Advertisement

ಸಹಾಯದ ನಿರೀಕ್ಷೆಯಲ್ಲಿ ಜಿಲ್ಲೆಯ ದೈವಾರಾಧಕರು

11:12 PM May 14, 2020 | Sriram |

ಉಡುಪಿ/ಕಾಪು/ಹೆಬ್ರಿ: ಕೋವಿಡ್‌-19ನಿಂದ ಹಲವು ಕ್ಷೇತ್ರಗಳು ತೊಂದರೆ ಎದುರಿಸಿದೆ. ಇವುಗಳಲ್ಲಿ ದೈವಾರಾಧನೆಗೂ ಕೋವಿಡ್‌-19 ಮಾಹಾಮಾರಿ ಬಲವಾದ ಏಟು ನೀಡಿದೆ. ಇದರಲ್ಲಿ ತೊಡಗಿರುವ ಕುಟುಂಬಗಳು ಸದ್ಯ ಕಷ್ಟದ ದಿನಗಳನ್ನು ಎಣಿಸುತ್ತಿದೆ.

Advertisement

ಜನವರಿಯಿಂದ ಮೇ ತಿಂಗಳವರೆಗೆ ದೈವಾರಾಧನೆಯ ಪರ್ವಕಾಲವಾಗಿದ್ದು, ಈ ಸಮಯದಲ್ಲಿ ಕರಾವಳಿಯಾದ್ಯಂತ ನೇಮ, ಕೋಲ, ಅಗೆಲು ಸೇವೆಗಳು ನಡೆಯುತ್ತವೆ. ದಿನಬಿಟ್ಟು ದಿನದಂತೆ ದೈವಾರಾಧನೆಯಲ್ಲಿ ತೊಡಗಿದವರು ಈ ಕೆಲಸಗಳಲ್ಲಿ ನಿರತರಾಗಿರುತ್ತಿದ್ದರು. ಆದರೆ ಕೋವಿಡ್‌-19ನಿಂದಾಗಿ ಮುಂಜಾಗ್ರತಾ ಕ್ರಮವಾಗಿ ದೇಶಾದ್ಯಂತ ಧಾರ್ಮಿಕ ಚಟುವಟಿಕೆಯನ್ನು ನಡೆಸದಂತೆ ಸರಕಾರ ಆದೇಶ ನೀಡಿದೆ. ಇದರ ಪರಿಣಾಮ ಉಡುಪಿ ಮಂಗಳೂರು ಕರಾವಳಿ ಭಾಗದಾದ್ಯಂತ ನಡೆಯ ಬೇಕಿದ್ದ ದೈವಾರಾಧನೆಗಳು ಸಂಪೂರ್ಣ ಸ್ತಬ್ಧವಾಗಿವೆ.

ಸಾವಿರಕ್ಕೂ ಹೆಚ್ಚು ಮಂದಿ
ದೈವಾರಾಧನೆಯಲ್ಲಿ ದೈವ ನರ್ತಕರು, ದರ್ಶನ ಪಾತ್ರಿಗಳು, ಬ್ಯಾಂಡ್‌ನ‌ವರು, ವಾಲಗ, ದೀವಟಿಗೆ ಸೇರಿದಂತೆ ಇದರಲ್ಲಿ ತೊಡಗಿರುವ 16 ರೀತಿಯ ವರ್ಗ ತೊಂದರೆಗೀಡಾಗಿದೆ. ಉಡುಪಿಯಲ್ಲಿ 2ಸಾವಿರ ಮಂದಿ ಇದ್ದು, ದ.ಕನ್ನಡ ಜಿಲ್ಲೆಯಲ್ಲಿ ಇದರ ದುಪ್ಪಟ್ಟು ಮಂದಿ ಇದ್ದಾರೆ. ಈ ವೃತ್ತಿಯಲ್ಲಿ ತೊಡಗಿಕೊಂಡವರು ತಮ್ಮದೆ ಸಾಂಪ್ರದಾಯಿಕ ಚೌಕಟ್ಟು ಇರುವುದರಿಂದ ಇವರಿಗೆ ಇತರ ವೃತ್ತಿಯಲ್ಲಿ ತೊಡುಗುವುದು ಕಷ್ಟ ಸಾಧ್ಯ.

ಇವರಲ್ಲಿ ಹೆಚ್ಚಿನವರು ತಮ್ಮ ತೊಂದರೆಗಳನ್ನು ಇತರರಲ್ಲಿ ತೋಡಿ ಕೊಳ್ಳುವುದು ಅಪರೂಪ. ಈ ಎಲ್ಲ ಕಾರಣದಿಂದ ಈ ವೃತ್ತಿಯಲ್ಲಿ ತೊಡಗಿರುವವರು ತೆರೆಮರೆಯಂತಾಗಿದ್ದು, ಭರವಸೆಯ ದಿನವನ್ನು ಮಾತ್ರ ಎದುರು ನೋಡುವಂತಾಗಿದೆ.

ಮಳೆಗಾಲದಲ್ಲಿ ಜೀವನ ಕಷ್ಟ
ಲಾಕ್‌ಡೌನ್‌ ಸಡಿಲಿಕೆಗೊಂಡರೂ ದೈವಾರಾಧನೆಯ ಸೀಜನ್‌ ಈಗಾಗಲೇ ಮುಗಿದಿರುವುದರಿಂದ ಮುಂದಿನ ಒಂದು ವರ್ಷ ಸಂಕಷ್ಟ ಅನುಭವಿಸುವ ಅನಿವಾರ್ಯ ಸ್ಥಿತಿ ಉಂಟಾಗಿದೆ. ಲಾಕ್‌ಡೌನ್‌ ಅವಧಿಯಾದ ಮಾರ್ಚ್‌ ನಿಂದ ಮೇ ವರೆಗೆ ಯಾವುದೇ ಕಾರ್ಯಕ್ರಮಗಳನ್ನು ನಡೆಯದೆ ಆರ್ಥಿಕವಾಗಿ ತೊಂದರೆ ಅನುಭವಿಸಿರುವ ಇವರು ಈ ಮಳೆಗಾಲದಲ್ಲಿ ಹೇಗೆ ಜೀವನಸಾಗಿಸುವುದೆಂಬ ಆತಂಕದಲ್ಲಿದ್ದಾರೆ.

