Advertisement

ಜಂಟಿ ಸಂಸದೀಯ ಸಮಿತಿ ತನಿಖಾಸ್ತ್ರ!; ಇದು ಹೇಗೆ ಕಾರ್ಯನಿರ್ವಹಿಸುತ್ತದೆ? ಅಧಿಕಾರವೇನು?

03:29 AM Dec 24, 2024 | Team Udayavani |

ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಘೋಷಣೆಯಾದ “ಒಂದು ದೇಶ ಒಂದು ಚುನಾವಣೆ’ಯನ್ನು ಜಾರಿಗೆ ತರಲು ಅಗತ್ಯವಿರುವ ಸಂವಿಧಾನ ತಿದ್ದುಪಡಿ ಮಸೂದೆಗಳನ್ನು ಕೇಂದ್ರ ಸರಕಾರ ಲೋಕಸಭೆಯಲ್ಲಿ ಮಂಡಿಸಿದೆ. ಇದಾದ ಬಳಿಕ ಇದನ್ನು ಪರಿಶೀಲನೆಗಾಗಿ ಜಂಟಿ ಸಂಸದೀಯ ಸಮಿತಿ(ಜೆಪಿಸಿ)ಗೆ ಒಪ್ಪಿಸಲಾಗಿದೆ. ಈ ಹಿಂದೆಯೂ ಹಲವು ಮಸೂದೆಗಳನ್ನು, ಪ್ರಕರಣಗಳನ್ನು ಜೆಪಿಸಿಗೆ ಒಪ್ಪಿಸಲಾಗಿದೆ. ಹೀಗಾಗಿ ಏನಿದು ಜೆಪಿಸಿ? ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ? ಇದಕ್ಕಿರುವ ಅಧಿಕಾರಗಳೇನು? ಏಕೆ ರಚನೆ ಮಾಡಲಾಗುತ್ತದೆ ಎಂಬುದರ ಸ್ಥೂಲನೋಟ ಇಲ್ಲಿದೆ.

Advertisement

ದೇಶದಲ್ಲಿ ನಡೆಯುವ ಅಪರಾಧಗಳನ್ನು ತನಿಖೆ ಮಾಡಲು ಪೊಲೀಸರಿಂದ ಹಿಡಿದು ಸಿಬಿಐವರೆಗೆ ಹಲವು ಹಂತಗಳ ತನಿಖಾ ಏಜೆನ್ಸಿಗಳು ರಚನೆಯಾಗಿವೆ. ಅದೇ ರೀತಿ ದೇಶದಲ್ಲಿ ಮಹಾನ್‌ ಬದಲಾವಣೆಗಳನ್ನು ತರುವಂತಹ ಕಾಯ್ದೆಗಳನ್ನು ಜಾರಿ ಮಾಡುವಾಗ ಅಥವಾ ದೇಶಕ್ಕೆ ಕಂಟಕ ತಂದೊಡ್ಡಬಲ್ಲ ಘಟನೆಗಳು ನಡೆದಾಗ ಅವುಗಳ ತನಿಖೆ ಮಾಡಲು ಜಂಟಿ ಸಂಸದೀಯ ಸಮಿತಿ (ಜೆಪಿಸಿ)ಯನ್ನು ರಚನೆ ಮಾಡಬೇಕು ಎಂದು ಕೂಗು ಸಂಸತ್ತಲ್ಲಿ ಕೇಳಿಬರುತ್ತದೆ. ಇದು ಸಂಸದರನ್ನು ಒಳಗೊಂಡಿ­ರುವ ಸಮಿತಿಯಾಗಿದ್ದು, ಜೆಪಿಸಿ ಅಧಿಕಾರದಲ್ಲಿರುವವರೆಗೆ ಇಲ್ಲಿರುವ ಸಂಸದರು ತನಿಖೆ ನಡೆಸುವ ಸಂಪೂರ್ಣ ಅಧಿಕಾರವನ್ನು ಹೊಂದಿರುತ್ತಾರೆ. ಇದಕ್ಕಾಗಿ ಅಗತ್ಯ ಎನಿಸಿದವರಿಗೆ ಸಮನ್ಸ್‌ ನೀಡುವ ಅಧಿಕಾರವನ್ನು ಇವರಿಗೆ ನೀಡಲಾಗಿರುತ್ತದೆ.

