Advertisement

ಮುಂದಿನ ವರ್ಷ ಪದವಿ ತರಗತಿಗಳಿಗೂ ತುಳು

01:00 AM Feb 28, 2019 | Harsha Rao |

ಉಡುಪಿ: ಮುಂದಿನ ವರ್ಷದಿಂದ ಪದವಿ ತರಗತಿಗಳಲ್ಲಿಯೂ ತುಳು ಭಾಷೆಯನ್ನು ಐಚ್ಛಿಕ ವಿಷಯವಾಗಿ ಅಧ್ಯಯನ ಮಾಡಲು ಕರ್ನಾಟಕ ತುಳು ಅಕಾಡೆಮಿ ಅವಕಾಶ ಮಾಡಿಕೊಡಲಿದೆ ಎಂದು ಅಕಾಡೆಮಿಯ ಅಧ್ಯಕ್ಷ ಎ.ಸಿ. ಭಂಡಾರಿ ತಿಳಿಸಿದ್ದಾರೆ.

Advertisement

ಫೆ. 27ರಂದು ಅಕಾಡೆಮಿ ಮತ್ತು ಎಜಿಎಂ ಕಾಲೇಜು ಸಹಭಾಗಿತ್ವದಲ್ಲಿ ಕಾಲೇಜಿನ ಮುದ್ದಣ ಮಂಟಪದಲ್ಲಿ ಜರಗಿದ ತುಳು ಸಂಸ್ಕೃತಿಯ ಹಬ್ಬ “ತುಳು ಐಸಿರಿ-2019’ನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಯುವಜನರಲ್ಲಿ ಜಾಗೃತಿ
1.50 ಕೋಟಿ ಜನ ಮಾತನಾಡುವ ತುಳು ಭಾಷೆ ಉಳಿದರೆ ಮಾತ್ರ ತುಳು ಸಂಸ್ಕೃತಿ ಉಳಿಯುತ್ತದೆ. ತುಳು ಭಾಷೆ ಉಳಿಯಬೇಕಾದರೆ ಯುವಜನತೆಯಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿರುವ ಅಕಾಡೆಮಿ ಕರಾವಳಿಯ ಎಲ್ಲ ಕಾಲೇಜುಗಳಲ್ಲಿಯೂ ತುಳು ಭಾಷೆ, ಸಂಸ್ಕೃತಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ನಡೆಸಲು ಯೋಜನೆ ಹಾಕಿಕೊಂಡಿದೆ. ತುಳುವಿನ ಕೃತಿಗಳನ್ನು ಬೇರೆ ಭಾಷೆಗಳಿಗೆ, ಬೇರೆ ಭಾಷೆಗಳ ಕೃತಿಯನ್ನು ತುಳುವಿಗೆ ಅನುವಾದಿಸುವ ಕೆಲಸಗಳು ಕೂಡ ನಡೆಯುತ್ತಿವೆ ಎಂದು ಭಂಡಾರಿ ಹೇಳಿದರು.

