ಈಗಿನ ಸೃಜನಶೀಲತೆಯ ಗುಣಮಟ್ಟವನ್ನು ಅಳೆಯು ವಾಗ ಏನೇನೂ ಸಾಲದು ಎಂದು ಸಾರಾಸಗಟಾಗಿ ತಿರಸ್ಕರಿಸುವಂತೆಯೂ ಇಲ್ಲ, ಎಲ್ಲವೂ ಸರಿಯಿದೆ ಎಂದು ಒಪ್ಪಿಕೊಳ್ಳುವಂತೆಯೂ ಇಲ್ಲ.
ಮೌಲ್ಯಯುತವಾದ ಕೆಲವು ಬರೆಹಗಳೂ ಕಾಣುತ್ತೇವೆ, ಆದರೆ ಈಗೀಗ ಉಡಾಫೆ ಬರೆವಣಿಗೆಗಳೇ ಹೆಚ್ಚಾಗಿ ಕಾಣಿಸುತ್ತಿರುವುದು ವಿಷಾದನೀಯ ಎಂದು ನಸು ನಕ್ಕಿದ್ದರು. ಅದನ್ನು ಮತ್ತಷ್ಟು ಬೆಳೆಸಲು ಬಯಸಲಿಲ್ಲ. ಅದು ಪ್ರೊ|ಅಮೃತ ಸೋಮೇಶ್ವರ ಅವರ ಹುಟ್ಟುಗುಣ.
Advertisement
ಹಿಂದೆ ದುಡ್ಡು ಮಾಡುವ ಹಂಬಲದಿಂದ ಬರೆಯುತ್ತಿರಲಿಲ್ಲ, ಅಂಥ ಕಲ್ಪನೆಯೂ ಆಗಿನವರಿಗೆ ಇರಲಿಲ್ಲ. ಈಗ ಸುಲಭವಾಗಿ ಸಂಪಾದನೆ ಮಾಡಬಹುದು ಎನ್ನುವ ದಾರಿ ಗೋಚರಿಸಿದೆ. ಹಾಗೇ ಬರೆಹಗಳಿಗೆ ಸಂಭಾವನೆಯನ್ನೂ ಕೊಡುತ್ತಾರೆ. ಅವರಿಗೆ ಬರೆಹ ಬೇಕು, ಇವರಿಗೆ ಹಣ ಬೇಕು, ಇಬ್ಬರೂ ಸಂತೃಪ್ತರು. ಓದುಗ ಆ ಬರೆಹಗಳನ್ನು ಹೇಗೆ ಬೇಕಾದರೂ ಅರ್ಥೈಸಿಕೊಳ್ಳಬಹುದು. ಬರೆಹದ ಮೂಲಕ ಸಾಧಿಸುವ ಹಂಬಲ, ಹಣ ಸಂಪಾದಿಸುವ ಬಯಕೆ ಜತೆಗೆ ನಿಸ್ಪೃಹತೆಯೂ ಇರಬೇಕು, ಅದು ಈಗಿನ ಬರೆಹಗಳಲ್ಲಿ, ಬರೆಹಗಾರರಲ್ಲಿ ಬಹಳಷ್ಟು ಕಡಿಮೆಯೆನಿಸುತ್ತಿದೆ ಎನ್ನುವುದು ಅವರ ಮಾತಿನ ನಿಗೂಢ ಅರ್ಥವಾಗಿತ್ತು.
