ಭಾರತೀಯ ಸಂಸ್ಕೃತಿಯಲ್ಲಿ ತುಳಸಿಗೆ ಬಹಳ ಪೂಜ್ಯ ಸ್ಥಾನಮಾನವಿದೆ. ಹಿಂದುಗಳು ಗಿಡದಲ್ಲಿ ದೇವಾನು ದೇವತೆಗಳು ನೆಲೆಸಿರುತ್ತಾರೆ ಎಂದು ನಂಬಿ ಪೂಜಿಸುತ್ತಾರೆ. ತುಳಸಿಯನ್ನು ಲಕ್ಷ್ಮೀದೇವಿಯ ಭೌತಿಕ ಅವತಾರ ಎಂದು ನಂಬಲಾಗಿದೆ. ತುಳಸಿ ಗಿಡವನ್ನು ಪ್ರತಿದಿನ ಸ್ನಾನದ ಅನಂತರ ಶಾಂತಿ ಮತ್ತು ನೆಮ್ಮದಿಗಾಗಿ ಪೂಜಿಸಲಾಗುತ್ತದೆ.
ತುಳಸಿ ಗಿಡದಲ್ಲಿ ಅನೇಕ ಔಷಧೀಯ ಗುಣಗಳಿವೆ. ಆಯುರ್ವೇದದಲ್ಲೂ ಈ ಗಿಡವನ್ನು ಔಷಧಿಯಾಗಿ ಬಳಸಲಾಗುತ್ತದೆ. ಪ್ರತಿನಿತ್ಯ ತುಳಸಿ ಎಲೆಯನ್ನು ಸೇವಿಸಿದರೆ ಅಥವಾ ನೀರಿನಲ್ಲಿ ಹಾಕಿ ಕುಡಿಯುವುದರಿಂದ ನಮ್ಮ ದೇಹದ ಪ್ರತಿರೋಧಕ ಶಕ್ತಿ ಹೆಚ್ಚುತ್ತದೆ. ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಯನ್ನು ಸೇವಿಸಿದರೆ ಜೀರ್ಣಕ್ರಿಯೆ ಸುಲಭವಾಗುತ್ತದೆ. ಶೀತದ ಸಮಸ್ಯೆ ಉದ್ಭವಿಸಿದರೆ ತುಳಸಿ ಎಲೆಯನ್ನು ಸೇವಿಸುವುದರಿಂದ ಶೀತದ ಭಾದೆ ತಗ್ಗುತ್ತದೆ. ಇದರಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣವಿರುವುದರಿಂದ ಬಾಯಿಯ ಕೆಟ್ಟ ವಾಸನೆಯನ್ನು ದೂರಮಾಡುತ್ತದೆ.
ತುಳಸಿಯನ್ನು ಕೃಷ್ಣ- ತುಳಸಿ ಎಂದೇ ಕರೆಯುತ್ತಾರೆ. ತುಳಸಿ ಕಲ್ಯಾಣದ ಹಿಂದೆ ಎರಡು ಪುರಾಣದ ಕಥೆಯಿದೆ. ಒಂದು ಕಥೆಯ ಪ್ರಕಾರ, ಒಮ್ಮೆ ಬೃಹಸ್ಪತಿ ಮತ್ತು ಇಂದ್ರ ಕೈಳಾಸಕ್ಕೆ ಹೋಗುತ್ತಿರುತ್ತಾರೆ. ಒಬ್ಬ ಕೂದಲುದಾರಿ ಇವರನ್ನು ಅಡ್ಡಗಟ್ಟುತ್ತಾನೆ. ಕೋಪ ತಾಳದೆ ಇಂದ್ರ ಆತನ ಮೇಲೆ ಮಿಂಚು ಬಿಡುತ್ತಾನೆ. ಆಗ ಸಿಟ್ಟು ಬಂದ ಆ ವ್ಯಕ್ತಿ ತನ್ನ ಮೂರನೇ ಕಣ್ಣನ್ನು ತೆರೆಯುತ್ತಾನೆ. ತತ್‌ಕ್ಷಣ ಬೃಹಸ್ಪತಿಗೆ ಅವನೇ ಶಿವ ಎಂದು ತಿಳಿಯುತ್ತದೆ. ಅವನು ಶಿವನನ್ನು ಸ್ತುತಿಸಿದ ನಂತರ ಶಾಂತನಾಗುತ್ತಾನೆ. ಆದರೆ ಮೂರನೇ ಕಣ್ಣು ತೆರೆದಾಗಿದೆ ಆ ಶಕ್ತಿಯನ್ನು ಏನು ಮಾಡುವುದೆಂದು ತೋಚದೆ ಸಮುದ್ರದ ಮೇಲೆ ಬಿಡುತ್ತಾನೆ. ಅದರಿಂದ ಒಂದು ಪುಟ್ಟ ಕಂದನ ಜನ್ಮವಾಗುತ್ತದೆ. ಅವನೇ ಜಲಂಧರ ಅಥವಾ ಶಂಖ ಚೂಢ. ಆ ಮಗು ತುಂಬಾ ಶಕ್ತಿಶಾಲಿ. ಅದರ ಅಳುವಿನ ಶಬ್ದಕ್ಕೆ ಮೂರು ಲೋಕ ನಡುಗುತ್ತಿತ್ತು. ಸ್ವತಃ ಬ್ರಹ್ಮನೆ ಬಂದು ಆತನನ್ನು ಸಮಾಧಾನ ಮಾಡುತ್ತಿದ್ದ
ಹರೆಯದಲ್ಲಿ ಇವನು ಬಹಳ ಸ್ಪುರದ್ರೂಪಿಯಾಗಿದ್ದನು. ಇವನಿಗೆ ಕಾಲನೇಮಿ ಎಂಬ ರಾಕ್ಷಸನ ಮಗಳೊಂದಿಗೆ ವಿವಾಹವಾಗುತ್ತದೆ. ಸ್ವತಃ ಬ್ರಹ್ಮನೇ ನಿಂತು ಪುಷ್ಕರ ಎಂಬಲ್ಲಿ ಇವರಿಬ್ಬರ ಮದುವೆ ಮಾಡಿಸಿರುತ್ತಾನೆ. ವೃಂದ (ಬೃಂದಾ) ಬಹಳ ವಿಷ್ಣು ಭಕ್ತೆ. ಒಂದು ದಿನ ಭೃಗು ಈತನಿಗೆ ನೀನು ಸಮುದ್ರದ ಮಗ, ದೇವತೆಗಳು ನಿನ್ನ ಅಪ್ಪನ ಆಸ್ತಿಯನ್ನು ದೋಚಿದ್ದಾರೆ ಎಂದು ಹೇಳುತ್ತಾನೆ.
ಆಗ ಜಲಂಧರನಿಗೆ ದೇವತೆಗಳ ಮೇಲೆ ಸಿಟ್ಟು ಬಂದು ಹಿಂಸೆ ನೀಡುವುದಕ್ಕೆ ಪ್ರಾರಂಭಿಸುತ್ತಾನೆ. ವೃಂದ (ಬೃಂದಾ) ಮಹಾಪತಿವ್ರತೆ ಹಾಗೂ ವಿಷ್ಣುವಿನ ವಿಶೇಷ ಭಕ್ತೆ. ಆದ್ದರಿಂದ ಶಿವನಿಗೂ ಕೂಡ ಜಲಂಧರನನ್ನು ಅಷ್ಟು ಬೇಗ ಮಣಿಸಲು ಸಾಧ್ಯವಾಗುವುದಿಲ್ಲ. ಅವನು ವಿಷ್ಣುವಿನ ಮೊರೆ ಹೋಗುತ್ತಾನೆ. ಆಗ ವಿಷ್ಣುವು ಜಲಂಧರನ ರೂಪ ತಾಳಿ ವೃಂದಾಳ ಬಳಿಗೆ ಬಂದು ಮೋಹಿಸಿ ಅವಳ ಪವಿತ್ರತೆಗೆ ಧಕ್ಕೆ ತರುತ್ತಾನೆ. ಶಿವ ಜಲಂಧರನನ್ನು ಸಂಹರಿಸುತ್ತಾನೆ. ತನ್ನ ಚಾರಿತ್ರ್ಯ ಹಾನಿ ಆಗಿದ್ದರಿಂದ ವೃಂದ ನಿನಗೆ ಪತ್ನಿಯ ವಿರಹವುಂಟಾಗಲಿ ಎಂದು ಶಾಪವ ಕೊಟ್ಟು ಪತಿಯ ಚಿತೆಗೆ ಹಾರಿ ಪ್ರಾಣವನ್ನು ಬಿಡುತ್ತಾಳೆ . ವಿಷ್ಣುವು ಆಕೆಯ ಆತ್ಮವನ್ನು ತುಳಸಿ ಗಿಡವಾಗಿ ಪರಿವರ್ತಿಸಿ ಮುಂದಿನ ಜನ್ಮದಲ್ಲಿ ಉತ್ಥಾನ ದ್ವಾದಶಿಯ ದಿನ ತುಳಸಿಯನ್ನು ವಿವಾಹವಾಗುತ್ತಾನೆ ಎಂಬ ಕಥೆಯಿದೆ.
