Advertisement

ಬೆಂಗಳೂರಿಗರಿಗೆ ತುಳು ಕಲಿಸುತ್ತಾರೆ ಕರಾವಳಿ ಪ್ರಾಧ್ಯಾಪಕಿ

12:22 PM Dec 07, 2017 | |

ಬೆಂಗಳೂರು: ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸಬೇಕು ಎಂಬ ಬೇಡಿಕೆ ಬಹು ಹಿಂದಿನದ್ದು. ಇದಕ್ಕೆ ಪೂರಕವಾಗಿ ತುಳು ಭಾಷೆಯನ್ನು ಮತ್ತಷ್ಟು ಜನಪ್ರಿಯಗೊಳಿಸುವ ಉದ್ದೇಶದಿಂದ ತುಳು ಜಾನಪದ ಸಂಶೋಧಕಿ ಡಾ. ಲಕ್ಷ್ಮೀ ಜಿ. ಪ್ರಸಾದ್‌ ಅವರು ಆಸಕ್ತರಿಗೆ ಉಚಿತವಾಗಿ ತುಳು ಕಲಿಸಲು ವೇದಿಕೆ ರೂಪಿಸಿದ್ದಾರೆ. ಅದರ ಮೊದಲ ತರಗತಿ ಬೆಂಗಳೂರಿನ ಕಲಾಗ್ರಾಮದಲ್ಲಿ ಡಿ.10ರ ಭಾನುವಾರ ನಡೆಯಲಿದೆ.

Advertisement

ಬೆಂಗಳೂರಿನ ನೆಲಮಂಗಲದ ಸರಕಾರಿ ಪಿಯು ಕಾಲೇಜಿನ ಕನ್ನಡ ಪ್ರಾಧ್ಯಾಪಕಿ ಡಾ. ಲಕ್ಷ್ಮೀ ಅವರು ಮೂಲತಃ ಕರಾವಳಿಯವರು. ತುಳು ಭಾಷೆಯಲ್ಲಿ ಅನೇಕ ಕೃತಿ ರಚಿಸಿರುವ ಅವರು, ಸಂಶೋಧನೆ ಕೂಡ ಕೈಗೊಂಡಿದ್ದಾರೆ. ಬೆಂಗಳೂರಿನಲ್ಲಿ ವಾಸವಿರುವ ಹಲವರಿಗೆ ಸುಲಲಿತವಾಗಿ ತುಳು ಮಾತನಾಡಲು ಬಾರದು. ಕಲಿಯಲು ಆಸಕ್ತಿ ಇದ್ದರೂ ಕಲಿಸುವ ಮಂದಿ ಸಿಗುವುದಿಲ್ಲ.

ಈ ನಿಟ್ಟಿನಲ್ಲಿ ತುಳು ಕಲಿಯಬೇಕು ಎಂದು ಅನೇಕ ಮಂದಿ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಹಾಕಿದ್ದರು. ಇದನ್ನು ಗಮನಿಸಿದ ಡಾ. ಲಕ್ಷ್ಮೀ, ತುಳು ಕಲಿಸಲು ಮುಂದಾಗಿದ್ದಾರೆ. ಈ ಬಗ್ಗೆ ಈಗಾಗಲೇ ಫೇಸ್‌ಬುಕ್‌ನಲ್ಲಿ ಪ್ರಚಾರ ಪ್ರಾರಂಭವಾಗಿದೆ. ಯುನೈಟೆಡ್‌ ತುಳುನಾಡು ಸಹಿತ ವಿವಿಧ ಫೇಸ್‌ಬುಕ್‌ ಪೇಜ್‌ಗಳಲ್ಲಿ ಪೋಸ್ಟ್‌ ಹಾಕಲಾಗಿದೆ.