Related Articles
Advertisement
ಚಪಲಕ್ಕಾಗಿ ಆಗಲೀ, ಜನಪ್ರಿಯತೆಗೇ ಆಗಲಿ ಯಕ್ಷಗಾನ ಪ್ರಸಂಗ ಬರೆಯಲು ಮುಂದಾಗಬಾರದು. ಪ್ರಸಂಗ ಬರೆಯುವುದು ಸುಲಭವಲ್ಲ. ಕತೆಯಲ್ಲಿ ಆರೋಹಣ, ಅವರೋಹಣವಿರಬೇಕು, ಸಂದೇಶವಿರಬೇಕು, ಯಾವ ಪದ್ಯಕ್ಕೆ ಯಾವ ಛಂದಸ್ಸು ಇರಬೇಕು ಎನ್ನುವ ನಿಯಮವಿದೆ, ಅದನ್ನು ಪಾಲಿಸಬೇಕು. ಎಲ್ಲವನ್ನೂ ಗಾಳಿಗೆ ತೂರಿ ತಾನು ಬರೆದದ್ದೇ ಪ್ರಸಂಗ ಎನ್ನುವುದಾದರೆ ಅದೇ ಸರಿ ಎನ್ನುವುದಾದರೆ ಮೌಲ್ಯ ಕುಸಿದಿರಲು ಸಾಧ್ಯವೇ ? ಎನ್ನುವುದು ಅವರ ಮೂಲ ಪ್ರಶ್ನೆಯಾಗಿತ್ತು.
ಬೆರಳೆಣಿಕೆ ಸಂಖ್ಯೆಯ ಮಂದಿಯಷ್ಟೇ ಈಗ ಉತ್ತಮ ಪ್ರಸಂಗಗಳನ್ನು ಬರೆಯುತ್ತಿದ್ದಾರೆ. ಉಳಿದಂತೆ ಬಹುತೇಕ ಮಂದಿ “ಸಂತೆಗೆ ಮೂರು ಮೊಳ’ ಹೆಣೆದು ಚಪಲ ತೀರಿಸಿಕೊಳ್ಳುತ್ತಿರುವವರು. ರಾಗ, ತಾಳ, ಛಂದಸ್ಸು ಯಾವುದೂ ಗೊತ್ತಿಲ್ಲದೆ ಪ್ರಸಂಗ ಬರೆಯುವುದು ಯಾವುದೇ ಕಾರಣಕ್ಕೂ ಯಕ್ಷಗಾನದ ಮೌಲ್ಯವನ್ನು ಹೆಚ್ಚಿಸದು ಎನ್ನುವುದು ಅವರ ಖಚಿತ ಮಾತಾಗಿತ್ತು.
ಪ್ರೊ| ಅಮೃತ ಸೋಮೇಶ್ವರ ಅವರ ಸಾಹಿತ್ಯ, ಸಂಶೋಧನೆ, ಜನಪದ ಅಧ್ಯಯನ, ಯಕ್ಷಗಾನ ಪ್ರಸಂಗ ರಚನೆ ಹೀಗೆ ಎಲ್ಲ ಪ್ರಕಾರಗಳಲ್ಲಿ ಬಹುತೇಕರು ಸಾಧಿಸದ ಸಾಧನೆಯನ್ನು ಮಾಡಿದ್ದರೂ ಅವರನ್ನು ಸರಕಾರ, ಸಾರಸ್ವತ ಲೋಕ ಗುರುತಿಸಿಲ್ಲ ಮತ್ತು ಅವರಿಗೆ ಸಲ್ಲಬೇಕಾದ ಗೌರವ ಸಿಗಲಿಲ್ಲ. ಇದು ಮುಖಸ್ತುತಿಯೂ ಅಲ್ಲ, ತುಟಿ ಮೇಲಿನ ಮಾತೂ ಅಲ್ಲ. ಹೀಗಾಗಿ ನಾನು ಅವರಲ್ಲಿ “ನೀವು ಎಷ್ಟೇ ಸಾಧನೆ ಮಾಡಿದ್ದರೂ ಘಟ್ಟವನ್ನು ಏರಲಾಗದ, ವಿಮರ್ಶಕರು ಗುರುತಿಸಲಾಗದ ಸಾಹಿತಿಯಲ್ಲವೇ?’ ಎಂಬ ನನ್ನ ಅನಿವಾರ್ಯ ಪ್ರಶ್ನೆಯನ್ನು ಅವರ ಮುಂದಿಟ್ಟಿದ್ದೆ.