ಬೆಂಗಳೂರು: ಬೆಂಗಳೂರು ತುಳು ಕೂಟ ಸೇರಿದಂತೆ ವಿವಿಧ ತುಳು ಸಂಘಟನೆಗಳು ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ “ಯಕ್ಷ ಭಾವೈಕ್ಯ -ಯಕ್ಷಗಾನ ವೈವಿದ್ಯ ಕಾರ್ಯಕ್ರಮ’ ಕಲಾವಿದರು ಹಾಗೂ ಕಲಾರಸಿಕರ ಸಮಾಗಮಕ್ಕೆ ಸಾಕ್ಷಿಯಾಯಿತು. ನಗರದ ರವೀಂದ್ರ ಕಲಾ ಕ್ಷೇತ್ರದಲ್ಲಿ ಆಯೋಜಿಸಿದ್ದ “ಭಾವೈಕ್ಯ ಬಹುಭಾಷಾ ಕವಿ, ಕಾವ್ಯ, ಗಾಯನ ಗೋಷ್ಠಿ ಹಾಗೂ ಯಕ್ಷ ಭಾವೈಕ್ಯ-ಯಕ್ಷಗಾನ ವೈವಿದ್ಯ’ ಕಾರ್ಯಕ್ರಮದಲ್ಲಿ ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ರಂಜಿಸಿದರು.
ಸಂಜೆ ಕನ್ನಡ ಕೋಗಿಲೆ ಖ್ಯಾತಿಯ ಗಾಯಕಿ ಕಲಾವತಿ ಮತ್ತು ಹಿನ್ನೆಲೆ ಗಾಯಕ ರಮೇಶ್ ಚಂದ್ರ ಅವರು ಗೀತೆ ರಚನೆಕಾರ ಮತ್ತು ಸಂಗೀತ ನಿರ್ದೇಶಕ ವಿ.ಮನೋಹರ್ ಅವರು ರಚಿಸಿದ ಹಲವು ಚಿತ್ರಗೀತೆಗಳನ್ನು ಹಾಡಿ, ಸಂಗೀತ ರಸಿಕರನ್ನು ಆನಂದದ ಕಡಲಲ್ಲಿ ತೇಲಿಸಿದರು. ಪ್ರತಿಭಾನ್ವಿತ ಯುವ ಸಾಹಿತಿಗಳು ತಮ್ಮ ಕವಿತೆಗಳನ್ನು ವಾಚಿಸಿದರು. ಇದಾದ ಬಳಿಕ ನಡೆದ “ತೆಂಕು ಮತ್ತು ಬಡಗು ಯಕ್ಷಗಾನ ತುಲನಾತ್ಮಕ ಪ್ರದರ್ಶನ’ ನೆರೆದವರ ಮನಸೆಳೆಯಿತು. ಇದೇ ವೇಳೆ ವಿವಿಧ ಸಾಂಸ್ಕೃತಿ ಸ್ಪರ್ಧೆಯಲ್ಲಿ ಬಹುಮಾನಗೆದ್ದ ಮಕ್ಕಳನ್ನು ಸನ್ಮಾನಿಸಲಾಯಿತು. ಬಳಿಕ ಮಾತನಾಡಿದ ಕಲುºರ್ಗಿಯ ಆಕಾಶವಾಣಿ ಕೇಂದ್ರದ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸದಾನಂದ ಪೆರ್ಲ, ರಾಜ್ಯ ಸರ್ಕಾರ ತುಳು ಭಾಷೆಯನ್ನು ಮಾನ್ಯತೆ ಇರುವ ಭಾಷೆ ಎಂದು ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.