ಜೆಪಿಸಿಯಲ್ಲಿ ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರು
ಜಂಟಿ ಸಂಸದೀಯ ಸಮಿತಿ ಹೆಸರೇ ಹೇಳುವಂತೆ ಸಂಸತ್ತಿನ ಉಭಯ ಸದನಗಳ ಸಂಸದರನ್ನು ಒಳಗೊಂಡಿ­ರುವ ಸಮಿತಿಯಾಗಿದ್ದು, ಇದರಲ್ಲಿ ಆಡಳಿತ ಮತ್ತು ವಿಪಕ್ಷಗಳ ಸದಸ್ಯರಿರುತ್ತಾರೆ. ಈ ಸಮಿತಿಯ ಅವಧಿ ಮುಕ್ತಾಯವಾಗುತ್ತಿದ್ದಂತೆ ಇದನ್ನು ರದ್ದು ಮಾಡಲಾ­ಗುತ್ತದೆ. ಸಮಿತಿಯಲ್ಲಿ ಇಂತಿಷ್ಟೇ ಸದಸ್ಯರಿರಬೇಕು ಎಂಬು­ದಕ್ಕೆ ಯಾವುದೇ ನಿಯಮವಿಲ್ಲ. ಆದರೂ ರಾಜ್ಯಸಭೆ­ಯಿಂದ ಆಯ್ಕೆಯಾಗುವ ಸದಸ್ಯರಿಗಿಂತ ಲೋಕಸಭೆ ಸದಸ್ಯರ ಸಂಖ್ಯೆ ದುಪ್ಪಟ್ಟಾಗಿರುತ್ತದೆ. ಸ್ವಾಭಾವಿಕವಾಗಿ ಜೆಪಿಸಿಯ ಅಧ್ಯಕ್ಷರು ಆಡಳಿತ ಪಕ್ಷದವರೇ ಆಗಿರುತ್ತಾರೆ. ಸಂಸತ್ತಿನಲ್ಲಿ ವಿವಿಧ ಪಕ್ಷಗಳು ಹೊಂದಿರುವ ಸ್ಥಾನಗಳ ಆಧಾರದಲ್ಲಿ ಆ ಪಕ್ಷದ ಸದಸ್ಯರು ಸಮಿತಿಯಲ್ಲಿ ಸ್ಥಾನ ಪಡೆದುಕೊಳ್ಳುತ್ತಾರೆ.

ಸಂಸತ್‌ ನಿರ್ಧಾರದ ಮೂಲಕ ಜಂಟಿ ಸಂಸದೀಯ ಸಮಿತಿ
ಯಾವುದೇ ಜಂಟಿ ಸಂಸದೀಯ ಸಮಿತಿಯನ್ನು ರಚನೆ ಮಾಡುವ ಮೊದಲು ಅದರ ಬಗ್ಗೆ ಸಂಸತ್ತಿನಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ. ಸಂಸತ್ತಿನ ಯಾವುದಾದರೂ ಒಂದು ಸದನದಲ್ಲಿ ಇದರ ಬಗ್ಗೆ ನಿಲುವಳಿ ಮಂಡಿಸಲಾಗುತ್ತದೆ. ಬಳಿಕ ಮತ್ತೂಂದು ಸದನ ಇದಕ್ಕೆ ಒಪ್ಪಿಗೆ ಸೂಚಿಸುತ್ತದೆ. ಇದಕ್ಕೂ ಮುನ್ನ ಸಂಸತ್‌ನಲ್ಲಿ ಮಸೂದೆಗಳು ಮಂಡನೆಯಾದ ಬಳಿಕ ಅಥವಾ ಯಾವುದೇ ದೇಶದ ಘನತೆಗೆ ಧಕ್ಕೆಯಾಗುವ ಘಟನೆಗಳು ನಡೆದಾಗ ಅದರ ಪರಿಶೀಲನೆಗಾಗಿ ಜೆಪಿಸಿ ರಚನೆ ಮಾಡಲು ಚರ್ಚೆ ನಡೆಯುತ್ತದೆ. ಆಡಳಿತ ಮತ್ತು ವಿಪಕ್ಷಗಳು ಒಪ್ಪಿಕೊಂಡ ಬಳಿಕ ನಿಲುವಳಿ ಮಂಡಿಸಲಾಗುತ್ತದೆ. ಬಳಿಕ ಸ್ಪೀಕರ್‌ ಜೆಪಿಸಿಯನ್ನು ರಚನೆ ಮಾಡುತ್ತಾರೆ.