Advertisement

ಇದರ ಜತೆಗೆ ಪರವೂರುಗಳಲ್ಲಿ ಇರುವ ಮಂದಿ ಎಲ್ಲ ಊರು ಸೇರುತ್ತಿರುವುದರಿಂದ ಬೇರೆ ಉದ್ಯೋಗ ಮಾಡುವ ಸಾಧ್ಯತೆಯೂ ಕಡಿಮೆ ಎಂದು ದೈವಾರಾಧನೆಯಲ್ಲಿ ತೊಡಗಿರುವವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಪ್ರಯತ್ನ
ದೈವಾರಾಧಕರು ಎದುರಿಸುತ್ತಿರುವ ಸಂಕಷ್ಟದ ಬಗ್ಗೆ ಸರಕಾರದ ಗಮನ ಸೆಳೆಯುವ ಬಗ್ಗೆ ನಮ್ಮಲ್ಲಿ ಮನವಿಯನ್ನು ನೀಡಿದ್ದಾರೆ. ದೈವಾರಾಧಕರಿಗೂ ಆರ್ಥಿಕ ಸಹಕಾರ ನೀಡುವಂತೆ ಮೊರೆಯಿತ್ತಿದ್ದಾರೆ. ಈ ಬಗ್ಗೆ ಸರಕಾರದ ಗಮನ ಸೆಳೆಯುವ ಪ್ರಯತ್ನ ನಡೆಸಿದ್ದೇನೆ. ಮುಜರಾಯಿ ಇಲಾಖೆ ಹೊರತಾಗಿಯೂ ಸರಕಾರದ ಮಟ್ಟದಲ್ಲಿ ಯಾವ ರೀತಿಯಲ್ಲಿ ಸಹಕಾರ ನೀಡಬಹುದು ಎನ್ನುವುದರ ಬಗ್ಗೆ ಚರ್ಚೆ ನಡೆಸುತ್ತಿದೆ. ದೈವಾರಾಧಕರ ಬಗ್ಗೆ ಸಹಾನುಭೂತಿ ಇಟ್ಟುಕೊಂಡು ಸರಕಾರ ಮನವಿ ಪರಿಶೀಲನೆಗೆ ಮುಂದಾಗುತ್ತದೆ ಎಂಬ ವಿಶ್ವಾಸವಿದೆ.
-ಕೋಟ ಶ್ರೀನಿವಾಸ ಪೂಜಾರಿ,
ಮುಜರಾಯಿ ಸಚಿವರು, ಕರ್ನಾಟಕ ಸರಕಾರ

ಪರಿಹಾರ ಸಿಕ್ಕಿಲ್ಲ
ಜನವರಿಯಿಂದ ಮೇ ವರೆಗೆ ಅತೀ ಹೆಚ್ಚು ದೈವಾರಧನೆಗಳು ನಡೆಯುತ್ತದೆ. ಆದರೆ ಲಾಕ್‌ಡೌನ್‌ನಿಂದ ಎಲ್ಲ ಧಾರ್ಮಿಕ ಚಟುವಟಿಕೆ ನಿಂತಿದೆ. ದೈವಾರಾಧನೆ ಮೂಲಕವೇ ಜೀವನ ಸಾಗಿಸುತ್ತಿರುವ ಮಂದಿಗೆ ತೊಂದರೆ ಉಂಟು ಮಾಡಿದೆ. ಮತ್ತು ಇವರಲ್ಲಿ ಕೃಷಿ ಭೂಮಿ ಇಲ್ಲ. ಕೇವಲ 5 ಸೆಂಟ್ಸ್‌ ಜಾಗದಲ್ಲಿ ವಾಸಿಸುತ್ತಿದ್ದಾರೆ. ಜೂನ್‌ ಬಳಿಕ ಸೀಜನ್‌ ಮುಗಿಯುವುದರಿಂದ ಉದ್ಯೋಗ ಇಲ್ಲದಂತಾಗಿ ಮುಂದಿನ ಜನವರಿವರೆಗೆ ಪರಿತಪಿಸುವಂತಾಗಿದೆ. ಈ ಬಗ್ಗೆ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್‌ ಪೂಜಾರಿ, ಶಾಸಕರ ಮೂಲಕ ಸರಕಾರದ ಗಮನಕ್ಕೆ ತರಲಾಗಿದೆ. ಆದರೆ ಯಾವುದೇ ಪರಿಹಾರ ಇಲ್ಲಿಯವರೆಗೆ ಘೋಷಣೆಯಾಗಿಲ್ಲ.
-ಎಂ.ಡಿ. ವೆಂಕಪ್ಪ,
ಗೌರವಾಧ್ಯಕ್ಷ ಪಾಣ ಯಾನೆ ನಲಿಕೆ ಸಮಾಜ ಸೇವಾ ಸಂಘ, ಮಂಗಳೂರು.

Advertisement

Udayavani is now on Telegram. Click here to join our channel and stay updated with the latest news.

Next