Advertisement

ಆಂಗ್ಲಭಾಷೆಗೆ ಅನುವಾದಗೊಂಡ ತುಳು ಕಾದಂಬರಿ

08:15 AM Feb 25, 2018 | Team Udayavani |

ತುಳುವಿನ ಮಹತ್ವದ ನಾಟಕಕಾರ, ಕಾದಂಬರಿಕಾರ ಡಾ. ಡಿ.ಕೆ.ಚೌಟರ ತುಳು ಕಾದಂಬರಿ ಮಿತ್ತಬೈಲ್‌ ಯಮುನಕ್ಕೆ  ಇದೀಗ ಮಿತ್ತಬೈಲ್‌ ಯಮುನಕ್ಕ  ಎ ಟೇಲ್‌ ಆಫ್ ಎ ಲ್ಯಾಂಡ್‌ಲಾರ್ಡ್ಸ್ ಹೌಸ್‌ಹೋಲ್ಡ್‌ ಎಂದು ಆಂಗ್ಲಭಾಷೆಗೆ ಅನುವಾದಗೊಂಡು ಬಿಡುಗಡೆಯಾಗಿದೆ. 

Advertisement

ತುಳು ಸಾಹಿತ್ಯ ಪುನರುಜ್ಜೀವನದ ಎರಡನೆಯ ಕಾಲಘಟ್ಟಕ್ಕೆ ಸೇರಿರುವ ಡಿ.ಕೆ. ಚೌಟ ಅವರು ತಮ್ಮ ಕರಿಯವಜ್ಜೆರೆನ ಕತೆಕುಲು, ಪಿಲಿಪತ್ತಿ ಗಡಸ್‌, ಪತ್ತ್ ಪಜ್ಜೆಲು, ಮೂಜಿಮೊಟ್ಟು ಮೂಜಿ ಲೋಕ ಮೊದಲಾದ ತುಳುಕೃತಿಗಳ ಮೂಲಕ ತುಳು ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ಮಿತ್ತಬೈಲ್‌ ಯಮುನಕ್ಕೆ  ಅವರ ಮಹತ್ವದ ತುಳು ಕಾದಂಬರಿ. ಎಸ್‌.ಯು. ಪಣಿಯಾಡಿ ಪ್ರಶಸ್ತಿ ವಿಜೇತ ಈ ಕಾದಂಬರಿಯು ಈಗಾಗಲೇ ಕನ್ನಡಕ್ಕೆ ಅನುವಾದಗೊಂಡಿದ್ದು, ತುಳು ಮಾತ್ರವಲ್ಲ , ಕನ್ನಡ ಓದುಗರು ಮತ್ತು ವಿಮರ್ಶಕರ ಮೆಚ್ಚುಗೆಯನ್ನು ಗಳಿಸಿದೆ. 