ವೃಂದಾಳ ಶಾಪದಿಂದಾಗಿ ಮುಂದೆ ವಿಷ್ಣುವು ಶ್ರೀ ರಾಮನ ಅವತಾರದಲ್ಲಿದ್ದಾಗ ಕೆಲವು ವರ್ಷಗಳ ಕಾಲ ಸೀತೆ ಶ್ರೀ ರಾಮನಿಂದ ದೂರವಾಗುತ್ತಾಳೆ. ವಿಷ್ಣು- ತುಳಸಿ ವಿವಾಹ ಕೃಷ್ಣನನ್ನು ಹುಟ್ಟಿನಿಂದಲೇ ಹಿಂಬಾಲಿಸುವ ವೃಂದಾ( ಬೃಂದಾ) ಬೃಂದಾವನದಲ್ಲಿ ರಾಧೆಯ ಜತೆಗಿನ ಗೋಪಿಕೆಯರಂತೆ ಅಲ್ಲಿ ಕಾಣಿಸಿಕೊಳ್ಳುತ್ತಾಳೆ. ಇದರಿಂದ ಕೃಷ್ಣನಿದ್ದ ಸ್ಥಳವು ವೃಂದಾ( ಬೃಂದಾ)ಳಿದ್ದ ವನವಾದ್ದರಿಂದ ಅದನ್ನು ಬೃಂದಾವನ ಎಂದು ಹೆಸರಾಯಿತು.
ತುಳಸಿ ಕಲ್ಯಾಣದ ದಿನದಂದು ತುಳಸಿ ಗಿಡದೊಂದಿಗೆ ಬೆಟ್ಟದ ನೆಲ್ಲಿಕಾಯಿ ಗಿಡವನ್ನು ನೆಟ್ಟು ಸುತ್ತ ಮದುವೆ ಮಂಟಪ ನಿರ್ಮಿಸುತ್ತಾರೆ. ಇದಕ್ಕೆ ತುಳಸಿ ಬೃಂದಾವನವೆಂದು ಹೆಸರು. ವೃಂದಾಳ ಆತ್ಮ ರಾತ್ರಿಯಿಡೀ ಇದ್ದು ಮರುದಿನ ಬೆಳಗ್ಗೆ ಹೊರಟು ಹೋಗುತ್ತದೆ ಎಂಬ ನಂಬಿಕೆಯಿದೆ. ನಾರಾಯಣನು ಏಳುವ ದಿನ ಉತ್ಥಾನ ದ್ವಾದಶಿ. ನಮ್ಮ ಪುರಾಣಗಳ ಪ್ರಕಾರ ಮಹಾ ವಿಷ್ಣು ಆಷಾಢ ಶುದ್ಧ ಏಕಾದಶಿಯಂದು ಮಲಗಿದರೆ ಕಾರ್ತಿಕ ಶುದ್ಧ ದ್ವಾದಶಿಯಂದು ಏಳುತ್ತಾನೆ. ಲಕ್ಷ್ಮೀನಾರಾಯಣನು ಜಾಗೃತಾವಸ್ಥೆಯಲ್ಲಿದ್ದರೆ ಜಗಹೃದಯವೇ ಆನಂದಮಯವಾಗಿ ಮಂಗಳಮಯವಾಗಿರುತ್ತದೆ. ಆದ್ದರಿಂದ ಕಾರ್ತಿಕ ಶುದ್ಧ ದ್ವಾದಶಿಯಂದು ಪ್ರಭೋದೋತ್ಸವದ ಮೂಲಕ ನಾರಾಯಣನನ್ನು ಎಬ್ಬಿಸಿ ತುಳಸಿಯೊಂದಿಗೆ ವಿವಾಹವನ್ನು ಮಾಡುವ ಪದ್ಧತಿ ಬೆಳೆದು ಬಂದಿದೆ.
-ಚೇತನ ಭಾರ್ಗವ
ಬೆಂಗಳೂರು