Advertisement

ತುಳು ಕಾದಂಬರಿಕಾರ, ರಂಗಕರ್ಮಿ ಡಿ.ಕೆ.ಚೌಟ ಇನ್ನಿಲ್ಲ

07:10 AM Jun 20, 2019 | Team Udayavani |

ಬೆಂಗಳೂರು: ಕೃಷಿ ಕುಟುಂಬದ ತುಳು ಕಾದಂಬರಿ ಹಾಗೂ ರಂಗಭೂಮಿ ಕ್ಷೇತ್ರದಲ್ಲಿ ಬಹಳ ದೊಡ್ಡ ಸಾಧನೆ ಮಾಡಿದ ಉದ್ಯಮಿ, ಸಾಹಿತಿ, ರಂಗಕರ್ಮಿ ಡಿ.ಕೆ.ಚೌಟ (82) ಅವರು ಬುಧವಾರ ನಿಧನರಾದರು.

Advertisement

ದರ್ಬೆ ಕೃಷ್ಣಾನಂದ ಚೌಟ (ಡಿ.ಕೆ.ಚೌಟ) ಅವರು ವಯೋಸಹಜ ಹೃದ್ರೋಗದ ಸಮಸ್ಯೆಯಿಂದ 15 ದಿನಗಳ ಹಿಂದೆಯೇ ಜಯದೇವ ಹೃದ್ರೋಗ ಸಂಸ್ಥೆಗೆ ದಾಖಲಾಗಿದ್ದರು. ಬುಧವಾರ ಮುಂಜಾನೆ ಎದೆನೋವು ಕಾಣಿಸಿಕೊಂಡು ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ.

ಮಕ್ಕಳಾದ ಪ್ರಜ್ಞಾ ಚೌಟ ಹಾಗೂ ಬಾಲಿವುಡ್‌ ಸಂಗೀತ ನಿರ್ದೇಶಕ ಸಂದೀಪ್‌ ಚೌಟ (ಮುಂಬೈ)ಅವರನ್ನು ಅಗಲಿದ್ದಾರೆ. ಬಸವೇಶ್ವರನಗರದ ಪೊಲೀಸ್‌ ಠಾಣೆ ಹಿಂಭಾಗದಲ್ಲಿರುವ ಮನೆಯಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಪಾರ್ಥಿವ ಶರೀರ ಇಡಲಾಗಿದೆ.

ಗುರುವಾರ ಮುಂಜಾನೆ 7 ಗಂಟೆ ಸುಮಾರಿಗೆ ಹರಿಶ್ಚಂದ್ರ ಘಾಟ್‌ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. “ಆನಂದ ಕೃಷ್ಣ’ ಎಂಬ ಕಾವ್ಯನಾಮದಿಂದ ಖ್ಯಾತಿ ಪಡೆದಿದ್ದ ಅವರು, ಕೃಷಿ, ರಂಗಭೂಮಿ, ಸಾಹಿತ್ಯ, ಕಲೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕಾಸರಗೋಡು ಜಿಲ್ಲೆಯ ಮಂಜೇಶ್ವರ ಸಮೀಪದ ಮೀಯಪದವಿನವರಾದ ಡಿ.ಕೆ.ಚೌಟರು ರಚಿಸಿದ್ದ ಮಿತ್ತಬೈಲ್‌ ಯಮುನಕ್ಕ, ಕರಿಯ ವಜ್ಜೆರೆನ ಕಥೆಕುಲು ತುಳು ಕಾದಂಬರಿಗಳು, ಪಿಲಿಪತ್ತಿ ಗಡಸ್‌, ಮೂಜಿ ಮುಟ್ಟು ಮೂಜಿ ಲೋಕ, ಪಾಟ್‌ ಪಜ್ಜೆಲು ಎಂಬ ತುಳು ನಾಟಕಗಳು ವ್ಯಾಪಕ ಜನ ಮನ್ನಣೆ ಪಡೆದಿದ್ದವು.

Advertisement

ಚೌಟರ ಕಾದಂಬರಿ ಹಾಗೂ ನಾಟಕಗಳಿಗೆ ರಾಜ್ಯ ಸರ್ಕಾರ ಹಾಗೂ ವಿವಿಧ ಸಂಸ್ಥೆಗಳಿಂದ ಹಲವು ಪ್ರಶಸ್ತಿಗಳು ಬಂದಿವೆ. ತುಳು ಸಾಹಿತ್ಯದಲ್ಲಿ ಇವರು ಮಾಡಿರುವ ಸಾಧನೆಗೆ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಲಭಿಸಿದೆ. ಮಂಗಳೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್‌ ನೀಡಿ ಗೌರವಿಸಿದೆ.