ಆಧುನಿಕ ಕಾಲಘಟ್ಟದ 69 ಕವಿಗಳ 114 ತುಳು ಕವನಗಳನ್ನು ಇಂಗ್ಲೀಷಿಗೆ ಅನುವಾದ ಮಾಡಿ ಲ್ಯಾಡ್ಲ್ ಇನ್‌ ಎ ಗೋಲ್ಡನ್‌ ಬೌಲ್‌ ಸಂಪುಟವನ್ನು ಪ್ರಕಟಿಸಿರುವ ಬಿ. ಸುರೇಂದ್ರ ರಾವ್‌ ಮತ್ತು ಕೆ. ಚಿನ್ನಪ್ಪ ಗೌಡ ಈ ಕಾದಂಬರಿಯನ್ನು ಅತ್ಯಂತ ಸಮರ್ಪಕವಾಗಿ ಇಂಗ್ಲೀಷಿಗೆ ಅನುವಾದಿಸಿದ್ದಾರೆ. ಈ ಕೃತಿಯು ವಿಸ್ತಾರವಾದ ಪ್ರಸ್ತಾವನೆ ಮತ್ತು ಸಾಂಸ್ಕೃತಿಕ ಪದಕೋಶವನ್ನು ಹೊಂದಿದ್ದು, ಎ. ಕೆ. ರಾಮಾನುಜನ್‌ ಹೇಳುವ ಅನುವಾದದ ಚೌಕಟ್ಟು ಹೊಂದಿರಬೇಕಾದ ಲಕ್ಷಣಗಳಿಗೆ ಅನುಸಾರವಾಗಿ ಅನುವಾದಗೊಂದಿದೆ. ಕುಂಬಳೆ ಸೀಮೆಯ ಸುಮಾರು 150 ವರ್ಷಗಳ ಕಾಲಾವಧಿಯ ಕೃಷಿ, ಸಂಸ್ಕೃತಿ ಮತ್ತು ರಾಜಕೀಯ ಪಲ್ಲಟಗಳನ್ನು ಈ ಕಾದಂಬರಿ ಬಹಳ ಎಚ್ಚರದಿಂದ ದಾಖಲಿಸಿದೆ. ಚಾರಿತ್ರಿಕ ಕಾಲಘಟ್ಟದ ಗುತ್ತುಕೇಂದ್ರಿತ ಬಂಟ ಸಮಾಜದ ಕೌಟುಂಬಿಕ ಬಿಕ್ಕಟ್ಟುಗಳನ್ನು ಬಿಚ್ಚಿಡುತ್ತ ಒಳಗಿನ ಮತ್ತು ಹೊರಗಿನ ಸಮಾಜಶಾಸ್ತ್ರೀಯ ಶಕ್ತಿಗಳು ಗುತ್ತಿನ ನಿರ್ಮಾಣ, ಪತನ ಮತ್ತು ಮರುಕಟ್ಟುವಿಕೆಗೆ ಕಾರಣವಾಗುವ ಬಹುಮುಖೀ ನೆಲೆಗಳನ್ನು ಕಾದಂಬರಿಕಾರರು ಈ ಕಾದಂಬರಿಯಲ್ಲಿ ನಿರೂಪಿಸಿದ್ದಾರೆ. ಸ್ಥಳೀಯ ಸ್ವಾತಂತ್ರ್ಯ ಹೋರಾಟದ ಇತಿಹಾಸದ ಜೊತೆಗೆ ಗಾಂಧೀ ನೇತೃತ್ವದ ಸ್ವಾತಂತ್ರ್ಯ ಹೋರಾಟದ ಇತಿಹಾಸ ಮತ್ತು ಗಾಂಧೀ ಚಿಂತನೆಗಳ  ಪ್ರಭಾವವನ್ನು ಈ ಕಾದಂಬರಿಯಲ್ಲಿ ಸೆರೆಹಿಡಿಯಲಾಗಿದೆ. ಕಾಸರಗೋಡು, ಮಂಜೇಶ್ವರ, ಕುಂಬಳೆ ಸೀಮೆಯು ಆಧುನಿಕತೆಗೆ ತೆರೆದುಕೊಳ್ಳುವ ಸಂದರ್ಭದಲ್ಲಿ ಈ ಭಾಗದ ಜನರ ಸಂಭ್ರಮ ಮತ್ತು ಸಂಕಟಗಳನ್ನು ಈ ಕಾದಂಬರಿ ಚಿತ್ರಿಸುತ್ತದೆ. ವಿಮರ್ಶಕ ಸಿ. ಎನ್‌. ರಾಮಚಂದ್ರನ್‌ ಹೇಳುವಂತೆ- “ಗಂಡಸಿನ ಕ್ರೌರ್ಯ ಮತ್ತು ಹೆಣ್ಣಿನ ಶೋಷಣೆಯನ್ನು ಎದೆ ನಡುಗುವ ಹಾಗೆ ಈ ಕಾದಂಬರಿ ಪ್ರಸ್ತುತಪಡಿಸುತ್ತದೆ’. 

