಭಂಡಾರಿ ಅವರು “ಉದಯವಾಣಿ’ಗೆ ವಿಶೇಷ ಸಂದರ್ಶನ ನೀಡಿದ್ದಾರೆ. 

Advertisement

ಅಕಾಡೆಮಿ ಅಧ್ಯಕ್ಷತೆ ಸಿಗುವ ನಿರೀಕ್ಷೆ ಇತ್ತೆ ?
ಅಧ್ಯಕ್ಷ ಸ್ಥಾನದ ಬಗ್ಗೆ ನನಗೆ ಆಸಕ್ತಿಯಿತ್ತು. ಏಕೆಂದರೆ 1970ರಿಂದಲೂ ತುಳು ಭಾಷೆ, ಸಂಸ್ಕೃತಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾ ಬಂದವನು. ತುಳು ಭಾಷೆ ಮೇಲಿನ ಪ್ರೀತಿ, ಅಭಿಮಾನ ನನ್ನನ್ನು ಈ ಕಾರ್ಯಕ್ಕೆ ಪ್ರೇರೇಪಿಸಿದೆ. ಅಕಾಡೆಮಿ ಅಧ್ಯಕ್ಷ ಸ್ಥಾನದಂಥಹ ಅವಕಾಶಗಳ ಮೂಲಕ ಈ ಕಾರ್ಯವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಲು ಸಾಧ್ಯವಾಗಬಹುದು ಎಂಬ ಆಶೆ ನನ್ನದಾಗಿತ್ತು ಈ ಬಾರಿ ಆ ಅವಕಾಶ ಒದಗಿ ಬಂದಿದೆ. 

ಅಧ್ಯಕ್ಷ ಸ್ಥಾನಕ್ಕಾಗಿ ನೀವೂ ಲಾಬಿ ಮಾಡಿದ್ದೀರಾ?
ರಾಜಕೀಯ ಸಹಿತ ವಿವಿಧ ಕ್ಷೇತ್ರಗಳಲ್ಲಿ ನಾನು ಬಹಳಷ್ಟು ವರ್ಷಗಳಿಂದ ಕಾರ್ಯನಿರ್ವಹಿಸುತ್ತಾ ಬಂದಿದ್ದೇನೆ. ಆದರೆ ಯಾವತ್ತೂ ಲಾಬಿ ಮಾಡಲು ಹೋಗಿಲ್ಲ. ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೂ ಅಷ್ಟೇ. ಆದರೆ ಈ ಪದವಿಗೆ ಆಕಾಂಕ್ಷಿಯಾಗಿದ್ದದ್ದು ನಿಜ. ಹಾಗಂತ ನಾನೇನು ಸಾಹಿತಿಯಲ್ಲ. ಸಂಘಟಕನಾಗಿ ಸುಮಾರು 5 ದಶಕಗಳಿಂದ ತುಳು ಭಾಷೆ ಏಳಿಗೆಗೆ ದುಡಿದವನು. ಅಕಾಡೆಮಿ ಅಧ್ಯಕ್ಷ ಸ್ಥಾನ ಪಡೆಯುವ ಅರ್ಹತೆ ನನಗೂ ಇದೆ. ಕಳೆದ ಬಾರಿಯೂ ನನ್ನ ಹೆಸರು ಆ ಸ್ಥಾನಕ್ಕೆ ಪ್ರಸ್ತಾವವಾಗಿತ್ತು. 

ಅಂದರೆ, ಈ ಅವಕಾಶ ಬಹಳ ತಡವಾಗಿ ಬಂದಿದೆ?
ಖಂಡಿತಾ ಇಲ್ಲ; ಏಕೆಂದರೆ ರಾಜಕೀಯದಲ್ಲಿ ಬೇರೆ ಬೇರೆ ಹುದ್ದೆ ನನಗೆ ಲಭಿಸಿದೆ. ಆದರೆ ಅಧಿಕಾರದ ಆಸೆಯಿಂದ ನಾನು ತುಳು ಭಾಷಾ ಸೇವೆ ಮಾಡುತ್ತ ಬಂದವನಲ್ಲ. ಆಕಾಂಕ್ಷೆಗಳು, ನಿರೀಕ್ಷೆಗಳು ಇರುವುದು ಸಹಜ. ನಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದಾಗ ಅದಕ್ಕೆ ತಕ್ಕ ಮಾನ್ಯತೆ ಖಂಡಿತಾ ಲಭಿಸುತ್ತದೆ. ಎಲ್ಲದಕ್ಕೂ ಕಾಲ ಕೂಡಿ ಬರಬೇಕು ಮಾತ್ರ.