ಅಮೃತ ಸೋಮೇಶ್ವರರು, ಹಾಗೇ ಮೌನವಾಗಿದ್ದು ಸತ್ಯವನ್ನು ಒಪ್ಪಿಕೊಂಡರು. ನಾನು ಘಟ್ಟದ ಆಚೆಗೆ ತಲುಪಲಿಲ್ಲ, ಘಟ್ಟ ಏರಲಾಗಲಿಲ್ಲವೆಂದರು.ನಾನು ಯಾವ ವಿಮರ್ಶಕ ವಲಯವನ್ನೂ ತಲುಪಲು ಪ್ರಯತ್ನಿಸಲಿಲ್ಲ. ಹಾಗೆ ಮಾಡುವುದು ನನ್ನ ಜಾಯಮಾನವೂ ಅಲ್ಲ. ಸಾಹಿತ್ಯ ವಿಮರ್ಶಕರ ಗುಂಪು ಇರುವುದು ಗೊತ್ತಿತ್ತು. ನನ್ನ ಮಟ್ಟಿಗೆ ನಾನು ಕೆಲಸ ಮಾಡಿದ್ದೇನೆ. ತೃಪ್ತಿಯಿದೆ. ಪ್ರಶಸ್ತಿಗೆ ಹಾತೊರೆಯಲಿಲ್ಲ, ತಾವಾಗಿಯೇ ಬಂದ ಪ್ರಶಸ್ತಿಗಳನ್ನು ನಮ್ರತೆಯಿಂದ ಸ್ವೀಕರಿಸಿದ್ದೇನೆ ಎಂಬುದು ಪ್ರೊ| ಅಮೃತ ಸೋಮೇಶ್ವರ ನಿರ್ಲಿಪ್ತದ ನುಡಿಯಾಗಿತ್ತು. ಸಾಹಿತ್ಯ ಚಳವಳಿಗಳನ್ನು ಬೇರೆ ಬೇರೆ ರೀತಿಯಲ್ಲಿ ಗುರುತಿಸುವ ಕಾಲವಿತ್ತು. ಹಳೆಗನ್ನಡ, ಹೊಸಗನ್ನಡ, ನವ್ಯ, ನವೋದಯ, ಪ್ರಗತಿಶೀಲ, ಬಂಡಾಯ, ದಲಿತ ಹೀಗೆ. ಕೊನೆಯದಾಗಿ ದಲಿತ ಮತ್ತು ಬಂಡಾಯ ಸಾಹಿತ್ಯ ಚಳವಳಿಗಳು ಮೌನವಾಗಲು ಅವರು ಕಂಡುಕೊಡಿರು ವುದೇನೆಂದರೆ ಯಾರಿಗೇ ಆದರೂ ಒಂದು ಹಂತಕ್ಕೆ ತಲುಪಿದ ಮೇಲೆ, ತನಗೆ ಅದರಿಂದ ಸಿಗಬೇಕಾದ ಸ್ಥಾನಮಾನ, ಸವಲತ್ತುಗಳು ಸಿಕ್ಕಿದ ಮೇಲೆ ಒಂಥರಾ ಸಂತೃಪ್ತಿ ಆವರಿಸಿಕೊಳ್ಳುತ್ತದೆ. ಈ ಹಂತ ತಲುಪಿದ ಮೇಲೆ ಎಲ್ಲವೂ ಸ್ತಬ್ಧ. ದಲಿತ, ಬಂಡಾಯ ಚಳವಳಿಯ ಮುಂಚೂಣಿಯಲ್ಲಿದ್ದವರು ಈಗ ತಾವು ಅನುಭವಿಸಿದ್ದು ಸಾಕು ಅಂದುಕೊಡಿರಬೇಕು, ಆದ್ದರಿಂದಲೇ ಆ ಚಳವಳಿಗಳು ನಿಂತಿವೆ ಎನ್ನುವಂತಾಗಿದೆ. ಆದರೆ ಆಂತರಿಕವಾಗಿ ಕೆಲವರ ಬರೆಹಗಳಲ್ಲಿ ಇನ್ನೂ ಅದರ ಮುಂದುವರಿಕೆ ಎನ್ನಬಹುದಾದ ಲಕ್ಷಣಗಳಿವೆ. - ಚಿದಂಬರ ಬೈಕಂಪಾಡಿ, ಹಿರಿಯ ಪತ್ರಕರ್ತ