ತನ್ನದೇ ಆದ ಇತಿಹಾಸವನ್ನು ಹೊಂದಿರುವ ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗುತ್ತಿದೆ. ಆದರೆ ರಾಜ್ಯ ಸರ್ಕಾರ ತುಳು ಭಾಷೆಯನ್ನು ಮಾನ್ಯತೆ ಇರುವ ಭಾಷೆ ಎಂದು ಪರಿಗಣಿಸಿದ ಹೊರತು ತುಳು ಭಾಷೆಗೆ ರಾಷ್ಟ್ರೀಯ ಮನ್ನಣೆ ಸಿಗುವುದಿಲ್ಲ ಎಂದರು. ಅಧಿಕೃತ ಭಾಷೆಯ ಸ್ಥಾನ ನೀಡಬೇಕು.
ಚಿಂತಕ ಡಾ.ಉದಯ ಧರ್ಮಸ್ಥಳ ಮಾತನಾಡಿ, ವಿಶಿಷ್ಟವಾದ ಐತಿಹಾಸಿಕತೆಯನ್ನು ಹೊಂದಿರುವ ತುಳು ಭಾಷೆಯನ್ನು ರಾಜ್ಯ ಸರ್ಕಾರ ಅಧಿಕೃತ ಭಾಷೆಯನ್ನಾಗಿ ಘೋಷಿಸಬೇಕು ಎಂದು ಮನವಿ ಮಾಡಿದರು. ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸುವ ಸಂಬಂಧ ಸರ್ಕಾರವನ್ನು ಒತ್ತಾಯ ಮಾಡುತ್ತಲೇ ಇದ್ದೇವೆ. ಆದರೆ ಅದು ಇನ್ನೂ ಸಕಾರಗೊಂಡಿಲ್ಲ. ಈ ನಿಟ್ಟಿನಲ್ಲಿ ಹೊಸ ಸರ್ಕಾರ ತುಳು ಭಾಷೆಯನ್ನು ಬೆಳೆಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕು ಎಂದು ಹೇಳಿದರು.
ಮನವಿ: ತುಳುವೆರೆ ಚಾವಡಿಯ ಪುರುಷೋತ್ತಮ ಚೇಂಡ್ಲಾ ಮಾತನಾಡಿ, ಬೆಂಗಳೂರಿನಲ್ಲಿರುವ ವಿವಿಧ ತುಳು ಸಂಘಟನೆಗಳು ಸೇರಿ ಇಂತಹ ಅಪರೂಪದ ಕಾರ್ಯಕ್ರಮ ಆಯೋಜಿಸಿರುವುದು ಸಂತಸ ತಂದಿದೆ.ತುಳುಭಾಷೆಯ ಅಭಿವೃದ್ಧಿಗಾಗಿ ಮುಖ್ಯಮಂತ್ರಿಗಳಿಗೆ ಸದ್ಯದಲ್ಲೇ ಮನವಿ ಸಲ್ಲಿಸುವುದಾಗಿ ಹೇಳಿದರು. ತುಳುನಾಡಿಗರನ್ನು ಒಟ್ಟಿಗೆ ಸೇರಿಸುವ ಇಂತಹ ಕಾರ್ಯಕ್ರಮಗಳು ಮತ್ತಷ್ಟು ನಡೆಯಲಿ ಎಂದು ಆಶಿಸಿದರು.
ನಂದಿನಿ ಲೇಔಟ್‌ನ ಪಾಲಿಕೆ ಸದಸ್ಯ ರಾಜೇಂದ್ರಕುಮಾರ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಚಂದ್ರಹಾಸ ರೈ, ಹಾಸ್ಯಲೇಖಕ ವೈ.ವಿ.ಗುಂಡೂರಾವ್, ಸಂಗೀತ ನಿರ್ದೇಶಕ ವಿ.ಮನೋಹರ್, ಮಂಗಳೂರಿನ ಅಖೀಲ ಭಾರತ ತುಳು ಒಕ್ಕೂಟದ ನಿಟ್ಟೆ ಶಶಿಧರ್ ಶೆಟ್ಟಿ, ದೇವೇಂದ್ರ ಹೆಗ್ಡೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.