ಮುಂಬಯಿ: ನಾಗೇಶ್ವರ ಸಿನಿ ಕಂಬೈನ್ಸ್ ಲಾಂಛನದ ಪ್ರಸ್ತುತಿಯಲ್ಲಿ ಸಿದ್ಧಗೊಂಡ ಹಾಸ್ಯ ಪ್ರಧಾನ “ಅಂಬರ್ ಕ್ಯಾಟರರ್ಸ್’ ತುಳು ಸಿನೆಮಾ ಸಿನಿಪ್ರೇಕ್ಷಕರಿಗೆ ಹಾಸ್ಯದ ಕಚಗುಳಿಯಿಡಲು ನ. 24ರಂದು ಕರ್ನಾಟಕ ಕರಾವಳಿಯಾದ್ಯಾಂತ ಬಿಡುಗಡೆಗೊಳ್ಳಲಿದೆ ಎಂದು ಭಂಡಾರಿ ಸಮಾಜದ ಮುತ್ಸದ್ಧಿ, ಕೊಡುಗೈದಾನಿ, ಭಂಡಾರಿ ಮಹಾಮಂಡಲದ ಸಂಸ್ಥಾಪಕ, ಸಿನೆಮಾ ನಿರ್ಮಾಪಕ ಕಡಂದಲೆ ಸುರೇಶ್ ಎಸ್. ಭಂಡಾರಿ ತಿಳಿಸಿದರು.
ನ. 20 ರಂದು ಮಂಗಳೂರು ಪ್ರಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಚಿತ್ರ ಬಿಡುಗಡೆ ಬಗ್ಗೆ ಮಾಹಿತಿ ನೀಡಿದ ಸುರೇಶ್ ಎಸ್. ಭಂಡಾರಿ, ಅಂಬರ್ ಕ್ಯಾಟರರ್ಸ್ ಮೂಲಕ ತುಳುಚಿತ್ರರಂಗಕ್ಕೆ ನನ್ನ ಸುಪುತ್ರ, ಪ್ರತಿಭಾವಂತ ಕಲಾವಿದ, ಚಲನಚಿತ್ರ ರಂಗದ ಹೊಸ ಪ್ರತಿಭೆಯಾಗಿ ಸೌರಭ್ ಭಂಡಾರಿ ಅವರನ್ನು ಪರಿಚಯಿಸಿದ್ದೇವೆ. ಕರಾಟೆಯಲ್ಲಿ ಬ್ಲಾÂಕ್‌ಬೆಲ್ಟ್ ಆಗಿದ್ದು, ಸದ್ಯ ತೌಳವ ಸೂಪರ್‌ಸ್ಟಾರ್ ಎಂದೇ ಪ್ರಸಿದ್ಧಿಯ ಸೌರಭ್ ಭಂಡಾರಿ ಈ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸುತ್ತಿದ್ದಾನೆ. ಬಾಲ್ಯದಿಂದಲೇ ನಟ ಆಗಬೇಕೆಂಬ ಆತನ ಕನಸು ಈ ಸಿನಿಮಾ ಮೂಲಕ ನನಸಾಗಿಸಿದ್ದೇವೆೆ. ನಿರ್ದೇಶಕ ಜೈ ಪ್ರಸಾದ್ ಬಜಾಲ್ ಚಿತ್ರ ರಚನೆ ಮತ್ತು ನಿರ್ದೇಶನದಲ್ಲಿ ರಚಿಸಲ್ಪಟ್ಟ ಈ ಚಿತ್ರದಲ್ಲಿ ಸ್ಯಾಂಡಲ್‌ವುಡ್ ನಟಿ ಸಿಂಧು ಲೋಕನಾಥ್ ನಾಯಕಿ ನಟಿಯಾಗಿ ಸೌರಭ್‌ಗೆ ಸಾಥ್ ನೀಡಿದ್ದು, ಸೌರಭ್ ನಟನೆ ಹಾಗೂ ಡಾನ್ಸ್ ನೋಡಿ ಇಡೀ ಚಿತ್ರತಂಡವೇ ದಂಗಾಗಿದ್ದು ಈ ಯುವಪ್ರತಿಭೆ ಚಿತ್ರರಂಗದಲ್ಲಿ ಉತ್ತಮ ಭವಿಷ್ಯವನ್ನು ಹೊಂದಿದ್ದಾರೆ ಎಂದು ಚಲನಚಿತ್ರ ಲೋಕದ ದಿಗ್ಗಜರ ಮಾತಾಗಿದೆ. ಆದ್ದರಿಂದ ಅತ್ಯಧಿಕ ಸಂಖ್ಯೆಯಲ್ಲಿ ಈ ಚಿತ್ರವನ್ನು ನೋಡಿ ಚಿತ್ರಪ್ರೇಮಿಗಳೇ ಇಂತಹ ಯುವ ಪ್ರತಿಭೆಗೆ ಆಶೀರ್ವದಿಸಿ ಭವ್ಯ ಭವಿಷ್ಯ ರೂಪಿಸಬೇಕು ಎಂದರು.