ಬಾಂಬೆ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು, ನಂತರ ಘಾನಾ, ನೈಜೀರಿಯಾ ಮತ್ತು ಲಂಡನ್‌ನಲ್ಲಿ ಕೆಲ ವರ್ಷ ನೆಲೆಸಿದ್ದರು. ಅಲ್ಲಿಂದ ಬೆಂಗಳೂರಿಗೆ ಬಂದು, ಸಕ್ರಿಯವಾಗಿ ರಂಗಭೂಮಿ, ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಳ್ಳುವುದರ ಜತೆಗೆ ಕರ್ನಾಟಕ ಚಿತ್ರಕಲಾ ಪರಿಷತ್ತಿನೊಂದಿಗೂ ಉತ್ತಮ ಸಂಬಂಧ ಹೊಂದಿದ್ದರು. ಕಲೆ, ಚಿತ್ರಕಲೆಯ ಆರಾಧಕರಾಗಿಯೂ ಜನಜನಿತರಾಗಿದ್ದರು.

ಹಿರಿಯ ರಂಗ ಸಂಘಟಕ ಡಿ.ಕೆ.ಚೌಟ ಅವರ ನಿಧನವಾರ್ತೆ ಬೇಸರ ತಂದಿದೆ. ಉದ್ಯಮಿಯಾಗಿದ್ದರೂ ರಂಗಭೂಮಿ, ಸಾಹಿತ್ಯ ಹಾಗೂ ಕಲಾಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದ ಅವರು ವಿಶೇಷ ವ್ಯಕ್ತಿತ್ವ ಹೊಂದಿದ್ದರು. ತುಳು ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಚೌಟ ಅವರ ನಿಧನ ಸಾಹಿತ್ಯ ಹಾಗೂ ರಂಗಭೂಮಿ ಕ್ಷೇತ್ರಕ್ಕೆ ದೊಡ್ಡ ನಷ್ಟ.
-ಡಿ.ಕೆ.ಶಿವಕುಮಾರ್‌, ಸಚಿವ

ಬಹುಮುಖ ವ್ಯಕ್ತಿತ್ವದ ಡಿ.ಕೆ. ಚೌಟ ಅವರು, ಕನ್ನಡ ಮತ್ತು ತುಳು ಭಾಷೆಯ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರೊಬ್ಬರೇ ಸಾಂಸ್ಕೃತಿಕ ಲೋಕದಲ್ಲಿ ಬೆಳೆಯಲಿಲ್ಲ, ಅನೇಕ ಕಲಾವಿದರನ್ನು ಹಾಗೂ ಕಲಾತಂಡಗಳನ್ನು ಬೆಳೆಸಿದರು. ಅಪರೂಪದ ಪ್ರತಿಭಾ ಚೇತನವನ್ನು ಕಳೆದುಕೊಂಡಿರುವುದು ತುಂಬಲಾರದ ನಷ್ಟವಾಗಿದೆ.
-ಡಾ. ಜಯಮಾಲ, ಸಚಿವೆ

993-95ರ ಅವಧಿಯಲ್ಲಿ ಬೆಂಗಳೂರು ಬಂಟರ ಸಂಘದ ಸಾರಥ್ಯ ವಹಿಸಿದ್ದ ಚೌಟರು, ಸಂಘದ ಅಭಿವೃದ್ಧಿಗೆ ಅಹರ್ನಿಸಿ ದುಡಿದಿದ್ದರು. 1995ರಲ್ಲಿ ವಿಶ್ವ ಬಂಟರ ಸಮ್ಮೇಳನ ಅದ್ಧೂರಿಯಾಗಿ ನಡೆದಿತ್ತು. ಕಲೆ, ಸಾಹಿತ್ಯ, ರಂಗಭೂಮಿ, ನಾಟಕ ಹೀಗೆ ರಾಜ್ಯದ ಸಾಂಸ್ಕೃತಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.
-ಆರ್‌.ಉಪೇಂದ್ರ ಶೆಟ್ಟಿ, ಅಧ್ಯಕ್ಷ, ಬೆಂಗಳೂರು ಬಂಟರ ಸಂಘ

Advertisement

Udayavani is now on Telegram. Click here to join our channel and stay updated with the latest news.

Next