ಆಂಗ್ಲ ಭಾಷೆ ಇರಲಿ, ಸಂಸ್ಕೃತಿ ಬೇಡ
ಇಂಗ್ಲಿಷ್‌ ಭಾಷೆಯ ಜ್ಞಾನ ಅಗತ್ಯ. ತುಳುವರು ಕೂಡ ಇಂಗ್ಲಿಷ್‌ ಅಧ್ಯಯನ ಮಾಡುವುದರಲ್ಲಿ ತಪ್ಪಿಲ್ಲ. ಆದರೆ ಇಂಗ್ಲಿಷ್‌ ಸಂಸ್ಕೃತಿಯ ಅನುಕರಣೆ ಬೇಡ. ಒಂದು ಕಾಲದಲ್ಲಿ ತುಳುವರ ಅಸಡ್ಡೆಯಿಂದಾಗಿ ತುಳುವರನ್ನು ತಾತ್ಸಾರದಿಂದ ನೋಡುವಂತಾಗಿತ್ತು. ಶಾಲೆಗಳಲ್ಲಿ ತುಳು ಮಾತನಾಡುವವರನ್ನು ಶಿಕ್ಷಿಸುವ ಕ್ರಮವೂ ಇತ್ತು. ಆದರೆ ಇಂದು ಪರಿಸ್ಥಿತಿ  ಬದಲಾಗಿದೆ. ತುಳು ಗೊತ್ತಿಲ್ಲದವರಿಗೆ ತುಳು ಕಲಿಸುವ ವ್ಯವಸ್ಥೆ ಶಾಲೆಗಳಲ್ಲಿ ಆರಂಭಗೊಂಡಿದೆ. ತುಳುವನ್ನು ಸಂವಿಧಾನದ 8ನೇ ಪರಿಚ್ಛೇಧಕ್ಕೆ ಸೇರಿಸಲು ಪ್ರಬಲ ರಾಜಕೀಯ ಇಚ್ಛಾಶಕ್ತಿಯ ಅವಶ್ಯಕತೆ ಇದೆ ಎಂದು ಎ.ಸಿ.ಭಂಡಾರಿ ಹೇಳಿದರು.

ಫ‌ಲಿತಾಂಶ ಉತ್ತಮ
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಉಡುಪಿ ತುಳುಕೂಟದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಅವರು ಮಾತನಾಡಿ, “ಎಸ್‌ಎಸ್‌ಎಲ್‌ಸಿಯಲ್ಲಿ ತುಳುವನ್ನು ತೃತೀಯ ಭಾಷೆಯಾಗಿ ಅಧ್ಯಯನ ಮಾಡುವ ವಿದ್ಯಾರ್ಥಿಗಳು ಶೇ.90ರಿಂದ 100 ಅಂಕಗಳನ್ನು ಪಡೆಯುತ್ತಿದ್ದಾರೆ. ಶಾಲೆಗಳ ಒಟ್ಟಾರೆ ಫ‌ಲಿತಾಂಶವೇ ಬದಲಾಗುತ್ತಿದೆ’ ಎಂದು ಹೇಳಿದರು.

Advertisement

ಚಿಂತಕ ಕಲ್ಲೂರ್‌ ನಾಗೇಶ್‌ ಅವರು ಮಾತನಾಡಿ “ತುಳುನಾಡು, ಸಂಸ್ಕೃತಿಯನ್ನು ಕಾವ್ಯ, ಪುರಾಣಗಳ ಹಿನ್ನೆಲೆ ಜತೆಗೆ ವೈಜ್ಞಾನಿಕ ಮತ್ತು ವೈಚಾರಿಕ ದೃಷ್ಟಿಯಿಂದಲೂ ಅಧ್ಯಯನ ಮಾಡುವ ಅವಶ್ಯಕತೆ ಇದೆ’ ಎಂದು ಹೇಳಿದರು.

ಎಂಜಿಎಂ ಪದವಿ ಕಾಲೇಜು ಪ್ರಾಂಶುಪಾಲ ಡಾ| ಎಂ.ಜಿ.ವಿಜಯ, ಪ.ಪೂ. ಕಾಲೇಜು ಪ್ರಾಂಶುಪಾಲೆ ಮಾಲತಿ ದೇವಿ ಉಪಸ್ಥಿತರಿದ್ದರು. ಕಾಲೇಜಿನ ತುಳು ಸಂಘದ ಸಂಚಾಲಕ ಡಾ| ಪುತ್ತಿ ವಸಂತ ಕುಮಾರ್‌ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾನತಾಡಿದರು. ಕಾರ್ಯದರ್ಶಿ ರಕ್ಷಿತಾ ವಂದಿಸಿದರು. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಮಂಜುನಾಥ ಕಾಮತ್‌ ಅವರು ಅತಿಥಿಗಳನ್ನು ಪರಿಚಯಿಸಿದರು. ಉಪನ್ಯಾಸಕ ಸುಚಿತ್‌ ಕೋಟ್ಯಾನ್‌ ಕಾರ್ಯಕ್ರಮ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next