Advertisement

ತುಳುನಾಡ ಸಂಸ್ಕೃತಿ ಅನಾವರಣ

10:27 AM Feb 19, 2018 | |

ದೇರಳಕಟ್ಟೆ: ಗ್ರಾಮೀಣ ಪ್ರದೇಶದ ಸೊಗಡು, ನಾಗ ಬನದಲ್ಲಿ ವಾರ್ಷಿಕ ಪರ್ವ ಇನ್ನೊಂದೆಡೆ ಕಂಬಳ, ಕೋಳಿ ಅಂಕ ಜಾನಪದ ಆಟೋಟ ಸ್ಪರ್ಧೆ ಇದು ದೇರಳಕಟ್ಟೆ ಸಮೀಪದ ಬೆಳ್ಮ ಮಾಗಣ್ತಡಿ ಗುತ್ತಿನ ಮನೆಯಲ್ಲಿ ರವಿವಾರ ಕಂಡು ಬಂದ ದೃಶ್ಯ. ತುಳುನಾಡಿನ ಆಚಾರ ವಿಚಾರ, ಆಹಾರ, ಕೃಷಿ ಸಂಸ್ಕೃತಿಯ ಅನಾವರಣ ನಡೆಸುವ ‘ತುಳುನಾಡಿನ ವೈಭವ’ದ ಮೂಲಕ ಹೊರ ಜಿಲ್ಲೆಗಳಿಂದ ಆಗಮಿಸಿದ್ದ ಲಯನ್ಸ್‌ ಕ್ಲಬ್‌ ಪ್ರತಿನಿಧಿಗಳಿಗಾಗಿ ಮಿನಿ ತುಳುನಾಡನ್ನೇ ಸೃಷ್ಟಿಸಲಾಗಿತ್ತು.

Advertisement

ಅಂತಾರಾಷ್ಟ್ರೀಯ ಲಯನ್ಸ್‌ ಸಂಸ್ಥೆ ಲಯನ್ಸ್‌ ಜಿಲ್ಲೆ- 317ಡಿ ಇದರ ಜಿಲ್ಲಾ ಕಾರ್ಯಕ್ರಮದ ಅಂಗವಾಗಿ ‘ತುಳುನಾಡ ವೈಭವ’ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಅವಿಭಜಿತ ದ.ಕ., ಹಾಸನ, ಚಿಕಮಗಳೂರು, ಕೊಡಗು ಜಿಲ್ಲೆಗಳಿಂದ ಪ್ರತಿನಿಧಿಗಳು ರವಿವಾರ ಬೆಳಗಿನಿಂದಲೇ ಮಾಗಣ್ತಡಿ ಗುತ್ತು ಮನೆಗೆ ಆಗಮಿಸಿದ್ದು, ಬಂದ ಅತಿಥಿಗಳಿಗೆ ತುಳುನಾಡಿನ ಸಂಪ್ರದಾಯದಂತೆ ಸ್ವಾಗತಿಸಿ, ಬಳಿಕ ಗುತ್ತುಮನೆಯ ನಾಗಬನದಲ್ಲಿ ನಾಗನಿಗೆ ಹಾಲು ಎರೆದು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಮನೆಯ ದೈವದ ಪರಿಚಯದ ಬಳಿಕ ಜಾನಪದ ಕ್ರೀಡೆಯಾದ ಕಂಬಳ, ಸಾಂಕೇತಿಕ ಕೋಳಿ ಅಂಕ ಗಮನ ಸೆಳೆದರೆ, ಕೆಸರು ಗದ್ದೆಯಲ್ಲಿ ಹಗ್ಗ ಜಗ್ಗಾಟ, ಓಟ, ನಿಧಿ ಶೋಧ ನಡೆಯಿತು. ಇನ್ನೊಂದೆಡೆ ತುಳುನಾಡಿನಲ್ಲಿ ಈ ಹಿಂದೆ ಕೃಷಿ ಸಹಿತ ದೈನಂದಿನ ಬದುಕಿಗೆ ಉಪಯೋಗಿಸುತ್ತಿದ್ದ ಹಳೆ ಸಾಮಗ್ರಿಗಳ ಪ್ರದರ್ಶನ, ಒಂದೆಡೆಯಾದರೆ ಶೇಂದಿ ಅಂಗಡಿಯಲ್ಲಿ ಉಚಿತವಾಗಿ ಶೇಂದಿ ವ್ಯವಸ್ಥೆ, ಇರೋಳ್‌, ಊರಿನ ಸೀಯಾಳ, ಕಬ್ಬಿನ ಹಾಲು, ಕಲ್ಲಂಗಡಿ ಹಣ್ಣಿನ ಅಂಗಡಿಗಳು ಜನರ ಗಮನ ಸೆಳೆಯಿತು. ಮನೆಯ ವಠಾರದಲ್ಲಿ ಚರ್ಚೆ, ಮಾತುಕತೆ ಅಂತ್ಯಾಕ್ಷರಿ, ಈರುಳ್ಳಿ ಹೆಚ್ಚು, ತೆಂಗಿನ ಕಾಯಿ ತುರಿಯುವ, ತೆಂಗಿನ ಗರಿಯಿಂದ ಹಿಡಿಸೂಡಿ ಮಾಡುವ ಸ್ಪರ್ಧೆ ಏರ್ಪಡಿಸಲಾಗಿತ್ತು. 