ಜೆಪಿಸಿ ಕೈಗೊಳ್ಳುವ ಪ್ರಮುಖ ಕಾರ್ಯಗಳು ಏನು?
ಸಂಸತ್ತು ಸೂಚಿಸಿದ ನಿಗದಿತ ಕೆಲಸವನ್ನು ಜೆಪಿಸಿ ಮಾಡುತ್ತದೆ. ಉದಾಹರಣೆಗೆ ಷೇರುಪೇಟೆಯ ಅಕ್ರಮದ ಬಗ್ಗೆ ತನಿಖೆ ಮಾಡಲು ಸರ ಕಾ ರ ಸೂಚಿಸಿದ್ದರೆ, ಇದರಲ್ಲಿ ನಡೆದಿರುವ ಹಣಕಾಸು ಅಕ್ರಮಗಳ ಬಗ್ಗೆ ಮಾಹಿತಿ ಕಲೆಹಾಕಲಿದೆ. ಬಳಿಕ ಅಗತ್ಯ ಮಾಹಿತಿಗಳನ್ನು ಸಂಗ್ರಹಿಸಲು ಸಂಬಂಧಪಟ್ಟ ಅಧಿಕಾರಿಗಳನ್ನು ವಿಚಾರಣೆ ನಡೆಸಲಿದೆ. ಇವುಗಳ ಬಗ್ಗೆ ವಿವರವಾದ ದಾಖಲೆಗಳನ್ನು ರಚನೆ ಮಾಡಲಿದ್ದು, ಬಳಿಕ ಇದನ್ನು ಸರಿಪಡಿಸಲು ಪರಿಹಾರ ಮಾರ್ಗಗಳನ್ನು ಸಹ ಸರ ಕಾ ರಕ್ಕೆ ಸಲ್ಲಿಸುತ್ತದೆ. ಜೆಪಿಸಿ ಅಧ್ಯಕ್ಷರು ಸರಕಾರಕ್ಕೆ ಮನವಿ ಮಾಡಿ ಜೆಪಿಸಿ ಅವಧಿಯನ್ನು ವಿಸ್ತರಿಸಿಕೊಳ್ಳಬಹುದು, ಇಲ್ಲದಿದ್ದರೆ ನಿಗದಿತ ಕಾಲ ಮುಕ್ತಾಯವಾಗುತ್ತಿದ್ದಂತೆ, ಅಧಿಕಾರವಧಿ ಮುಕ್ತಾಯವಾಗಲಿದೆ.

Advertisement

ಸಂಬಂಧಿಸಿದವರಿಗೆ ಸಮನ್ಸ್‌ ನೀಡುವ ಅಧಿಕಾರವೂ ಇದೆ!
ಜೆಪಿಸಿ ರಚನೆಯಾದ ಬಳಿಕ ನಿಗದಿತ ವಿಷಯದ ಬಗ್ಗೆ ಸಂಪೂರ್ಣವಾಗಿ ತನಿಖೆ ನಡೆಸುವ ಅಧಿಕಾರವನ್ನು ಜೆಪಿಸಿ ಹೊಂದಿರುತ್ತದೆ. ಹೀಗಾಗಿ ಸಂಬಂಧಪಟ್ಟ ಇಲಾಖೆ, ಅಧಿಕಾರಿಗಳು, ಸಂಸದರು ಅಥವಾ ವ್ಯಕ್ತಿಗಳಿಗೆ ಸಮನ್ಸ್‌ ನೀಡುವ ಅಧಿಕಾರವನ್ನು ಜೆಪಿಸಿ ಹೊಂದಿದೆ. ಒಂದು ವೇಳೆ ಸಂಸದರು ವಿಚಾರಣೆಗೆ ಹಾಜರಾಗದಿದ್ದರೆ ಅದನ್ನು ಸಂಸತ್‌ ವಿರೋಧಿ ನಡೆ ಎಂದು ಗುರುತಿಸಲಾಗುತ್ತದೆ. ಮತ್ಯಾವುದೇ ಸಂಸ್ಥೆ ವಿಚಾರಣೆಗೆ ಹಾಜರಾಗದಿದ್ದರೆ ಜೆಪಿಸಿ ವರದಿ ಸಲ್ಲಿಸಿದ ಬಳಿಕ ಸರಕಾರ ಅವರ ವಿಚಾರಣೆ ನಡೆಸುತ್ತದೆ.

