ವಿಟ್ಲ: ಧರ್ಮ ಪ್ರಜ್ಞೆ, ಜೀವನ ಮೌಲ್ಯಗಳನ್ನು ಉಳಿಸುವ ಮಹತ್ಕಾರ್ಯವಾಗಬೇಕು. ಈ ಚಿಂತನೆಯ ವಿಚಾರಧಾರೆಯನ್ನು ಅಳವಡಿಸಿಕೊಂಡ ಯುವಶಕ್ತಿ ಸದ್ವಿನಿಯೋಗವಾಗಬೇಕು. ಯುವಕರಲ್ಲಿ ರಾಷ್ಟ್ರೋತ್ಥಾನದ ಚಿಂತನೆ ಇದ್ದಾಗ ಸಮಾಜದಲ್ಲಿ ಉತ್ತಮ ಕಾರ್ಯ ಸಾಧನೆಯಾಗಲು ಸಾಧ್ಯವಿದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿದರು.
ಅವರು ರವಿವಾರ ಇಟ್ಟೆಲ್ ತುಳುವೆರೆ ಕೂಟ ಇದರ ಆಶ್ರಯದಲ್ಲಿ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಮುಂಭಾಗದ ರಥದ ಗದ್ದೆಯಲ್ಲಿ ನಡೆದ ಆಟಿಡ್ ಕೆಸರ್ಡೊಂಜಿ ದಿನೊ- ಕೆಸರ್‌ದ ಕಂಡೊಡು ತುಳುನಾಡª ಗೊಬ್ಬುಲೆ ಪಂತೊ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು. ಪ್ರತಿಯೊಬ್ಬರಿಗೂ ಹಿತವನ್ನುಂಟು ಮಾಡುವ, ಸಂತೋಷ ಕೊಡುವ ಕಾರ್ಯಕ್ರಮ ನೀಡುವ ಸಂಘಟನೆಗಳು ಶಾಶ್ವತವಾಗಿ ಉಳಿದುಕೊಳ್ಳುತ್ತವೆ. ಗದ್ದೆ ಬೇಸಾಯ, ಕೃಷಿ ಸಂಸ್ಕೃತಿಯ ಪುನರುತ್ಥಾನಕ್ಕೆ ಇಂತಹ ಕೂಟಗಳು ಪ್ರೇರಣೆಯಾಗಲಿ ಎಂದು ಅವರು ಹೇಳಿದರು.
ಸಾಮಾಜಿಕ ಕಾರ್ಯಕರ್ತ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಮಾತನಾಡಿ ನಮ್ಮತನವನ್ನು ಉಳಿಸದಿದ್ದರೆ ದೇಶಕ್ಕೆ ಉಳಿಗಾಲವಿಲ್ಲ. ಯುವಕರಲ್ಲಿ, ಮಕ್ಕಳಲ್ಲಿ ಸ್ವದೇಶಿ ಪ್ರೇಮ ಮೂಡಬೇಕು. ಆ ಸಂಸ್ಕೃತಿ ಉಳಿಯುವುದಕ್ಕೆ ಇಂತಹ ಕಾರ್ಯಕ್ರಮಗಳು ಪ್ರೇರಣೆ ನೀಡುತ್ತವೆ ಎಂದರು. ವಿಟ್ಲ ಅರಮನೆಯ ಕೃಷ್ಣಯ್ಯ ಕೆ. ವಿಟ್ಲ ಅಧ್ಯಕ್ಷತೆ ವಹಿಸಿದ್ದರು. ವಿಟ್ಲದ ಉದ್ಯಮಿ ಸುಬ್ರಾಯ ಪೈ, ಸಾಯಿಗಣೇಶ್ ಗ್ಯಾಸ್ ಸರ್ವಿಸಸ್‌ನ ಸತೀಶ್ ಕುಮಾರ್ ಆಳ್ವ ಇರಾ ಬಾಳಿಕೆ, ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ನಿರ್ದೇಶಕ ಮನೋರಂಜನ್ ಕೆ.ಆರ್. ರೈ, ಭಾರತ್ ಶಾಮಿಯಾನದ ಮಾಲಕ ಸಂಜೀವ ಪೂಜಾರಿ, ಇಟ್ಟೆಲ್ ತುಳುಕೂಟದ ಅಧ್ಯಕ್ಷ ಕರುಣಾಕರ ನಾಯ್ತೋಟು ಮತ್ತಿತರರು ಭಾಗವಹಿಸಿದ್ದರು.
ಇಟ್ಟೆಲ್ ತುಳುಕೂಟದ ಸ್ಥಾಪಕ ಅಧ್ಯಕ್ಷ ಅರುಣ್ ಎಂ. ವಿಟ್ಲ ಸ್ವಾಗತಿಸಿದರು. ಗೌರವ ಸಲಹೆಗಾರ ರವೀಶ್ ಶಿವಾಜಿನಗರ ವಂದಿಸಿದರು. ಹರೀಶ್ ಕೆ. ಕಾರ್ಯಕ್ರಮ ನಿರೂಪಿಸಿದರು.
ಮೂರು ವಿಭಾಗಗಳಲ್ಲಿ ಕೆಸರುಗದ್ದೆ ಓಟ, ಹಗ್ಗಜಗ್ಗಾಟ, ತೆಂಗಿನಕಾಯಿ ಎಸೆಯುವುದು, ಮಡಕೆ ಒಡೆಯುವುದು, ದಂಪತಿಗಳಿಗೆ ಉಪ್ಪು ಗೋಣಿ ಚೀಲ ಓಟ, ಹಾಳೆಯಲ್ಲಿ ಎಳೆಯುವ ಹಾಗೂ ಇನ್ನಿತರ ಸ್ಪರ್ಧೆಗಳು ನಡೆದವು.