ತರಗತಿ ಯಾವ ರೀತಿ?: ಭಾನುವಾರ ನಡೆಯುವ ಮೊದಲ ತುಳು ತರಗತಿಗೆ 20ಕ್ಕೂ ಹೆಚ್ಚು ಮಂದಿ ಆಸಕ್ತಿ ತೋರಿದ್ದಾರೆ. ಈ ಪೈಕಿ 10 ಮಂದಿಯ ಒಂದೊಂದು ಬ್ಯಾಚ್‌ ಮಾಡಿ ತುಳು ಕಲಿಸಲಾಗುತ್ತದೆ. ಸುಮಾರು 5 ಗಂಟೆಗಳ ತರಗತಿ ಇದಾಗಿದ್ದು, ಸಂವಹನ ಮತ್ತು ಅಭಿನಯದ ಮೂಲಕ ತುಳು ಕಲಿಸಲಾಗುತ್ತದೆ.

ಲಿಖೀತ ಸಂಭಾಷಣೆಗೆಂದು “ಬಲೇ ತುಳು ಕಲ್ಪುಗ’ ಎಂಬ ವಾಟ್ಸ್‌ ಆಪ್‌ ಗ್ರೂಪ್‌ ಮಾಡಲಾಗುತ್ತದೆ. ತುಳು ಭಾಷಾ ಪಂಡಿತರು ಹಾಗೂ ಕಲಿಯುವವರು ಈ ಗ್ರೂಪ್‌ನ ಸದಸ್ಯರಾಗಿರುತ್ತಾರೆ. ತರಬೇತಿ ಬಳಿಕ ಪ್ರತಿ ದಿನ ತುಳು ಭಾಷೆ ಬಗ್ಗೆ ಆಸಕ್ತರೊಂದಿಗೆ ಮಾಹಿತಿ ವಿನಿಮಯ ನಡೆಯುತ್ತದೆ.

Advertisement

ಈ ಕುರಿತು ಉದಯವಣಿ “ಸುದಿನ’ ಜತೆ ಮಾತನಾಡಿದ ಡಾ. ಲಕ್ಷ್ಮೀ ಜಿ. ಪ್ರಸಾದ್‌, “ತುಳು ಭಾಷೆ ಹೇಳಿಕೊಡಿ ಎಂದು ಈಗಾಗಲೇ ಅನೇಕರು ಕರೆ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಆಸಕ್ತರಿಗೆ ತುಳು ಲಿಪಿ ಕಲಿಸಲು ನಾನು ತಯಾರಿದ್ದೇನೆ. ಲಿಪಿ ಕಲಿಕೆಗೂ ಮುನ್ನ ತುಳು ಭಾಷೆಯ ಜ್ಞಾನ ಆವಶ್ಯಕ,’ ಎಂದು ಹೇಳಿದ್ದಾರೆ.

ಪುಸ್ತಕ ನೋಡಿ ತುಳು ಕಲಿಯುವುದು ಸುಲಭವಲ್ಲ. ಕಲಿಕೆಗೆ ಪ್ರಾಯೋಗಿಕ ತರಬೇತಿಯೂ ಅವಶ್ಯ. ಈಗಾಗಲೇ ಸಂಸ್ಕೃತ ಶಿಬಿರ ನಡೆಸಿದ ಅನುಭವ ನನಗಿದೆ. ತುಳು ಕಲಿಸುವ ರೀತಿ ತಿಳಿದಿದೆ. ತುಳು ತರಬೇತಿ ಬೆಂಗಳೂರಿಗರಿಗೆ ಮಾತ್ರ ಸೀಮಿತವಲ್ಲ. ಮುಂದಿನ ದಿನಗಳಲ್ಲಿ ರಾಜ್ಯದ ಯಾವುದೇ ಮೂಲೆಯಿಂದ ತಂಡ ಬಂದರೂ ಅವರಿಗೂ ಕಲಿಸಲಾಗವುದು
-ಡಾ. ಲಕ್ಷ್ಮೀ ಜಿ. ಪ್ರಸಾದ್‌, ತುಳು ಭಾಷಾ ಸಂಶೋಧಕಿ

* ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next