Advertisement
1913ರ “ರಾಜಾ ಹರಿಶ್ಚಂದ್ರ’ ಮೂಕಿ ಸಿನೆಮಾ ಭಾರತೀಯ ಚಿತ್ರರಂಗದ ಮೊದಲ ಸಿನೆಮಾವಾಗಿದ್ದರೆ, 1934ರ “ಸತಿ ಸುಲೋಚನ’ ಕನ್ನಡದ ಮೊದಲ ಸಿನೆಮಾ. ಅದೇ ರೀತಿ 1971ರ ಫೆ.19ರಂದು ತೆರೆಗೆ ಬಂದ “ಎನ್ನ ತಂಗಡಿ’ ಸಿನೆಮಾ ತುಳುವಿನ ಮೊದಲ ಸಿನೆಮಾ. ಹೀಗಾಗಿ 2021 ಫೆ.19 ತುಳು ಸಿನಿಲೋಕದ ಸುವರ್ಣ ಸಂಭ್ರಮದ ಕಾಲ. ಕರಾವಳಿಯ ಬೆಳ್ಳಿ ಪರದೆಯಲ್ಲಿ ಮಿಂಚಿದ ತುಳು ಚಿತ್ರ ಸಮೂಹಕ್ಕೀಗ ಸಡಗರದ ಹೊತ್ತು.
Related Articles
Advertisement
ಎಸ್.ಆರ್.ರಾಜನ್, ಆರೂರು ಪಟ್ಟಾಭಿ, ಕೆ.ಎನ್.ಟೇಲರ್, ಟಿ.ಎ.ಶ್ರೀನಿವಾಸ್, ರಿಚರ್ಡ್ ಕ್ಯಾಸ್ಟಲಿನೋ, ಸಂಜೀವ ದಂಡೆಕೇರಿ, ರಾಮ್ ಶೆಟ್ಟಿ ಸಹಿತ ಹಲವು ಸಾಧಕ ಶ್ರೇಷ್ಠರ ಕೊಡುಗೆ ಅನನ್ಯ.
ತುಳು ರಂಗಭೂಮಿಯೇ ತುಳು ಚಲನಚಿತ್ರಕ್ಕೆ ಮೂಲ ಎನ್ನಬಹುದು. 1960ರ ದಶಕದಲ್ಲಿ ತುಳು ರಂಗಭೂಮಿ ಗಟ್ಟಿಯಾಗಿ ಬೆಳೆಯತೊಡಗಿದಂತೆ 70ರ ದಶಕದಲ್ಲಿ ಸಿನೆಮಾ ಹುಟ್ಟಿಕೊಂಡಿತು. ನಾಟಕ ಗಳನ್ನು ಬರೆದು ಪ್ರದರ್ಶಿಸಿ ಯಶಸ್ಸು ಪಡೆದ ಪರಿಣಾಮವೇ ತುಳು ಚಿತ್ರಗಳ ಪ್ರಾರಂಭಕ್ಕೆ ಪ್ರೇರಣೆ ದೊರೆತಿರಬಹುದು. “ಮೆಗ್ಯೆ ಪಲಯೆ’ ತುಳು ನಾಟಕದ ಕಥೆಯೇ ತುಳುವಿನ ಮೊದಲ ಸಿನೆಮಾ “ಎನ್ನ ತಂಗಡಿ’. ಬಳಿಕ ಹಲವು ಸಿನೆಮಾಗಳು ನಾಟಕದ ಮೂಲಕವೇ ಜೀವ ಪಡೆದವು.“ಬಂಗಾರ್ ಪಟ್ಲೇರ್’, “ಕೋಟಿ ಚೆನ್ನಯ’, ಗಗ್ಗರ, ಮದಿಪು ಹಾಗೂ ಪಡ್ಡಾಯಿ ಸಿನೆಮಾಕ್ಕೆ ರಾಷ್ಟ್ರೀಯ ಗೌರವ ದೊರಕಿದೆ. “ಬಿಸತ್ತಿಬಾಬು’ ಸಿನೆಮಾದಿಂದ ಆರಂಭವಾಗಿ 15ಕ್ಕೂ ಅಧಿಕ ಸಿನೆಮಾಗಳಿಗೆ ರಾಜ್ಯ ಅತ್ಯುತ್ತಮ ಸಿನೆಮಾ ಗೌರವ ಸಂದಿದೆ. 