Advertisement

‘ತುಳು ಪರ್ಬ ಬೊಕ್ಕ ಕ್ರಿಸ್ಮಸ್‌ ಸಂಭ್ರಮ’ 

02:13 PM Dec 24, 2017 | Team Udayavani |

ಗೋರಿಗುಡ್ಡೆ: ಶಾಲೆ ತೊರೆದು ಮನೆಯಲ್ಲಿದ್ದ ಮಕ್ಕಳನ್ನು ಕಲಿಯುವಂತೆ ಪ್ರೇರೇಪಿಸಿದ ಪರಿಣಾಮ ಇಂದು ಆ ಮಕ್ಕಳು ಕಲಿತು ಎಂಜಿನಿಯರ್‌, ಶಿಕ್ಷಕರಾಗಿ ಬೆಳೆದುನಿಂತಿದ್ದು, ಇದು ನನ್ನ ಬದುಕಿನ ಅವಿಸ್ಮರಣೀಯ ಘಟನೆ ಎಂದು ಉಜಿರೆ ಲಾೖಲ ಗ್ರಾ.ಪಂ.ನ ಮಾದರಿ ಗ್ರಾಮ ವಿಕಾಸ ಪ್ರೇರಕಿ ಯಶೋದಾ ಲಾೖಲ ಹೇಳಿದರು. ಅವರು ಗೋರಿಗುಡ್ಡೆಯ ಕಿಟೆಲ್‌ ಮೆಮೋರಿಯಲ್‌ ವಿದ್ಯಾಸಂಸ್ಥೆಗಳ ಆಶ್ರಯದಲ್ಲಿ ಸಂಸ್ಥೆಯ ವಠಾರದಲ್ಲಿ ಜರಗಿದ ‘ತುಳು ಪರ್ಬ ಬೊಕ್ಕ ಕ್ರಿಸ್ಮಸ್‌ ಸಂಭ್ರಮ’ ಉದ್ಘಾಟಿಸಿ, ಮಾತನಾಡಿದರು.

Advertisement

ಗ್ರಾಮದಲ್ಲಿ ಸಾಕ್ಷರತಾ ಆರಂಭದ ದಿನಗಳಲ್ಲಿ ಹಿರಿವಯಸ್ಸಿನಲ್ಲಿ ಕಲಿತು ಏನು ಸಾಧಿಸುವೆ ಅನ್ನುವ ಮನೋಭಾವ ಮೊದಲಿಗೆ ಬಂದರೂ, ಆನಂತರ ಕಲಿಯುವ ಆಸಕ್ತಿ ಹುಟ್ಟಿ, ಬೀಡಿ ಕಟ್ಟುತ್ತಿದ್ದ ಕೈ ಪೆನ್ಸಿಲ್‌ ಹಿಡಿಯುವಂತಾಯಿತು. ಪಂಚಾಯತ್‌ನಿಂದ ಶಾಲೆ ಕಲಿಯದ ಮಕ್ಕಳ ಪಟ್ಟಿ ಪಡೆದು ಅವರನ್ನು ಹುಡುಕಿ ಶಾಲೆಗೆ ಒತ್ತಾಯಪೂರ್ವಕವಾಗಿ ಕಲಿಸಿದೆ ಎಂದರು. 

ಮುಖ್ಯ ಅತಿಥಿಯಾಗಿ ಭಾಗವಹಿಸಿ ಸರಕಾರಿ ಪದವಿಪೂರ್ವ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕ ಅಬ್ದುಲ್ಲಾ ರಝಾಕ್‌ ಮಾತನಾಡಿ ಕನ್ನಡದ ಪ್ರಥಮ ಶಬ್ದಕೋಶವನ್ನು ಆರಂಭಿಸಿದ ಕಿಟೆಲ್‌ ಅವರ ಹೆಸರಿನ ಜಿಲ್ಲೆಯ ಏಕೈಕ ಸಂಸ್ಥೆಯಡಿ ಇಂತಹ ಕಾರ್ಯಕ್ರಮ ನಡೆಯುತ್ತಿರುವುದು ಶ್ಲಾಘನೀಯ. ತುಳು ಭಾಷೆ ಅನ್ನುವುದರಲ್ಲಿ ಮುಸ್ಲಿಮರು, ಹಿಂದುಗಳು, ಕ್ರೈಸ್ತರು ಎಲ್ಲರಿಗೂ ಸಂಬಂಧಿಸಿದ್ದಾಗಿದೆ. ಕೃಷಿ ಮತ್ತು ಸೌಹಾರ್ದತೆಗೆ ತುಳುನಾಡು ಬಹಳಷ್ಟು ಖ್ಯಾತಿಯಿತ್ತು. ಆದರೆ ಇಂದು ಮಕ್ಕಳ ಭವಿಷ್ಯದ ಜತೆಗೆ ತುಳುನಾಡಿನ ಸ್ಥಿತಿಯ ಬಗ್ಗೆ ಆತಂಕ ಪಡಬೇಕಾಗಿದೆ. ಹಿಂದೆ ಎಲ್ಲರೂ ಜತೆಗೂಡಿ ಬಾಳುವಂತಹ ಸಂಸ್ಕೃತಿ ಇತ್ತು. ಸದ್ಯ ಅಂತಹ ಚಿತ್ರಣವೇ ಬದಲಾಗುತ್ತಿದೆ ಎಂದರು.

