ಮಹಾನಗರ: ತುಳು ಭಾಷಾ ಬೆಳವಣಿಗೆ ಹಿನ್ನೆಲೆಯಲ್ಲಿ ಪ್ರತಿ ತಾಲೂಕಿ ನಲ್ಲೂ ತುಳುಭಾಷಾ ಸಮ್ಮೇಳನವನ್ನು ನಡೆಸುವ ಬಗ್ಗೆ ಚಿಂತಿಸಲಾಗುವುದು ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ ಹೇಳಿದರು.
ತುಳುಕೂಟದ ವತಿಯಿಂದ ರವಿವಾರ ಶರವು ಶ್ರೀ ಮಹಾಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ಆಯೋಜಿಸಲಾದ ತುಳು ಪ್ರತಿಭಾ ಪುರಸ್ಕಾರ-2017 ಪ್ರದಾನ ಮಾಡಿ ಅವರು ಮಾತನಾಡಿದರು.
ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸುವ ವಿಚಾರಕ್ಕೆ ಸಂಬಂಧಿಸಿ ಜಗತ್ತಿನ ಪ್ರತಿಯೊಬ್ಬ ತುಳುವನೂ ಶ್ರಮಿಸಬೇಕಾಗಿದೆ. ಭಾಷೆ ಉಳಿದರೆ ಮಾತ್ರ ತುಳು ಸಂಸ್ಕೃತಿ ಉಳಿಯುತ್ತದೆ. ಮಾತೃ ಭಾಷೆಗೆ ಹೆಚ್ಚಿನ ಆದ್ಯತೆ ನೀಡಿ ಉಳಿದ ಭಾಷೆಯೊಂದಿಗೆ ಮುನ್ನಡೆಯಬೇಕು ಎಂದರು.
ಪ್ರತಿಯೊಬ್ಬ ಮಗುವಿಗೂ ಮಾತೃ ಭಾಷೆಯ ಶಿಕ್ಷಣ ದೊರೆಯಬೇಕು ಎನ್ನುವ ನಿಟ್ಟಿನಲ್ಲಿ 2010ರಲ್ಲಿ ತುಳು ಭಾಷೆ ಐಚ್ಛಿಕ ವಿಷಯವಾಗಿ ಸೇರ್ಪಡೆಗೊಂಡಿತು. ಪ್ರಸಕ್ತ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ 36 ಶಾಲೆಗಳಲ್ಲಿ 1856 ವಿದ್ಯಾರ್ಥಿಗಳು ತುಳು ಭಾಷೆ ಕಲಿಯುತ್ತಿದ್ದಾರೆ. ಈ ಬಾರಿ ಎಸೆಸೆಲ್ಸಿಯಲ್ಲಿ 464 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದರು.
ಗೌರವ ಸಲಹೆಗಾರ ಚಂದ್ರಶೇಖರ ಸುವರ್ಣ, ಚಂದ್ರಹಾಸ ದೇವಾಡಿಗ, ರಾಮಚಂದ್ರ ಬೈಕಂಪಾಡಿ ಉಪಸ್ಥಿತರಿದ್ದರು. ಶ್ರಿ ಸತ್ಯಸಾಯಿ ಲೋಕಸೇವಾ ಪ್ರೌಢ ಶಾಲೆಯ ವಿದ್ಯಾರ್ಥಿನಿ ಸಿಂಧೂರ ಎಂ. ಆರ್., ಸಂತ ಅಲೋಶಿಯಸ್ ಪ.ಪೂ. ಕಾಲೇ ಜಿನ ದರ್ಶನ್ ಪಿ., ಶಾರದಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸಂಹಿತಾ ಡಿ. ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಕೂಟದ ಅಧ್ಯಕ್ಷ ಬಿ.ದಾಮೋದರ ನಿಸರ್ಗ ಸ್ವಾಗತಿಸಿ, ರತ್ನಕುಮಾರ್ ನಿರೂಪಿಸಿದರು.