ಮುಂಬಯಿ: ಉಪನಗರ ಭಾಂಡೂಪ್‌ನ ನಿವಾಸಿಗಳಾದ ತುಳು-ಕನ್ನಡಿಗರಾದ ಪ್ರಮೀಳಾ ಶಿವರಾಮ ಇವರ ಪುತ್ರ ಜಗದೀಶ ಶಿವರಾಮ ಪದ್ಮಶಾಲಿ ಮತ್ತು ದಿವ್ಯಾ ಪದ್ಮಶಾಲಿ ದಂಪತಿಯನ್ನೊಳಗೊಂಡ ತಂಡವೊಂದು ಪ್ರಪಂಚದ ನಾಲ್ಕನೇ ಅತ್ಯುನ್ನತ ಶಿಖರವಾದ ಕಿಲಿಮಾಂಜರೋವನ್ನು ಜು. 20ರಂದು ಏರಿ ವಿಶೇಷ ಸಾಧನೆಗೈದಿದ್ದಾರೆ.
ಕಿಲಿಮಾಂಜರೊ ಪರ್ವತ ಶಿಖರವು ಆಫ್ರಿಕಾ ದೇಶಗಳಲ್ಲೊಂದಾದ ತಾಂಜಾನಿಯದಲ್ಲಿದೆ. ಈ ಶಿಖರವು ಸಮುದ್ರ ತಟದಿಂದ 19,341 ಅಡಿ ಎತ್ತರದಲ್ಲಿದೆ. ಏಳು ದಿನಗಳ ಸುದೀರ್ಘ ಹಾಗೂ ಕಠಿನ ಪರಿಶ್ರಮದಿಂದ ಸದ್ಯ ದುಬಾೖಯಲ್ಲಿರುವ ಹತ್ತು ಜನರ ತಂಡವು ಈ ಶಿಖರವನ್ನು ಏರಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಜು. 14 ರಂದು ಚಾರಣವನ್ನು ಪ್ರಾರಂಭಿಸಿದ ಈ ತಂಡವು ಸತತ ಪ್ರಯತ್ನದಿಂದ ಆರನೇ ದಿನದಂದು ಉಹುರು ತುದಿಯಿಂದ ಕೆಲವೇ ಅಂತರದಲ್ಲಿ ಕ್ಯಾಂಪ್ ಹೂಡಿತು. ನಾಲ್ಕು ಗಂಟೆಗಳ ವಿಶ್ರಾಂತಿಯ ತರುವಾಯ ರಾತ್ರಿ 11.30ಕ್ಕೆ ಹೊರಟ ಈ ತಂಡವು ಹನ್ನೊಂದು ಗಂಟೆಯ ಕಷ್ಟದಾಯಕ ಚಾರಣದ ನಂತರ ಉಹುರು ಶಿಖರದ ತುತ್ತ ತುದಿಯನ್ನು ಏರಿ ತಮ್ಮ ಸಂತಸ ಹಂಚಿಕೊಂಡರು. ರಾತ್ರಿ ತಾಪಮಾನವು 2 ಡಿಗ್ರಿಯಿಂದ 10 ಡಿಗ್ರಿಯವರೆಗೆ ಏರಿಕೆಯಾಗಿದ್ದರೂ ತಂಡವು ಈ ಸಾಧನೆಯನ್ನು ಮಾಡಿದೆ.
ವಿಶೇಷವೇನೆಂದರೆ ಇರಾಕಿನ ಕುರ್ಡಿಸ್ತಾನದಲ್ಲಿರುವ ಎರ್ಬಿಲ್, ದುಹೋಕ್, ಸುಲೈಮಾನಿಯ ಹಾಗೂ ಮೊಸುಲ್‌ನಲ್ಲಿ ನಿರಾಶ್ರಿತರ ಕ್ಯಾಂಪಿನಲ್ಲಿ ಅತೀ ಕಷ್ಟದ ಜೀವನ ಸಾಗಿಸುತ್ತಿರುವ ಜನರ ವೇದನೆಯನ್ನು ಜಾಗತಿಕವಾಗಿ ಗಮನ ಸೆಳೆಯುವ ಪ್ರಯತ್ನವೂ ಈ ಚಾರಣದಲ್ಲಿ ಸೇರಿತ್ತು. ಬ್ರಿಂಗ್ ಹೋಪ್ ಹ್ಯುಮನಿಟೇರಿಯನ್ ಫೌಂಡೇಶನ್ ಹಾಗೂ ಲೈಟ್ ಹೌಸ್ ಕೊಹೊರ್ಟ್’ ಈ ಚಾರಣದ ಸಾರಥ್ಯವನ್ನು ವಹಿಸಿದ್ದವು. ಮುಂಬಯಿ ಪದ್ಮಶಾಲಿ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಉತ್ತಮ್ ಎ. ಶೆಟ್ಟಿಗಾರ್ ಅವರು ಜಗದೀಶ ಹಾಗೂ ದಿವ್ಯಾ ದಂಪತಿಯ ಸಾಧನೆಯನ್ನು ಅಭಿನಂದಿಸಿದ್ದಾರೆ.