ಅಧ್ಯಕ್ಷತೆಯನ್ನು ಕಿಟೆಲ್‌ ಮೆಮೋರಿಯಲ್‌ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಡಯಾನಾ ಜ್ಯೋತಿ ಫ್ರಾಂಕ್‌ ವಹಿಸಿದ್ದರು. ಚಲನಚಿತ್ರ ನಟಿ ಮೈತ್ರಿ ಎಂ.ಜಯಶಂಕರ್‌, ತುಳುನಾಡು ರಕ್ಷಣಾ ವೇದಿಕೆ ಮಂಗಳೂರು ಕ್ಷೇತ್ರ ಅಧ್ಯಕ್ಷ ಸಿರಾಜ್‌ ಅಡ್ಕರೆ, ಸಮಾಜಸೇವಕ ಜಯಪ್ರಕಾಶ್‌ ಉಪಸ್ಥಿತರಿದ್ದರು. ಕಿಟಲ್‌ ಮೆಮೋರಿಯಲ್‌ ಕಾಲೇಜು ಪ್ರಾಂಶುಪಾಲ ವಿಟ್ಠಲ್‌. ಎ ಸ್ವಾಗತಿಸಿದರು. ಸ್ವಾತಿ ಕಾರ್ಯಕ್ರಮ ನಿರ್ವಹಿಸಿದರು. ರಿತೇಶ್‌ ವಂದಿಸಿದರು.

ಸ್ವ ಉದ್ಯೋಗ ತರಬೇತಿ
ಹೆತ್ತವರ ಬೈಗುಳದ ನಡುವೆಯೂ ಛಲ ಬಿಡದೆ ಕಲಿಸಿದ ಫಲವಾಗಿ ಹಲವರು ಎಂಜಿನಿಯರ್‌, ಶಿಕ್ಷಕರಾಗಿ ಬೆಳದು ನಿಂತು ನನ್ನನ್ನು ಗುರುತಿಸಿರುವುದು ಜೀವನದ ಬಹುದೊಡ್ಡ ಕೆಲಸವೆಂದೆನಿಸಿತು. ಮಹಿಳೆಯರು ಮಕ್ಕಳನ್ನು ಶಾಲೆಗೆ ಕಳುಹಿಸಲು ಸಬಲರಾಗಲು ಸ್ವಸಹಾಯ ಸಂಘಗಳನ್ನು ಸ್ಥಾಪಿಸಿ ಅದರ ಮೂಲಕ ಮಹಿಳೆಯರಿಗೆ ಸ್ವ ಉದ್ಯೋಗದ ತರಬೇತಿ ನೀಡುವ ಕೆಲಸಕ್ಕೆ ಮುಂದಾದೆ. ಜತೆಜತೆಗೆ ಗ್ರಾಮದ ಸುಮಾರು 167 ಮದ್ಯವ್ಯಸನಿಗಳನ್ನು ವ್ಯಸನ ಮುಕ್ತ ಮಾಡಿರುವ ಹೆಮ್ಮೆಯಿದ್ದು, ಗ್ರಾಮದ ಮಹಿಳೆಯರು ಸಾಮಾಜಿಕ, ಶೈಕ್ಷಣಿಕವಾಗಿ ಸಬಲರಾದಲ್ಲಿ ಗ್ರಾಮದ ಅಭಿವೃದ್ಧಿ ಸಾಧ್ಯವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next