ಜೆಪಿಸಿ ಅಷ್ಟೊಂದು ಶಕ್ತಿಶಾಲಿಯೇ?
ಜೆಪಿಸಿಗೆ ವಿಚಾರಣೆ ನಡೆಸುವ ಸಂಪೂರ್ಣ ಅಧಿಕಾರವಿದೆ. ಮಾಹಿತಿ ಅಥವಾ ಸಾಕ್ಷ್ಯಕ್ಕಾಗಿ ಸಂಬಂಧಿತ ವಿಷಯಗಳಲ್ಲಿ ಮೌಖೀಕ ಅಥವಾ ಲಿಖೀತ ದಾಖಲೆಗಳನ್ನು ಪಡೆದುಕೊಳ್ಳಬಹುದು. ವ್ಯಕ್ತಿ, ಸಂಘಟನೆ ಅಥವಾ ಪಕ್ಷವನ್ನು ಕರೆಸಿ ವಿಚಾರಣೆ ನಡೆಸಬಹುದು. ಆದರೆ ಇದರ ಬಗ್ಗೆ ಅಂತಿಮ ನಿರ್ಧಾರ ಸ್ಪೀಕರ್‌ದಾಗಿರುತ್ತದೆ. ಸಾಕ್ಷ್ಯಗಳ ವಿಷಯದಲ್ಲಿ ಜೆಪಿಸಿಯಲ್ಲಿ ಭಿನ್ನಾಭಿಪ್ರಾಯ ವಿದ್ದರೆ ಸ್ಪೀಕರ್‌ ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ. ಅಲ್ಲದೇ ಜೆಪಿಸಿಯ ನಡಾವಳಿಗಳು ಗೌಪ್ಯವಾಗಿರುತ್ತವೆ. ವ್ಯಾಪಕವಾದ ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ವಿಷಯವಾದರೆ ಮಾತ್ರ ಬಹಿರಂಗಪಡಿಸುವ ಅಧಿಕಾರವಿದೆ. ಒಂದು ವೇಳೆ ಜೆಪಿಸಿಯ ವರದಿ ರಾಷ್ಟ್ರದ ಭದ್ರತೆಗೆ ಪ್ರತಿಕೂಲ ಎನಿಸಿದರೆ ಅದನ್ನು ತಡೆಹಿಡಿಯುವ ಸಂಪೂರ್ಣ ಅಧಿಕಾರ ಸರಕಾರಕ್ಕಿದೆ.

