ಪುತ್ತೂರು: ಸಮ್ಮೇಳನದ ಮೂಲಕ ತುಳು ಸಂಪತ್ತಿನ ಬೀಗದ ಕೀಯನ್ನು ಹಂಚುವ ಕೆಲಸ ಆಗಿದೆ. ಬೀಗ ತೆರೆದು ಕೃಷಿ ಮಾಡುವ ಕೆಲಸವನ್ನು ಅವರವರೇ ಮಾಡಿಕೊಳ್ಳಬೇಕು ಎಂದು ಹಾವೇರಿ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ| ಕೆ. ಚಿನ್ನಪ್ಪ ಗೌಡ ಹೇಳಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಪುತ್ತೂರು ತಾಲೂಕು ತುಳು ಸಾಹಿತ್ಯ ಸಮ್ಮೇಳನ ಸಮಿತಿ ಆಶ್ರಯದಲ್ಲಿ ಮಂಜಲ್ಪಡು ಸುದಾನ ವಸತಿಯುತ ಶಾಲಾ ಆವರಣದಲ್ಲಿ ನ. 3ರಂದು ಜರಗಿದ ತುಳು ಪರ್ಬ – 2018ರ ಮುಗಿತಲದ ಲೇಸ್‌ನಲ್ಲಿ ಸಮಾರೋಪ ಭಾಷಣ ಮಾಡಿದರು.
ತುಳು ಎನ್ನುವುದು ಸಂಪತ್ತು. ಈ ಸಂಪತ್ತನ್ನು ಅನುಭವಿಸಲು ದಾರಿ ತೋರಿಸುವ ಕೆಲಸವನ್ನು ಸಮ್ಮೇಳನಗಳು ಮಾಡಿಕೊಂಡು ಬಂದಿವೆ. ಇದರ ಕೀಯನ್ನು ಜನರಿಗೆ ತೋರಿಸಿಕೊಡುವ ಮೂಲಕ, ಜಾಗೃತಿ, ಅರಿವು ಮೂಡಿಸುವ ಕೆಲಸ ಇಲ್ಲಿ ಮಾಡಲಾಗಿದೆ ಎಂದರು.
ಸಮ್ಮೇಳನಾಧ್ಯಕ್ಷ ಡಾ| ಬಿ.ಎ. ವಿವೇಕ್ ರೈ ಮಾತನಾಡಿ, ಪಾತೆರಕತೆಯಲ್ಲಿ ಕೇಳಿಬಂದಂತೆ ತುಳು ವಿಶ್ವವಿದ್ಯಾಲಯ ಅಗತ್ಯ. 20 -25 ವರ್ಷಗಳಿಂದ ನಿರ್ಣಯ ಮಾಡುತ್ತಾ ಬಂದ ಪರಿಣಾಮ ಅಕಾಡೆಮಿ ಸ್ಥಾಪನೆಯಾಗಿದೆ. ವಿವಿ ಬೇಕೆಂದು ಪದೇ ಪದೇ ಹೇಳುತ್ತಿದ್ದರೆ, ಕೊನೆಗೊಂದು ದಿನ ಅದು ಸಿಕ್ಕಿಯೇ ಸಿಗುತ್ತದೆ. ಆದ್ದರಿಂದ ಆ ವಿಷಯದ ಬಗ್ಗೆ ಮಾತನಾಡುತ್ತಾ ಇರಬೇಕು ಎಂದರು.