ಅಂಬರ್ ಕ್ಯಾಟರರ್ಸ್ ಚಿತ್ರವು ಯಾವುದೇ ಬಾಲಿವುಡ್ ಸಿನಿಮಾಕ್ಕೂ ಕಡಿಮೆಯಿಲ್ಲದಂತೆ ಮೂಡಿಬರಬೇಕು ಎಂಬ ಕಾರಣಕ್ಕೆ ನಾವು ಈ ಚಿತ್ರ ನಿರ್ಮಾಣದಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ. ಸ್ಯಾಂಡಲ್‌ವುಡ್‌ನ ನಟರಾದ ಭಾರತಿ ವಿಷ್ಣುವರ್ಧನ್, ಶರತ್ ಲೋಹಿತಾಶ್ವ, ಬ್ಯಾಂಕ್ ಜನಾರ್ದನ್, ಕರಾವಳಿಯ ಅನುಭವಿ ರಂಗನಟ ಮತ್ತು ಸಿನೆಮಾ ತಾರೆಯರಾದ ನವೀನ್ ಡಿ. ಪಡೀಲ್, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರು, ಸುಂದರ್ ರೈ ಮಂದಾರ ಇವರ ಅಭಿನಯದಲ್ಲಿ ಈ ಚಿತ್ರ ನಿರ್ಮಿಸಲಾಗಿದೆ. ಚಿತ್ರದ ತಾಂತ್ರಿಕ ವರ್ಗದಲ್ಲೂ ನುರಿತ ವ್ಯಕ್ತಿಗಳನ್ನೇ ಆರಿಸಿಕೊಂಡಿದ್ದೇವೆ. ಸಂತೋಷ್ ರೈ ಪಾತಾಜೆ ಅವರ ಕ್ಯಾಮೆರಾ ಕಣ್ಣಿನಲ್ಲಿ ಇಡೀ ಸಿನಿಮಾ ಮೂಡಿ ಬಂದಿದ್ದು, ಪ್ರತಿಯೊಂದು ದೃಶ್ಯ ಕೂಡಾ ಕಣ್ಣಿಗೆ ಮುದ ನೀಡಲಿದೆ. ಇದನ್ನು ರಾಷ್ಟ್ರದ ಸರ್ವ ಸಿನೆಮಾಪ್ರಿಯರು ನೋಡುವಂತಿದೆ ಎನ್ನುವ ಆಶಯ ನಮ್ಮದು. ಈ ರಸದೌತಣ ಸವಿಯಲು ಸಿದ್ಧರಾಗಿರಿ ಎಂದು ನಾಡಿನ ಸಮಸ್ತ ಜನತೆಗೆ ಆಹ್ವಾನಿಸಿದರು.