ಅಧ್ಯಕ್ಷರಾಗಿ ತುಳುಭಾಷೆ , ಸಂಸ್ಕೃತಿ ಅಭಿವೃದ್ಧಿಗೆ ಏನು ಮಾಡುತ್ತೀರಿ?
ತುಳು ಭಾಷೆ, ಸಂಸ್ಕೃತಿ ಅಭಿವೃದ್ಧಿ ವಿಚಾರದಲ್ಲಿ ಹಿಂದಿನ ಅಧ್ಯಕ್ಷರು ಸಾಕಷ್ಟು ಕೆಲಸ ಮಾಡಿದ್ದಾರೆ. ಅದಕ್ಕೆ ಪೂರಕವಾಗಿ ಇನ್ನಷ್ಟು ಹೊಸ ಕಾರ್ಯ ಯೋಜನೆ ರೂಪಿಸಬೇಕೆಂಬ ಚಿಂತನೆಯಿದೆೆ. ಕನ್ನಡದಂತೆ ತುಳು ಸಾಹಿತ್ಯದ ಬಗ್ಗೆಯೂ ತಾಲೂಕು ಮತ್ತು ಜಿಲ್ಲಾ ಮಟ್ಟದ ವ್ಯವಸ್ಥಿತವಾಗಿ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸಬೇಕೆಂಬ ಯೋಚನೆಯಿದೆ. ಈಗಾಗಲೇ ತಾಲೂಕು ಮಟ್ಟದಲ್ಲಿ “ತುಳು ಮಿನದನ’ ಎಂಬ ಕಾರ್ಯಕ್ರಮ ನಡೆಯುತ್ತಿದೆ. ಇದಕ್ಕೆ ಇನ್ನಷ್ಟು ವಿಸ್ತೃತ ರೂಪ ನೀಡಿ, ತುಳು ಜಾನಪದ, ರಂಗ ಭೂಮಿ, ಸಾಹಿತ್ಯ, ಚಲನಚಿತ್ರರಂಗ, ಸಂಶೋಧನೆ ಸಹಿತ ತುಳು ಭಾಷೆ-ಸಾಂಸ್ಕೃತಿಕ ಕ್ಷೇತ್ರದಲ್ಲಿ ತೊಡಗಿಸಿ ಕೊಂಡಿರುವ ಸಾಹಿತ್ಯ ಹಾಗೂ ಕಲಾ ಸಕ್ತರನ್ನು ಒಗ್ಗೂಡಿಸಿ ಚಿಂತನ- ಮಂಥನ, ಸಾಧಕರ ಗುರುತಿಸುವಿಕೆ ಸಹಿತ ತುಳುಭಾಷೆಯ ಸಮಗ್ರ ಅಭಿವೃದ್ಧಿಗೆ ಪ್ರೇರಣಾ ಉತ್ಸವವನ್ನಾಗಿ ಈ ಸಮ್ಮೇಳನವನ್ನು ರೂಪಿಸುವ ಕಡೆಗೆ ಗಮನ ಹರಿಸಲಾಗುವುದು.

Advertisement

ಮುಂದಿನ ಯೋಜನೆಗಳು?
ಮಂಗಳೂರಿನಲ್ಲಿರುವ ತುಳು ಭವನದಲ್ಲಿ ಒಂದು ವ್ಯವಸ್ಥಿತ ಮ್ಯೂಸಿಯಂ ಹಾಗೂ ರಂಗ ಮಂದಿರ ನಿರ್ಮಿಸುವ ಕನಸು ಹೊಂದಿ ದ್ದೇನೆ. ಈಗಾಗಲೇ ತುಳು ಭವನದಲ್ಲಿ ಇದಕ್ಕೆ ಪೂರಕ ವ್ಯವಸ್ಥೆಯೂ ಇದೆ. ತುಳುಭಾಷೆ, ಜನಜೀವನ, ಸಂಸ್ಕೃತಿಗೆ ಸಂಬಂಧಪಟ್ಟ, ಪರಿಕರಗಳನ್ನು ಹೊಂದಿ ರುವ ಸಂಗ್ರಹಕಾರರೋರ್ವರು ಇದನ್ನು ಅಕಾಡೆಮಿ ಮ್ಯೂಸಿಯಂಗೆ ನೀಡುವ ಭರವಸೆ ನೀಡಿದ್ದಾರೆ. ಇದೇರೀತಿ ತುಳುಭವನದಲ್ಲಿ 1000 ಮಂದಿಗೆ ಸ್ಥಳಾವಕಾವಕಾಶವಿರುವ ರಂಗಮಂದಿರ ವ್ಯವಸ್ಥೆಗೊಳಿಸಿ ಸಾಹಿತ್ಯ, ಸಂಸ್ಕೃತಿ, ರಂಗಭೂಮಿ ಸಹಿತ ತುಳುಭಾಷೆಗೆ ಸಂಬಂಧಪಟ್ಟ ಚಟುವಟಿಕೆಗಳಿಗೆ ಒದಗಿಸುವ ಚಿಂತನೆ ಕೂಡ ನನ್ನದಾಗಿದೆ.