ಜೆಪಿಸಿ ರಚನೆ ಏಕೆ?
ಕಾಯ್ದೆಗಳ ಜಾರಿಗೂ ಮುನ್ನ ವಿವರವಾದ ಪರಿಶೀಲನೆ ನಡೆಸಲು

ಮಸೂದೆಗಳಿಗೆ ಒಮ್ಮತ ಸಿಗದೇ ಹೆಚ್ಚಿನ ಮಾಹಿತಿ ಅಗತ್ಯವಿದ್ದಾಗ

ಸರಕಾರಿ ಚಟುವಟಿಕೆಗಳಲ್ಲಿ ಹಣಕಾಸಿನ ಅಕ್ರಮ ನಡೆದಾಗ

ಸರಕಾರಿ ಸ್ವಾಮ್ಯದ ಸಂಸ್ಥೆಗಳು ಅವ್ಯವಹಾರ ನಡೆಸಿದಾಗ

ದೇಶದ ಘನತೆಗೆ ಧಕ್ಕೆ ತರುವ ಘಟನೆಗಳು ಸಂಭವಿಸಿದಾಗ

ದೇಶದ ಅಭಿವೃದ್ಧಿಗೆ ಪ್ರಮುಖ ಯೋಜನೆ ಜಾರಿ ಮಾಡುವಾಗ

ಈವರೆಗೆ ರಚನೆಯಾಗಿರುವ ಜೆಪಿಸಿಗಳು
1987-ಬೋಫೋರ್ಸ್‌ ಕಿಕ್‌ಬ್ಯಾಕ್‌ ಹಗರಣ
ಬೋಫೋರ್ಸ್‌ ಕಿಕ್‌ಬ್ಯಾಕ್‌ ಹಗರಣ ಕುರಿತು ತನಿಖೆಗೆ 1987ರಲ್ಲಿ ಮೊದಲ ಜೆಪಿಸಿ ರಚಿಸಲಾಯಿತು. ರಾಜ್ಯದವರೇ ಆದ ಬಿ.ಶಂಕರಾನಂದ ಸಮಿತಿ ಅಧ್ಯಕ್ಷರಾಗಿದ್ದರು. ಆದರೆ ಜೆಪಿಸಿ ವರದಿ ಪಕ್ಷಪಾತದಿಂದ ಕೂಡಿದೆ ಎಂದು ವಿಪಕ್ಷಗಳು ಪ್ರತಿಭಟನೆ ನಡೆಸಿದ್ದರಿಂದ ಸರಕಾರ ಇದನ್ನು ಕೈಬಿಟ್ಟಿತು.

1992- ಹರ್ಷದ್‌ ಮೆಹ್ತಾ ಷೇರುಪೇಟೆ ಹಗರಣ
ಷೇರುಪೇಟೆಯಲ್ಲಿ ಹರ್ಷದ್‌ ಮೆಹ್ತಾ ಮತ್ತು ಆತನ ಕಂಪೆನಿ ನಡೆಸಿದ ಹಗರಣವನ್ನು ಪತ್ತೆ ಮಾಡಲು 1992ರಲ್ಲಿ 2ನೇ ಜೆಪಿಸಿ ರಚನೆ ಮಾಡಲಾಗಿತ್ತು. 5 ವರ್ಷಗಳ ಕಾಲ ತನಿಖೆ ನಡೆಸಿ ಈ ಜೆಪಿಸಿ ವರದಿ ನೀಡಿದ್ದರೂ ಸಹ ಸರಕಾರ ವರದಿಯಲ್ಲಿದ್ದ ಅನೇಕ ಅಂಶಗಳನ್ನು ಪಾಲನೆ ಮಾಡಲಿಲ್ಲ.

2001-ಕೇತನ್‌ ಪರೇಖ್‌ ಷೇರು ಪೇಟೆ ಕೇಸ್‌
ಬ್ಯಾಂಕ್‌ ಮತ್ತು ಇತರ ಹಣಕಾಸು ಸಂಸ್ಥೆಗಳಿಂದ ಹಣ ಪಡೆ­ ದುಕೊಂಡ ಕೇತನ್‌ ಪರೇಖ್‌ ಷೇರು ಮಾರುಕಟ್ಟೆಯಲ್ಲಿ ಅಕ್ರಮ ಎಸಗಿದ್ದನ್ನು ತನಿಖೆ ಮಾಡಲು 3ನೇ ಜೆಪಿಸಿ ರಚಿಸಲಾಗಿತ್ತು. ಇದು ನೀಡಿದ ವರದಿಯನ್ನು ಸಹ ಸರಕಾರ ಪರಿಗಣಿಸಲಿಲ್ಲ.

2003- ತಂಪು ಪಾನೀಯಗಳಲ್ಲಿ ಕೀಟನಾಶ ಬೆರಕೆ ಕೇಸ್‌
ತಂಪು ಪಾನೀಯಗಳಲ್ಲಿ ಕೀಟನಾಶಕಗಳು ಬೆರೆಕೆಯಾಗುತ್ತಿದೆ ಎಂಬುದನ್ನು ತನಿಖೆ ಮಾಡಲು ಜೆಪಿಸಿ ರಚನೆ ಮಾಡಲಾಗಿತ್ತು. ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ನೇತೃತ್ವದ 1 ವರ್ಷದ ಬಳಿಕ ವರದಿ ನೀಡಿದ್ದು, ತಂಪು ಪಾನೀಯದಲ್ಲಿ ಕೀಟನಾಶಕ ಇರುವುದನ್ನು ಖಚಿತಪಡಿಸಿತ್ತು.

2011- 2ಜಿ ತರಂಗಾಂತರ ಹಂಚಿಕೆ ಹಗರಣ
2ಜಿ ಸ್ಪೆಕ್ಟ್ರಂ ಹಗರಣವನ್ನು ತನಿಖೆ ಮಾಡುವುದಕ್ಕಾಗಿ 2011­ ರಲ್ಲಿ ಜೆಪಿಸಿ ರಚನೆ ಮಾಡಲಾಗಿತ್ತು. 30 ಮಂದಿ ಸದಸ್ಯರನ್ನು ಈ ಜೆಪಿಸಿ ಹೊಂದಿದ್ದು, ತನಿಖೆಗಿಂತ ಹೆಚ್ಚಿನ ಸಮಯ ಅಧ್ಯಕ್ಷರನ್ನು ತೆಗೆದುಹಾಕುವುದಕ್ಕೆ ಪ್ರತಿಭಟನೆ ನಡೆಸುವುದರಲ್ಲೇ ಹೆಚ್ಚಿನ ಸಮಯ ಕಳೆಯಿತು.