ಈ ಚಿತ್ರಕ್ಕೆ ಕದ್ರಿ ಮಣಿಕಾಂತ್ ಸಂಗೀತ ನೀಡಿದ್ದು, ಹಾಡುಗಳು ಈಗಾಗಲೇ ಜನರ ನಾಲಿಗೆಯಲ್ಲಿ ನಲಿದಾಡುತ್ತಿದೆ. ಅದರಲ್ಲೂ ಬಾಲಿವುಡ್ ಸಂಗೀತ ನಿರ್ದೇಶಕ ಮತ್ತು ಗಾಯಕ ಶಂಕರ್ ಮಹಾದೇವನ್ ಹಾಡಿರುವ ಜೈ ಹನುಮಾನ್ ಮತ್ತು ವಿಸ್ಮಯ ವಿನಾಯಕ್ ಹಾಡಿರುವ ಲಿಂಗುನ ಪುಲ್ಲಿನ ಹಾಡುಗಳು ಚಾರ್ಟ್ ಬಸ್ಟರ್‌ಗಳಾಗಿವೆ. ತುಳು ಭಾಷೆಯ ಮೇಲಿನ ಅನನ್ಯ ಪ್ರೀತಿಯಿಂದ ಈ ಸಿನಿಮಾ ಸುರೇಶ್ ಎಸ್. ಭಂಡಾರಿ ನಿರ್ಮಿಸಿದ್ದಾರೆೆ. ಅಂಬರ್ ಕ್ಯಾಟರರ್ಸ್ ಒಂದು ಕುಟುಂಬ ಸಮೇತ ನೋಡಬಹುದಾದ ಸಿನಿಮಾವಾಗಿದ್ದು ಸಂಪೂರ್ಣ ಕಾಮಿಡಿ ಕತೆಯನ್ನು ಹೊಂದಿದೆ. ಚಿತ್ರದ ಹಾಡುಗಳನ್ನು ಈಗಾಗಲೇ ಸಂಗೀತಪ್ರಿಯರು ಮೆಚ್ಚಿಕೊಂಡಿದ್ದು ಚಿತ್ರವೂ ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡಲು ಸಜ್ಜಾಗಿದೆ ಎಂದು ಚಿತ್ರದ ನಾಯಕ ನಟ ಸೌರಭ್ ಸುರೇಶ್ ಭಂಡಾರಿ ತಿಳಿಸಿದರು.
2016 ನೇ ಅ. 16ರಂದು ಉಡುಪಿ ಬಾಕೂìರು ಅಲ್ಲಿನ ಕಚ್ಚಾರು ಶ್ರೀನಾಗೇಶ್ವರ ದೇವಸ್ಥಾನದ ಆವರಣದಲ್ಲಿ ವಿಶ್ವನಾಥ ಶಾಸ್ತ್ರಿ ಬಾಕೂìರು ಇವರ ಶುಭಾನುಗ್ರಹದೊಂದಿಗೆ ಕನ್ನಡ ಚಲನಚಿತ್ರದ ಯಶಸ್ವಿ ನಿರ್ದೇಶಕ ಎಂ. ಡಿ. ಶ್ರೀಧರ್ ಕ್ಲಾಪ್ ಮಾಡಿ ಮುಹೂರ್ತ ನೆರವೇರಿಸಿದ್ದರು. ಹರೀಶ್ ಕೊಟ್ಟಾಡಿ, ದೇವಿಪ್ರಕಾಶ್, ವಿಜಯಕುಮಾರ್ ಕೋಡಿಯಾಲ್‌ಶೈಲ್, ನಿತಿನ್ ಬಂಗೇರ ಚಿಲಿಂಬಿ, ಪ್ರಶಾಂತ್ ಆಳ್ವ, ಸತೀಶ್ ಬ್ರಹ್ಮಾವರ, ಲತೀಶ್ ಪೂಜಾರಿ ಮಡಿಕೇರಿ, ಅಭಿಷೇಕ್ ಧರ್ಮಪಾಲ್ ಶೆಟ್ಟಿ ಮತ್ತಿತರರ ಸಹಕಾರದಲ್ಲಿ ಯೋಗ್ಯವಾಗಿ ಮೂಡಿ ಬಂದಿದೆ. ಪತ್ರಿಕಾ ಗೋಷ್ಠಿಯಲ್ಲಿ ಸಾಯಿ ಕೃಷ್ಣ, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರು ಉಪಸ್ಥಿತರಿದ್ದರು.
ಚಿತ್ರ-ವರದಿ: ರೊನಿಡಾ ಮುಂಬಯಿ