ತುಳು ರಂಗಭೂಮಿ ಜತೆಗೆ ಈಗ ತುಳು ಚಲನ ಚಿತ್ರೋದ್ಯಮಕ್ಕೂ ವಿಪುಲ ಅವಕಾಶ ದೊರೆಯುತ್ತಿದ್ದು, ಇದಕ್ಕೆ ಅಕಾಡೆಮಿ ಯಾವ ಪ್ರೋತ್ಸಾಹ ನೀಡಲಿದೆ?
ತುಳುಭಾಷೆ ಅಭಿವೃದ್ಧಿಯಲ್ಲಿ ತುಳುರಂಗಭೂಮಿ ಮಹತ್ತರ ಪಾತ್ರ ವಹಿಸುತ್ತಾ ಬಂದಿದೆ. ಇದರ ಮುಂದು
ವರಿದ ಭಾಗವಾಗಿ ತುಳು ಚಲನಚಿತ್ರ ರಂಗವೂ ಈ ಕೆಲಸವನ್ನು ಮಾಡುತ್ತಿದೆ. ಈ ಎರಡೂ ಕ್ಷೇತ್ರವನ್ನು ಉತ್ತೇಜಿಸಿ ಪ್ರೋತ್ಸಾಹಿಸಲು ಅಕಾಡೆಮಿ ಬದ್ಧವಾಗಿದೆ.

ತುಳುವನ್ನು ಸಂವಿಧಾನದ 8ನೇ ಪರಿಚ್ಛೇದದಲ್ಲಿ ಸೇರ್ಪಡೆಗೆ ನಿಮ್ಮ ಪ್ರಯತ್ನ ಹೇಗಿರುತ್ತದೆ?
ತುಳುಭಾಷೆಗೆ ಸಂವಿಧಾನಿಕ ಮಾನ್ಯತೆ ನೀಡಲು ಕೇಂದ್ರಕ್ಕೆ ಶಿಫಾರಸು ಮಾಡಲು ಸೋಮವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಂಡಿರುವ ವಿಚಾರ ಗೊತ್ತಾಗಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ ಈ ಹಿಂದಿನ ಅಧ್ಯಕ್ಷರನ್ನು ಒಳಗೊಂಡಂತೆ ನಾವು ನಿಯೋಗ ತೆರಳಿ ಪ್ರಧಾನಿ ಹಾಗೂ ಗೃಹಸಚಿವರಿಗೆ ಮನವರಿಕೆ ಮಾಡಿದ್ದೇವೆ. ಇದರ ಮುಂದಿನ ಭಾಗವಾಗಿ ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್‌ ಮುಂದಿನ ಸಂಸತ್‌ ಅಧಿವೇಶನದಲ್ಲಿ ಈ ವಿಷಯ ಪ್ರಸ್ತಾವಿಸುವುದಾಗಿ ತಿಳಿಸಿದ್ದಾರೆ. ದ.ಕ. ಸಂಸದ ನಳಿನ್‌ ಕೂಡ ಕರ್ನಾಟಕದ ಎಲ್ಲ ಸಂಸದರ ಬೆಂಬಲ ಪಡೆದು ಕೊಳ್ಳುವ ನಿಟ್ಟಿನಲ್ಲಿ ಚರ್ಚೆ ನಡೆಸುವುದಾಗಿ ಹೇಳಿದ್ದಾರೆ. ಆ ಮೂಲಕ ತುಳುನಾಡಿನ ಜನತೆ ಬಹುಕಾಲದ ಬೇಡಿಕೆ ಸಾಕಾರಗೊಳಿಸುವಲ್ಲಿ ಈಗ ಅಧ್ಯಕ್ಷನನ್ನಾಗಿ ಸರಕಾರಿ ಮಟ್ಟದಲ್ಲಿ ಮತ್ತಷ್ಟು ಪ್ರಯತ್ನ ಮಾಡುತ್ತೇನೆ.

– ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next