2013- ಅಗಸ್ಟಾ ಹೆಲಿಕಾಪ್ಟರ್‌ ಲಂಚ ಪ್ರಕರಣ
ವಿವಿಐಪಿಗಳಿಗೆ ಹೆಲಿಕಾಪ್ಟರ್‌ ಒದಗಿಸಲು ಅಗಸ್ಟಾ ವೆಸ್ಟ್‌ ಲ್ಯಾಂಡ್‌ ಸರ ಕಾ ರಕ್ಕೆ ಲಂಚ ನೀಡಿದೆ ಎಂಬ ಪ್ರಕರಣದ ತನಿಖೆಗೆ ಜೆಪಿಸಿ ರಚಿಸಲಾಗಿತ್ತು. ಇದರಲ್ಲಿ ಮಧ್ಯವರ್ತಿ ಮೂಲಕ ಹಗರಣ ನಡೆದಿದೆ ಎಂದು ಜೆಪಿಸಿ ಹೇಳಿತ್ತು.

2015- ಭೂ ಸ್ವಾಧೀನ ತಿದ್ದುಪಡಿ ಕಾಯ್ದೆ
ನ್ಯಾಯಯುತ ಪರಿಹಾರ ಮತ್ತು ಭೂ ಸ್ವಾದೀನಕ್ಕೆ ಸಂಬಂಧಿಸಿದಂತೆ ತರಲಾದ ತಿದ್ದುಪಡಿಯನ್ನು ಪರಿಶೀಲಿಸಲು ಜೆಪಿಸಿ ರಚನೆ ಮಾಡಲಾಗಿತ್ತು. ಎಸ್‌ಎಸ್‌ ಅಹ್ಲುವಾಲಿಯಾ ಅವರು ಇದರ ಅಧ್ಯಕ್ಷರಾಗಿದ್ದು, 1 ವರ್ಷದ ಬಳಿಕ ಸರಕಾರಕ್ಕೆ ವರದಿ ಸಲ್ಲಿಸಿತ್ತು.

2019- ವೈಯಕ್ತಿಕ ಡೇಟಾ ಸಂರಕ್ಷಣ ಮಸೂದೆ
ಲೋಕಸಭೆಯಲ್ಲಿ ಮಂಡಿಸಲಾದ ಈ ಮಸೂದೆಗೆ ಸಂಬಂಧಿ­ ಸಿದಂತೆ ಬಿಜೆಪಿ ಸಂಸದೆ ಮೀನಾಕ್ಷಿ ಲೇಖೀ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. 1 ವರ್ಷದೊಳಗೆ ವರದಿ ಸಲ್ಲಿಸಲು ಸೂಚಿಸಿದ್ದರೂ, ಸಮಿತಿ ಹಲವು ಬಾರಿ ಹೆಚ್ಚುವರಿ ಕಾಲಾವಕಾಶ ಕೇಳಿತ್ತು.

2024- ವಕ್ಫ್ ಮಂಡಳಿ ಕಾಯ್ದೆ ತಿದ್ದುಪಡಿ
ವಕ್ಫ್ ತಿದ್ದುಪಡಿಗೆ ಸಂಬಂಧಿಸಿದಂತೆ ಸಂಪೂರ್ಣವಾಗಿ ಪರಿಶೀಲನೆ ನಡೆಸಲು ಬಿಜೆಪಿ ಸಂಸದ ಜಗದಂಬಿಕಾ ಪಾಲ್‌ ಅವರ ನೇತೃತ್ವದಲ್ಲಿ ಜೆಪಿಸಿ ರಚನೆ ಮಾಡಲಾಗಿತ್ತು. ಇದು ಮುಂದಿನ ವರ್ಷದ ಬಜೆಟ್‌ ಅಧಿವೇಶನದ ವೇಳೆ ವರದಿ ಸಲ್ಲಿಕೆ ಮಾಡಲಿದೆ.

– ಗಣೇಶ್‌ ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next