ಖಾದ್ಯ ವಿಶೇಷ 
ಬೆಳಗ್ಗಿನಿಂದಲೇ ತುಳುನಾಡಿನ ಖಾದ್ಯದ ಮೂಲಕ ಚಾ ತಿಂಡಿ ವ್ಯವಸ್ಥೆಯನ್ನು ಸಂಘಟಕರು ನಡೆಸಿದ್ದರೆ, ಮಧ್ಯಾಹ್ನದ ಊಟಕ್ಕೂ ತುಳುನಾಡಿನ ಖಾದ್ಯಗಳು ಬಂದಿದ್ದ ಅತಿಥಿಗಳ ಗಮನ ಸೆಳೆಯಿತು. ಹೊರ ಜಿಲ್ಲೆಯಿಂದ ಬಂದಿದ್ದ ಅತಿಥಿಗಳಿಗೆ ತುಳುನಾಡಿನ ಸಂಸ್ಕೃತಿಯ ಬಗ್ಗೆ ಲಯನ್ಸ್‌ ಕ್ಲಬ್‌ ತುಳುನಾಡ ವೈಭವದ ಮೂಲಕ ಅರಿವು ಮೂಡಿಸಿತು.

ವಿನೂತನ ಕಾರ್ಯಕ್ರಮ
ಪ್ರತೀ ವರ್ಷ ಲಯನ್ಸ್‌ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ವಿನೂತನವಾಗಿ ಹಮ್ಮಿಕೊಳ್ಳುತ್ತಾ ಬಂದಿದೆ. ಈ ಬಾರಿ ಮಂಗಳೂರಿನಲ್ಲಿ ನಡೆಸಲು ಉದ್ದೇಶಿಸಿದ್ದರಿಂದ ತುಳುನಾಡಿನ ಸಂಸ್ಕೃತಿಯನ್ನು ಹೊರ ಜಿಲ್ಲೆಯಿಂದ ಆಗಮಿಸುವ ಲಯನ್ಸ್‌ ಕ್ಲಬ್‌ನ ಪ್ರತಿನಿಧಿಗಳಿಗೆ ತಿಳಿಸುವ ಸಲುವಾಗಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಕಾರ್ಯಕ್ರಮ ಯಶಸ್ವಿಯಾಗಿದೆ.
– ಪ್ರಸಾದ್‌ ರೈ ಕಳ್ಳಿಮಾರ್‌,
 ಕಾರ್ಯಕ್ರಮ ಸಂಘಟಕ

Advertisement
Advertisement

Udayavani is now on Telegram. Click here to join our channel and stay updated with the latest news.

Next