ಅಕಾಡೆಮಿ ಅಧ್ಯಕ್ಷ ಎ.ಸಿ. ಭಂಡಾರಿ ಮಾತನಾಡಿ, ಮುಂದೆ ಬೆಳ್ತಂಗಡಿಯಲ್ಲಿ ನಡೆಯಲಿರುವ ತುಳು ಸಮ್ಮೇಳನದಲ್ಲಿ ವಿಶ್ವವಿದ್ಯಾಲಯ ಬೇಕೆಂಬ ಬಗ್ಗೆ ನಿರ್ಣಯ ಮಂಡಿಸಲಾಗುವುದು ಎಂದರು. ಇದೇ ಸಂದರ್ಭ ಕುದಾಡಿ ವಿಶ್ವನಾಥ ರೈ, ಡಾ| ಯು.ಪಿ. ಶಿವಾನಂದ, ಎಂ.ಎಸ್. ಮುಕುಂದ. ಬಾಬು ಮಾಲಡ್ಕ, ಪಾಚು ನಲಿಕೆ, ಅಜಿತ್ ಕುಮಾರ್ ಜೈನ್, ವೆಂಕಮ್ಮ ಐತ್ತಪ್ಪ ನಾಯ್ಕ, ಎನ್. ಕಿಟ್ಟಣ್ಣ ರೈ, ಕೇಶವ ಭಂಡಾರಿ, ಪೂಕಳ ಲಕ್ಷ್ಮಿ ನಾರಾಯಣ ಭಟ್, ಕುಂಬ್ರ ರಘುನಾಥ ರೈ, ರಾಜು ಪೂಜಾರಿ ಇಪ್ಪನೊಟ್ಟು, ಉಮೇಶ್ ಸಾಯಿರಾಮ್, ತಾರಾನಾಥ ಪುತ್ತೂರು ಅವರನ್ನು ಸಮ್ಮಾನಿಸಲಾಯಿತು. ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಜಿ.ಪಂ. ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ್, ಸ್ವಾಗತ ಸಮಿತಿ ಅಧ್ಯಕ್ಷ ಸೀತಾರಾಮ ರೈ ಸವಣೂರು, ರಿಜಿಸ್ಟ್ರಾರ್ ಚಂದ್ರಹಾಸ ರೈ ಮೊದಲಾದವರು ಉಪಸ್ಥಿತರಿದ್ದರು.
ಸಮ್ಮೇಳನದಲ್ಲಿ…
ಬೆಳಿಗ್ಗೆ 8 ಗಂಟೆಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರಿಗೆ ಪೂಜೆ ಸಲ್ಲಿಸಿ, ಮಂಜಲ್ಪಡು ಸುದಾನ ವಸತಿಯುತ ಶಾಲಾ ಆವರಣಕ್ಕೆ ಮೆರವಣಿಗೆ ಹೊರಟಿತು. ಅಲ್ಲಿ ಮಹಿಳೆಯರಿಂದ ಸ್ವಾಗತ ಕೋರಲಾಯಿತು. ಬಳಿಕ ಕೋಟಿ – ಚೆನ್ನಯ ಆನೆಬಾಗಿಲು ಸೇರಿದಂತೆ ವಿವಿಧ ಪ್ರದರ್ಶನಗಳ ಉದ್ಘಾಟನೆ ನೆರವೇರಿತು. ನಂತರ ಕಬಿ ದುನಿಪು – ನಲಿಪು, ಪಾತೆರಕತೆ, ಕಬಿ ಕೂಟ, ಚಾವಡಿ ಚರ್ಚೆ- ದೈವ ನಿಲೆ, ತುಳು – ತುಲಿಪು ನಡೆಯಿತು. ಪಬೊದ ಪೊಲಬು ಮುಗಿತಲದ ಲೇಸ್ ಸಮಾರೋಪ ಸಮಾರಂಭ ಜರಗಿತು. ಇದರಲ್ಲಿ 15 ಮಂದಿ ಸಾಧಕರನ್ನು ಸಮ್ಮಾನಿಸಲಾಯಿತು. ನಂತರ ತುಳು ರಂಗ್ ರಂಗಿತೊ: ತೆಲಿಕೆ ನಲಿಕೆ – ಬಾಯಿ ನಿಲಿಕೆ, ಕೃಪನ ಮದಿಪು ಪೊಜೊವುಲೆ ಯಕ್ಷಗಾನ ತಾಳಮದ್ದಳೆ ಜರಗಿತು. 3 ಸಾವಿರಕ್ಕೂ ಅಧಿಕ ಮಂದಿ ಮಧ್ಯಾಹ್ನದ ಊಟದಲ್ಲಿ ಪಾಲ್ಗೊಂಡರು. ಬೆಳಗ್ಗೆ – ಸಂಜೆ ಲಘು ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು. ಮಳೆ ಸಿಂಚನದೊಂದಿಗೆ ಕಾರ್ಯಕ್ರಮಕ್ಕೆ ತೆರೆ ಬಿದ್ದಿತು.