1993ರ ಸೆಪ್ಟೆಂಬರ್ 9ರಂದು 24 ಗಂಟೆಗಳಲ್ಲಿ “ಸೆಪ್ಟೆಂಬರ್ 8′ ತುಳುಚಿತ್ರವನ್ನು ಪೂರ್ಣವಾಗಿ ಚಿತ್ರೀಕರಿಸಿದ್ದು ಬಹು ದೊಡ್ಡ ದಾಖಲೆ. ಕರಿಯಣಿ ಕಟ್ಟಂದಿ ಕಂಡನೆ (1978)ತುಳುವಿನ ಮೊದಲ ಕಲರ್ ಸಿನೆಮಾ. 1973ರ “ಕಾಸ್‌ದಾಯೆ ಕಂಡನಿ’ ಚಿತ್ರಕ್ಕೆ ಅಮಿತಾಬ್ ಬಚ್ಚನ್ ಪಾತ್ರ ಪರಿಚಯ ನೀಡುವ ಕಂಠದಾನ ಮಾಡಿದ್ದರು! ಅಮೃತ ಸೋಮೇಶ್ವರ, ಪ್ರೊ|ಬಿ.ಎ.ವಿವೇಕ ರೈ, ಸೀತಾರಾಮ ಕುಲಾಲ್ ಆದಿಯಾಗಿ ಹಲವು ಚಿತ್ರಸಾಹಿತಿಗಳ ಹಾಡುಗಳು ಕರಾವಳಿಯಲ್ಲಿ ಸಂಗೀತ ಸುಧೆ ಹರಿಸಿದೆ. “ಮೋಕೆದ ಸಿಂಗಾರಿ ಉಂತುದೆ ವೈಯಾರಿ’ “ಪಕ್ಕಿಲು ಮೂಜಿ ಒಂಜೇ ಗೂಡುಡೆ’, ಎಕ್ಕ ಸಕ ಎಕ್ಕ ಸಕ’, “ಕಣ್ಣಿತ್ತ್ದ್ ಕೈ ಇತ್ತ್ದ್ ಕಲ್ಲಾಯನ’, “ಉಪ್ಪು ನೀರ್ ಅಂಚಿಗ್, “ಡಿಂಗಿರಿ ಮಾಮ’, “ಎನ್ನ ಮಾಮಿನ ಮಗಲ್ ಮೀನನ..’ ಹೀಗೆ ಹತ್ತಾರು ಹಾಡುಗಳು ತುಳು ಸಿನೆಮಾದ ಎವರ್‌ಗ್ರೀನ್ ಹಾಡುಗಳು. ಪಿ.ಬಿ.ಶ್ರೀನಿವಾಸ್, ಎಸ್.ಪಿ. ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ, ಚಿತ್ರಾ, ಬಿ.ಕೆ.ಸುಮಿತ್ರ, ವಾಣಿ ಜಯರಾಂ, ಉದಿತ್ ನಾರಾಯಣ್ ಸಹಿತ ಹಲವು ಗಾಯಕರು ಇಲ್ಲಿ ಸ್ವರಮಾಧುರ್ಯ ತೋರಿದ್ದಾರೆ. ತುಳು ಸಿನಿ ಲೋಕ ಯಕ್ಷಗಾನದ ಪ್ರಭೆಯನ್ನು ಒಳಗೊಂಡಿದೆ. ಪದ್ಯಾಣ ಗಣಪತಿ ಭಟ್, ಪಟ್ಲ ಸತೀಶ್ ಶೆಟ್ಟಿ, ದಿನೇಶ್ ಅಮ್ಮಣ್ಣಾಯ, ರವಿಚಂದ್ರ ಕನ್ನಡಿಕಟ್ಟೆ ಸಹಿತ ಹಲವು ಭಾಗವತರ ಗಾಯನಸುಧೆ ಹರಿದಿದೆ.