“ಈ ಕಾದಂಬರಿಗೆ ಪುರಾಣದ ಗುಣ ಮತ್ತು ವ್ಯಾಪ್ತಿ ಇದೆ. ಹೋರಾಟ, ಮಹತ್ವಾಕಾಂಕ್ಷೆ, ಅಸಹನೆ, ತಾಯ್ತನದ ಪ್ರೀತಿ- ಇವುಗಳು ಮುಖಾಮುಖೀಯಾಗುವ ಸಂಕೀರ್ಣ ಜಗತ್ತನ್ನು ಈ ಕಾದಂಬರಿಯಲ್ಲಿ ಕಾಣಬಹುದು’ ಎಂದು ಯು.ಆರ್‌. ಅನಂತಮೂರ್ತಿ ಹೇಳಿ¨ªಾರೆ. “ತುಳುವ ಜಗತ್ತಿನ ಜಾನಪದ ಮತ್ತು ಚಾರಿತ್ರಿಕ ಅನುಭವಗಳನ್ನು ಸೆರೆ ಹಿಡಿಯುವ ಈ ಕಾದಂಬರಿಯಲ್ಲಿ ಹಿಂಸೆ ಮತ್ತು ಅಹಿಂಸೆಗಳ ಪರಸ್ಪರ ಮುಖಾಮುಖೀಯಿದೆ. ಶಕ್ತಿ ರಾಜಕೀಯದ ಪರಿಣಾಮಗಳನ್ನು ಚಿಕಿತ್ಸಕವಾಗಿ ಮತ್ತು ವಿಮಶಾìತ್ಮಕವಾಗಿ ಈ ಕಾದಂಬರಿಯು ವಿವೇಚಿಸುತ್ತದೆ’ ಎಂದು ಬಿ. ಎ. ವಿವೇಕ ರೈ ಅವರು ಅಭಿಪ್ರಾಯಪಟ್ಟಿದ್ದಾರೆ. 

ಕಾದಂಬರಿಯ ಕಥನಶಕ್ತಿ ಮತ್ತು ಕಾದಂಬರಿಕಾರರ ರಾಜಕೀಯ ಸೂಕ್ಷ್ಮ ಸಂವೇದನೆಯನ್ನು ಗಮನಿಸಿ, ಇದರ ಅನುಭವವು ಜಗತ್ತಿನ ಇಂಗ್ಲಿಶ್‌ ಓದುಗರಿಗೆ ಆಗಲಿ ಎಂಬ ಆಶಯದಿಂದ ಹಲವು ಸವಾಲುಗಳ ನಡುವೆಯೂ ಈ ಕಾದಂಬರಿಯನ್ನು ಅನುವಾದ ಮಾಡಿರುವುದಾಗಿ ಅನುವಾದಕರು ಹೇಳಿಕೊಂಡಿದ್ದಾರೆ. 

Advertisement

ಮಿತ್ತಬೈಲ್‌ ಯಮುನಕ್ಕ
(ಎ ಟೇಲ್‌ ಆಪ್‌ ಲ್ಯಾಂಡ್‌ಲಾರ್ಡ್ಸ್‌ ಹೌಸ್‌ಹೋಲ್ಡ್‌)
ತುಳುಮೂಲ: ಡಿ. ಕೆ. ಜೌಟ
ಇಂಗ್ಲಿಶ್‌ ಅನುವಾದ : ಬಿ. ಸುರೇಂದ್ರ ರಾವ್‌, ಕೆ. ಚಿನ್ನಪ್ಪ ಗೌಡ
ಪ್ರ.: ಆಕೃತಿ ಆಶಯ ಪಬ್ಲಿಕೇಶನ್ಸ್‌ , ಲೈಟ್‌ಹೌಸ್‌ ಹಿಲ್‌ ರೋಡ್‌, ಮಂಗಳೂರು-1    ಸಂಪರ್ಕ :  9448254976

ಸಿರಿ

Advertisement

Udayavani is now on Telegram. Click here to join our channel and stay updated with the latest news.

Next