175 ದಿನಗಳ ಪ್ರದರ್ಶನದ ಮೂಲಕ “ಒರಿಯ ರ್ದೊರಿ ಅಸಲ್’ ಮೊದಲ ದಾಖಲೆ ಬರೆಯಿತು. ಬಳಿಕ ಹಲವು ಸಿನೆಮಾಗಳು ಶತಕದ ಸಾಧನೆ ತೋರಿದವು. “ಚಾಲಿಪೋಲಿಲು’ 511 ದಿನಗಳ ಮಹಾನ್ ದಾಖಲೆ ಬರೆಯಿತು. ರಾಜಕಾರಣದಲ್ಲಿದ್ದ ಲೋಕಯ್ಯ ಶೆಟ್ಟಿ, ಅಮರನಾಥ ಶೆಟ್ಟಿ, ಶಕುಂತಳಾ ಶೆಟ್ಟಿ, ಜಯಮಾಲ, ಉಮಾಶ್ರೀ, ಅಭಯಚಂದ್ರ ಜೈನ್, ಉಮಾನಾಥ ಕೋಟ್ಯಾನ್, ಜಗದೀಶ್ ಅಧಿಕಾರಿ, ವಸಂತ ಬಂಗೇರ, ನಾಗರಾಜ ಶೆಟ್ಟಿ, ತುಳು ಸಿನೆಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಡಾ| ಶಿವರಾಮ ಕಾರಂತರು ಸಿನೆಮಾದಲ್ಲಿ ಅಭಿನಯಿಸಿದ್ದಾರೆ ಎಂಬುದು ತುಳುವಿನ ಹೆಮ್ಮೆ. ಪಂಡರೀಬಾಯಿ, ಕಲ್ಪನಾ, ಲೀಲಾವತಿ, ವಿನಯಪ್ರಸಾದ್, ಸುನಿಲ್, ಶೃತಿ, ಸುಧಾರಾಣಿ, ಅವಿನಾಶ್, ಸತ್ಯಜಿತ್, ಬುಲೆಟ್ ಪ್ರಕಾಶ್, ರಮೇಶ್ ಭಟ್, ರಂಗಾಯಣ ರಘು ಸೇರಿದಂತೆ ಕನ್ನಡದ ಕಲಾವಿದರು, ಜಾನಿಲಿವರ್ ಸಹಿತ ಬಾಲಿವುಡ್ ಕಲಾವಿದರು ಇಲ್ಲಿ ಬಣ್ಣಹಚ್ಚಿರುವುದು ವಿಶೇಷ ಎನ್ನುತ್ತಾರೆ ತಮ್ಮ ಲಕ್ಷ್ಮಣ. ಬಿಡುಗಡೆಯ ತವಕದಲ್ಲಿವೆೆ 16 ಸಿನೆಮಾಗಳು!
1971ರಲ್ಲಿ “ಎನ್ನತಂಗಡಿ’ ಬಂದರೆ, 1993ರ “ಬಂಗಾರ್ ಪಟ್ಲೆರ್’ 25ನೇ (ಬೆಳ್ಳಿ ಹಬ್ಬ) ಸಿನೆಮಾ. 2014ರ “ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ’ 50 (ಸುವರ್ಣ), 2016ರ “ಪನೊಡಾ ಬೊಡ್ಚ’ 75ನೇ(ಅಮೃತ)ಸಿನೆಮಾ. 2018ರ ಕರ್ಣೆ 100ನೇ ಸಿನೆಮಾ (ಶತಾಬ್ಧ). ಇಷ್ಟೂ ಸಿನೆಮಾಗಳು ಜ್ಯೋತಿ ಥಿಯೇಟರ್‌ನಲ್ಲಿಯೇ ರಿಲೀಸ್ ಆಗಿತ್ತು. 114ನೇ ಸಿನೆಮಾ “ಎನ್ನ’ ಕಳೆದ ವರ್ಷ ಬಿಡುಗಡೆಯಾಗಿತ್ತು. ಇದೀಗ ಸುವರ್ಣ ಮಹೋತ್ಸವ ದಿನದಂದೇ (ಫೆ.19) “ಗಮ್ಜಾಲ್’ ಬಿಡುಗಡೆಗೆ ಸಿದ್ಧವಾಗಿದೆ. ಮುಂದೆ “ಇಂಗ್ಲೀಷ್’, “ಏರೆಗಾವುಯೆ ಕಿರಿಕಿರಿ’, “ಪೆಪ್ಪೆರೆರೆ ಪೆರೆರೆರೆ’, “ಅಬತರ’ ಸಹಿತ 16ಕ್ಕೂ ಅಧಿಕ ಸಿನೆಮಾಗಳು ತೆರೆಕಾಣುವ ತವಕದಲ್ಲಿದೆ. ಇದೇ ವರ್ಷ ತುಳು ಚಿತ್ರ ನಿರ್ಮಾಪಕ ಸಂಘದಿಂದ “ಸುವರ್ಣ ಸಂಭ್ರಮ’ ಕಾರ್ಯಕ್ರಮ ಕೂಡ ಆಯೋಜನೆಗೊಂಡಿದೆ. – ದಿನೇಶ್ ಇರಾ